20 ವರ್ಷವಾದರೂ ಸಿಗದ ಬಹುಮಾನ– ಅಸಮಾಧಾನ

ಶುಕ್ರವಾರ, ಮೇ 24, 2019
33 °C

20 ವರ್ಷವಾದರೂ ಸಿಗದ ಬಹುಮಾನ– ಅಸಮಾಧಾನ

Published:
Updated:

ಖಾನಾಪುರ (ಬೆಳಗಾವಿ ಜಿಲ್ಲೆ): ‘ಅಬ್ದುಲ್‌ ಕರೀಂ ಲಾಲ್‌ ತೆಲಗಿ ನಡೆಸಿದ್ದ ಕೋಟ್ಯಂತರ ರೂಪಾಯಿ ಮೊತ್ತದ ನಕಲಿ ಛಾಪಾ ಕಾಗದ ಹಗರಣವನ್ನು ಬಯಲಿಗೆಳೆದ ನನಗೆ ರಾಜ್ಯ ಸರ್ಕಾರ ಇದುವರೆಗೆ ಸೂಕ್ತ ಬಹುಮಾನ ನೀಡಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಜಯಂತ ತಿಣೈಕರ ಅಸಮಾಧಾನ ವ್ಯಕ್ತಪಡಿಸಿದರು.

‘1994ರಿಂದ 1997ರವರೆಗೆ ಸ್ವತಃ ನಾನೇ ತನಿಖೆ ಮಾಡಿ, ಛಾಪಾ ಕಾಗದ ಹಗರಣ ಯಾವ ರೀತಿ ನಡೆದಿತ್ತು ಎನ್ನುವುದನ್ನು ಬಹಿರಂಗಪಡಿಸಿದ್ದೆ. ನನ್ನ ಈ ಕೆಲಸಕ್ಕೆ ಅಂದಿನ ಸರ್ಕಾರವು ಬಹುಮಾನ ನೀಡುವುದಾಗಿ ಹೇಳಿತ್ತು. ಆದರೆ, 20 ವರ್ಷ ಕಳೆದರೂ ಬಹುಮಾನದ ಮೊತ್ತ ಬಂದಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಂಬೈ, ಪುಣೆ, ಕೋಲ್ಕತ್ತ, ಬೆಂಗಳೂರು ಮತ್ತಿತರ ಸ್ಥಳಗಳಲ್ಲಿ ಸಂಚರಿಸಿ ಪೂರ್ಣ ಮಾಹಿತಿಯನ್ನು ಕಲೆಹಾಕಿದ್ದೆ. ಆದಾಯ ತೆರಿಗೆ, ಪೊಲೀಸ್‌ ಹಾಗೂ ಕೇಂದ್ರ ಗುಪ್ತಚರ ಇಲಾಖೆಗೆ ಮಾಹಿತಿ ಒದಗಿಸಿದ್ದೆ. ತೆಲಗಿ ಸಾವನ್ನು ನೆಪ ಮಾಡಿಕೊಂಡು, ಪ್ರಕರಣದ ತನಿಖೆಯನ್ನು ಇಲ್ಲಿಗೇ ಕೈಬಿಡಬಾರದು. ಆಳವಾಗಿ ತನಿಖೆ ಮಾಡಿ, ಹಗರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಪತ್ತೆ ಹಚ್ಚಿ, ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ತೆಲಗಿ, ನಕಲಿ ಛಾಪಾ ಕಾಗದ ಮುದ್ರಿಸಿ ಮಾರಾಟ ಮಾಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಿದ್ದ. ಆತನಿಗೆ ಹಿರಿಯ ಅಧಿಕಾರಿಗಳು, ರಾಜಕಾರಣಿಗಳು ಸಹಾಯ ಮಾಡಿರುವ ಸಾಧ್ಯತೆ ಇದೆ. ಕೂಲಂಕಷ ತನಿಖೆಯಾದರೆ, ಸತ್ಯ ಹೊರಬೀಳಲಿದೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry