ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿನುಗುವ ಮಿಂಚಿನ ಮೋಹಕ ಲೋಕ

Last Updated 27 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸಿನಿಮಾಕ್ಕಾಗಿ ಆಭರಣ ವಿನ್ಯಾಸ ಮಾಡಿದ ಪಯಣದ ಸೊಗಸನ್ನು ತನಿಷ್ಕ್‌ನ ಡಿಸೈನ್‌ ಸ್ಟುಡಿಯೊ ಮುಖ್ಯಸ್ಥೆ ರೇವತಿ ಕಾಂತ್‌ 'ಮೆಟ್ರೊ'ದೊಂದಿಗೆ ಹಂಚಿಕೊಂಡಿದ್ದಾರೆ.

* ‘ಪದ್ಮಾವತಿ’ ತನಿಷ್ಕ್‌ನ ಮೊದಲ ಸಿನಿಮಾ ಪ್ರಾಜೆಕ್ಟಾ?
ಅಲ್ಲ. ಜೋಧಾ ಅಕ್ಬರ್‌, ಪಹೇಲಿ, ರೇಸ್‌ ಮುಂತಾದ ಸಿನಿಮಾಗಳಿಗೆ ಆಭರಣ ವಿನ್ಯಾಸ ಮಾಡಿಕೊಟ್ಟಿದ್ದೇವೆ.

*'ಪದ್ಮಾವತಿ'ಯ ಆಭರಣ ವಿನ್ಯಾಸ ಹೇಗೆ ಭಿನ್ನ?
ಸಿಂಹಳಿ ಮೂಲದ ಪದ್ಮಾವತಿ, ರಜಪೂತ ರಾಜನನ್ನು ಮದುವೆಯಾಗುತ್ತಾಳೆ. ಮದುವೆಗೂ ಮುಂಚೆ ಅವಳು ದಕ್ಷಿಣ ಭಾರತೀಯ ಸಂಸ್ಕೃತಿಯಲ್ಲಿದ್ದ ಆಭರಣಗಳನ್ನು ಧರಿಸಿರುತ್ತಾಳೆ. ಮದುವೆಯ ನಂತರ ಅವಳನ್ನು ಸಿಂಗರಿಸುವುದು ರಾಜಸ್ತಾನಿ ಶೈಲಿಯ ಆಭರಣಗಳು. ಇವುಗಳಲ್ಲಿ ಕುಂದನ್‌, ಪೋಲ್ಕಿಗಳ ಬಳಕೆ ಹೆಚ್ಚು. ಪಕ್ಕಾ ರಾಜಸ್ತಾನಿ ಮನೆತನದವರು ಹೆಚ್ಚಾಗಿ ಧರಿಸುವ ಬೋರ್ಲಾ ಆಭರಣವನ್ನೂ ವಿನ್ಯಾಸ ಮಾಡಿದ್ದೇವೆ. ಕೇಶ ವಿನ್ಯಾಸಕ್ಕೆ ಬಳಸಿದ ಆಭರಣ ಕೂಡ ವಿಶೇಷವಾಗಿದೆ.

ಪದ್ಮಾವತಿಯ ಕಿವಿಗಳನ್ನು ಅಲಂಕರಿಸಲೆಂದೇ ದೊಡ್ಡ ದೊಡ್ಡ ಜುಮ್ಕಿ, ಚಾಂದ್‌ಬಾಲಿಗಳನ್ನು ಮುತುವರ್ಜಿಯಿಂದ ವಿನ್ಯಾಸ ಮಾಡಿದ್ದೇವೆ. ಮೂಗನ್ನು ಸಿಂಗರಿಸುವ ನತ್ತು ಚೆಲುವಿನಿಂದ ಕಂಗೊಳಿಸುತ್ತದೆ. ಪೋಲ್ಕಿ ಹಾಗೂ ಬಣ್ಣಬಣ್ಣದ ಹರಳುಗಳಿಂದ ಮಾಡಿದ ಚೋಕರ್‌, ಏಳು ಲೇಯರ್‌ ಇರುವ ಸತ್‌ಲಡಾ, ಬಳೆಗಳನ್ನು ವಿನ್ಯಾಸಮಾಡಿದ್ದೇವೆ. ಕನ್ನಡಿ ಬಳಸಿ ಬಗೆಬಗೆ ಉಂಗುರಗಳನ್ನೂ ತಯಾರಿಸಿದ್ದೇವೆ. ಸೊಂಟಪಟ್ಟಿ, ಬಾಜುಬಂದಿ ಹೀಗೆ ಮುಡಿಯಿಂದ ಅಡಿಯವರೆಗೂ ರಾಣಿಯನ್ನು ಸಿಂಗರಿಸಿದ್ದೇವೆ.


–ರೇವತಿ ಕಾಂತ್‌

*ವಿನ್ಯಾಸಕ್ಕೆ ಸ್ಫೂರ್ತಿ...
ಆಯಾ ಪಾತ್ರಗಳೇ ವಿನ್ಯಾಸಕ್ಕೆ ಸ್ಫೂರ್ತಿ. ಪದ್ಮಾವತಿ ಎಂದರೆ ಶುದ್ಧ, ಸೌಂದರ್ಯ. ಇವುಗಳನ್ನು ಪ್ರತಿನಿಧಿಸುವಂತೆ ಕಮಲ ಮುಂತಾದ ವಿನ್ಯಾಸಗಳನ್ನು ಆಭರಣದಲ್ಲಿ ಅಳವಡಿಸಿದ್ದೇವೆ. ಖಿಲ್ಜಿಯದ್ದು ಗಡಸು ವ್ಯಕ್ತಿತ್ವ. ಹೀಗಾಗಿ ಅವನು ಧರಿಸುವ ಆಭರಣಗಳಲ್ಲಿ ಸೂಕ್ಷ್ಮ ಕುಸುರಿ ಇಲ್ಲ. ಗಡುಸಾದ ಹರಳುಗಳನ್ನು ಬಳಸಿದ್ದೇವೆ. ಅಲ್ಲದೆ ಅಫ್ಘಾನಿಸ್ತಾನದಲ್ಲಿ ಬಳಸಲಾಗುವ ಆಭರಣಗಳನ್ನೂ ಗಮನಿಸಿದ್ದೇವೆ. ರಾವಲ್‌ ರತನ್‌ ಸಿಂಗ್‌ ಪಕ್ಕಾ ರಜಪೂತ್‌ ರಾಜ. ಹೀಗಾಗಿ ಆತನ ಆಭರಣಗಳಲ್ಲಿ ಪೋಲ್ಕಿ, ಕುಂದನ್‌ ಶ್ರೀಮಂತಿಕೆಯಿದೆ.

*ಆಭರಣ ಎಂದರೆ ಮನಸ್ಸಿಗೆ ಬರುವುದು ಹೆಂಗಳೆಯರು. ಆದರೆ ಸಿನಿಮಾದಲ್ಲಿ ಪುರುಷರಿಗೂ ಆಭರಣ ವಿನ್ಯಾಸ ಮಾಡಿದ ಅನುಭವ?
ಇತಿಹಾಸಗಳಲ್ಲಿ ನೋಡಿದರೆ ಪುರುಷರೂ ಹೆಚ್ಚು ಆಭರಣಗಳನ್ನು ಧರಿಸುತ್ತಿದ್ದರು. ಅದರಲ್ಲೂ ಮಹಾರಾಣಿಯರ ಆಭರಣಗಳಿಗಿಂತ ಮಹಾರಾಜರ ಆಭರಣಗಳು ಹೆಚ್ಚು ವಿಶಿಷ್ಟವಾಗಿಯೂ ವಿಶೇಷ ಕುಸುರಿ ಕೆಲಸವನ್ನೂ ಒಳಗೊಂಡಿರುತ್ತಿದ್ದವು. ಅಂದು ದೊಡ್ಡ ದೊಡ್ಡ ಆಭರಣಗಳು ಇರುತ್ತಿದ್ದವು. ಅವುಗಳ ಬಗ್ಗೆ ತುಸು ಸಂಶೋಧನೆ ಮಾಡಿ ವಿನ್ಯಾಸ ಮಾಡಿದೆವು. ಅಂಥ ಕಷ್ಟ ಎನಿಸಲಿಲ್ಲ.

* ಎದುರಿಸಿದ ಸವಾಲು, ಮಾಡಿಕೊಂಡ ಸಿದ್ಧತೆ...
ಪದ್ಮಾವತಿಯ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಆಭರಣಗಳನ್ನೇ ನಾವು ರೂಪಿಸಬೇಕಿತ್ತು. ಸಿನಿಮಾಕ್ಕೆ ಕೆಲಸ ಮಾಡುವುದು ಯಾವಾಗಲೂ ಸವಾಲೇ. ನಿರ್ದೇಶಕರ ಮನಸ್ಸಿನಲ್ಲಿರುವ ಕಲ್ಪನೆಯನ್ನು ವಾಸ್ತವಕ್ಕೆ ಇಳಿಸಬೇಕು. ಸಿನಿಮಾ ಮೂಲಕ ಅವರಿಗೆ ಏನು ಹೇಳಬೇಕಿರುತ್ತದೋ ಅದನ್ನು ಪುಷ್ಟೀಕರಿಸುವಂಥ ಆಭರಣಗಳನ್ನು ನಾವು ನೀಡಬೇಕಿರುತ್ತದೆ. ಆ ಕಾಲದ ಆಭರಣಗಳು, ಅವುಗಳ ಕುರಿತ ಪುಸ್ತಕಗಳು, ಚಿತ್ರಕಲೆಯನ್ನು ಅಭ್ಯಸಿಸಿದೆವು. ರಾಜ ರಾಣಿಯ ವ್ಯಕ್ತಿತ್ವ, ಅಂದಿನ ರಾಜ ಮನೆತನದವರು ಎಂಥ ಆಭರಣಗಳನ್ನು ಧರಿಸುತ್ತಿದ್ದರು, ರಜಪೂತರು ಎಂದರೆ ಎಂಥ ಆಭರಣಗಳನ್ನು ಧರಿಸುತ್ತಿದ್ದರು. ಹೀಗಾಗಿ ಸಾಕಷ್ಟು ಸಂಶೋಧನೆ ಮಾಡಿದೆವು. ಒಂದಿಷ್ಟು ವಿನ್ಯಾಸಗಳನ್ನು ಅಂತಿಮಗೊಳಿಸಿ ನಿರ್ದೇಶಕರಿಗೆ ನೀಡಿದೆವು. ಅವುಗಳ ಚೆಲುವು ಕಂಡು ಅವರು ಖುಷಿಪಟ್ಟಾಗ ನಮಗೂ ನೆಮ್ಮದಿ.

* ವಿನ್ಯಾಸಕ್ಕೆ ಎಷ್ಟು ಸಮಯ ತೆಗೆದುಕೊಂಡಿರಿ?
ವಿನ್ಯಾಸದ ರೂಪುರೇಷೆ ಸಿದ್ಧಮಾಡಿಕೊಂಡು ಆಭರಣಗಳ ತಯಾರಿಕೆ ಕಾರ್ಯ ಮುಗಿಸಲು ಸುಮಾರು 600 ದಿನ ತೆಗೆದುಕೊಂಡಿದ್ದೇವೆ. ಪಾತ್ರ ಬದಲಾದಂತೆ ಆಭರಣದ ವಿನ್ಯಾಸವೂ ಬದಲಾಗಬೇಕಿತ್ತು. ಹೀಗಾಗಿ ಸಿನಿಮಾಕ್ಕಾಗಿ ನಾವು 1500 ಬಗೆಯ ಒಡವೆಗಳನ್ನು ತಯಾರಿಸಿದ್ದೇವೆ. 400 ಕೆ.ಜಿ. ಚಿನ್ನವನ್ನು ಬಳಸಿದ್ದೇವೆ.

* ಮುಂದಿನ ಸಿನಿಮಾ ಪ್ರಾಜೆಕ್ಟ್‌ ಯಾವುದು?
ಪದ್ಮಾವತಿ ಸಿನಿಮಾದಲ್ಲಿಯೇ ತುಂಬಾ ಬ್ಯುಸಿ ಆಗಿದ್ದೇವೆ. ಸದ್ಯ ಬೇರೆ ಚಿತ್ರಗಳಿಗೆ ಕೆಲಸ ಮಾಡುವ ಸಾಹಸಕ್ಕಿನ್ನೂ ಕೈಹಾಕಿಲ್ಲ.

ಘೂಮರ್ ನೃತ್ಯಕ್ಕೆ 12 ದಿನ ತಾಲೀಮು
‘ಪದ್ಮಾವತಿ’ ಚಿತ್ರದ ಘೂಮರ್ ನೃತ್ಯ ಇದೀಗ ನೃತ್ಯ ಪ್ರಿಯರ ಗಮನ ಸೆಳೆದಿದೆ. ರಾಜಸ್ತಾನದ ಈ ಸಾಂಪ್ರದಾಯಿಕ ನೃತ್ಯವನ್ನು ರಾಣಿ ಪದ್ಮಾವತಿ ಮಾಡುತ್ತಿದ್ದಳು ಎಂಬುದು ಪ್ರತೀತಿ. ಹೀಗಾಗಿಯೇ ಚಿತ್ರದಲ್ಲಿ ನೃತ್ಯದ ಶುದ್ಧತೆ ಕಾಪಾಡಿಕೊಳ್ಳಲು ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಸಾಕಷ್ಟು ಶ್ರಮಪಟ್ಟಿದ್ದಾರೆ.

12 ದಿನ ದೀಪಿಕಾ ನೃತ್ಯದ ತಾಲೀಮು ಮಾಡಿದ್ದರು, 4 ದಿನ ಶೂಟಿಂಗ್ ನಡೆಯಿತು. 60 ಪಳಗಿದ ನೃತ್ಯ ಕಲಾವಿದರು ಈ ಸಂದರ್ಭ ಇದ್ದರು’ ಎಂದು ಬನ್ಸಾಲಿ ಹೇಳಿದ್ದಾರೆ. ನೃತ್ಯ ಸಂಯೋಜನೆಗೆ ಖ್ಯಾತ ಕಲಾವಿದೆ ಜ್ಯೋತಿ ತೋಮಾರ್‌ ಅವರ ನೆರವನ್ನೂ ಚಿತ್ರತಂಡ ಪಡೆದುಕೊಂಡಿತ್ತು.

ರೇವತಿ ಕಾಂತ್‌ ಕುರಿತು
ಟೈಟಾನ್‌ ಕಂಪೆನಿ ಲಿಮೆಟೆಡ್‌ನಲ್ಲಿ ರೇವತಿ ಕಾಂತ್‌ 25 ವರ್ಷಗಳಿಂದ ದುಡಿಯುತ್ತಿದ್ದಾರೆ. ಮಾರುಕಟ್ಟೆ ಸಂಶೋಧಕಿಯಾಗಿ ವೃತ್ತಿ ಬದುಕು ಪ್ರಾರಂಭಿಸಿದ ಅವರು ಮುಂದಿನ ಹತ್ತು ವರ್ಷ ಪಶ್ಚಿಮ ಏಷ್ಯ ಹಾಗೂ ಆಫ್ರಿಕನ್ ರೀಜನ್‌ನ ಮಾರುಕಟ್ಟೆ ಮುಖ್ಯಸ್ಥೆಯಾಗಿ ಕೆಲಸ ಮಾಡಿದರು. ನಂತರ ಐದು ವರ್ಷ ಟೈಟನ್‌ ಡಿಸೈನ್‌ ಸ್ಟುಡಿಯೊವನ್ನು ಯಶಸ್ವಿಯಾಗಿ ಮುನ್ನಡೆಸಿ ಆಭರಣ ವಿನ್ಯಾಸ ಕ್ಷೇತ್ರದಲ್ಲಿ ಸವಾಲಿಗೆ ಸಿದ್ಧರಾದರು. ಅಲ್ಲಿಂದ ತನಿಷ್ಕ್‌ ಡಿಸೈನ್‌ ಸ್ಟುಡಿಯೊ ಜವಾಬ್ದಾರಿಯನ್ನು ಹೊತ್ತುಕೊಂಡು ಆಭರಣ ವಿನ್ಯಾಸ ಕ್ಷೇತ್ರದಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡಿದ್ದಾರೆ. ಜೊತೆಗೆ ಕೈಗೆತ್ತಿಕೊಂಡ ಅನೇಕ ಸಿನಿಮಾ ಪ್ರಾಜೆಕ್ಟ್‌ಗಳೂ ಜನಪ್ರಿಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT