ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ, ವಾಸ್ತವಿಕತೆಯ ಬಲೆಯಲ್ಲಿ ವೃದ್ಧಾಪ್ಯ

Last Updated 27 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ವಯಸ್ಸಾದವರಿಗೆ ಆರೋಗ್ಯ ವಿಮೆ ಯೋಜನೆಗಳನ್ನು ಸರ್ಕಾರಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ನಮ್ಮ ದೇಶದಲ್ಲಿ ಇನ್ನು ಕೆಲವೇ ದಶಕಗಳಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚಲಿದೆ. ಆದರೆ ವೃದ್ಧಾಪ್ಯದ ಬಿಕ್ಕಟ್ಟು ಟೈಂ ಬಾಂಬ್‌ನಂತೆ ಸಿಡಿಯಲು ಕಾಯುತ್ತಿದೆ.‌

ಪ್ರಪಂಚಪರ್ಯಟನೆ ಅನೇಕರಂತೆ ನನ್ನ ಆಸೆಯೂ ಕೂಡ. ಅದರಂತೆ ಕಳೆದ ವಾರ ಜರ್ಮನಿಯ ಪ್ರವಾಸಕ್ಕೆ ನಾನು ಮತ್ತು ನನ್ನ ಹೆಂಡತಿ ಹೋಗಿದ್ದೆವು. ಅಲ್ಲಿನ ಸಂಪ್ರದಾಯ, ಸಂಸ್ಕೃತಿ, ಆಹಾರಪದ್ಧತಿ ಮುಂತಾದವುಗಳ ಅನುಭವ ಪಡೆಯಲು ಒಂದು ಜರ್ಮನ್ ಕುಟುಂಬದೊಂದಿಗೆ ವಾಸಿಸಲು ನಿರ್ಧರಿಸಿದ್ದೆವು.

ಏರ್‌ಪೋರ್ಟ್‌ನಿಂದ ಮನೆಗೆ ಹೋಗುವವರೆಗೆ ಬಸ್ಸು, ರೈಲಿನಲ್ಲಿ ಪ್ರಯಾಣ ಮಾಡಬೇಕಾದರೆ ಅಲ್ಲಿನ ಜನಜೀವನ, ವಾಹನಸಂಚಾರ, ಜರ್ಮನ್ ರೂಲ್ಸ್‌ಗಳ ಕಿರುಚಿತ್ರ ನೋಡಿದಂತಾಗಿತ್ತು. ನಮ್ಮ ಆತಿಥೇಯ ಕುಟುಂಬದಲ್ಲಿ 65ರ ಹರೆಯದ ಕೆರಿನ್ ಹಾಗೂ ಬ್ರೂಸ್ ಗ್ರೀನ್‌ವುಡ್ ದಂಪತಿಗಳು ಹಾಗೂ ಅವರ 30 ವರ್ಷದ ಮಗನಿದ್ದ. ಆದರೆ, ಅಲ್ಲಿಯ ವಾಡಿಕೆಯಂತೆ, 20ನೇ ವಯಸ್ಸಿನಲ್ಲಿಯೇ ತನ್ನ ಗರ್ಲ್‌ಫ್ರೆಂಡ್ ಜೊತೆ ಬೇರೆ ಮನೆಯಲ್ಲಿ ವಾಸವಿದ್ದ.

ಬ್ರೂಸ್ ಮತ್ತು ಕೆರಿನ್ ನಮ್ಮನ್ನು ಆದರದಿಂದ ಬರ ಮಾಡಿಕೊಂಡು, ನಮ್ಮ ರೂಮ್ ತೋರಿಸಿದರು. ಸಂಜೆ, ಅವರು ಅಲ್ಲಿಯ ರಿವಾಜಿನಂತೆ, ನಮ್ಮನ್ನು ವೈನ್ ಕುಡಿಯಲು ಆಹ್ವಾನಿಸಿದರು. ಆಗ ಅವರೊಂದಿಗಿನ ಹರಟೆಯಲ್ಲಿ ಭಾರತ ಹಾಗೂ ಜರ್ಮನಿಯ ಐತಿಹಾಸಿಕ, ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ವಿಷಯಗಳ ಬಗ್ಗೆ ಗಂಟೆಗಟ್ಟಲೇ ಮಾತನಾಡಿದೆವು. ಅನೇಕ ವಿಷಯಗಳ ಬಗ್ಗೆ ಹರಟುತ್ತಿರುವಾಗ ಅವರು ಪ್ರಸ್ತಾಪಿಸಿದ ಒಂದು ವಿಷಯ ತುಂಬ ತೀಕ್ಷ್ಣವೆನಿಸಿತು.

ಗ್ರೀನ್‌ವುಡ್ ದಂಪತಿಗಳು ತಮ್ಮ ವೃದ್ಧಾಪ್ಯದ ಬಗ್ಗೆ ನೆನಪಿಸಿಕೊಂಡು ಚಿಂತೆಗೀಡಾಗಿದ್ದರು. ವಯಸ್ಸಾದ ನಂತರ, ಅವರಿಗೆ ಆರೈಕೆಯ ಅವಶ್ಯಕತೆ ಇದ್ದರೆ, ಅವರೇ ತಮ್ಮ ಉಳಿತಾಯದ ಹಣವನ್ನು ವ್ಯಯಿಸಿ ನರ್ಸ್‌ಗಳನ್ನು ಇಟ್ಟುಕೊಳ್ಳಬೇಕಾಗಿತ್ತು. ಅವರ ಸರ್ಕಾರ ಈ ವಿಷಯದಲ್ಲಿ ಏನನ್ನೂ ಮಾಡುತ್ತಿಲ್ಲ, ’ಸೋ, ವಿ ಆರ್ ಹೆಡಿಂಗ್ ಟುವರ್ಡ್ಸ್ ಒಲ್ಡ್ ಏಜ್ ಡಿಸಾಸ್ಟರ್’ ಎಂದು ಬೇಸರದಿಂದ ಹೇಳಿದರು.

ಮಕ್ಕಳು ಅಥವಾ ಸಂಬಂಧಿಕರು ನೋಡಿಕೊಳ್ಳುವ ಪದ್ಧತಿ ಜರ್ಮನಿಯಲ್ಲವಂತೆ. ಗ್ರೀನ್‌ವುಡ್‌ ದಂಪತಿಗಳ ಮಾತುಗಳನ್ನು ಕೇಳಿ, ನನಗೆ ನಮ್ಮ ಕುಟುಂಬಪದ್ಧತಿ, ಸಂಪ್ರದಾಯ ಹಾಗೂ ಸಮಾಜದಲ್ಲಿ ಹಿರಿಯರ ಸ್ಥಾನವನ್ನು ನೆನೆದು ಹೆಮ್ಮೆ ಎನ್ನಿಸಿತು. ಆದರೆ ಮರುಕ್ಷಣವೇ, ಬದಲಾಗುತ್ತಿರುವ ಭಾರತೀಯ ಸಮಾಜದ ಚಿತ್ರಣ ಕಣ್ಮುಂದೆ ಬಂದು ಕಸಿವಿಸಿಯಾಯಿತು.

ನಮ್ಮ ಸಮಾಜದಲ್ಲಿ ಮಕ್ಕಳು ಪ್ರೌಢರಾಗುವವರೆಗೆ ಅವರ ಜವಾಬ್ದಾರಿ ತಂದೆ–ತಾಯಿಯರದು ಹಾಗೂ ತಂದೆ–ತಾಯಿಗಳ ಇಳಿವಯಸ್ಸಿನಲ್ಲಿ ಅವರ ಜವಾಬ್ದಾರಿ ಮಕ್ಕಳದು – ಎಂಬ ಸಂಸ್ಕೃತಿಯಿದೆ. ಗಂಡುಮಗ ಇಳಿವಯಸ್ಸಿನಲ್ಲಿ ತಂದೆ–ತಾಯಿಗೆ ಶ್ರವಣಕುಮಾರನಂತೆ ಆಸರೆ ನೀಡುತ್ತಾನೆ ಎಂಬ ನಂಬಿಕೆಯಿಂದಲೋ ಏನೋ, ಗಂಡುಮಕ್ಕಳನ್ನು ಹೆರುವವರೆಗೂ ಸಂತಾನೋತ್ಪತ್ತಿಯ ಪ್ರಯತ್ನ ನಡೆಯುತ್ತಿತ್ತು.

ಕಾಲಕ್ರಮೇಣ ಆಧುನಿಕತೆ ಎಲ್ಲರನ್ನೂ ತನ್ನೆಡೆಗೆ ಸೆಳೆಯತೊಡಗಿತು. ಸ್ವಾತಂತ್ರ್ಯದ ಪರಿಕಲ್ಪನೆ ಬದಲಾಗತೊಡಗಿತ್ತು. ವಿದ್ಯಾಭ್ಯಾಸದ ಜೊತೆಗೆ, ಉದ್ಯೋಗಗಳನ್ನು ಅರಸಿ ನಗರಗಳತ್ತ ಯುವಜನಾಂಗ ಮುಖ ಮಾಡತೊಡಗಿತು. ಅಲ್ಲಿ ಹೆಚ್ಚಿದ ಜನಸಂಖ್ಯೆ, ವಾಸಯೋಗ್ಯ ಸ್ಥಳದ ಕೊರತೆ, ಉದ್ಯೋಗ ಹಾಗೂ ಉಳಿವಿಗೆ ಗಳಿಕೆಯ ಒತ್ತಡ ಹೆಚ್ಚಾಗತೊಡಗಿದಂತೆ, ಕುಟುಂಬಗಳು ಚಿಕ್ಕದಾಗತೊಡಗಿದವು.

ಹಿರಿಯರು ತಮ್ಮೂರಿನಲ್ಲಿ ಉಳಿಯಲಾರದೇ, ಶಹರಗಳಿಗೆ ಬರಲಾರದೇ ಪೇಚಾಡತೊಡಗಿದರು. ಕೊನೆಗೂ ತಮ್ಮ ಮಕ್ಕಳ ಆಸೆ-ಆಕಾಂಕ್ಷೆಗಳಿಗೆ ಅಡ್ಡಿಯಾಗಬಾರದೆಂದು, ಒಲ್ಲದ ಮನಸ್ಸಿನಿಂದ ಶಹರಗಳಿಗೆ ವಲಸೆ ಬರಲಾರಂಭಿಸಿದರು. ಶಹರದ ಜೀವನ, ವ್ಯವಸ್ಥೆಗಳು (ಅವಸ್ಥೆ) ಹಿಡಿಸುತ್ತಿರಲಿಲ್ಲ. ಆದರೇನು ಮಾಡುವುದು? ಬೇರೆ ವಿಧಿಯಿಲ್ಲ, ಬದುಕಿಗೆ ಆಸರೆಯೆಂದರೆ ಮಕ್ಕಳು ಮಾತ್ರ.

ಶಹರದ ಜೀವನ ಶೈಲಿ, ಗಜಿಬಿಜಿ, ಅಭದ್ರತೆ ಹಾಗೂ ಒಂಟಿತನದೊಂದಿಗೆ ಪ್ರತಿದಿನ ಹೋರಾಡುತ್ತಿದ್ದಾರೆ. ಎಲ್ಲಿ ಮನೆಯಿಂದ ಹೊರಗಟ್ಟಬಹುದೋ ಎಂಬ ಭಯದಿಂದ ಭಾವನೆಗಳನ್ನು ವ್ಯಕ್ತಪಡಿಸಲಾಗದೇ ಒದ್ದಾಡುವರು. ಬಹುಶಃ ಮೂರ್ನಾಲ್ಕು ದಶಕಗಳ ಹಿಂದೆ ನಮ್ಮ ಅಜ್ಜಿ–ತಾತಂದಿರು ನಮಗೆ ತಮ್ಮ ಅನುಭವಗಳನ್ನು ಕಥೆಗಳ ರೂಪದಲ್ಲಿ ಹೇಳುತ್ತಿದ್ದರು. ನಮಗೆ ಅವು ಅತ್ಯಂತ ಸ್ವಾರಸ್ಯಕರ ಹಾಗೂ ಖುಷಿ ನೀಡುತ್ತಿದ್ದವು. ಆದರೆ ಇತ್ತೀಚಿನ ತಂತ್ರಜ್ಞಾನದ ಮಾಯೆಯ ಮುಂದೆ ನಮ್ಮ ಹಿರಿಯರ ಕಥೆಗಳು ಹಾಗೂ ಅವರ ಅನುಭವಗಳು ತ್ಯಕ್ತವೆನಿಸುತ್ತವೆ.

ಪಾಶ್ಚಾತ್ಯಸಮಾಜದಲ್ಲಿ ನಮ್ಮ ರೀತಿಯ ಕುಟುಂಬವ್ಯವಸ್ಥೆಯಿಲ್ಲ. ಭಾವನಾತ್ಮಕ ಸಂಬಂಧಗಳು ಜಟಿಲವಾಗಿಲ್ಲ. ಹೀಗಾಗಿ ಮಗು ಪ್ರೌಢಾವಸ್ಥೆ ತಲುಪಿದ ಕೂಡಲೇ, ಮನೆಯಿಂದ ಹೊರಗೆ ಹೋಗಿ ತನ್ನ ಜೀವನವನ್ನು ರೂಪಿಸಿಕೊಳ್ಳುವುದು ಎಷ್ಟು ಸಹಜವೋ, ಅದೇ ರೀತಿ ವಯಸ್ಸಾದ ಮೇಲೆ ತಂದೆ–ತಾಯಿಗಳು ವೃದ್ಧಾಶ್ರಮ ಅಥವಾ ಅಂತಹ ಇತರ ವ್ಯವಸ್ಥೆಗಳಿಗೆ ಮೊರೆ ಹೋಗುವುದು ಕೂಡ ಸಹಜವೇ. ಆದರೆ ನಮ್ಮ ದೇಶ ಪರಿವರ್ತನೆಯ ಪರ್ವದಲ್ಲಿ ಸಾಗುತ್ತಿದೆ.

ಸಾಂಪ್ರದಾಯಿಕ ಕುಟುಂಬವ್ಯವಸ್ಥೆಯ ಅನುಕೂಲತೆಗಳು ಮಾತ್ರ ನಮಗೆ ಹಿತವೆನ್ನಿಸುತ್ತಿವೆ. ದೂರದ ಅಮೆರಿಕದಲ್ಲಿ ಮಕ್ಕಳಿಗೆ ಹೆರಿಗೆಯಾದರೆ, ಭಾರತದಿಂದ ಅಮ್ಮ-ಅಪ್ಪ ಮಗುವಿನ ಆರೈಕೆಗಾಗಿ ಅಲ್ಲಿಗೆ ಪ್ರಯಾಣ ಬೆಳೆಸಬೇಕಾಗುತ್ತದೆ. (ಬೆಂಗಳೂರಿನ ಆಡುಭಾಷೆಯಲ್ಲಿ ಐ ಎ ಎಸ್ - ಇಂಡಿಯನ್ ಆಯಾ ಸರ್ವಿಸ್ ಎಂತಲೂ ಕರೆಯುವುದುಂಟು!). ಆದರೆ, ಅದೇ ತಂದೆ–ತಾಯಿಗಳು ವಯಸ್ಸಾದ ಮೇಲೆ, ಅಮೆರಿಕದಲ್ಲಿರಲೂ ಆಗುವುದಿಲ್ಲ. ಅವರ ಮಕ್ಕಳು ಇಲ್ಲಿಗೆ ಬಂದು ಅವರನ್ನು ನೋಡಿಕೊಳ್ಳವುದು ವಾಸ್ತವಿಕವಾಗಿ ಅಸಾಧ್ಯ.

ಹೀಗೆ ನಾವು ನಮ್ಮ ಕುಟುಂಬ ವ್ಯವಸ್ಥೆಯ ಅನುಕೂಲತೆಗಳನ್ನು ಮಾತ್ರ ಅನುಭವಿಸಿ, ಅದರೊಟ್ಟಿಗೆ ಬರುವ ಜವಾಬ್ದಾರಿಗಳನ್ನು ನಿಧಾನವಾಗಿ ಬದಿಗೊತ್ತುವ ಪ್ರಯತ್ನದಲ್ಲಿದ್ದೇವೆ. ಇದು ಈಗಿನ ಯುವಜನತೆಯ ತಪ್ಪೋ ಅಥವಾ ಪ್ರತಿ ಸಮಾಜ ಅನುಭವಿಸುವ ಪರಿವರ್ತನೆಯ ಪರಿಣಾಮವೋ ಎನ್ನುವ ವಿಷಯ ಚರ್ಚಿಸಬೇಕಾದದ್ದು.

ನಮ್ಮ ದೇಶದಲ್ಲಿ, ಇತ್ತೀಚಿನ ಜನಗಣತಿಯ ಪ್ರಕಾರ 60ವರ್ಷ ವಯಸ್ಸಿನ ಮೇಲ್ಪಟ್ಟವರು 10ಕೋಟಿಗೂ ಹೆಚ್ಚಿದ್ದಾರೆ. ಹೆಚ್ಚಿದ ಆಯಸ್ಸನ್ನು ನಾವು ವೈದ್ಯಕೀಯ ರಂಗದ ಸಾಧನೆಗಳ ಪ್ರತಿಫಲವೆಂದು ನಂಬಿ ಹೆಮ್ಮೆ ಪಡುತ್ತೇವೆ. ಆದರೆ 2050ರ ವೇಳೆಗೆ, ವಯಸ್ಸಾದವರ ಸಂಖ್ಯೆ ತ್ರಿಗುಣಗೊಳ್ಳುವ ಅಂದಾಜಿದೆ. ಜನಸಂಖ್ಯೆಯ ಪರಿವರ್ತನೆ ಚಕ್ರದ ದೆಸೆಯಿಂದ ಇಂದು ನಾವು ‘ಯುವದೇಶ’ವಾಗಿರಬಹುದು. ಆದರೆ ಇನ್ನು ಕೆಲವೇ ದಶಕಗಳಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚಲಿದೆ. ಆದರೆ ವೃದ್ಧಾಪ್ಯದ ಬಿಕ್ಕಟ್ಟು, ಟೈಂ ಬಾಂಬ್‌ನಂತೆ ಸಿಡಿಯಲು ಕಾಯುತ್ತಿದೆ.

ಸರ್ಕಾರಗಳು ಯುವಜನತೆಗೆ ಕೌಶಲ, ಶಿಕ್ಷಣ ಹಾಗೂ ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆಗಳನ್ನು ಬೃಹತ್ ಪ್ರಮಾಣದಲ್ಲಿ ಹಮ್ಮಿಕೊಳ್ಳುತ್ತಿದ್ದು, ಈ ಶತಮಾನದ ಸ್ಪರ್ಧೆಗಳಿಗೆ ದೇಶವನ್ನು ತಯಾರು ಮಾಡುವಲ್ಲಿ ನಿರತವಾಗಿವೆ. ಆದರೆ ವೃದ್ಧಾಪ್ಯದ ಸಮಸ್ಯೆ ಎಂಬ ಟೈಂ ಬಾಂಬ್ ನ ಬಗ್ಗೆ ಕಿಂಚಿತ್ತೂ ಗಂಭೀರತೆ ತೋರಿಸದಿರುವುದು ಕಳವಳಕಾರಿ ಸಂಗತಿ. ಸದ್ಯದ ಆರೋಗ್ಯ ಸೌಕರ್ಯಗಳು ಹಾಗೂ ಸಾಮಾಜಿಕ ಸುರಕ್ಷಾ ಯೋಜನೆಗಳು ಈ ಬಿಕ್ಕಟ್ಟನೊಂದಿಗೆ ಸೆಣಸುವುದರಲ್ಲಿ, ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಿವೆ.

ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳಾದ ಮಧುಮೇಹ, ರಕ್ತದೊತ್ತಡ, ಎಲುಬು-ಕೀಲಿನ ಸಮಸ್ಯೆಗಳು, ಹೃದಯಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯು – ಇನ್ನು ಅನೇಕ ಕಾಯಿಲೆಗಳು ಅವರನ್ನು ಆರೈಕೆಗಾಗಿ ಇತರರ ಮೇಲೆ ಅವಲಂಬಿತರನ್ನಾಗಿ ಮಾಡುತ್ತವೆ. ಖಿನ್ನತೆ ಹಾಗೂ ಅಲ್‌ಝೈಮರ್‌ ಕಾಯಿಲೆಗಳು ಪರಿಸ್ಥಿತಿಯನ್ನು ಇನ್ನೂ ಗಂಭೀರವನ್ನಾಗಿಸುತ್ತವೆ. ಸಾಮಾನ್ಯ ಜನತೆಗೆ ಇಳಿವಯಸ್ಸಿನ ಕಾಯಿಲೆಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಅದೂ ಖಿನ್ನತೆ ಹಾಗೂ ಡೆಮೆನ್ಶಿಯವನ್ನು ವೃದ್ಧಾಪ್ಯದ ಸ್ವಾಭಾವಿಕ  ಸಮಸ್ಯೆಗಳೆಂದು ಉಪೇಕ್ಷಿಸುತ್ತಾರೆ.

ಈ ಸಮಸ್ಯೆಗಳ ನಿರ್ವಹಣೆಗೆ ದೇಶದಲ್ಲಿ, ಅರ್ಹತೆಯುಳ್ಳ ಮಾನವ ಸಂಪನ್ಮೂಲ ಹಾಗೂ ಮೂಲಸೌಕರ್ಯ ಪರ್ಯಾಪ್ತವಾಗಿಲ್ಲ. ಸದ್ಯದ ಸೌಕರ್ಯಗಳೊಂದಿಗೆ, ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸುವುದು ಹಿಮಾಲಯ ಪರ್ವತಾರೋಹಣದಷ್ಟೇ ಕ್ಲಿಷ್ಟಕರ. ನಮ್ಮ ದೇಶದ ಆರೋಗ್ಯ ವಿಮೆಯ ಯೋಜನೆಗಳು ವಯಸ್ಸಾದವರ ಬಗ್ಗೆ ಸಂವೇದನೆಯಿಂದ ಸ್ಪಂದಿಸುವುದಿಲ್ಲ.

ವಿಮೆಯ ಕಂತುಗಳು ವೃದ್ಧಾಪ್ಯದಲ್ಲಿ ಹೆಚ್ಚಿನ ಮೊತ್ತದ್ದಾಗಿದ್ದು , ಆರ್ಥಿಕವಾಗಿ ಇನ್ನಷ್ಟು ಹೊರೆಯಾಗುತ್ತದೆ. ಆರೋಗ್ಯ ವಿಮೆಯ ವಿಷಯದಲ್ಲಿ ಸರ್ಕಾರಗಳು, ವಯಸ್ಸದವರಿಗೆ ಇನ್ನಷ್ಟು ಅನುಕೂಲತೆಗಳನ್ನು ಮಾಡುವ ಕಾನೂನುಗಳನ್ನು ಜಾರಿಗೊಳಿಸಬೇಕು. ಇತ್ತೀಚಿಗೆ ದೇಶದಲ್ಲಿ, ಜೀರಿಯಾಟ್ರಿಕ್ ಮೆಡಿಸಿನ್, ಜೀರಿಯಾಟ್ರಿಕ್ ಸೈಕ್ಯಾಟ್ರಿ ಎಂಬ ಕೋರ್ಸ್‌ಗಳನ್ನು ಶುರು ಮಾಡಿ ಮಾನವ ಸಂಪನ್ಮೂಲದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಆದರೂ ಈ ಪ್ರಯತ್ನ ಬೃಹತ್ ಪ್ರಮಾಣದಲ್ಲಿ ನಡೆಯಬೇಕಿದೆ.

ಭಾರತ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಸಮೀಕ್ಷೆಯ ಪ್ರಕಾರ, ವಯಸ್ಸಾದವರಲ್ಲಿ ಅರ್ಧದಷ್ಟು ಪ್ರಮಾಣ ಬಡತನದ ರೇಖೆಯ ಕೆಳಗೆ ಬದುಕುತ್ತಿದ್ದಾರೆ. ಇನ್ನು ಅನೇಕರು ನಿರ್ಗತಿಕರಾಗಿ, ಸಾಮಾಜಿಕವಾಗಿ ದುರ್ಬಲರಾಗುತ್ತಾರೆ. ವಯಸ್ಸಾದವರಲ್ಲಿ ಶೇ.50ರಷ್ಟು ಜನರು ಇತರರ ಮೇಲೆ ಆರ್ಥಿಕವಾಗಿ ಅವಲಂಬಿತರಾಗಿದ್ದಾರೆ. ತಮ್ಮ ಜೀವಮಾನದಲ್ಲಿ ಬಹುಶಃ ಅವರು ತಮ್ಮೆಲ್ಲ ಗಳಿಕೆಯನ್ನು ತಮ್ಮ ಮಕ್ಕಳ ಮೇಲೆ ಧಾರೆಯೆರೆಯುತ್ತಾರೆ. ಕೊನೆಗೆ ತಮಗೆ ಯಾವ ಆರ್ಥಿಕ ಬೆಂಬಲವಿಲ್ಲದೇ ಜೀವನ ಕಳೆಯಬೇಕಾದ ಪರಿಸ್ಥತಿ ಬರುತ್ತದೆ. ಸರಕಾರಗಳು, ವೃದ್ಧಾಪ್ಯ ಪಿಂಚಣಿ ಹಾಗೂ ಇನ್ನಿತರ ಸಾಮಾಜಿಕ ಸುರಕ್ಷೆಯ ಯೋಜನೆಗಳನ್ನೂ ಕೈಗೊಂಡಿದ್ದರೂ ಅವುಗಳ ಪ್ರಮಾಣ ಹಾಗೂ ಜಾರಿಗೊಳಿಸುವ ವಿಧಾನಗಳು ಇನ್ನು ಸರಳವಾಗಿಲ್ಲ.

ಹೆಲ್ಪ ಏಜ್ ಇಂಡಿಯಾ ಎಂಬ ಸಂಸ್ಥೆಯು ದೇಶದ 8 ನಗರಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ವಯಸ್ಸಾದವರಲ್ಲಿ  ಶೇ.50ರಷ್ಟು ಮಂದಿ ಹಿಂಸೆ, ಕಿರುಕುಳ, ಪೀಡೆಗೆ ಒಳಗಾಗಿದ್ದಾರೆ ಎಂದು ವರದಿ ಮಾಡಿದ್ದಾರೆ. ಅಗೌರವದಿಂದ ನಡೆದುಕೊಳ್ಳುವುದು, ಬೈಯ್ಯುವುದು ಹಾಗೂ ನಿರ್ಲಕ್ಷಿಸುವುದು ಈ ಸಮೀಕ್ಷೆಯಲ್ಲಿ ಕಂಡು ಬಂದಂತಹ ಶೋಷಣೆಯ ವಿಧಗಳು. ಹತ್ತಿರದವರಿಂದಲೇ ಶೋಷಣೆ ನಡೆಯುವುರಿಂದ, ವಿಷಯವನ್ನು ತಮ್ಮಲ್ಲೆ ನುಂಗಿಕೊಂಡು ಆ ಹಿರಿಯ ಜೀವಗಳು ದುಃಖಿಸುತ್ತವೆ. ಇದರಿಂದ ಈ ರೀತಿ ಘಟನೆಗಳು ವರದಿಯಾಗುವುದೇ ವಿರಳ. ವೃದ್ಧರ ರಕ್ಷಣೆಗೆ ಅನೇಕ ಕಾನೂನುಗಳಿದ್ದರೂ, ಜನತೆಯಲ್ಲಿ ಅದರ ಬಗ್ಗೆ ಅರಿವು ಕಡಿಮೆಯಾದ್ದರಿಂದ ಅವುಗಳ ಬಳಕೆ ಅತಿ ಕಡಿಮೆ.

ಇತ್ತೀಚಿನ ದಿನಗಳಲ್ಲಿ, ವೃದ್ಧಾಶ್ರಮಗಳು ಹಾಗೂ ವೃದ್ಧರಿಗೆ ಮನೆಗೆ ಬಂದು ಆರೈಕೆ ನೀಡುವ ಸಂಸ್ಥೆಗಳ ಉದ್ಯಮವೊಂದು ನಿಧಾನವಾಗಿ ಬೆಳೆಯುತ್ತಿದೆ. ಅವುಗಳ ಗುಣಮಟ್ಟ, ಅಲ್ಲಿ ಕೆಲಸ ಮಾಡುವವರ ಅರ್ಹತೆ ಹಾಗೂ ಇನ್ನಿತರ ಸುರಕ್ಷತೆಯ ವಿಷಯಗಳ ಬಗ್ಗೆ ಸ್ಪಷ್ಟ ನೀತಿಯನ್ನು ರೂಪಿಸುವ ಅವಶ್ಯಕತೆ ಇದೆ. ಸರ್ಕಾರಿ ವೃದ್ಧರ ಮನೆಗಳನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸ್ಥಾಪಿಸುವುದು ಹಾಗೂ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಅಂತಹ ಸಂಸ್ಥೆಗಳನ್ನು ಸರಿಯಾಗಿ ನಡೆಸಿಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನ ನಡೆಯಬೇಕಿದೆ.

ಇತ್ತೀಚಿಗೆ, ಮಹಾತ್ಮಾ ಗಾಂಧಿಜಿಯವರ ಮೊಮ್ಮಗ ಕಾನುಭಾಯಿ ಗಾಂಧಿ ಹಾಗೂ ಅವರ ಪತ್ನಿ ವೃದ್ಧಾಶ್ರಮ ಸೇರಿದ ವಿಷಯ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಪ್ರಧಾನ ಮಂತ್ರಿಗಳು ಖುದ್ದಾಗಿ ಅವರ ಯೋಗಕ್ಷೇಮ ವಿಚಾರಿಸಿಕೊಂಡು, ಅಲ್ಲಿನ ಅಧಿಕಾರಿಗಳಿಗೆ ಕಾನುಭಾಯಿ ದಂಪತಿಗಳನ್ನು ಸರಿಯಾಗಿ ನೋಡಿಕೊಳ್ಳುವಂತೆ ಸೂಚಿಸಿದ್ದರಂತೆ. ಈ ರೀತಿ ಸಂವೇದನೆ ಪ್ರತಿಯೊಬ್ಬರ ವಿಷಯದಲ್ಲಿ ಅಧಿಕಾರಿಗಳು ವ್ಯಕ್ತಪಡಿಸಿದರೆ, ವೃದ್ಧರು ತಮ್ಮ ಕೊನೆಯ ದಿನಗಳನ್ನು ಕೊಂಚ ನೆಮ್ಮದಿಯಿಂದ ಕಳೆಯಬಹುದು.

ಹೆಚ್ಚುತ್ತಿರುವ ವೃದ್ಧಾಶ್ರಮಗಳನ್ನು ಕಂಡು, ನಾವು ನಮ್ಮ ಹಿರಿಯರನ್ನು ಹೀಗೇಕೆ ನೋಡಿಕೊಳ್ಳುತ್ತಿದ್ದೇವೆ ಎಂಬ ಪಾಪಪ್ರಜ್ಞೆ ಒಂದೆಡೆಯಾದರೆ, ಬೀದಿಯಲ್ಲಿ ನಿರ್ಗತಿಕರಾಗಿ ಅಲೆದಾಡುವುದಕ್ಕಿಂತ, ಅವರಿಗಾಗಿಯೇ ಮೀಸಲಾಗಿರುವ ಸೌಕರ್ಯಗಳನ್ನು ಹೊಂದಿರುವ ವ್ಯವಸ್ಥೆ(ವೃದ್ಧಾಶ್ರಮ)ಯಲ್ಲಿ ಅವರು ತಮ್ಮ ಕೊನೆಯ ದಿನಗಳನ್ನು ಕಳೆಯುವುದೇ ವಾಸಿ ಎಂಬ ಸಮಾಧಾನದ ಭಾವ ಇನ್ನೊಂದು ಕಡೆ. ಬಹುಶಃ ಆ ಸಮಾಧಾನದ ಭಾವದಲ್ಲಿಯೇ ವಾಸ್ತವಿಕ ಪರಿಹಾರವಿದೆ ಎಂದೆನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT