ಪ್ರತ್ಯೇಕತಾವಾದಿಗಳು ಸಂಧಾನಕ್ಕೆ ಬರುವರೇ?

ಭಾನುವಾರ, ಜೂನ್ 16, 2019
22 °C

ಪ್ರತ್ಯೇಕತಾವಾದಿಗಳು ಸಂಧಾನಕ್ಕೆ ಬರುವರೇ?

Published:
Updated:
ಪ್ರತ್ಯೇಕತಾವಾದಿಗಳು ಸಂಧಾನಕ್ಕೆ ಬರುವರೇ?

-ವೈ.ರವಿ

**

ಕಾಶ್ಮೀರ ಸಮಸ್ಯೆ ವಿಚಾರದಲ್ಲಿ ಒಂದು ಹೊಸ ಅಧ್ಯಾಯ ಅ. 23ರಂದು ಪ್ರಾರಂಭ ಆಗಿದೆ. ಏನದು?

ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ನಿಲುವನ್ನು ಬದಲಾಯಿಸಿದೆ.

ಈ ನಿಲುವು ಬದಲಾವಣೆ ಏನು?

ಕಾಶ್ಮೀರ ಸಮಸ್ಯೆಯನ್ನು ಇತ್ಯರ್ಥಪಡಿಸಲು ನ್ಯಾಯಯುತವಾದ ಭಾಗೀದಾರರೊಂದಿಗೆ ಮತ್ತು ಸಂಬಂಧಪಟ್ಟ ಎಲ್ಲರೊಂದಿಗೆ ಕಾರ್ಯ ಸಾಧ್ಯವಾಗುವ ಮಾತುಕತೆಯನ್ನು ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ.

‘ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನೋತ್ಸವ ಭಾಷಣದಲ್ಲಿ ವ್ಯಕ್ತಪಡಿಸಿದ ಇಂಗಿತಕ್ಕೆ ಅನುಸಾರವಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಸಂಧಾನಕ್ಕೆ ಕೇಂದ್ರದ ಗೂಢಚರ್ಯ ದಳದ ನಿವೃತ್ತ ನಿರ್ದೇಶಕ ದಿನೇಶ್ವರ ಶರ್ಮ ಅವರನ್ನು ನೇಮಿಸಲಾಗುವುದು’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಟಿಸಿದ್ದಾರೆ. ‘ಮಾತುಕತೆಯನ್ನು ಯಾರಿಂದ ಆರಂಭಿಸಬೇಕು ಎಂಬುದನ್ನು ದಿನೇಶ್ವರ ಶರ್ಮ ಅವರೇ ನಿರ್ಧರಿಸುತ್ತಾರೆ’ ಎಂದೂ ಸಚಿವರು ಹೇಳಿದ್ದಾರೆ.

ಅದರ ಮರುದಿನವೇ ದಿನೇಶ್ವರ ಶರ್ಮ ನೇಮಕದ ಅಧಿಕೃತ ಅಧಿಸೂಚನೆಯೂ ಹೊರಬಿತ್ತು. ಅವರಿಗೆ ಸಂಪುಟ ದರ್ಜೆ ಕಾರ್ಯದರ್ಶಿ ಸ್ಥಾನಮಾನ ನೀಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ದಿನೇಶ್ವರ ಶರ್ಮ ಅವರ ಹಿನ್ನೆಲೆ ಏನು?

ದಿನೇಶ್ವರ ಶರ್ಮ ಅವರು 1979ನೇ ಬ್ಯಾಚಿನ, ಕೇರಳ ಕೇಡರ್‌ನ ಐಪಿಎಸ್ ಅಧಿಕಾರಿ. ಅವರು ಮೂಲತಃ ಬಿಹಾರದವರು. ಪಾಲಿಯಲ್ಲಿ ಪ್ರಾಥಮಿಕ ಶಿಕ್ಷಣ, ಗಯಾದಲ್ಲಿ ಉನ್ನತ ಶಿಕ್ಷಣ ಮಾಡಿದವರು. 1992ರಲ್ಲಿ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆ ತುಂಬ ಮಿತಿ ಮೀರಿದ್ದ ಸಂದರ್ಭದಲ್ಲಿ ಜಮ್ಮು ಕಾಶ್ಮೀರದಲ್ಲಿ ಕೆಲಸ ಮಾಡಿದವರು. ಬಳಿಕ ದೆಹಲಿಯಲ್ಲಿ ಮುಖ್ಯ ಕಚೇರಿಯಲ್ಲಿ ಜಮ್ಮು ಕಾಶ್ಮೀರದ ವಿದ್ಯಮಾನಗಳನ್ನು ನೋಡಿಕೊಳ್ಳುತ್ತಿದ್ದವರು. ಗೂಢಚರ್ಯೆ ದಳದ ನಿರ್ದೇಶಕರಾಗಿ 2016ರ ಡಿಸೆಂಬರ್‌ನಲ್ಲಿ ನಿವೃತ್ತರಾದ ಅವರು ಕಾಶ್ಮೀರ ಸಮಸ್ಯೆಯ ಎಲ್ಲ ಆಯಾಮಗಳನ್ನು ಅರಿತವರು.

ಕಾಶ್ಮೀರ ಸಮಸ್ಯೆ ಏನು?

ಕಾಶ್ಮೀರ ಸಮಸ್ಯೆಯು ಮೂಲತಃ ಅಖಂಡತೆ ಮತ್ತು ಪ್ರತ್ಯೇಕತಾವಾದಿಗಳ ನಡುವಣ ಸಂಘರ್ಷ. ಪ್ರತ್ಯೇಕತಾವಾದಿಗಳಿಗೆ ಪಾಕಿಸ್ತಾನದ ಕುಮ್ಮಕ್ಕು ಸಿಕ್ಕಿ ಜಟಿಲ ವಿವಾದವಾಗಿ ಬೆಳೆದುಬಂದಿದೆ. ಬ್ರಿಟಿಷರು ಭಾರತವನ್ನು ಬಿಡುವಾಗ ದೇಶವನ್ನು ವಿಭಜಿಸಿದರು. ಭಾರತ ಒಕ್ಕೂಟ ಮತ್ತು ಪಾಕಿಸ್ತಾನ ರಚನೆ ಆಯಿತು. ದೊರೆಗಳ ಆಡಳಿತ ಕೊನೆಗೊಂಡಿತು. ಆಗ ಜಮ್ಮು ಕಾಶ್ಮೀರವನ್ನು ಆಳುತ್ತಿದ್ದ ಮಹಾರಾಜ ಹರಿ ಸಿಂಗ್ ತಮ್ಮ ರಾಜ್ಯವನ್ನು ಭಾರತದಲ್ಲಿ ವಿಲೀನಗೊಳಿಸಲು ಮನಸ್ಸು ಮಾಡಿದರು.

ಆ ಸಮಯದಲ್ಲಿ (1947) ಜಮ್ಮು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಮುಸ್ಲಿಂ ಕಾನ್ಫರೆನ್ಸ್ ಎಂಬ ಎರಡು ಪಕ್ಷಗಳು ಪ್ರಬಲವಾಗಿದ್ದವು. ಹೆಚ್ಚು ಜನಮನ್ನಣೆ ಇದ್ದ ಶೇಖ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್  ಭಾರತದಲ್ಲಿ ವಿಲೀನಗೊಳ್ಳುವುದಕ್ಕೆ ಪರವಾಗಿ ಇತ್ತು. ಪಾಕಿಸ್ತಾನದಲ್ಲಿ ಸೇರಿಕೊಳ್ಳಬೇಕು ಎಂಬುದು ಮುಸ್ಲಿಂ ಕಾನ್ಫರೆನ್ಸ್‌ ನ ಅಪೇಕ್ಷೆ ಆಗಿತ್ತು.

ಪಾಕಿಸ್ತಾನವನ್ನು ಸೇರುವಂತೆ ಮಹಾರಾಜ ಹರಿ ಸಿಂಗ್ ಅವರಿಗೆ ಪಾಕಿಸ್ತಾನವು ಹಲವು ಪ್ರಲೋಭನೆಗಳನ್ನು ಒಡ್ಡಿತು. ಅವುಗಳಿಗೆ ಹರಿ ಸಿಂಗ್ ಒಪ್ಪಲಿಲ್ಲ. ಹರಿ ಸಿಂಗ್ ವಿರುದ್ಧ ದಂಗೆ ಏಳುವಂತೆ ಪಾಕಿಸ್ತಾನವು ಕಾಶ್ಮೀರ ಕಣಿವೆಯಲ್ಲಿ ಪ್ರಬಲರಾಗಿದ್ದ ಮುಸ್ಲಿಮರಿಗೆ ಕುಮ್ಮಕ್ಕು ನೀಡಿತು. ಹರಿ ಸಿಂಗ್ ಅವರು ತಮಗೆ ಉಪಟಳ ಕೊಡಲು ಆರಂಭಿಸಿದ ಮುಸ್ಲಿಂ ದಂಗೆಕೋರರನ್ನು ಅಡಗಿಸಲು ಅಂದಿನ ಗವರ್ನರ್ ಜನರಲ್ ಲಾರ್ಡ್ ಮೌಂಟ್‌ ಬ್ಯಾಟನ್ ಅವರ ನೆರವು ಕೋರಿದರು. ಸಹಾಯ ಬೇಕಾದರೆ ಭಾರತ ಒಕ್ಕೂಟವನ್ನು ಸೇರಬೇಕು ಎಂದು ಮೌಂಟ್‌ ಬ್ಯಾಟನ್ ಷರತ್ತು ಹಾಕಿದರು. ಅದಕ್ಕೆ ಹರಿ ಸಿಂಗ್ ಸಮ್ಮತಿಸಿದರು.

ಹರಿ ಸಿಂಗ್ ಅವರು ಭಾರತದೊಂದಿಗೆ ಜಮ್ಮು ಕಾಶ್ಮೀರದ ವಿಲೀನ ಒಪ್ಪಂದಕ್ಕೆ 1947ರ ಅ. 26ರಂದು ಸಹಿ ಹಾಕಿದರು. ಅದರ ಮರು ದಿನ, ಅ.27 ರಂದು ಭಾರತದ ಸೇನೆ ಕಾಶ್ಮೀರವನ್ನು ಪ್ರವೇಶಿಸಿತು.

ಅಂದಿನಿಂದ ಭಾರತ ಸರ್ಕಾರ ವಿರುದ್ಧ ಪ್ರತ್ಯೇಕತಾವಾದಿಗಳ ಸಮರ ನಡೆಯುತ್ತಲೇ ಇದೆ. ವಿಲೀನ ಒಪ್ಪಂದಕ್ಕೆ ಸಹಿ ಹಾಕಿದ ದಿನವನ್ನು (ಅ.26) ಅಖಂಡತಾವಾದಿಗಳು, ಮುಖ್ಯವಾಗಿ ಹಿಂದೂ ಪರ ಸಂಘಟನೆಗಳು ‘ಭಾವೈಕ್ಯ ದಿನ’ ಎಂದೂ ಕಾಶ್ಮೀರಕ್ಕೆ ಭಾರತದ ಸೇನೆ ಪ್ರವೇಶಿಸಿದ ದಿನವನ್ನು (ಅ.27) ಪ್ರತ್ಯೇಕತಾವಾದಿ ಕಾಶ್ಮೀರಿ ಮುಸ್ಲಿಮರು ‘ಕರಾಳ ದಿನ’ ಅಥವಾ ಶೋಕ ದಿನ’ ಎಂದೂ ಆಚರಿಸುತ್ತಾರೆ.

ಕಾಶ್ಮೀರ ಕುರಿತಂತೆ ಕೇಂದ್ರ ಸರ್ಕಾರದ ನಿಲುವು ಬದಲಾದದ್ದೇಕೆ?

ನರೇಂದ್ರ ಮೋದಿ ಅವರ ಕಠಿಣ ನಿಲುವಿಗೆ ಭಾರತೀಯ ಜನತಾ ಪಕ್ಷದೊಳಗೇ ಅಸಹನೆ ವ್ಯಕ್ತವಾಗಿದೆ. ಕಾಶ್ಮೀರದ ವಿದ್ಯಮಾನಗಳನ್ನು ಅರಿಯಲು ಹಿರಿಯ ನಾಗರಿಕರ ನಿಯೋಗದಲ್ಲಿ ಬಂದ ಪಕ್ಷದ ಹಿರಿಯ ಮುಖಂಡ, ಮಾಜಿ ಹಣಕಾಸು ಸಚಿವ ಯಶವಂತ್‌ ಸಿನ್ಹಾ ಅವರು ಸರ್ಕಾರದ ನಿಲುವನ್ನು ನೇರವಾಗಿ ಟೀಕಿಸಿದ್ದಾರೆ.

ಹಾಗೆಯೇ ಮಾಜಿ ಪ್ರಧಾನಿ ಮನಮೋಹನ ಸಿಂಗ್ ನೇತೃತ್ವದಲ್ಲಿ ಬಂದಿದ್ದ ಕಾಂಗ್ರೆಸ್ ನಿಯೋಗವು ಕಾಶ್ಮೀರ ಸಮಸ್ಯೆ ಮತ್ತೆ ಜಟಿಲಗೊಳ್ಳಲು ಮೋದಿ ಸರ್ಕಾರವೇ ಕಾರಣ ಎಂದು ಟೀಕಿಸಿದೆ. ಕಾಶ್ಮೀರ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಬೇಕು. ಇದಕ್ಕಾಗಿ ಮಾತುಕತೆ ಆರಂಭಿಸಬೇಕು ಎಂಬ ಒತ್ತಾಯ ನಾನಾ ಕಡೆಗಳಿಂದ ಕೇಳಿ ಬಂದಿದೆ.

ಬದಲಾದ ನಿಲುವಿಗೆ ವ್ಯಕ್ತವಾಗಿರುವ ಪ್ರತಿಕ್ರಿಯೆಗಳೇನು?

ಕೇಂದ್ರ ಸರ್ಕಾರವು ಸಂಧಾನಕ್ಕೆ ಮನಸ್ಸು ಮಾಡಿರುವುದು ಕಾಶ್ಮೀರ ಸಮಸ್ಯೆಯನ್ನು ಬಲ ಪ್ರಯೋಗ ಮೂಲಕ ಬಗೆಹರಿಸಲು ಸಾಧ್ಯ ಇಲ್ಲ ಎಂಬ ತಮ್ಮ ನಿಲುವನ್ನು ಪುಷ್ಟೀಕರಿಸಿದೆ ಎಂದು ಪ್ರಮುಖ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖಂಡರು ಪ್ರತ್ಯೇಕ ಹೇಳಿಕೆಗಳಲ್ಲಿ ತಿಳಿಸಿದ್ದಾರೆ.

ಕಾಶ್ಮೀರದ ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ ನ ಯಾವುದೇ ಬಣ ಗುರುವಾರದವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸಂಧಾನಕಾರರ ನೇಮಕ ಕ್ರಮ ಹೊಸ ಉಪಕ್ರಮವೇ?

ಇಲ್ಲ. ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರವು ಸಂಧಾನಕಾರರನ್ನು ನೇಮಕ ಮಾಡಿರುವುದು ಹೊಸದೇನಲ್ಲ. ಹಿಂದಿನ ಯುಪಿಎ ಸರ್ಕಾರವೂ ಸಂಧಾನಕಾರರನ್ನು ನೇಮಕ ಮಾಡಿತ್ತು.

ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆಗೆ ಸಂಸದೀಯ ನಿಯೋಗವೊಂದು ಶ್ರೀನಗರಕ್ಕೆ ಬಂದು ಹುರಿಯತ್ ಕಾನ್ಫರೆನ್ಸ್  ಮುಖಂಡರ ಮನೆಗಳ ಬಾಗಿಲು ತಟ್ಟಿತ್ತು. ಅದಕ್ಕೆ ಪ್ರತ್ಯೇಕತಾವಾದಿಗಳು ಬಾಗಿಲು ತೆರೆದಿರಲಿಲ್ಲ.

ಯಶಸ್ವಿಯಾಗುತ್ತಿಲ್ಲ ಏಕೆ?

ಕಾಶ್ಮೀರದ ಪ್ರತ್ಯೇಕತಾವಾದಿಗಳನ್ನು ಸಂಧಾನ ಮಾತುಕತೆಯ ಮೇಜಿಗೆ ಕರೆತರಲು ಇದುವರೆಗೆ ಯಾರಿಗೂ ಸಾಧ್ಯವಾಗಿಲ್ಲ. ಹುರಿಯತ್ ಕಾನ್ಫರೆನ್ಸ್‌ನ ವಿವಿಧ ಬಣಗಳಾದ ಹುರಿಯತ್ (ಜಿ) ಅಧ್ಯಕ್ಷ ಸೈಯದ್ ಅಲಿ ಷಾ ಗಿಲಾನಿ, ಹುರಿಯತ್ (ಎಂ) ಅಧ್ಯಕ್ಷ ಮಿರ್ವೈಜ್ ಉಮರ್ ಫಾರೂಕ್ ಮತ್ತು ಜಮ್ಮು ಕಾಶ್ಮೀರ ವಿಮೋಚನಾ ರಂಗದ ಅಧ್ಯಕ್ಷ ಯಾಸಿನ್ ಮಲ್ಲಿಕ್ ಅವರನ್ನು ಒಳಗೊಂಡ ‘ಜಂಟಿ ಪ್ರತಿರೋಧ ನಾಯಕತ್ವ’ಕ್ಕೆ ಪಾಕಿಸ್ತಾನವೇ ಯಜಮಾನ. ಅವರು ಪಾಕಿಸ್ತಾನ ಬಿಟ್ಟು ಬೇರೆ ಯಾರ ಮಾತುಗಳನ್ನೂ ಕೇಳುವುದಿಲ್ಲ. ಕಾಶ್ಮೀರ ವಿವಾದವು ಭಾರತದ ಆಂತರಿಕ ಸಮಸ್ಯೆ, ಅದನ್ನು ಬಗೆಹರಿಸಿಕೊಳ್ಳಲು ಪಾಕಿಸ್ತಾನವನ್ನು ಸೇರಿಸಿಕೊಂಡು ತ್ರಿಪಕ್ಷೀಯ ಮಾತುಕತೆಯಾಗಲೀ ಹೊರಗಿನವರ ಮಧ್ಯಸ್ಥಿಕೆಯಾಗಲೀ ಅಗತ್ಯ ಇಲ್ಲ ಎಂದು ಭಾರತ ಅನೇಕ ಬಾರಿ ಸ್ಪಷ್ಟಪಡಿಸಿದೆ.

ಸಂಧಾನಕಾರರ ನೇಮಕ ಕುರಿತ ಹೇಳಿಕೆಯಲ್ಲಿ ‘ನ್ಯಾಯಯುತವಾದ ಹಕ್ಕುಬಾಧ್ಯಸ್ಥರೊಂದಿಗೆ’ ಎಂಬ ಪದಗಳು ಇವೆ. ಮಾತುಕತೆಗೆ ಈ ರೀತಿಯ ಷರತ್ತು ಸರಿಯಲ್ಲ. ಹುರಿಯತ್ ಮುಖಂಡರು ನಡೆದುಕೊಳ್ಳುವುದು ಪಾಕಿಸ್ತಾನದ ಆಣತಿಯಂತೆ. ಆದ್ದರಿಂದ ಪಾಕಿಸ್ತಾನವನ್ನೂ ಸೇರಿಸಿಕೊಂಡು ಮಾತುಕತೆ ನಡೆಸಬೇಕು ಎಂಬುದು ಜನಸಾಮಾನ್ಯರ ಅಭಿಪ್ರಾಯ.

ಸದ್ಯದ ಸನ್ನಿವೇಶ ಹೇಗಿದೆ?

ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರಿಂದ ದಾಳಿ ಮತ್ತು ಭಯೋತ್ಪಾದಕರ ವಿರುದ್ಧ ಭದ್ರತಾ ಪಡೆಗಳ ಕಾರ್ಯಾಚರಣೆ ನಡೆಯುತ್ತಲೇ ಇದೆ. ಭಯೋತ್ಪಾದಕರಿಗೆ ದೇಶದ ಹೊರಗಡೆಯಿಂದ ಧನಸಹಾಯ ಬಗ್ಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುತ್ತಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯು ಈ ಕುರಿತಂತೆ ಪ್ರತ್ಯೇಕತಾದಿಗಳ ಅನೇಕ ಮುಖಂಡರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ. ಆದರೆ ‘ಇಂಥ ಕ್ರಮಗಳಿಂದ ನಮ್ಮನ್ನು ಹೆದರಿಸಲು ಸಾಧ್ಯ ಇಲ್ಲ’ ಎಂದು ಪ್ರತ್ಯೇಕತಾವಾದಿಗಳು ಹೇಳಿದ್ದಾರೆ.

ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಸಂಧಾನಕಾರರನ್ನು ನೇಮಿಸಿರುವುದರಿಂದ ಭಯೋತ್ಪಾದಕರ ವಿರುದ್ಧ ನಮ್ಮ ಕಾರ್ಯಾಚರಣೆಗೆ ಯಾವುದೇ ತೊಡಕು ಆಗುವುದಿಲ್ಲ ಎಂದು ಸೇನಾ ಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ಅಂದರೆ ಸೇನಾ ಕಾರ್ಯಾಚರಣೆ ನಿಲ್ಲುವುದಿಲ್ಲ. ರಾಷ್ಟ್ರೀಯ ತನಿಖಾ ಸಂಸ್ಥೆಯ ತನಿಖೆಯೂ ನಡೆಯಲಿದೆ. ಇವೆರಡರ ಮೂಲಕ ಪ್ರತ್ಯೇಕತಾವಾದಿಗಳನ್ನು ಸ್ವಲ್ಪವಾದರೂ ಬಗ್ಗಿಸಿ ಅವರು ಸಂಧಾನಕ್ಕೆ ಬರುವಂತೆ ಮಾಡಲು ಸಾಧ್ಯವಾಗುವುದೇ?

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry