4

ರಕ್ತ ಸಂಬಂಧದೊಳಗಿನ ‘ಅಂಗವೈಕಲ್ಯ’ದ ಆರ್ತನಾದ

Published:
Updated:
ರಕ್ತ ಸಂಬಂಧದೊಳಗಿನ ‘ಅಂಗವೈಕಲ್ಯ’ದ ಆರ್ತನಾದ

ತೋಟದ ವಸತಿಯದು. ಊರಿನಿಂದ ಎರಡು, ಮೂರು ಕಿ.ಮೀ. ದೂರದಲ್ಲಿದೆ. ಸಂಪರ್ಕಕ್ಕಿರುವುದು ಕಚ್ಚಾರಸ್ತೆ. ಇದಕ್ಕೆ ಹೊಂದಿಕೊಂಡಂತಿರುವ ಹೊಲದ ಬದಿಯಲ್ಲೇ ನಿವಾಸ. ಅಲ್ಲಿಗೆ ತಲುಪುವಷ್ಟರಲ್ಲಿ ಮಧ್ಯಾಹ್ನ. ಆ ಮನೆಯ ಅಂಗಳದಲ್ಲಿ ಜೀವಂತ ಶವದಂತೆ ಅತ್ತೊಬ್ಬ, ಇತ್ತೊಬ್ಬ ಅಸಹಾಯಕರಾಗಿ ಮಲಗಿದ್ದರು.

ಒಬ್ಬಾತ ತನ್ನ ಸುತ್ತಲಿನ ವಿದ್ಯಮಾನವನ್ನು ಮಲಗಿದ್ದ ಸ್ಥಳದಲ್ಲೇ ಅತ್ತಿತ್ತ ಕತ್ತು ಹೊರಳಿಸಿ ಪಿಳಿಪಿಳಿ ಕಣ್ಣುಗಳನ್ನು ಬಿಟ್ಟು ಗಮನಿಸುತ್ತಿದ್ದರೆ, ಇನ್ನೊಬ್ಬ ತನ್ನ ಜತೆ ಯಾರಿಲ್ಲ ಎಂಬ ಮನೋಭಾವದಿಂದ ನಿರಂತರವಾಗಿ ಚೀರುತ್ತಿದ್ದ. ಈತನ ನರಳಾಟದ ಆರ್ತನಾದ ಅನುರಣಿಸುತ್ತಿತ್ತು...

ವಿಜಯಪುರ ತಾಲ್ಲೂಕು ಸೋಮದೇವರ ಹಟ್ಟಿಯ ತೋಟದ ವಸತಿಯಲ್ಲಿ ಗೋಚರಿಸಿದ ಚಿತ್ರಣವಿದು. ಇವರಿಬ್ಬರೂ ಅಂಗವಿಕಲರು. ಚಿಕ್ಕಪ್ಪ–ದೊಡ್ಡಪ್ಪರ ಮಕ್ಕಳು. ದೊಡ್ಡವನ ಹೆಸರು ಔದುರಸಿದ್ಧ. 15–16ರ ಪ್ರಾಯ. ಅಮಗೊಂಡ– ಶಿವಮ್ಮ ದಂಪತಿಯ ಪುತ್ರ. ಚಿಕ್ಕವನ ಹೆಸರು ಯಲ್ಲಾಲಿಂಗ. ದಾನೇಶ್ವರಿ–ನಾಗಪ್ಪ ಪೂಜಾರಿ ದಂಪತಿಯ ಪುತ್ರ. ಹತ್ತರ ಹರೆಯದವ. ಔದುರಸಿದ್ಧನಿಗೆ ಕೈ–ಕಾಲು ಚಲನೆಯಿಲ್ಲ. ಸೊಂಟ ಬಿಗಿಯಿಲ್ಲ. ಯಾರಾದರೂ ಹಿಡಿದು ಕೂತರೆ ಕೂರುವ. ಮಾತನಾಡುತ್ತಾನೆ ಎಂಬುದನ್ನು ಬಿಟ್ಟರೆ, ಬೇರೆ ಇನ್ಯಾವ ಸ್ಪಂದನೆಯಿಲ್ಲ. ಯಲ್ಲಾಲಿಂಗನಿಗೆ ಈ ಪ್ರಪಂಚದ ಪರಿವೆಯೇ ಇಲ್ಲ. ಸಂಪೂರ್ಣ ಅಸ್ವಸ್ಥ. ಮಾತಿಲ್ಲ. ಸ್ಪಂದನೆಯೂ ಇಲ್ಲ. ತನ್ನ ಬಳಿ ಯಾರೂ ಇಲ್ಲ ಎಂಬುದು ಅರಿವಿಗೆ ಬಂದೊಡನೆ ಚೀರಲಾರಂಭಿಸುತ್ತಾನೆ. ಆ ಆ ಆ ಆ ಆ ಎಂಬ ಆರ್ತನಾದ ಯಾರಾದರೂ ಬಳಿ ಬರುವವರೆಗೂ ನಿರಂತರವಾಗಿರುತ್ತದೆ. ಕೆಲ ಹೊತ್ತಿನಲ್ಲಿ ಯಾರೂ ಬರದಿದ್ದರೆ ಮಲಗಿದ್ದಲ್ಲೇ ತನ್ನ ಹಣೆಯನ್ನು ನೆಲಕ್ಕೆ ಬಡಿದುಕೊಳ್ಳುವ ಮೂಲಕ ರೊಚ್ಚಿಗೇಳುತ್ತಾನೆ. ಈತನನ್ನು ಸಂತೈಸಲು 24 ತಾಸು ಯಾರಾದರೂ ಜತೆಯಲ್ಲಿರಬೇಕು ಎನ್ನುತ್ತಲೇ ತಂದೆ ನಾಗಪ್ಪ ಪೂಜಾರಿ ಯಲ್ಲಾಲಿಂಗ ನಿತ್ಯವೂ ಅನುಭವಿಸುವ ನೋವಿನ ನರಕಯಾತನೆಯ ಚಿತ್ರಣವನ್ನು ಬಿಚ್ಚಿಡುತ್ತಲೇ ಗದ್ಗದಿತರಾದರು.

ಅಂಗವೈಕಲ್ಯ ಯಾವ ರೀತಿ ನಿಮ್ಮ ಮಕ್ಕಳಿಗೆ ಬಂತು ಎಂಬುದರ ಹಿನ್ನೆಲೆ ವಿಚಾರಿಸಿದಾಗ ಸಹೋದರರ ಕುಟುಂಬ ಹತ್ತು ಹಲವು ಘಟನಾವಳಿಗಳನ್ನು ಹೇಳುವ ಸಂದರ್ಭ ‘ನಮ್ಮದು ರಕ್ತ ಸಂಬಂಧದಲ್ಲಿನ ಮದುವೆ’ ಎಂದಿತು. ಈ ಅಂಗ ವೈಕಲ್ಯಕ್ಕೆ ಔದುರಸಿದ್ಧನ ಅಕ್ಕ ಶ್ರೀದೇವಿ ಈಗಾಗಲೇ ಬಲಿಯಾಗಿದ್ದಾಳೆ ಎಂಬ ಮಾಹಿತಿಯೂ ಹೊರಬಿತ್ತು.

ಈ ಸಂದರ್ಭ ಜತೆಯಲ್ಲಿದ್ದ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್‌ ಡಿಸೆಬಿಲಿಟಿ (ಎಪಿಡಿ) ಸಂಸ್ಥೆಯ ಯೋಜನಾ ಸಂಯೋಜಕ ಗುರುಶಾಂತಹಿರೇಮಠ ‘ರಕ್ತ ಸಂಬಂಧದೊಳಗಿನ ಮದುವೆಯೂ ಅಂಗವೈಕಲ್ಯಕ್ಕೆ ಕಾರಣಗಳಲ್ಲೊಂದು’ ಎಂದರು. ಐದಾರು ವರ್ಷಗಳಿಂದ ಎಪಿಡಿ ಸಂಸ್ಥೆಯಡಿ ಅಂಗವಿಕಲರ ಕ್ಷೇತ್ರದಲ್ಲಿ ದುಡಿಯುತ್ತಿರುವೆ. ವಿಜಯಪುರ ನಗರದ ಸುತ್ತಮುತ್ತಲಿನ 25ರಿಂದ 30 ಕಿ.ಮೀ. ವ್ಯಾಪ್ತಿಯೊಳಗಿನ ಹಳ್ಳಿಗಳನ್ನು ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿದೆ. ಸಾವಿರಕ್ಕೂ ಅಧಿಕಅಂಗವಿಕಲರಿರುವ ಕುಟುಂಬಗಳನ್ನು ಭೇಟಿ ಮಾಡಿರುವೆ. ನಿರಂತರ ಸಂಪರ್ಕದಲ್ಲಿದ್ದು ಅವರ ಶ್ರೇಯೋಭಿವೃದ್ಧಿಗೆ ಸಂಸ್ಥೆ ಮೂಲಕ ಶ್ರಮಿಸುತ್ತಿರುವೆ. ಹಲವು ಭೇಟಿಗಳ ಸಮಯ ಅಂಗವಿಕಲರ ಕುಟುಂಬದ ಹಿನ್ನೆಲೆ ಕೆದಕಿದಾಗ ನೂರರಲ್ಲಿ ಐವತ್ತಕ್ಕೂ ಹೆಚ್ಚು ಕುಟುಂಬಗಳು ‘ನಮ್ಮದು ರಕ್ತ ಸಂಬಂಧದ ಮದುವೆ. ನಮ್ಮ ಹಿರಿಯರದ್ದು ರಕ್ತ ಸಂಬಂಧದೊಳಗಿನ ಮದುವೆ’ ಎನ್ನುತ್ತಾರೆ ಎಂದರು.

ಅಂಗವೈಕಲ್ಯಕ್ಕೆ ರಕ್ತ ಸಂಬಂಧದೊಳಗಿನ ಮದುವೆಯೂ ಒಂದು ಕಾರಣ ಎಂಬುದು ಈಚೆಗೆ ನಡೆದ ಹಲವು ಸಂಶೋಧನೆಗಳಲ್ಲಿ ಸಾಬೀತಾಗಿದೆ ಎಂದು ಗುರುಶಾಂತ ತಮ್ಮ ಕ್ಷೇತ್ರಾಧ್ಯಯನದಲ್ಲಿ ಕಂಡುಕೊಂಡ ಕೆಲ ಅಂಶಗಳನ್ನು ಪ್ರಸ್ತಾಪಿಸಿದರು.

ವಿಜಯಪುರ ತಾಲ್ಲೂಕಿನ ಲಂಬಾಣಿ ತಾಂಡಾಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಮುಸ್ಲಿಂ ಸಮುದಾಯ ಸೇರಿದಂತೆ, ಭೋವಿ ಸಮಾಜದ ಕುಟುಂಬಗಳಲ್ಲೂ ಇದು ಹೆಚ್ಚಿನ ಪ್ರಮಾಣದಲ್ಲಿದೆ. ಒಂದೊಂದು ತಾಂಡಾದಲ್ಲಿ ಕನಿಷ್ಠ 10–20 ಅಂಗವಿಕಲರು ಇದ್ದಾರೆ. ಒಂದೊಂದು ಮನೆಯಲ್ಲಿ ಇಬ್ಬರು–ಮೂವರು ಇರುವುದು ಬೆಳಕಿಗೆ ಬಂದಿದೆ. ಸಹೋದರರ ಕುಟುಂಬವನ್ನು ಒಟ್ಟಾರೆಯಾಗಿ ಪರಿಗಣಿಸಿದಾಗ ಈ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ.

ಅಮಗೊಂಡ–ನಾಗಪ್ಪ ಪೂಜಾರಿ ಸಹೋದರರ ಕುಟುಂಬದಲ್ಲೇ ಮೂವರು ಅಂಗವಿಕಲರು. ಒಬ್ಬಾಕೆ ಅಸುನೀಗಿದ್ದಾಳೆ. ಇನ್ನೊಬ್ಬ ಸಂಪೂರ್ಣ ಅಸ್ವಸ್ಥ. ಮತ್ತೊಬ್ಬನಿಗೆ ನಡೆಯಲು, ಕೂರಲು ಆಗದ ಗಂಭೀರ ಸ್ವರೂಪದ ಅಂಗವೈಕಲ್ಯ ಬಾಧಿಸುತ್ತಿದೆ ಎಂದರು.

ಬದುಕು ಬಲು ಭಾರ

‘ನಂಗಿರೋದು ಒಂದೆಕ್ರೆ ಭೂಮಿ. ಕೂಲಿ ಮಾಡಿ ಸಂಸಾರ ತೂಗಿಸ್ಬೇಕು. ನಾನು ದುಡಿಯಲು ಹೋದ್ರೆ ದಿನಕ್ಕೆ 300 ರೂಪಾಯಿ ಕೊಡ್ತಾರೆ. ನನ್ನ ಹೆಂಡ್ತಿ ಹೋದ್ರೆ 170 ರೂಪಾಯಿ ಕೊಡ್ತಾರೆ. ಯಲ್ಲಾಲಿಂಗನ ಸುಧಾರಿಸಲು ಆಕೆಗೆ ಆಗಲ್ಲ. 300 ರೂಪಾಯಿ ದುಡಿಯೋನು ಮಗನ್ನ ನೋಡ್ಕಂಡು ಕೂತರೇ, ಇದರರ್ಧ ದುಡಿಯೋಳು ಹೊರ ಹೋಗಿ ಮುಂಜಾನೆಯಿಂದ ಮುಸ್ಸಂಜೆವರೆಗೂ ಮೈ ಮುರಿಯಬೇಕು’ ಎಂದರು ನಾಗಪ್ಪ ಪೂಜಾರಿ.

‘ಯಲ್ಲಾಲಿಂಗ ಹುಟ್ಟಿದಾಗಿನಿಂದಲೇ ಮಬ್ಬಿದ್ದ. ನಮ್ಮ ಶಕ್ತ್ಯಾನುಸಾರ ಹತ್ತಾರು ವೈದ್ಯರ ಬಳಿ ಎಡತಾಕಿದೆವು. ಪ್ರಯೋಜನವಾಗಲಿಲ್ಲ. ದೇಹದ ಯಾವೊಂದು ಭಾಗದ ಸ್ವಾಧೀನ ಅವನಿಗಿಲ್ಲ. ಇಲ್ಲಿವರೆಗೂ ಒಂದು ತುತ್ತು ಅನ್ನ ತಿಂದಿಲ್ಲ. ಹಾಲು, ಪಾರ್ಲೆ ಬಿಸ್ಕತ್ತು, ಬ್ರೆಡ್‌ ಅವನ ಊಟ’.

‘ಬಾಯಿಂದ ಜೊಲ್ಲು ಸುರಿಯಲಾರಂಭಿಸಿದರೆ ಎಲ್ಲ ಬಂದ್. ಡಾಕ್ಟರ್ ಕೊಟ್ಟ ಗುಳಿಗೆ, ಔಷಧಿ ಕುಡಿಸಿದರೂ 15 ದಿನ ನಿಲ್ಲಲ್ಲ. ಆ ಸಂದರ್ಭ ಅವನ ರೋದನೆ ಕೇಳಲಾಗಲ್ಲ. ಸಂಕಷ್ಟವನ್ನು ಕಣ್ಣಿಂದ ನೋಡಲಾಗಲ್ಲ. ಕರುಳು ಕಿತ್ತು ಬಂದಂತಾಗುತ್ತದೆ. 15 ದಿನಕ್ಕೊಮ್ಮೆ ಸಂಡಾಸು ಮಾಡ್ತ್ವಾನೆ. ನಿತ್ಯ ನಸುಕಿನ ನಾಲ್ಕರಿಂದ ಆರರವರೆಗೆ ಮಾತ್ರ ನಿದ್ರಿಸುತ್ತಾನೆ. ಉಳಿದಂತೆ ಒಂದೇ ಸಮನೆ ಆ ಆ ಆ ಆ ಎಂದು ಚೀರ್ತಾನೆ’ ಎಂದು ಪ್ರತಿ ಕ್ಷಣವೂ ಮಗ ಅನುಭವಿಸುವ ನರಕ ಯಾತನೆಯ ಚಿತ್ರಣ ಬಿಚ್ಚಿಡುತ್ತಲೇ ಕಣ್ಣೀರಿಟ್ಟರು ನಾಗಪ್ಪ.

ಈ ಕುಟುಂಬಕ್ಕಿಲ್ಲ ಕಣ್ಣು..!

‘ನಂಗ ಕಣ್ಣಿಲ್ಲ ಅಂಥಾ ನಮ್ಮಕ್ಕ ತನ್ನ ಮಗಳನ್ನೇ ಮದುವೆ ಮಾಡಿಕೊಟ್ಟು ಕಣ್ಣು ಕೊಟ್ಳು. ಆದ್ರೇ ಇದೀಗ ಇಡೀ ನನ್ನ ಕುಟುಂಬಕ್ಕೆ ಕಣ್ಣಿಲ್ಲದಾಗಿದೆ. ನನ್ನ ಹೆಂಡ್ತಿ ಶ್ರೀದೇವಿನೇ ಎಲ್ಲರ ಪಾಲಿನ ಬೆಳಕು. ಅವಳೇ ನಮ್ಮ ಬದುಕಿಗಾಧಾರ. ಹುಟ್ಟಿದ ನಾಲ್ಕು ಹೆಣ್ಮಕ್ಕಳಿಗೂ ಕಣ್ಣಿಲ್ಲದಂತಾಗುತ್ತೆ ಅನ್ನೋದು ಗೊತ್ತಾಗಿದ್ರೆ ನಾ ಲಗ್ನಾನೇ ಆಗ್ತೀರಲಿಲ್ಲ. ನನ್ನಿಂದ ಐವರ ಬದುಕು ಕುರುಡಾಗಿದೆ’ ಎಂದು ವಿಜಯಪುರ ತಾಲ್ಲೂಕು ಮಲಕಾನದೇವರ ಹಟ್ಟಿಯ ಅಡವಿ ವಸತಿಯಲ್ಲಿ ತನ್ನ ಕುಟುಂಬದವರೊಂದಿಗೆ ವಾಸವಿರುವ ಗುರುಪುತ್ರಯ್ಯ ಮಠಪತಿ ನೊಂದು ನುಡಿದರು.

ಮುಖ್ಯರಸ್ತೆಯಿಂದ ಒಂದು ಕಿ.ಮೀ. ಒಳಭಾಗದಲ್ಲಿ ಈ ಅಡವಿ ವಸತಿಯಿದೆ. ಇಲ್ಲಿಗೆ ತೆರಳುವ ಕಚ್ಚಾರಸ್ತೆ ಕಾಲ್ನಡಿಗೆಗಷ್ಟೇ ಸೀಮಿತ. ದ್ವಿಚಕ್ರ ವಾಹನ ಚಲಿಸುವಿಕೆಯೂ ಕಷ್ಟಸಾಧ್ಯ.

ಅಡವಿ ವಸತಿಯ ಬಳಿ ಸದ್ದಾಗುತ್ತಿದ್ದಂತೆ ಮನೆಯಿಂದ ಹೊರ ಬಂದ ಆರರ ಹರೆಯದ ಪೋರಿ ಅಂಕಿತಾ ‘ಯಾರ್‌ ಬಂದ್ರೀ ಸರ್‍ರಾ ಯಾರ್ ಬೇಕಿತ್ರೀ. ಬನ್ರೀ... ಇತ್ತ ಬನ್ನಿ. ಈ ಕುರ್ಚಿಲೀ ಕೂಡ್ರೀ. ನಮ್ಮವ್ವಾವ್ರನ್ನ ಕರಿತೀನಿ’ ಅಂತ ಮನೆಯೊಳಗೆ ಹೋದಾಕೆ ಅಪ್ಪ–ಅವ್ವ, ಅಕ್ಕ–ತಂಗಿ ಜತೇಲಿ ಹೊರ ಬರುವಾಗ ಕೈಯಲ್ಲಿ ಕುಡಿಯುವ ನೀರನ್ನು ಹಿಡಿದು ತಂದು ಮಾನವೀಯತೆಯ ಕಳಕಳಿ ಮೆರೆದಳು. ಅಂದ ಹಾಗೆ ಅಂಕಿತಾ ಸಹ ಅಂಧೆ.

ಈ ವಸತಿ ಅಪಾಯದ ಸ್ಥಳದಲ್ಲಿದೆ. ಕಾಲ್ನಡಿಗೆಯ ಹಾದಿಯೂ ಸಮತಟ್ಟಿಲ್ಲ. ಅಡ್ಡಾದಿಡ್ಡಿಯಿಂದ ಕೂಡಿದ ಹಾದಿಯಲ್ಲಿ ಕಲ್ಲುಗಳೇ ಸಾಕಷ್ಟಿವೆ. ಕೂಗಳತೆ ದೂರದಲ್ಲೇ ಅಪಾಯಕಾರಿ ಹಳ್ಳವೂ ಇದೆ. ಇಲ್ಲಿಂದ ಶಾಲೆ ಮೂರು ನಾಲ್ಕು ಕಿ.ಮೀ. ದೂರದಲ್ಲಿದೆ. ಗುರುಪುತ್ರಯ್ಯ ಮೊದಲ ಪುತ್ರಿ ಚೆನ್ನಮ್ಮ ಅಜ್ಜಿಯ ಊರು ಬಿಜ್ಜರಗಿಯಲ್ಲಿ ನಾಲ್ಕನೇ ತರಗತಿ ಓದ್ತಿದ್ದಾಳೆ. ಎರಡನೆಯಾಕೆ ನೇತ್ರಾ ಮಲಕಾನದೇವರ ಹಟ್ಟಿಯ ಖಾಸಗಿ ಶಾಲೆಯಲ್ಲಿ ಎರಡನೇ ತರಗತಿ, ಮೂರನೆಯವಳಾದ ಅಂಕಿತಾ, ಕೊನೆಯ ಪುತ್ರಿ ಅನ್ವಿತಾ ಸಹ ಎಲ್‌ಕೆಜಿ ವ್ಯಾಸಂಗ ಮಾಡ್ತಿದ್ದಾಳೆ. ಈ ಮೂವರು ಅಂಧರು ನಿತ್ಯ ಇದೇ ಹಾದಿಯಲ್ಲಿ ಶಾಲೆಗೆ ಹೋಗ್ತಾರೆ.

‘ಚಲೋ ಇದ್ದವರನ್ನೇ ನೋಡ್ಕೊಳ್ಳೋರು ಇಲ್ಲ. ಅಂಥದರಲ್ಲಿ ಇವರನ್ನ ಯಾರು ನೋಡ್ಕೊಂತಾರೆ. ನಾನೇ ಈ ಐವರಿಗೂ ತಾಯಿ. ಒಂದು ದಿನವೂ ಆಚೀಚೆ ಹೋಗುವಂತಿಲ್ಲ. ಕೂಲಿ ನಮ್ಮ ಬದುಕಿಗಾಧಾರ. ಸ್ವಲ್ಪ ಆಚೀಚೆಯಾದರೂ ನಮ್ಮ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ’.

‘ಮನೆಯಲ್ಲೇ ದುಡಿಯುವಂಥ ಉದ್ಯೋಗ ಮಾಡ್ಬೇಕು ಅಂತ ಯತ್ನಿಸಿದರೂ ನೆರವು ಸಿಗದಾಗಿದೆ. ಮಕ್ಕಳ ದೃಷ್ಟಿದೋಷ ನಿವಾರಣೆಯಾಗಲಿ ಅಂತ ವೈದ್ಯರು ಹೇಳಿದಲ್ಲಿಗೆ ಹೊತ್ತೊಯ್ಯುವೆ. ಆದ್ರೆ ಆ ಭಗವಂತ ಮಾತ್ರ ಕಣ್ಣು ಕೊಡದವನಾಗಿದ್ದಾನೆ. ಐವರಲ್ಲಿ ಒಬ್ಬರು ಅನಾರೋಗ್ಯಕ್ಕೀಡಾದ್ರೂ ನಮ್ಮ ಬದುಕು ತರಗೆಲೆಯಂತಾಗುತ್ತದೆ’ ಎಂದು ಕುಟುಂಬದ ನಿರ್ವಹಣೆಯ ನೊಗ ಹೊತ್ತ ಶ್ರೀದೇವಿ ತಮ್ಮ ಸಂಕಷ್ಟದ ಬದುಕಿನ ಚಿತ್ರಣದ ಹೂರಣ ಬಿಚ್ಚಿಟ್ಟರು.

ವಿಜಯಪುರದಲ್ಲಿ ಹೆಚ್ಚು

ಎಪಿಡಿ ಸಂಸ್ಥೆ ವಿಜಯಪುರ, ಬಾಗಲಕೋಟೆ, ಗದಗ, ಕೊಪ್ಪಳ, ಹಾವೇರಿ, ದಾವಣಗೆರೆ ಜಿಲ್ಲೆಗಳಲ್ಲಿ ಅಂಗವಿಕಲರ ಕ್ಷೇಮಾಭಿವೃದ್ಧಿಗಾಗಿ ಹಲ ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಕ್ಷೇತ್ರ ಅಧ್ಯಯನದ ಸಂದರ್ಭ, ಅಂಗವಿಕಲರ ಕುಟುಂಬಗಳ ಮಾಹಿತಿ ಸಂಗ್ರಹಿಸುವ ವೇಳೆ ಅಂಗವೈಕಲ್ಯಕ್ಕೆ ರಕ್ತ ಸಂಬಂಧದೊಳಗಿನ ಮದುವೆಯೂ ಒಂದು ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಈ ಆರು ಜಿಲ್ಲೆಗಳ ಪೈಕಿ ಇಂತಹ ಪ್ರಕರಣ ವಿಜಯಪುರ ಜಿಲ್ಲೆಯಲ್ಲಿ ಹೆಚ್ಚಾಗಿ ದಾಖಲಾಗಿವೆ. ಅದರಲ್ಲೂ ವಿಜಯಪುರ ತಾಲ್ಲೂಕಿನ ಕೆಲ ಲಂಬಾಣಿ ತಾಂಡಾಗಳಲ್ಲಿ ಹೆಚ್ಚಿದೆ. ಮುಸ್ಲಿಂ ಸಮುದಾಯದಲ್ಲೂ ಈ ಪ್ರಮಾಣ ಅಧಿಕವಾಗಿ ಕಂಡು ಬರುತ್ತಿದೆ. ನಾವು ಹೆಚ್ಚಿನ ಅಧ್ಯಯನ ನಡೆಸಿರುವುದು ಸಹ ವಿಜಯಪುರ ತಾಲ್ಲೂಕಿನ ವ್ಯಾಪ್ತಿಯಲ್ಲೇ ಎಂದು ಎಪಿಡಿ ಸಂಸ್ಥೆಯ ಬೆಂಗಳೂರು ಕಚೇರಿಯಲ್ಲಿ ಶೀಘ್ರ ತಪಾಸಣಾಗಾರರರಾಗಿ ಕೆಲಸ ನಿರ್ವಹಿಸುತ್ತಿರುವ ಡಾ.ಇರ್ಷಾದ್‌ ತಿಳಿಸಿದರು.

**

ವೈಕಲ್ಯಕ್ಕೆ 40ಕ್ಕೂ ಹೆಚ್ಚು ಕಾರಣ...

ಸಾಮಾನ್ಯವಾಗಿ 40ಕ್ಕೂ ಹೆಚ್ಚು ಕಾರಣಗಳಿಂದ ಅಂಗವಿಕಲತೆ ಬರುತ್ತದೆ. ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆನುವಂಶೀಕವಾಗಿಯೂ ಅಂಗವಿಕಲತೆ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಇದರೊಳಗೆ ರಕ್ತ ಸಂಬಂಧದೊಳಗಿನ ವಿವಾಹವೂ ಒಂದು ಕಾರಣ. ಈ ಕುರಿತಂತೆ ಹೆಚ್ಚಿನ ಸಂಶೋಧನೆ, ಅಧ್ಯಯನ ನಡೆದಿಲ್ಲ. ಲಭ್ಯವಿರುವ ಮಾಹಿತಿಯಂತೆ ಶೇ 5ರಿಂದ10ರಷ್ಟು ಅಂಗವಿಕಲರಿಗೆ ರಕ್ತ ಸಂಬಂಧದೊಳಗಿನ ಮದುವೆಯಿಂದ ಅಂಗವೈಕಲ್ಯ ಬಂದಿದೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ ಎಂದು ಎಪಿಡಿ ಸಂಸ್ಥೆಯ ಡಾ. ಇರ್ಷಾದ್‌ ಅವರು ಹೇಳಿದರು.

ಅಂಗವೈಕಲ್ಯದ ಕಾರಣಗಳನ್ನು ಪತ್ತೆ ಹಚ್ಚಲು ನಡೆಸುವ ಸಾಮಾನ್ಯ ಪರೀಕ್ಷೆಯ ದರವೇ ಕನಿಷ್ಠ ₹ 3000ದಿಂದ ₹ 5000 ತಗುಲುತ್ತದೆ. ಈ ದುಬಾರಿ ಶುಲ್ಕ ಭರಿಸುವುದು ಬಹುತೇಕ ಕುಟುಂಬಗಳಿಗೆ ಕಷ್ಟಸಾಧ್ಯ. ಇದರಿಂದ ಈಗಾಗಲೇ ಅಂಗವೈಕಲ್ಯಕ್ಕೆ ತುತ್ತಾಗಿರುವ ಮಗುವಿಗೆ ಏನೂ ಪ್ರಯೋಜನವಾಗಲ್ಲ. ಮುಂದೆ ಹುಟ್ಟುವ ಮಗುವನ್ನು ಅಂಗವಿಕಲತೆಗೆ ಒಳಗಾಗದಂತೆ ತಪ್ಪಿಸಲು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬಹುದು. ಆದರೆ ಈ ನಿಟ್ಟಿನಲ್ಲಿ ಆಲೋಚಿಸುವವರು ತುಂಬಾ ವಿರಳ ಎನ್ನುತ್ತಾರೆ ಇರ್ಷಾದ್.

ಅಂಗವಿಕಲತೆಗೆ ತುತ್ತಾದವರ ರಕ್ತ ಪರೀಕ್ಷೆ ನಡೆಸದೆ ರಕ್ತ ಸಂಬಂಧದೊಳಗಿನ ಮದುವೆಯಿಂದಲೇ ಅಂಗವೈಕಲ್ಯ ಬಂದಿದೆ ಎಂದು ಹೇಳಲಾಗಲ್ಲ. ಪರೀಕ್ಷೆ ಬಳಿಕ ದೃಢಪಡಿಸಬಹುದು. ಆದರೆ ಇದಕ್ಕೆ ಸಂಬಂಧಿಸಿದಂತೆ ನಡೆದಿರುವ ಸಂಶೋಧನೆ, ಅಧ್ಯಯನ ಇಂದಿಗೂ ಆಸ್ಪತ್ರೆಯ ಅಂಗಳ ದಾಟಿಲ್ಲ. ಆಸಕ್ತ ಬೆರಳೆಣಿಕೆ ಮಂದಿಯೇ ಸ್ವತಃ ತಪಾಸಣೆಗೆ ಮುಂದಾದಾಗ ಬಹಿರಂಗಗೊಂಡಿರುವ ಸತ್ಯವಷ್ಟೇ ಬೆಳಕಿಗೆ ಬಂದಿದೆ. ಸಂಶೋಧನೆ ಹಳ್ಳಿಗೆ ತಲುಪಿದಾಗ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದರು.

**

ವಿಶೇಷ ಚಿಕಿತ್ಸೆ ಸೌಲಭ್ಯವಿಲ್ಲ...!

ಅಂಗವಿಕಲರಿಗಾಗಿ ಯಾವುದೇ ವಿಶೇಷ ಚಿಕಿತ್ಸೆಯನ್ನು ಜಿಲ್ಲಾ ಆರೋಗ್ಯ ಇಲಾಖೆ ರೂಪಿಸಿಲ್ಲ. ಯೋಜನೆಯ ನೀಲನಕ್ಷೆಯನ್ನು ಇದುವರೆಗೆ ಒಮ್ಮೆಯೂ ತಯಾರಿಸಿದ ನಿದರ್ಶನವಿಲ್ಲ ಎಂದು ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ರಾಜಕುಮಾರ ಯರಗಲ್ಲ ತಿಳಿಸಿದರು.

ಜಿಲ್ಲೆಯ ವ್ಯಾಪ್ತಿಯಲ್ಲಿ ಇಬ್ಬರು ಮಾನಸಿಕ ತಜ್ಞ ವೈದ್ಯರಿದ್ದಾರೆ. ಒಬ್ಬರು ಜಿಲ್ಲಾ ಆಸ್ಪತ್ರೆಯಲ್ಲಿದ್ದು, ನಿತ್ಯವೂ ತಮ್ಮಲ್ಲಿಗೆ ಬರುವ ಅಂಗವಿಕಲರು, ಬುದ್ಧಿಮಾಂದ್ಯರನ್ನು ಪರೀಕ್ಷಿಸಿ, ಚಿಕಿತ್ಸೆ ನೀಡುತ್ತಾರೆ. ಸಾಕಷ್ಟು ಔಷಧಿ ಲಭ್ಯವಿದೆ. ಉಚಿತವಾಗಿಯೇ ವಿತರಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಮತ್ತೊಬ್ಬ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದು, ಇವರು ತಿಂಗಳಿಗೊಮ್ಮೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಿಗೆ ತೆರಳಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಿರ್ವಹಿಸುತ್ತಾರೆ ಎಂದುಯರಗಲ್ಲ ತಿಳಿಸಿದರು. ‘ಅಂಗವಿಕಲರಿಗಾಗಿ ಸಾಕಷ್ಟು ಸೌಲಭ್ಯಗಳಿವೆ. ವಿಶೇಷ ಕಾರ್ಯಕ್ರಮಗಳನ್ನು ಕೇಂದ್ರ–ರಾಜ್ಯ ಸರ್ಕಾರ ರೂಪಿಸಿ ಜಾರಿಗೊಳಿಸಿವೆ. ಆದರೆ ಸರ್ಕಾರಿ ವ್ಯವಸ್ಥೆಯಲ್ಲಿನ ಬಹುತೇಕ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಅವು ಫಲಾನುಭವಿಗಳನ್ನು ತಲುಪುತ್ತಿಲ್ಲ. ಬೆರಳೆಣಿಕೆಯ ಬಲಾಢ್ಯರು, ಮಧ್ಯವರ್ತಿಗಳ ಪಾಲಾಗುತ್ತಿವೆ.

ಮಾನವೀಯತೆ, ಕಳಕಳಿಯುಳ್ಳ ವ್ಯಕ್ತಿಗಳು ಈ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆಗೆಮುಂದಾದಾಗ ಮಾತ್ರ ಅಂಗವಿಕಲರ ಸಬಲೀಕರಣ ಸಾಧ್ಯ. ಬುದ್ಧಿಮಾಂದ್ಯರು ಸಮಾಜದ ಮುಖ್ಯವಾಹಿನಿಗೆ ಮರಳಲು ಸಹಕಾರಿಯಾಗುತ್ತದೆ’ ಎನ್ನುತ್ತಾರೆ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್‌ ಡಿಸೆಬಿಲಿಟಿ (ಎಪಿಡಿ) ಸಂಸ್ಥೆಯ ಯೋಜನಾ ಸಂಯೋಜಕ ಗುರುಶಾಂತ ಹಿರೇಮಠ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry