ಸಮೂಹ ಪ್ರಯತ್ನದ ಫಲ ದೊಡ್ಡದು

ಬುಧವಾರ, ಜೂನ್ 26, 2019
28 °C

ಸಮೂಹ ಪ್ರಯತ್ನದ ಫಲ ದೊಡ್ಡದು

Published:
Updated:
ಸಮೂಹ ಪ್ರಯತ್ನದ ಫಲ ದೊಡ್ಡದು

ಎಲ್ಲರಲ್ಲೂ ಎಲ್ಲೆಲ್ಲೂ ಇರುವುದು ಒಂದೇ ಚೈತನ್ಯಸ್ವರೂಪ ಎಂದು ಸಾರಿದ ದರ್ಶನವೇ ಅದ್ವೈತ. ಈ ಸಿದ್ಧಾಂತವನ್ನು ಗಟ್ಟಿಯಾಗಿ ನೆಲೆಗೊಳಿಸಿದವರು ಶಂಕರಾಚಾರ್ಯರು.  ದರ್ಶನ ಪ್ರಪಂಚದಲ್ಲಿ ಸಾವಿರಾರು ವರ್ಷಗಳಿಂದಲೂ ಈ ಸಿದ್ಧಾಂತ ತನ್ನ ಪ್ರಭಾವವನ್ನು ಮೂಡಿಸುತ್ತ ಬಂದಿದೆ. ಆಚಾರ್ಯ ಶಂಕರರ ತತ್ತ್ವವನ್ನು ಪಸರಿಸುವ ಉದ್ದೇಶದಿಂದ ದೇಶದಾದ್ಯಂತ ಹಲವು ಮಠಗಳು, ಸಂಸ್ಥೆಗಳು ಕ್ರಿಯಾಶೀಲವಾಗಿವೆ. ಹೀಗೆ ಶಂಕರರ ಸಂದೇಶಗಳನ್ನು ಜನಮಾನಸಕ್ಕೆ ತಲುಪಿಸುವ ಕಾರ್ಯದಲ್ಲಿ ಯಡತೊರೆ ಶ್ರೀ ಯೊಗಾನಂದೇಶ್ವರ ಸರಸ್ವತೀಮಠದ 'ವೇದಾಂತ ಭಾರತಿ' ಸಂಸ್ಥೆಯೂ ತೊಡಗಿದೆ. ಶಂಕರಾಚಾರ್ಯರ ಹಲವು ಪ್ರಸಿದ್ಧ ಕೃತಿಗಳಲ್ಲಿ ‘ಸೌಂದರ್ಯಲಹರಿ’ಯೂ ಒಂದು. ಮಾತೃಶಕ್ತಿಯ ವಿವಿಧ ಆಯಾಮಗಳ ತಾತ್ವಿಕತೆಯನ್ನು ಈ ಸ್ತೋತ್ರಗಳಲ್ಲಿ ನೋಡಬಹುದು. ಇದೊಂದು ಪಾರಾಯಣ ಗ್ರಂಥವಾಗಿಯೂ ಪ್ರಸಿದ್ಧವಾಗಿದೆ. ಇದರ ಸಾಮೂಹಿಕ ಪಾರಾಯಣ ಬೆಂಗಳೂರಿನಲ್ಲಿ ಅ.28ರಿಂದ ಎರಡು ದಿನ ನಡೆಯಲಿದೆ. ಈ ಬಗ್ಗೆ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀಮಠದ ಶಂಕರಭಾರತೀ ಮಹಾಸ್ವಾಮೀಜಿ ಇಲ್ಲಿ ಮಾತನಾಡಿದ್ದಾರೆ.

* ಇಂಥದ್ದೊಂದು ಅಭಿಯಾನದ ಕಲ್ಪನೆ ಹೇಗೆ ಬಂದಿತು?

ಶಂಕರಾಚಾರ್ಯರ ಸಂದೇಶಗಳು ಜನಮಾನಸದಲ್ಲಿ ಸದಾ ಉಳಿಯಬೇಕು. ಅದು ಸಾಧ್ಯವಾಗಲು ಕಾಲಕಾಲಕ್ಕೆ ಅವರ ಸಂದೇಶಗಳನ್ನು ನೆನಪಿಸುವ ಮಾರ್ಗವನ್ನು ನಾವು ಅನುಸರಿಸಬೇಕು. ಸೌಂದರ್ಯಲಹರಿ ಪಾರಾಯಣ ಅಭಿಯಾನವು ಆ ಪ್ರಯತ್ನದ ಒಂದು ಭಾಗ. ಅಭಿಯಾನದಿಂದಾಗಿ ರಾಜ್ಯದ ಹಲವೆಡೆ ಶಂಕರರ ತತ್ವ, ಸ್ತೋತ್ರಗಳ ಕುರಿತು ಜಾಗೃತಿ, ವಿವೇಕ ಉಂಟಾಗಿದೆ.

* ಸೌಂದರ್ಯ ಲಹರಿಯನ್ನೇ ಈ ಅಭಿಯಾನಕ್ಕೆ ಏಕೆ ಆರಿಸಿಕೊಂಡಿರಿ?

ಸೌಂದರ್ಯಲಹರಿಯನ್ನು ಒಂದು ಸ್ತೋತ್ರ ಸಾಹಿತ್ಯವಾಗಿ ಮಾತ್ರ ಅಲ್ಲ. ಚತುರ್ವಿಧ ಪುರುಷಾರ್ಥಗಳ ಅರ್ಥವನ್ನೂ ಅನುಭವವನ್ನೂ ಅದರ ಸಾಧನೆಯ ಮಾರ್ಗವನ್ನೂ ಶಂಕರಾಚಾರ್ಯರು ಅದರಲ್ಲಿ ಬೆಸೆದಿದ್ದಾರೆ. ಪರಮಾತ್ಮನನ್ನು ಜಗನ್ಮಾತೆಯ ರೂಪದಲ್ಲಿ ಸ್ತುತಿ ಮಾಡಿರುವ ಹಲವು ಸ್ತೋತ್ರಗಳಿವೆ. ಅವೆಲ್ಲವುಗಳ ಪೈಕಿ ಸೌಂದರ್ಯಲಹರಿಗೆ ತನ್ನದೇ ಆದ ಒಂದು ವಿಶಿಷ್ಟ ಸ್ಥಾನವಿದೆ. ಸೌಂದರ್ಯಲಹರಿ ಮತ್ತು ದಕ್ಷಿಣಾಮೂರ್ತ್ಯಷ್ಟಕಗಳ ಪಾರಾಯಣದಿಂದ ಮನಃಶುದ್ಧಿ ಲಭಿಸುತ್ತದೆ.

* ಈ ಸ್ತೋತ್ರಗಳನ್ನು ನಿತ್ಯವೂ ಪಾರಾಯಣ ಮಾಡಬೇಕೆ?

ಪಾರಾಯಣದ ಉದ್ದೇಶವೇ ಅದು. ಪ್ರತಿದಿನ ಪಾರಾಯಣ ಮಾಡಿದರೆ ಮಾತ್ರ ಇಚ್ಛಿತಫಲ ಪ್ರಾಪ್ತಿಯಾಗಲು ಸಾಧ್ಯ. ಉದಾಹರಣೆಗೆ ಯೋಗವನ್ನೇ ತೆಗೆದುಕೊಳ್ಳಿ. ವಾರಕ್ಕೋ, ತಿಂಗಳಿಗೋ ಒಮ್ಮೆ ಯೋಗ ಮಾಡಿದರೆ ಆರೋಗ್ಯ ಸುಧಾರಿಸುವುದೇ? ಸ್ತೋತ್ರಪಾರಾಯಣವೂ ಅಷ್ಟೆ. ನಿತ್ಯ, ನಿಯಮಿತ ಪಾರಾಯಣ ಅಗತ್ಯ.

* ಸಾಮೂಹಿಕ ಪಾರಾಯಣಕ್ಕೇಕೆ ಅಷ್ಟು ಮಹತ್ವ?

ಈಗ ನಾನು ನಿಮಗೆ ಎರಡು ಪ್ರಶ್ನೆಗಳನ್ನು ಕೇಳುತ್ತೇನೆ. ಒಂದು ರೂಪಾಯಿ ಅಂದರೆ ಎಷ್ಟು? ಒಂದು ಲಕ್ಷ ರೂಪಾಯಿ ಅಂದರೆ ಎಷ್ಟು? ಒಂದು ರೂಪಾಯಿಯೇ ಒಂದೊಂದಾಗಿ  ಒಂದು ಲಕ್ಷದಷ್ಟು ಸೇರಿದಾಗ ಅದಕ್ಕೆ ಲಕ್ಷ ರೂಪಾಯಿಯ ಮೌಲ್ಯ ಅಲ್ಲವೇ? ಸ್ತೋತ್ರಗಳ ಪಾರಾಯಣದ ವಿಷಯವೂ ಹೀಗೆಯೆ. ನೀವು ಒಬ್ಬರೇ ಪಾರಾಯಣ ಮಾಡಿದರೆ ಅದು ಒಂದು ರೂಪಾಯಿ, ಲಕ್ಷ ಮಂದಿ ಸೇರಿ ಪಾರಾಯಣ ಮಾಡಿದರೆ ಲಕ್ಷ ರೂಪಾಯಿ.

* ಮಹಾಸಮರ್ಪಣೆ ಎನ್ನುವುದರ ಅರ್ಥವೇನು?

ಇಷ್ಟು ದಿನಗಳ ಕಾಲ ನಡೆಸಿಕೊಂಡು ಬಂದ ಸೌಂದರ್ಯಲಹರಿ ಅನುಷ್ಠಾನವನ್ನು ಜಗನ್ಮಾತೆಯ ಚರಣಗಳಲ್ಲಿ ಸಮರ್ಪಿಸುತ್ತೇನೆ ಎನ್ನುವ ಭಾವದಲ್ಲಿ ಈ ಕಾರ್ಯಕ್ರಮಕ್ಕೆ ‘ಮಹಾಸಮರ್ಪಣೆ’ ಎಂಬ ಹೆಸರನ್ನು ಇಟ್ಟಿದ್ದೇವೆ.

* ತತ್ವಶಾಸ್ತ್ರದೆಡೆಗಿನ ಆಕರ್ಷಣೆ ಇಂದಿನ ಸಮಾಜದಲ್ಲಿ ಕಡಿಮೆಯಾಗುತ್ತಿದೆ ಎಂದೆನಿಸುವುದಿಲ್ಲವೆ?

ತತ್ತ್ವಗಳು ಜನರಿಗೆ ರುಚಿಸುತ್ತಿಲ್ಲ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಅದರ ರುಚಿಯನ್ನು ಅವರಿಗೆ ತೋರಿಸಬೇಕಿದ್ದ ಸಂಸ್ಥೆಗಳು ಮತ್ತು ಸಮೂಹಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ತತ್ತ್ವಜ್ಞಾನದ ರುಚಿ ಗೊತ್ತಾದರೆ ತಾನೆ, ಅದನ್ನು ಅರಿತುಕೊಳ್ಳಬೇಕು ಎಂಬ ಬಯಕೆ ಸಹಜವಾಗಿಯೇ ಮೂಡುವುದು. ಅದನ್ನು ಪಸರಿಸುವವರೇ ಇಲ್ಲ ಎಂದಾದರೆ ಮಹತ್ವವನ್ನು ಅರಿಯುವುದು ಹೇಗೆ?

* ಶಂಕರರ ಚಿಂತನೆಗಳನ್ನು ಸಮಾಜಕ್ಕೆ ತಲುಪಿಸುವಲ್ಲಿ ಸಂಬಂಧಪಟ್ಟ ಸಂಸ್ಥೆಗಳು ಸೋಲುತ್ತಿವೆ ಎನ್ನುವುದು ನಿಮ್ಮ ಮಾತಿನ ಅರ್ಥವೇ?

ಈಗಿರುವ ಅನೇಕ ಸಂಸ್ಥೆಗಳು ಶಂಕರರ ಚಿಂತನೆಯನ್ನು ಕೇವಲ ಶಂಕರಜಯಂತಿಗೆ ಸೀಮಿತವಾಗಿಸಿಬಿಟ್ಟಿವೆ. ವಾಸ್ತವವಾಗಿ ನೋಡಿದರೆ ಜಯಂತಿಯ ಸಂದರ್ಭದಲ್ಲಿಯೇ ತತ್ತ್ವ, ಸಿದ್ಧಾಂತ, ಚಿಂತನೆಗಳಿಗೆ ಹೆಚ್ಚು ಒತ್ತು ಕೊಟ್ಟು ಪ್ರಚಾರ ಮಾಡಬೇಕು. ಆದರೆ ಜಯಂತಿಗಳು ಪೂಜೆ–ಪುನಸ್ಕಾರ, ಮೆರವಣಿಗೆ, ಪ್ರತಿಭಟನೆ, ಉಪನ್ಯಾಸಗಳಿಗೆ ಮುಗಿದು ಹೋಗುತ್ತಿವೆ. ಭಗವತ್ಪಾದ ಶಂಕರಾಚಾರ್ಯರ ಯೋಚನಾಲಹರಿಯನ್ನು ಸಾಮಾನ್ಯರ ಬಳಿಗೆ ಸರಳ ವಿಧಾನದಲ್ಲಿ ಕೊಂಡೊಯ್ಯುವ ಕೆಲಸವಾಗಬೇಕು. ಇಂಥ ಪ್ರಯತ್ನವನ್ನು 'ವೇದಾಂತ ಭಾರತಿ' ನಡೆಸುತ್ತಿದೆ.

* ಶಂಕರರ ಚಿಂತನೆಗಳು ಆ ಕಾಲದ ಸಹಜ ಭಾಷೆಯಾದ ಸಂಸ್ಕೃತದಲ್ಲಿಯೇ ಇವೆ. ಈ ಕಾಲಕ್ಕೆ, ಇಂದಿನ ಮನೋಧರ್ಮಕ್ಕೆ ಹೊಂದುವಂತೆ ತಿಳಿಹೇಳುವ ಎಂಥ ಕಾರ್ಯಕ್ರಮಗಳು 'ವೇದಾಂತ ಭಾರತಿ'ಯಿಂದ ನಡೆದಿವೆ?

ಶಂಕರರ ಚಿಂತನೆಗಳನ್ನು ಮತ್ತೆ ಜನರ ಹತ್ತಿರಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮೊದಲು ಆಗಬೇಕು. ಸಾಮಾನ್ಯರಿಗೂ ಅರ್ಥವಾಗಬಲ್ಲ ರೀತಿಯಲ್ಲಿ ವಿದ್ವತ್‌ಗೋಷ್ಠಿ, ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ವಿಜ್ಞಾನಿಗಳು, ಎಂಜಿನಿಯರ್‌ಗಳು, ಆಯುರ್ವೇದ ವೈದ್ಯರಿಗಾಗಿ ಅಧ್ಯಾತ್ಮ ಶಿಬಿರಗಳನ್ನು ಆಯೋಜಸಿದ್ದೇವೆ. ಶಂಕರ ಸಿದ್ಧಾಂತವನ್ನು ಸಮಾಜಕ್ಕೆ ತಿಳಿಹೇಳಲು ನಿಮ್ಮ ಸಹಾಯಬೇಕು ಎಂದು  ಶಿಬಿರಗಳಿಗೆ ಬಂದವರಿಗೆ ಅರಿಕೆ ಮಾಡಿಕೊಟ್ಟಿದ್ದೇವೆ. ಶಂಕರರ ಸಂದೇಶಗಳನ್ನು, ಸ್ತೋತ್ರಗಳನ್ನು ಸರಳ ಕನ್ನಡದಲ್ಲಿ ಅರ್ಥೈಸಿ ವಿವರಿಸಿರುವ ಪುಸ್ತಕಗಳನ್ನು ಪ್ರಕಟಿಸಿದ್ದೇವೆ.

* ಶಂಕರರು ಅಂದರೆ ಸಂಸ್ಕೃತ, ವೇದಾಂತ; ಈ ಸಂಸ್ಕೃತ–ವೇದಾಂತಗಳು  ಬ್ರಾಹ್ಮಣರಿಗೆ ಸೀಮಿತ ಎನ್ನುವ ಕಲ್ಪನೆ ಅನೇಕರಿಗಿದೆಯಲ್ಲ?

ಇದು ತಪ್ಪು ಕಲ್ಪನೆ. ಇಂಥ ಆರೋಪ ಕೇವಲ ಶಂಕರರ ಸಿದ್ಧಾಂತದ ಬಗ್ಗೆ ಮಾತ್ರವೇ ಅಲ್ಲ, ನಮ್ಮ ದೇಶದ ಎಲ್ಲ ಪ್ರಾಚೀನ ವಾಙ್ಮಯದ ಬಗ್ಗೆಯೂ ಇದೆ. ಆದರೆ ಆ ಕಾಲದ ಕೆಲವು ನಡೆಗಳನ್ನು ನಾವು ಬಹುಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಈ ತಪ್ಪು ಕಲ್ಪನೆ ನಿವಾರಣೆಯಾಗುತ್ತದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry