ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಫೋನ್‌ಗೆ ಬ್ರೈಲ್ ಕೀ ಪ್ಯಾಡ್

Last Updated 27 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಇದು ಸ್ಮಾರ್ಟ್‌ಫೋನ್ ಯುಗ. ಮೊಬೈಲ್ ಇಲ್ಲದೆ ಜೀವನವೇ ಇಲ್ಲ ಎಂಬಂತೆ ಆಗಿದೆ. ಆದರೆ, ಕಣ್ಣು ಕಾಣದ ಅಂಧರೇನೂ ಮಾಡಿಯಾರು? ಆಧುನಿಕ ತಂತ್ರಜ್ಞಾನದಿಂದ ಅವರು ವಂಚಿತರಾಗಬೇಕೇ? ಅವರೂ ಸುಲಭವಾಗಿ ಉಪಯೋಗಿಸುವಂಥ ಸ್ಮಾರ್ಟ್‌ಫೋನ್ ಇದ್ದಿದ್ದರೆ ಎಷ್ಟು ಚೆಂದವಿರುತ್ತಿತ್ತು...

ಹೀಗೊಂದು ಯೋಚನೆ ಬಂದದ್ದೇ ತಡ ಫ್ಯಾಕ್ಟಲ್ ವರ್ಕ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ್ ರಾಘವ ವರದ ಅಂಧರಿಗಾಗಿ ಪ್ರತ್ಯೇಕ ಬ್ರೈಲ್ ಕೀಪ್ಯಾಡ್ ರೂಪಿಸುವ ಕೆಲಸ ಶುರು ಮಾಡಿದರು.

‘ಯುನೆಸ್ಕೊದ ವಿಕಲಚೇತನರ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಚಿಕ್ಕಪ್ಪ ದೆಹಲಿಯಲ್ಲಿ ನಡೆದ ವಿಚಾರಸಂಕಿರಣವೊಂದಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ವಿಕಲಚೇತನರು ತಂತ್ರಜ್ಞಾನವನ್ನು ಬಳಸಲು ಕಷ್ಟಪಡುತ್ತಿದ್ದ ರೀತಿ ಮನಕಲಕಿತು. ಅಂಧರಿಗಾಗಿ ಏನಾದರೊಂದು ಮಾಡಬೇಕೆಂದು ತುಂಬಾ ಕಾಡುತ್ತಿತ್ತು. ಆಗ ಹೊಳೆದಿದ್ದೇ ಈ ಬ್ರೈಲ್ ಕೀಪ್ಯಾಡ್’ ಎನ್ನುತ್ತಾರೆ ಎಂಜಿನಿಯರ್ ಪದವೀಧರ ವಿಜಯ್ ರಾಘವ.

‘2014ರಿಂದ ಅಂಧರಿಗಾಗಿ ಲ್ಯಾಪ್‌ಟ್ಯಾಪ್, ಕಂಪ್ಯೂಟರಿನ ಕೀಬೋರ್ಡ್‌ ಅಭಿವೃದ್ಧಿಪಡಿಸುವ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದೆ. ಆಗಿನಿಂದಲೂ ಅಂಧರಿಗಾಗಿ ಬ್ರೈಲ್ ಕೀ ಪ್ಯಾಡ್ ಮಾಡಬೇಕೆಂದು ಅಂದುಕೊಂಡಿದ್ದೆ. ಅದರಲ್ಲಿ ಈಗ ಯಶಸ್ವಿಯಾಗಿದ್ದು, ಅಂಧರಿಗಾಗಿ ಟಿಪೊ ಹೆಸರಿನ ಬ್ರೈಲ್ ಕೀ ಪ್ಯಾಡ್ ಆವಿಷ್ಕರಿಸಿದೆ. ನನ್ನ ಈ ಕೆಲಸಕ್ಕೆ ಸ್ನೇಹಿತರಾದ ಲೈಲೆ ರೋಡ್ರಿಕ್ಸ್, ಆಯುಷ್ಮಾನ್ ತಲ್ವಾರ್ ಮತ್ತು ಪ್ರಶಾಂತ ಶರ್ಮ ಅವರು ಕೈಜೋಡಿಸಿದರು’ ಎಂದು ತಮ್ಮ ಯಶಸ್ಸಿನ ಕತೆ ಬಿಚ್ಚಿಡುತ್ತಾರೆ ಅವರು.

‘ಬಹಳಷ್ಟು ಅಂಧರು ಹಳೆಯ ಮಾದರಿಯ (ಫೀಚರ್) ಫೋನ್‌ಗಳನ್ನೇ ಬಳಸುತ್ತಿದ್ದರು. ಸ್ಮಾರ್ಟ್‌ಫೋನ್‌ಗಳನ್ನು ಕೊಳ್ಳುವ ಸಾಮರ್ಥ್ಯವಿದ್ದರೂ ಅದರಲ್ಲಿನ ಕೀಪ್ಯಾಡ್‌ನ ನ್ಯೂನತೆಯಿಂದಾಗಿ ಅವರಿಗೆ ಸ್ಮಾರ್ಟ್‌ಫೋನ್ ಬಳಸಲು ಆಗುತ್ತಿರಲಿಲ್ಲ. ಬ್ರೈಲ್ ಲಿಪಿ ಇರುವ ಕೀಪ್ಯಾಡ್ ಅಳವಡಿಸಿದರೆ ಅಂಧರಿಗೆ ಅನುಕೂಲವಾಗುತ್ತದೆ ಎನಿಸಿತು. ಸ್ಮಾರ್ಟ್‌ಪೋನ್‌ಗಳಿಗೆ ಬ್ರೈಲಿ ಲಿಪಿ ಇರುವ ಕೀಪ್ಯಾಡ್ ಅಳವಡಿಸಿ, ಪ್ರಾಯೋಗಿಕವಾಗಿ ಪರೀಕ್ಷೆಗೆ ಒಳಪಡಿಸಿದಾಗ ಅದರಿಂದ ಅಂಧರಿಗೆ ಉಪಯೋಗವಾಗುತ್ತದೆ ಎಂಬುದು ಮನದಟ್ಟಾಯಿತು’ ಎಂದು ತಮ್ಮ ಕೆಲಸದ ತಳಹದಿ ವಿವರಿಸುತ್ತಾರೆ.

‘ಈ ಕೀಪ್ಯಾಡ್ ಬ್ರೈಲ್ ಟೈಪ್‌ರೈಟರ್ ರೀತಿ ಕೆಲಸ ಮಾಡುತ್ತದೆ. ಇದನ್ನು ಯಾವುದೇ ಆ್ಯಂಡ್ರಾಯ್ಡ್ ಫೋನ್‌ಗೆ ಸುಲಭವಾಗಿ ಅಳವಡಿಸಬಹುದು. ಸ್ಮಾರ್ಟ್‌ಫೋನ್‌ ಸೆಟ್ಟಿಂಗ್‌ನಲ್ಲಿ ಟಾಕ್ ಬ್ಯಾಕ್ ಫೀಚರ್ ಇದೆ. ಅದು ನಿಮ್ಮ ಮೊಬೈಲಿಗೆ ಬಂದ ಸಂದೇಶವನ್ನು ಓದಿ ಹೇಳುತ್ತದೆ. ಇದರಿಂದ ಅಂಧರು ಮೊಬೈಲ್‌ಗೆ ಬಂದ ಸಂದೇಶಗಳನ್ನು ನೋಡಲಾಗದಿದ್ದರೂ, ಸಂದೇಶಗಳನ್ನು ಧ್ವನಿಯ ಮೂಲಕ ಕೇಳಿ ತಿಳಿಯಬಹುದು.

ಬ್ರೈಲ್ ಕೀಪ್ಯಾಡ್ ಬಳಸಿ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬಹುದು. ಸದ್ಯಕ್ಕೆ ಇದು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಲಭ್ಯವಿದೆ. ಇದಕ್ಕೆ ಸಂಬಂಧಿಸಿದ ತಂತ್ರಜ್ಞಾನ, ಕೋಡ್‌ಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿ ಇರಿಸಿದ್ದೇನೆ. ಆಸಕ್ತರು ಇದನ್ನು ಮತ್ತಷ್ಟು ಅಭಿವೃದ್ಧಿಪಡಿಸಬಹುದು’ ಎಂದು ತಮ್ಮ ಕನಸು ಹಂಚಿಕೊಳ್ಳುತ್ತಾರೆ.

ಈವರೆಗೆ 15 ಬ್ರೈಲ್ ಕೀಪ್ಯಾಡ್‌ಗಳನ್ನು ಪ್ರಾಯೋಗಿಕವಾಗಿ ತಯಾರಿಸಿ ಆಯ್ದ ಸಂಘ, ಸಂಸ್ಥೆಗಳು ಮತ್ತು ಅಂಧರಿಗೆ ನೀಡಿದ್ದಾರೆ. ಕೀಪ್ಯಾಡ್‌ ಬಳಕೆ ವೇಳೆ ಅಂಧರು ಎದುರಿಸುವ ಸಮಸ್ಯೆ ಅರಿತುಕೊಂಡು ಕೀಪ್ಯಾಡ್‌ ಸುಧಾರಿಸುವ ಯೋಚನೆ ಅವರದು.

‘ಸದ್ಯಕ್ಕೆ ಈ ಕೀಪ್ಯಾಡ್‌ಗಳು ₹ 300ಕ್ಕೆ ದೊರೆಯುತ್ತಿವೆ. ಸರ್ಕಾರ ಮತ್ತು ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳು ಕೈಜೋಡಿಸಿದಲ್ಲಿ ಅಂಧರಿಗೆ ಉಚಿತವಾಗಿ ನೀಡಬಹುದು’ ಎನ್ನುತ್ತಾರೆ ವಿಜಯ್. ಮಾಹಿತಿಗೆ ಮೊ– 90350 61090.

ಕೊಂಡಿ: https://www.youtube.com/watch?v=mOen9V3yXzM

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT