ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲ್ಯಾಕ್‌ಮೇಲ್ ಆರೋಪ: ಹಿರಿಯ ಪತ್ರಕರ್ತ ವಿನೋದ್ ವರ್ಮಾ ಬಂಧನ

Last Updated 27 ಅಕ್ಟೋಬರ್ 2017, 19:18 IST
ಅಕ್ಷರ ಗಾತ್ರ

ಗಾಜಿಯಾಬಾದ್‌/ರಾಯಪುರ: ಹಿರಿಯ ಪತ್ರಕರ್ತ, ಬಿಬಿಸಿ ಹಿಂದಿ ವಿಭಾಗದ ಮಾಜಿ ವರದಿಗಾರ ಮತ್ತು ಛತ್ತೀಸಗಡ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ಘಟಕದ ಮುಖ್ಯಸ್ಥ ವಿನೋದ್‌ ವರ್ಮಾ ಅವರನ್ನು ಸುಲಿಗೆ ಮತ್ತು ಬ್ಲ್ಯಾಕ್‌ಮೇಲ್ ಆರೋಪದಲ್ಲಿ ಛತ್ತೀಸಗಡ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಗಾಜಿಯಾಬಾದ್‌ನಲ್ಲಿರುವ ವಿನೋದ್ ಅವರ ನಿವಾಸದಲ್ಲಿ ಅವರನ್ನು ಶುಕ್ರವಾರ ಬೆಳಗ್ಗೆ ಬಂಧಿಸಲಾಗಿದೆ. ಆಶ್ಲೀಲ ದೃಶ್ಯಗಳಿರುವ ಸಿ.ಡಿ.ಯೊಂದರ 500 ಪ್ರತಿಗಳು, ₹ 2 ಲಕ್ಷ ನಗದು, ಪೆನ್‌ಡ್ರೈವ್‌, ಲ್ಯಾಪ್‌‍ಟಾಪ್‌ ಮತ್ತು ಡೈರಿಯೊಂದನ್ನು ವರ್ಮಾ ಮನೆಯಿಂದ ವಶಕ್ಕೆ ಪಡೆಯಲಾಗಿದೆ. ವರ್ಮಾವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಛತ್ತೀಸಗಡ ಬಿಜೆಪಿಯ ನಾಯಕ ಪ್ರಕಾಶ್ ಬಜಾಜ್ ಎಂಬುವವರು ರಾಯಪುರದ ಪಂಡ್ರಿ ಪೊಲೀಸ್‌ ಠಾಣೆಯಲ್ಲಿ ವರ್ಮಾ ವಿರುದ್ಧ ದೂರು ದಾಖಲಿಸಿದ್ದರು. ಬಜಾಜ್ ಅವರು ಛತ್ತೀಸಗಡ ಸಚಿವ ರಾಜೇಶ್ ಮುನಾತ್ ಅವರ ಆಪ್ತ. ‘ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ನಿಮ್ಮ ಮಾಲೀಕರ ಕಾಮಕೇಳಿಯ ಸಿ.ಡಿ. ತಮ್ಮ ಬಳಿ ಇದೆ ಎಂದು ಅವರು ಹೇಳುತ್ತಿದ್ದಾರೆ ಎಂದು ಬಜಾಜ್‌ ದೂರು ನೀಡಿದ್ದರು. ತಾನು ಕೇಳಿದ್ದನ್ನು ಕೊಡದೇ ಇದ್ದರೆ ಸಿ.ಡಿ.ಯನ್ನು ಬಹಿರಂಗ ಮಾಡುವುದಾಗಿ ಅವರು ಬೆದರಿಸಿದ್ದರು ಎಂದು ತಮ್ಮ ದೂರಿನಲ್ಲಿ ಪ್ರಕಾಶ್‌ ಆರೋಪಿಸಿದ್ದಾರೆ’ ಎಂದು ರಾಯಪುರ ಎಸ್‌ಪಿ ಸಂಜೀವ್‌ ಶುಕ್ಲಾ ಹೇಳಿದ್ದಾರೆ. 

ಈ ದೂರಿನ ಆಧಾರದಲ್ಲಿ ಪತ್ರಕರ್ತ ವರ್ಮಾ ಅವರನ್ನು ಪತ್ತೆ ಮಾಡುವುದಕ್ಕಾಗಿ ದೆಹಲಿಗೆ ತಂಡವನ್ನು ಕಳುಹಿಸಲಾಗಿತ್ತು. ಸಿ.ಡಿ.ಯ ಪ್ರತಿಗಳನ್ನು ತಯಾರಿಸಿದ ಸಿ.ಡಿ. ಅಂಗಡಿಯ ಮಾಲೀಕನನ್ನು ಮೊದಲು ಪತ್ತೆ ಮಾಡಲಾಯಿತು. ದೂರಿನಲ್ಲಿ ಉಲ್ಲೇಖಿಸಿರುವ ಸಿ.ಡಿ.ಯ ಸಾವಿರ ಪ್ರತಿಗಳನ್ನು ತಯಾರಿಸಲು ವಿನೋದ್‌ ವರ್ಮಾ ಅವರು ತಿಳಿಸಿದ್ದರು ಎಂದು ಅಂಗಡಿ ಮಾಲೀಕ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಎಎಪಿ ಮುಖಂಡ ಮತ್ತು ಮಾಜಿ ಪತ್ರಕರ್ತ ಅಷುತೋಷ್‌ ಸೇರಿ ಹಲವರು ಪತ್ರಕರ್ತರು ಗಾಜಿಯಾಬಾದ್‌ ಪೊಲೀಸ್‌ ಠಾಣೆಯಲ್ಲಿ ಜಮಾಯಿಸಿದ್ದರು. ‘ಇದು ಮಾಧ್ಯಮದ ಮೇಲಿನ ದಾಳಿ’ ಎಂದು ಅಷುತೋಷ್‌ ಆರೋಪಿಸಿದ್ದಾರೆ. ಈ ಬಂಧನ ಅತ್ಯಂತ ನಿಗೂಢವಾಗಿ ನಡೆದಿದೆ ಎಂದೂ ಅವರು ಆರೋಪಿಸಿದ್ದಾರೆ.

**

ವಿನೋದ್ ಬೆಂಬಲಕ್ಕೆ ಕಾಂಗ್ರೆಸ್

‘ಛತ್ತೀಸಗಡ ಸಚಿವ ರಾಜೇಶ್ ಮುನಾತ್‌ರವರ ಅಕ್ರಮ ಲೈಂಗಿಕತೆ ಬಗ್ಗೆ ವಿನೋದ್ ತನಿಖೆ ನಡೆಸುತ್ತಿದ್ದರು. ಇದೇ ಕಾರಣಕ್ಕೆ ಅವರನ್ನು ಬಂಧಿಸಲಾಗಿದೆ. ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ರಾಜೇಶ್ ಮುನಾತ್ ವಿರುದ್ಧ ತನಿಖೆ ನಡೆಸಬೇಕು. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಮಾಧ್ಯಮಗಳ ಮೇಲಿನ ದಾಳಿ ಹೆಚ್ಚುತ್ತಿದೆ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಅಜಯ್ ಮಾಕನ್ ಆರೋಪಿಸಿದ್ದಾರೆ.

**

ಇದು ರಾಜಕೀಯ ದ್ವೇಷ ಸಾಧನೆ. ಛತ್ತೀಸಗಡ ಸಚಿವನ ಕಾಮಕೇಳಿಯ ದೃಶ್ಯಾವಳಿ ನನ್ನ ಬಳಿ ಇದೆ. ಇದಕ್ಕಾಗೇ ನನ್ನನ್ನು ಬಂಧಿಸಲಾಗಿದೆ.

–ವಿನೋದ್ ವರ್ಮಾ, ಬಂಧಿತ ಪತ್ರಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT