ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೇಹ, ಪ್ರೀತಿಯೇ ‘ಸರ್ವಸ್ವ’

Last Updated 27 ಅಕ್ಟೋಬರ್ 2017, 12:01 IST
ಅಕ್ಷರ ಗಾತ್ರ

ಚಿತ್ರ: ಸರ್ವಸ್ವ
ನಿರ್ಮಾಪಕರು: ವಿಮಲ್‌, ವಾಮದೇವ್
ನಿರ್ದೇಶನ: ಶ್ರೇಯಸ್‌ ಕಬಾಡಿ
ತಾರಾಗಣ: ತಿಲಕ್, ರನುಷಾ ಕಾಶ್ವಿ, ಚೇತನ್, ಸಾತ್ವಿಕಾ

ಆಯುಷ್‌ಗೆ ಸಿನಿಮಾದ ಮೇಲೆ ಪ್ರೀತಿ. ಅವನನ್ನು ಕಂಡರೆ ಸ್ನೇಹಿತ ಗುರುವಿಗೆ ಪಂಚಪ್ರಾಣ. ಇಬ್ಬರಿಗೂ ಸಿನಿಮಾವೆಂದರೆ ಹುಚ್ಚು. ಸಿನಿ ಪ್ರಪಂಚದಲ್ಲಿ ವಿಹರಿಸುವ ತವಕ. ಆಯುಷ್‌ನನ್ನು ನಾಯಕ ನಟನಾಗಿ ಮಾಡುವುದೇ ಗುರುವಿನ ‍ಪರಮ ಧ್ಯೇಯ. ಕೊನೆಗೊಂದು ದಿನ ಆಯುಷ್‌ ಖ್ಯಾತ ನಟನಾಗಿಬಿಡುತ್ತಾನೆ.

ಸಿನಿಮಾ ರಂಗ ಪ್ರವೇಶಿಸಲು ಹೊರಟ ಇಬ್ಬರು ಸ್ನೇಹಿತರ ಬದುಕಿನ ಏರಿಳಿತ ಇಟ್ಟುಕೊಂಡು ‘ಸರ್ವಸ್ವ’ ಸಿನಿಮಾ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಶ್ರೇಯಸ್‌ ಕಬಾಡಿ. ನಾಯಕನ ಎಂಟ್ರಿಗೆ ಒಂದು ಹೊಡೆದಾಟದ ದೃಶ್ಯ, ಪ್ರೀತಿ ನಿವೇದಿಸುವ ಹಾಡು, ಐಟಂ ಸಾಂಗ್‌– ಹೀಗೆ ಕಮರ್ಷಿಯಲ್‌ ಚಿತ್ರವೊಂದು ಯಶಸ್ವಿಯಾಗಲು ಬೇಕು ಎನ್ನುವ ಸಿದ್ಧಸೂತ್ರ ಇಟ್ಟುಕೊಂಡೇ ಕಥೆ ಹೊಸೆಯಲಾಗಿದೆ. ಆದರೆ, ಸಿನಿಮಾದೊಳಗೊಂದು ಸಿನಿಮಾದ ಕಥೆ ಹೇಳಲು ಹೊರಟ ನಿರ್ದೇಶಕರ ನಿರೂಪಣಾ ಶೈಲಿ ಹೊಸದೇನಲ್ಲ.

ಸಿನಿಮಾ ಆರಂಭವಾಗುವುದು ಟಿ.ವಿ.ಯಲ್ಲಿ ನಟ ಪುನೀತ್‌ ರಾಜ್‌ಕುಮಾರ್ ನಟಿಸಿರುವ ಚಿತ್ರದ ಹಾಡಿನ ಮೂಲಕ. ಈ ಹಾಡು ಕೇಳಿದ ಆಯುಷ್‌ಗೆ(ಚೇತನ್‌) ತಾನೂ ಟಿ.ವಿ.ಯಲ್ಲಿ ಕಾಣಿಸಬೇಕೆಂಬ ಹಂಬಲ. ಇದಕ್ಕೆ ಗೆಳೆಯ ಗುರುವಿನ (ತಿಲಕ್) ಬೆಂಬಲ. ಕೊನೆಗೆ, ವಸತಿನಿಲಯದಿಂದ ಇಬ್ಬರದ್ದು ಸದ್ದಿಲ್ಲದ ಪಲಾಯನ. ತಪ್ಪಿಸಿಕೊಳ್ಳಲು ಲಾರಿ ಹತ್ತುವ ಈ ಇಬ್ಬರಿಗೂ ಅಪಹರಣಗೊಂಡಿದ್ದ ಸಾತ್ವಿಕಾ ಸಿಗುತ್ತಾಳೆ.

ಆಯುಷ್‌ ಮತ್ತು ಸಾತ್ವಿಕಾ ನಡುವೆ ಪ್ರೇಮಾಂಕುರವಾಗುತ್ತದೆ. ಇದಕ್ಕೆ ಗುರುವಿನ ತೀವ್ರ ವಿರೋಧ. ತನ್ನ ಸ್ನೇಹಿತ ಮೂಲ ಧ್ಯೇಯ ಮರೆಯುತ್ತಿದ್ದಾನೆಂಬ ಸಿಟ್ಟು. ಕಾರಿನಲ್ಲಿ ಹೋಗುವಾಗ ಆತನನ್ನು ಹೊರಗೆ ತಳ್ಳುತ್ತಾನೆ. ಗಾಯಗೊಂಡ ಆಯುಷ್‌ ಅಂಗವಿಕಲನಾಗುತ್ತಾನೆ. ತಾನು ಮಾಡಿದ ತಪ್ಪಿಗಾಗಿ ಆತನನ್ನೇ ನಾಯಕ ನಟನನ್ನಾಗಿ ಮಾಡಬೇಕೆಂದು ಗುರು ನಿಶ್ಚಯಿಸುತ್ತಾನೆ. ಆತ ನಿರ್ದೇಶಿಸುವ ಚಿತ್ರಕ್ಕೆ ದೃಷ್ಟಿದೋಷವುಳ್ಳ ಜೆಸ್ಸಿ (ರನುಷಾ ಕಾಶ್ವಿ) ನಾಯಕಿ.

ಆಂಗ್ಲೋ ಇಂಡಿಯನ್ ಆದ ಈ ಹುಡುಗಿ ಮೇಲೆ ಗುರುವಿಗೆ ಪ್ರೀತಿ ಬೆಳೆಯುತ್ತದೆ. ಕೊನೆಗೊಂದು ದಿನ ಆಯುಷ್‌ ಖ್ಯಾತ ನಟನಾಗಿ ಹೆಸರುಗಳಿಸುತ್ತಾನೆ. ಗೆಳತಿ ಮತ್ತು ಸ್ನೇಹಿತ ಇಬ್ಬರನ್ನೂ ಕಳೆದುಕೊಳ್ಳಲು ಇಚ್ಛಿಸದೆ ಅಂಗವಿಕಲನೆಂದು ನಾಟಕವಾಡಿದೆ ಎಂಬ ಸತ್ಯ ಹೇಳುತ್ತಾನೆ.

ಸ್ನೇಹ, ಪ್ರೀತಿಯ ಸಾರ ಹೇಳುವುದರಲ್ಲಿಯೇ ಮೊದಲಾರ್ಧ ತೆವಳುತ್ತಾ ಸಾಗುತ್ತದೆ. ದ್ವಿತೀಯಾರ್ಧದಲ್ಲಿ ಭಾವುಕ ಕ್ಷಣಗಳು ಬೆರತು ಚಿತ್ರವು ಹೊಸಹಾದಿಗೆ ಹೊರಳುತ್ತದೆ ಎಂದು ಪ್ರೇಕ್ಷಕರು ಎಣಿಸುತ್ತಿರುವಾಗಲೇ ಮತ್ತೆ ಹಳೆಯ ಜಾಡಿನಲ್ಲಿಯೇ ಸಾಗಿ ನಿರಾಸೆ ಮೂಡಿಸುತ್ತದೆ. ಚಿತ್ರದ ಒಂದೆರಡು ದೃಶ್ಯಗಳು ಪ್ರೇಕ್ಷಕರ ಮನಸ್ಸನ್ನು ಆರ್ದ್ರಗೊಳಿಸುತ್ತವೆ.

ದೃಷ್ಟಿದೋಷಯುಳ್ಳ ಹುಡುಗಿ ಪಾತ್ರದಲ್ಲಿ ರನುಷಾ ಇಷ್ಟವಾಗುತ್ತಾರೆ. ಶ್ರೀಧರ್‌ ವಿ. ಸಂಭ್ರಮ್‌ ಸಂಗೀತ ಸಂಯೋಜನೆಯ ಎರಡು ಹಾಡುಗಳು ಕೇಳಲು ಇಂಪಾಗಿವೆ. ಭೂಪಿಂದರ್‌ಪಾಲ್‌ ಸಿಂಗ್ ರೈನಾ ಅವರ ಛಾಯಾಗ್ರಹಣ ಕೆಲವು ದೃಶ್ಯಗಳಿಗಷ್ಟೇ ಸಹನೀಯವಾಗಿವೆ.

ಸ್ನೇಹಕ್ಕೆ ಮಹತ್ವ ಕೊಡುವವರು ಹಾಗೂ ಸಿನಿಮಾ ರಂಗಕ್ಕೆ ಬರಲು ಹಂಬಲಿಸುವವರು ನೋಡಬೇಕಾದ ಸಿನಿಮಾ ‘ಸರ್ವಸ್ವ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT