7

ಬ್ಯಾಕ್‌ ಬಲವರ್ಧನೆ ಸಾಧ್ಯವೇ?

Published:
Updated:
ಬ್ಯಾಕ್‌ ಬಲವರ್ಧನೆ ಸಾಧ್ಯವೇ?

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಮುಂದಿನ ಎರಡು ವರ್ಷಗಳಲ್ಲಿ ₹ 2.11 ಲಕ್ಷ ಕೋಟಿಗಳಷ್ಟು ಬಂಡವಾಳ ನೆರವು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ದಿವಾಳಿ ಸಂಹಿತೆಯಡಿ ಬ್ಯಾಂಕ್‌ಗಳ ಸಾಲ ವಸೂಲಾತಿಗೆ ಕೈಗೊಂಡಿರುವ ಕ್ರಮಕ್ಕೆ ಇದು ಪೂರಕವಾಗಿರಲಿದೆ. ಎರಡು ವರ್ಷಗಳಿಂದೀಚೆಗೆ ಬ್ಯಾಂಕ್‌ಗಳ ವಸೂಲಾಗದ ಸಾಲದ ಪ್ರಮಾಣವು (ಎನ್‌ಪಿಎ) ಗಮನಾರ್ಹ ಏರಿಕೆ ಕಂಡಿದೆ. ಇದರಿಂದ ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿ ಏರುಪೇರಾಗಿದೆ. ಬ್ಯಾಂಕ್‌ಗಳು ಉದ್ದಿಮೆಗಳಿಗೆ ಸಾಲ ನೀಡುವ ಸಾಲದ ಪ್ರಮಾಣವೂ ಕುಸಿತದ ಹಾದಿಯಲ್ಲಿದೆ. ಸಾಲದ ಸುಳಿಗೆ ಸಿಲುಕಿರುವ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಬಿಕ್ಕಟ್ಟಿನಿಂದ ಪಾರು ಮಾಡಲು ಈಗ ಹೊಸ ಮಾರ್ಗೋಪಾಯ ಘೋಷಿಸಲಾಗಿದೆ. 2015ರಲ್ಲಿ ಪ್ರಕಟಿಸಿದ ’ಇಂದ್ರಧನುಷ್‌’ ಯೋಜನೆಯಡಿಯ ₹ 70 ಸಾವಿರ ಕೋಟಿಗಳ ನೆರವಿಗೆ ಇದು ಹೊರತಾಗಿದೆ.

ಅತ್ಯಂತ ವಿರಳ ಸಂದರ್ಭದಲ್ಲಿ ಕೈಗೊಳ್ಳುವ ಈ ನಿರ್ಧಾರದಿಂದ ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿ ಸುಧಾರಣೆ ಕಾಣಲಿದೆ ಎಂದು ಬಹುವಾಗಿ ನಿರೀಕ್ಷಿಸಲಾಗಿದೆ. ಬ್ಯಾಂಕ್‌ಗಳ ಬಳಿ ಸಾಕಷ್ಟು ಹಣ ಸಂಗ್ರಹಗೊಳ್ಳುತ್ತಿದ್ದಂತೆ ಅವುಗಳು ಆರ್ಥಿಕವಾಗಿ ಸದೃಢಗೊಳ್ಳಲಿವೆ. ಆರ್ಥಿಕ ಬೆಳವಣಿಗೆಗೆ ವೇಗೋತ್ಕರ್ಷ ನೀಡಲು ಅಗತ್ಯವಾದ ಸಾಲ ಸೌಲಭ್ಯ ಸುಲಭವಾಗಿ ದೊರೆಯುವಂತಾಗಲಿದೆ. ಅರ್ಥವ್ಯವಸ್ಥೆಯ ಪುನಶ್ಚೇತನಕ್ಕೆ  ಕೈಗೊಂಡ ಕ್ರಮವೂ ಇದಾಗಿರಲಿದೆ. ಬಾಂಡ್‌ಗಳ ನೆರವಿನ ಯೋಜನೆಯ ಸ್ವರೂಪವನ್ನು ಸರ್ಕಾರ ಇನ್ನೂ ಸ್ಪಷ್ಟಪಡಿಸಬೇಕಾಗಿದೆ.

ಏನಿದು ಬಂಡವಾಳ ಮರುಪೂರಣ?

ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿ ಸುಧಾರಿಸಲು ಹೊಸ ಬಂಡವಾಳದ ನೆರವು ನೀಡುವುದು ಎಂದರ್ಥ. ಉದ್ಯಮ ವಹಿವಾಟಿಗೆ ಸಾಲ ನೀಡಲು ಹಣದ ಕೊರತೆ ಎದುರಿಸುತ್ತಿರುವ ಬ್ಯಾಂಕ್‌ಗಳಿಗೆ ಸರ್ಕಾರವು ವಿವಿಧ ಮೂಲಗಳಿಂದ ಬಂಡವಾಳ ಭರ್ತಿ ಮಾಡಲಿದೆ. ಬ್ಯಾಂಕ್‌ಗಳಲ್ಲಿ ಸರ್ಕಾರದ ಪಾಲು ಬಂಡವಾಳ ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಹೀಗೆ ಮಾಡುವುದು ಅದರ ಹೊಣೆಗಾರಿಕೆಯಾಗಿದೆ.

ಯಾವಾಗ ಇಂತಹ ಪರಿಸ್ಥಿತಿ ಉದ್ಭವಿಸುತ್ತದೆ?

ಬ್ಯಾಂಕ್‌ಗಳ ಒಟ್ಟಾರೆ ಸಂಪತ್ತಿಗಿಂತ ಅವುಗಳ ಸಾಲದ ಹೊರೆ ಹೆಚ್ಚಾದಾಗ ಇಂತಹ ಅನಿವಾರ್ಯ ಎದುರಾಗುತ್ತದೆ. ಸರ್ಕಾರವು ಹೊಸ ಷೇರು ಖರೀದಿ ಇಲ್ಲವೇ ಬಾಂಡ್‌ ನೀಡಿಕೆ ಮೂಲಕ ಹಣ ಮರು ಭರ್ತಿ ಮಾಡುತ್ತದೆ.

ಇದು ಹೇಗೆ ಕಾರ್ಯಗತಗೊಳ್ಳಲಿದೆ?

ಕೇಂದ್ರ ಸರ್ಕಾರವು ಸದ್ಯಕ್ಕೆ ತನ್ನ ವಿತ್ತೀಯ ಕೊರತೆ ಕಾಯ್ದುಕೊಳ್ಳಲು ಗಮನ ಕೇಂದ್ರೀಕರಿಸಿದೆ. ಅಂದರೆ ತನ್ನ ಬೊಕ್ಕಸದಿಂದ ಹಣಕಾಸಿನ ನೆರವು ನೀಡಲು ಸರ್ಕಾರ ಮುಂದಾಗಿಲ್ಲ. ₹ 2.11 ಲಕ್ಷ ಕೋಟಿಯನ್ನು ಸರ್ಕಾರ ಎರಡು ಭಾಗಗಳಾಗಿ ವಿಂಗಡಿಸಿದೆ. ಒಂದು ಬಜೆಟ್‌ ಅಥವಾ ವಿತ್ತೀಯ ನೆರವು, ಇನ್ನೊಂದು ಬಂಡವಾಳ ನೆರವಿನ ಬಾಂಡ್‌ಗಳು. ಬಜೆಟ್‌ ನೆರವಿನ ₹ 18 ಸಾವಿರ ಕೋಟಿ ಮತ್ತು ಷೇರುಗಳ ಮಾರಾಟದ ಮೂಲಕ ₹ 58 ಸಾವಿರ ಕೋಟಿ ಸೇರಿದಂತೆ ಒಟ್ಟು ₹ 76,000 ಕೋಟಿ ಪಡೆಯಲಿವೆ. ಉಳಿದ ₹ 1.35 ಲಕ್ಷ ಕೋಟಿಗಳನ್ನು ಪ್ರತ್ಯೇಕ ಬಾಂಡ್‌ಗಳ ಮೂಲಕ ಒದಗಿಸಲು ಉದ್ದೇಶಿಸಿದೆ.

ಏನಿದು ಬಾಂಡ್‌?

ಮಾರುಕಟ್ಟೆಯಿಂದ ಹಣ ಸಂಗ್ರಹಿಸುವ ಹಣಕಾಸು ವಿಧಾನ ಇದಾಗಿದೆ. ಬಾಂಡ್‌ ಪರಿಪಕ್ವಗೊಂಡ ದಿನಕ್ಕೆ ಇವುಗಳಲ್ಲಿ ಹಣ ತೊಡಗಿಸಿದವರಿಗೆ ಅದರ ಮುಖಬೆಲೆ ಮತ್ತು ಬಡ್ಡಿ ಸೇರಿಸಿ ಪಾವತಿಸುವ ಭರವಸೆಯನ್ನು ಈ ಬಾಂಡ್‌ಗಳು ಹೊಂದಿರುತ್ತವೆ.  ಯಾವ ಉದ್ದೇಶಕ್ಕೆ ಬಳಸಿಕೊಳ್ಳಲಾಗುವುದೋ ಆ ಹೆಸರಿನಿಂದ ಅವುಗಳನ್ನು ಕರೆಯಲಾಗುವುದು.

ಇವು ಹೇಗೆ ಕಾರ್ಯನಿರ್ವಹಿಸಲಿವೆ?

ಸರ್ಕಾರವೇ ಇಂತಹ ಬಾಂಡ್‌ಗಳನ್ನು ಬಿಡುಗಡೆ ಮಾಡುತ್ತದೆ. ಇವುಗಳನ್ನು ಖರೀದಿಸಿದವರಿಂದ ಬಂದ ಹಣವನ್ನು ಬ್ಯಾಂಕ್‌ಗಳಿಗೆ ವಿತರಿಸಲಾಗುತ್ತಿದೆ. ಇದು ತಕ್ಷಣಕ್ಕೆ ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿ ಬಲಪಡಿಸುತ್ತದೆ.

ವಿತ್ತೀಯ ಕೊರತೆ ಮೇಲೆ ಪರಿಣಾಮ ಬೀರುವುದೇ?

ಬೊಕ್ಕಸದಿಂದ ನೆರವು ನೀಡದಿರುವುದರಿಂದ ವಿತ್ತೀಯ ಕೊರತೆ ಹೆಚ್ಚಳಗೊಳ್ಳಲಾರದು. ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಲೆಕ್ಕಪತ್ರ ನಿಯಮಗಳ ಅನ್ವಯ ಇದು ವಿತ್ತೀಯ ಕೊರತೆಗೆ ಸೇರ್ಪಡೆಗೊಳ್ಳುವುದಿಲ್ಲ. ಆದರೆ, ನಮ್ಮಲ್ಲಿ ಬಳಕೆಯಲ್ಲಿ ಇರುವ ನಿಯಮಗಳ ಅನುಸಾರ, ವಿತ್ತೀಯ ಕೊರತೆಗೆ ಸೇರಿಕೊಳ್ಳುತ್ತದೆ. ಇಂದಲ್ಲ, ನಾಳೆ ಸರ್ಕಾರವು ಬಾಂಡ್‌ನ ಮುಖಬೆಲೆ ಮತ್ತು ಬಡ್ಡಿ ಪಾವತಿಸಬೇಕಾಗುತ್ತದೆ. ಇದೊಂದು ದೀರ್ಘಾವಧಿ ಸಾಲ ಆಗಿರುವುದರಿಂದ  ಬ್ಯಾಂಕ್‌ಗಳು ಈ ಅವಧಿಯಲ್ಲಿ ತಮ್ಮ ಹಣಕಾಸು ಪರಿಸ್ಥಿತಿ ಸುಧಾರಿಸಿಕೊಳ್ಳಲು ಸಾಧ್ಯವಿದೆ. ಕೆಲ ವರ್ಷಗಳ ನಂತರ ಸರ್ಕಾರ ಆರಂಭದಲ್ಲಿ ಖರೀದಿಸಿದ್ದ ಷೇರುಗಳನ್ನು ಮಾರಾಟ ಮಾಡಿ ತನ್ನ ಹಣ ಮರಳಿ ಪಡೆಯಬಹುದು.

ಬಾಂಡ್‌ಗಳಿಂದ ಹೊರೆ ಎಷ್ಟು?

ಕೇಂದ್ರ ಸರ್ಕಾರದ ಮೇಲೆ ವಾರ್ಷಿಕ ಬಡ್ಡಿ ಹೊರೆಯು ₹ 8,000 ದಿಂದ ₹ 9,000 ಕೋಟಿಗಳಷ್ಟು ಆಗಿರಲಿದೆ. ಸಾಲ ನೀಡಿಕೆಯಲ್ಲಿನ ಹೆಚ್ಚಳ, ಖಾಸಗಿ ಹೂಡಿಕೆ ಏರಿಕೆ, ಆರ್ಥಿಕ ಬೆಳವಣಿಗೆಯಿಂದ ಈ ಹೊರೆ ಕಡಿಮೆಯಾಗುವ ಸಾಧ್ಯತೆ ಇದೆ.

ಮೊದಲ ಬಾರಿಯೇ?

ಅಲ್ಲ. ಬ್ಯಾಂಕ್‌ಗಳಿಗೆ ನೆರವಾಗಲು ಎರಡನೇ ಬಾರಿಗೆ ಇಂತಹ ಬಾಂಡ್‌ ಬಿಡುಗಡೆ ಮಾಡಲಾಗುತ್ತಿದೆ. 1990ರಲ್ಲಿ ₹ 20,000 ಕೋಟಿ ಮೊತ್ತದ ಬಾಂಡ್‌ಗಳನ್ನು ಬಿಡುಗಡೆ ಮಾಡಲಾಗಿತ್ತು.

2006ರಲ್ಲಿ ಸರ್ಕಾರಿ ಸ್ವಾಮ್ಯದ ಮೂರು ತೈಲ ಮಾರಾಟ ಸಂಸ್ಥೆಗಳಿಗಾಗಿ ₹ 2,000 ಕೋಟಿ ಮೊತ್ತದ ತೈಲ ಬಾಂಡ್‌ಗಳನ್ನು ಬಿಡುಗಡೆ ಮಾಡಲಾಗಿತ್ತು.

ಏನಿದು ಇಂದ್ರಧನುಷ್‌?

ಬ್ಯಾಂಕ್‌ಗಳ ಪುನಶ್ಚೇತನಕ್ಕೆ ‍ಸರ್ಕಾರ 2015ರಲ್ಲಿ ಪ್ರಕಟಿಸಿದ  7 ಅಂಶಗಳ ಕಾರ್ಯಕ್ರಮ ಇದಾಗಿದೆ. ಬ್ಯಾಂಕ್‌ಗಳಿಗೆ 4 ವರ್ಷಗಳಲ್ಲಿ ₹ 70 ಸಾವಿರ ಕೋಟಿಗಳ ಹಣಕಾಸು ನೆರವು ಒದಗಿಸಲು ಉದ್ದೇಶಿಸಲಾಗಿದೆ.  2015–16ರಲ್ಲಿ ₹ 25 ಸಾವಿರ ಕೋಟಿ  ಮತ್ತು  2016–17ರಲ್ಲಿ ₹ 25 ಸಾವಿರ ಕೋಟಿ ವಿತರಿಸಲಾಗಿದೆ. 2017–18 ಮತ್ತು 2018–19ರಲ್ಲಿ ತಲಾ ₹ 10 ಸಾವಿರ ಕೋಟಿ ಗಳನ್ನು ನಿಗದಿಪಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry