ಜಗದ ತಾಯಿಗೆ ಆನಂದದ ಹಾಡು

ಬುಧವಾರ, ಜೂನ್ 19, 2019
28 °C

ಜಗದ ತಾಯಿಗೆ ಆನಂದದ ಹಾಡು

Published:
Updated:
ಜಗದ ತಾಯಿಗೆ ಆನಂದದ ಹಾಡು

ಶಂಕರಾಚಾರ್ಯರದು ದರ್ಶನಪ್ರಪಂಚದಲ್ಲಿ ಬಹಳ ದೊಡ್ಡ ಹೆಸರು. ಭಾರತೀಯ ತತ್ತ್ವಶಾಸ್ತ್ರಕ್ಕೆ ಹೊಸದಾದ ದಿಕ್ಕನ್ನು ಒದಗಿಸಿದವರು ಅವರು. ಭಾರತೀಯ ಆಧ್ಯಾತ್ಮಿಕತೆಯ ಸಾರವನ್ನು ಉಪನಿಷತ್ತುಗಳಲ್ಲಿ ಕಾಣಬಹುದು. ಉಪನಿಷತ್ತುಗಳು ಎತ್ತಿಹಿಡಿಯುವ ವೇದಾಂತದರ್ಶನಕ್ಕೆ ಗಟ್ಟಿಯಾದ ತಾತ್ತ್ವಿಕ ನೆಲೆಯನ್ನು ನೀಡಿದ್ದು ಆಚಾರ್ಯರೇ ಹೌದು.

ಶಂಕರಾಚಾರ್ಯರ ಕಾಲದ ಬಗ್ಗೆ ನಿಖರವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ. ಹೀಗಿದ್ದರೂ ಎಂಟನೇ ಶತಮಾನಕ್ಕಿಂತಲೂ ಹಿಂದಿನವರು ಎನ್ನುವುದು ಸ್ಪಷ್ಟ. ಸಾಮಾನ್ಯವಾಗಿ ಆಚಾರ್ಯ ಶಂಕರರ ಸಿದ್ಧಾಂತವನ್ನು ’ಅದ್ವೈತದರ್ಶನ’ ಎಂದು ಕರೆಯಲಾಗುವುದು. ’ಅದ್ವೈತ’ ಎಂದರೆ ಎರಡನೆಯದು ಇಲ್ಲದ್ದು. ‘ಇರುವುದು ಒಂದೇ ವಸ್ತು. ಅದು ಎಲ್ಲರಲ್ಲೂ ಎಲ್ಲೆಲ್ಲೂ ಎಲ್ಲ ಕಾಲದಲ್ಲೂ ಇರುವಂಥದ್ದು; ಅದೇ ಬ್ರಹ್ಮ. ಈ ಬ್ರಹ್ಮದ ಅರಿವೇ ಆನಂದ. ಇದೇ ಮೋಕ್ಷ. ನಾನು ಬೇರೆ; ಬ್ರಹ್ಮ ಬೇರೆ ಅಲ್ಲ – ಎಂಬ ಅರಿವೇ ಮೋಕ್ಷಕ್ಕೆ ಕಾರಣವಾಗಬಲ್ಲ ದಾರಿ.’ ಶಂಕರಾಚಾರ್ಯರ ಅದ್ವೈತದರ್ಶನವನ್ನು ಹೀಗೆ ಸರಳವಾಗಿ ಹೇಳಬಹುದು. ಆದರೆ ಆಚಾರ್ಯರು ಎಲ್ಲೂ ಅವರ ಸಿದ್ಧಾಂತವನ್ನು ಅದ್ವೈತದರ್ಶನ ಎಂದೂ ಕರೆದಿಲ್ಲ; ಮಾತ್ರವಲ್ಲ, ಇದು ತಾವೇ ಕಂಡುಹಿಡಿದ ಸಿದ್ಧಾಂತ – ಎಂದೂ ಹೇಳಿಕೊಂಡಿಲ್ಲ. ಅವರು ಪ್ರತಿಪಾದಿಸಿದ ತತ್ತ್ವವನ್ನು ‘ಉಪನಿಷತ್ತಿನ ದರ್ಶನ’ ಎಂದಷ್ಟೆ ಕರೆದಿದ್ದಾರೆ. ಇದು ಅವರ ವಿನಯಕ್ಕೆ ಸಂಕೇತವಾಗಿದೆ. ಶಂಕರರ ದಾರ್ಶನಿಕ ಪ್ರತಿಭೆ ಲೋಕವಿಖ್ಯಾತ. ತೀಕ್ಷ್ಣವಾದ ತರ್ಕದೊಂದಿಗೆ ಅನುಭವದ ಅರಿವನ್ನೂ ಜೊತೆಗೂಡಿಸಿ ತತ್ತ್ವವನ್ನು ನಿರೂಪಿಸಿರುವ ಅವರ ಪ್ರತಿಭೆ ತತ್ತ್ವಶಾಸ್ತ್ರದ ಪರಂಪರೆಗೇ ಆದರ್ಶಪ್ರಾಯವಾಗಿದೆ. ಮಾತ್ರವಲ್ಲ, ಸಂಸ್ಕೃತಗದ್ಯ–ಪದ್ಯಸಾಹಿತ್ಯಕ್ಕೂ ಮಾದರಿಯಾಗಿದೆ.

ಶಂಕರಾಚಾರ್ಯರು ರಚಿಸಿರುವ ಗ್ರಂಥಗಳನ್ನು ಪ್ರಧಾನವಾಗಿ ಮೂರು ಭಾಗಗಳಲ್ಲಿ ವಿಂಗಡಿಸಬಹುದು. ಪ್ರಸ್ಥಾನತ್ರಯಗಳು, ಪ್ರಕರಣಗ್ರಂಥಗಳು ಮತ್ತು ಸ್ತೋತ್ರಸಾಹಿತ್ಯ. ಉಪನಿಷತ್ತುಗಳು, ಬ್ರಹ್ಮಸೂತ್ರಗಳು ಮತ್ತು ಭಗವದ್ಗೀತೆಗೆ ಬರೆದಿರುವ ಭಾಷ್ಯಗಳನ್ನು ‘ಪ್ರಸ್ಥಾನತ್ರಯ’ಗಳು ಎಂದು ಒಕ್ಕಣಿಸುತ್ತಾರೆ. ಉಪದೇಶಸಾಹಸ್ರೀ, ವಿವೇಕಚೂಡಾಮಣಿ ಮುಂತಾದ ಕೃತಿಗಳನ್ನು ‘ಪ್ರಕರಣಗ್ರಂಥ’ಗಳು ಎಂದು ಕರೆಯಲಾಗುತ್ತದೆ. ಇದಲ್ಲದೆ ಬೇರೆ ಬೇರೆ ದೇವತೆಗಳನ್ನು ಉದ್ದೇಶಿಸಿ ಹಲವು ಸ್ತೋತ್ರಗಳನ್ನು ಕೂಡ ಅವರು ರಚಿಸಿದ್ದಾರೆ. ಇವುಗಳಲ್ಲಿ ತುಂಬ ಪ್ರಸಿದ್ಧವಾಗಿರುವುದೇ ‘ಸೌಂದರ್ಯಲಹರೀ’.

‘ಸೌಂದರ್ಯಲಹರೀ’ – ಸಂಸ್ಕೃತಭಾಷೆಯಲ್ಲಿ ರಚಿತವಾಗಿರುವ ನೂರು ಸ್ತೋತ್ರಗಳ ಗುಚ್ಛ. ಜಗನ್ಮಾತೆಯನ್ನು ಬಣ್ಣಿಸಲು ಮೀಸಲಾಗಿರುವ ಈ ಸ್ತೋತ್ರಸಮೂಹ ಕಾವ್ಯದೃಷ್ಟಿಯಿಂದಲೂ ತತ್ತ್ವದೃಷ್ಟಿಯಿಂದಲೂ ವಿಶೇಷವಾಗಿದೆ. ಸಾಮಾನ್ಯವಾಗಿ ಸಂಸ್ಕೃತದಲ್ಲಿ ನೂರು ಪದ್ಯಗಳ ಗೊಂಚಲನ್ನು ‘ಶತಕ’ ಎಂದು ಕರೆಯುವುದು ರೂಢಿ. ಆದರೆ ಇಲ್ಲಿ ‘ಲಹರೀ’ ಎಂದು ಕರೆದಿರುವುದು ಕೂಡ ಸ್ವಾರಸ್ಯಕರವಾಗಿದೆ. ಸೌಂದರ್ಯಲಹರಿಯಲ್ಲಿ ಎರಡು ಭಾಗಗಳು; ಮೊದಲನೆಯ ಭಾಗದ ಮೊದಲ ನಲವತ್ತೊಂದು ಪದ್ಯಗಳನ್ನು ‘ಆನಂದಲಹರೀ’ ಎಂದೂ,  ಎರಡನೆಯ ಭಾಗದ ಐವತ್ತೊಂಬತ್ತು ಪದ್ಯಗಳನ್ನು ‘ಸೌಂದರ್ಯಲಹರೀ’ ಎಂದೂ ಕರೆಯಲಾಗುತ್ತದೆ. ಆನಂದಲಹರಿಯಲ್ಲಿ ಶ್ರೀವಿದ್ಯಾರಹಸ್ಯದ ತಾಂತ್ರಿಕ ವಿವರಣೆಗಳೂ ವರ್ಣನೆಗಳೂ ಇವೆ; ಸೌಂದರ್ಯಲಹರಿಯಲ್ಲಿ ಜಗನ್ಮಾತೆಯ ದಿವ್ಯಸೌಂದರ್ಯದ ವರ್ಣನೆಗಳಿವೆ.

ಸೌಂದರ್ಯಲಹರಿ ಪ್ರತಿಪಾದಿಸುವ ವಿದ್ಯೆಯನ್ನು ‘ಶ್ರೀವಿದ್ಯಾ’ ಎಂದು ಕರೆಯಲಾಗುವುದು. ಸೃಷ್ಟಿಯ ಏಕೈಕ ತತ್ತ್ವ ಎಂದರೆ ‘ಶಿವ’. ಅವನ ಕ್ರಿಯಾರೂಪವಾದ ಸೃಷ್ಟಿಯೇ ‘ಶಕ್ತಿ’. ಹೀಗೆಂದು ಶಿವ–ಶಕ್ತಿ ಎರಡು ಪ್ರತ್ಯೇಕ ವಿವರಗಳಲ್ಲ; ಚಂದ್ರ ಮತ್ತು ಬೆಳದಿಂಗಳು – ಹೇಗೆ ಬೇರೆ ಎನಿಸಿದರೂ ಅಖಂಡವಾಗಿವೆಯೋ ಹಾಗೆಯೇ ಶಿವ–ಶಕ್ತಿಗೂ ಇರುವ ನಂಟು. ಆದರೆ ನಾವು ಶಿವನನ್ನು ಪ್ರತ್ಯಕ್ಷವಾಗಿ ನೋಡಲು ಆಗದು. ಶಕ್ತಿಯ ವಿವಿಧ ರೂಪಗಳನ್ನು ಕಾಣಲಾದೀತು. ಈ ರೂಪಗಳೇ ಸೃಷ್ಟಿಯ ವಿವರಗಳು. ಇಡಿಯ ಸೃಷ್ಟಿಯನ್ನು ತಾಯಿಯಾಗಿ ಭಾವಿಸಿ ಆನಂದದ ಲಹರಿಯಲ್ಲಿ ಹಾಡಿದ ಸ್ತೋತ್ರವೇ ಸೌಂದರ್ಯಲಹರೀ. ಇಲ್ಲಿಯ ಪ್ರತಿ ಪದ್ಯದಲ್ಲೂ ಶಕ್ತಿಯ ಸ್ವರೂಪವನ್ನೂ ಸೌಂದರ್ಯವನ್ನೂ ಮನೋಜ್ಞವಾಗಿ ನಿರೂಪಿಸಲಾಗಿದೆ. ಮೊದಲ ಪದ್ಯವನ್ನು ಇಲ್ಲಿ ನೋಡಬಹುದು:

ಶಿವಃ ಶಕ್ತ್ಯಾ ಯುಕ್ತೋ ಉದಿ ಭವತಿ ಶಕ್ತಃ ಪ್ರಭವಿತುಂ

ನ ಚೇದೇವಂ ದೇವೋ ನ ಖಲು ಕುಶಲಃ ಸ್ಪಂದಿತುಮಪಿ|

ಅತಸ್ತ್ವಾಮಾರಾಧ್ಯಾಂ ಹರಿಹರವಿರಿಂಚಾದಿಭಿರಪಿ

ಪ್ರಣಂತುಂ ಸ್ತೋತುಂ ವಾ ಕಥಮಕೃತಪುಣ್ಯಃ ಪ್ರಭವತಿ ||

ಇದರ ಸರಳ ಭಾವರ್ಥ ಹೀಗೆ: ‘ಓ ಭಗವತಿ! ದೇವನಾದ ಶಿವನು ಶಕ್ತಿಯೊಡನೆ ಜೊತೆಗೂಡಿದವನಾಗಿದ್ದರೆ ಮಾತ್ರವಷ್ಟೆ ಪ್ರಪಂಚವನ್ನು ಸೃಷ್ಟಿಸಲು ಸಮರ್ಥನಾಗುತ್ತಾನೆ. ಹೀಗೆ ಅವನು ಶಕ್ತಿಯ ಜೊತೆ ಇಲ್ಲದಿದ್ದರೆ ಆಗ ಅವನು ಚಲಿಸಲು ಕೂಡ ಅಸಮರ್ಥನಾಗುತ್ತಾನಷ್ಟೆ. ನೀನು ವಿಷ್ಣು, ಬ್ರಹ್ಮ ಮತ್ತು ರುದ್ರರಿಂದಲೂ ಪೂಜಿತಳಾಗುವವಳು. ಹೀಗಿರುವುದರಿಂದ ಪೂರ್ವಜನ್ಮಗಳಲ್ಲಿ ಪುಣ್ಯವನ್ನು ಗಳಿಸದ ಹೊರತು ನಿನ್ನನ್ನು ನಮಸ್ಕರಿಸುವುದಕ್ಕಾಗಲೀ ಸ್ತುತಿಸುವುದಕ್ಕಾಗಲೀ ಹೇಗೆ ತಾನೆ ಸಾಧ್ಯವಾದೀತು?’

ತಂತ್ರಶಾಸ್ತ್ರದಲ್ಲೂ ತಂತ್ರದ ವಿಧಿ–ವಿಧಾನಗಳಲ್ಲೂ ‘ಸೌಂದರ್ಯಲಹರಿ’ಯ ಪಾರಾಯಣಕ್ಕೆ ವಿಶೇಷ ಸ್ಥಾನವಿದೆ. ಪಾರಾಯಣ ಎಂದರೆ ನಿರಂತರವಾಗಿ, ಎಡೆಬಿಡದೆ ಏಕಾಗ್ರವಾಗಿ ಆ ಕೃತಿಯನ್ನು ಅನುಸಂಧಾನಿಸುವುದು. ‘ತಂತ್ರ’ ಎಂದರೆ ವಿಸ್ತಾರ ಎಂದು ಅರ್ಥ. ಶಕ್ತಿಯ ವಿಸ್ತಾರವನ್ನು ನಾವು ಸೌಂದರ್ಯಲಹರಿಯಲ್ಲಿ ಕಾಣಬಹುದು. ಈ ವಿಸ್ತಾರ ಜಗನ್ಮಾತೆಯ ಕೃಪೆಯಲ್ಲೂ ಕಾಣಬಹುದು. ನಮ್ಮ ಅಂತರಂಗವೂ ಸೃಷ್ಟಿಯ ವಿವರಗಳೊಂದಿಗೆ ಆನಂದವಾಗಿಯೂ ಸುಂದರವಾಗಿಯೂ ಒಂದಾಗುವತ್ತ ವಿಸ್ತಾರವಾದಂತೆಲ್ಲ ನಾವು ಶಿವತತ್ತ್ವಕ್ಕೆ ಹತ್ತಿರವಾಗುತ್ತಿರುತ್ತೇವೆ – ಎಂಬುದು ಕೂಡ ಸೌಂದರ್ಯಲಹರಿಯ ಪಾರಾಯಣದ ಹಿನ್ನೆಲೆಯಲ್ಲಿರುವ ಧ್ವನಿ ಎನ್ನಬಹುದು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry