ಭಾನುವಾರ, ಸೆಪ್ಟೆಂಬರ್ 22, 2019
22 °C
ಎಫ್‌ಕೆಸಿಸಿಐ ಮುಕ್ತ ಸಂವಾದದಲ್ಲಿ ಸಮಸ್ಯೆಗಳ ಸರಮಾಲೆ ತೆರೆದಿಟ್ಟ ವರ್ತಕರು

ಜಿಎಸ್‌ಟಿ ಅವ್ಯವಸ್ಥೆಗೆ ಅಸಮಾಧಾನ ಸ್ಫೋಟ

Published:
Updated:
ಜಿಎಸ್‌ಟಿ ಅವ್ಯವಸ್ಥೆಗೆ ಅಸಮಾಧಾನ ಸ್ಫೋಟ

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿ ಇರುವ ಲೋಪದೋಷಗಳ ಬಗ್ಗೆ ರಾಜ್ಯದ ವರ್ತಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ ಆಶ್ರಯದಲ್ಲಿ ಶುಕ್ರವಾರ ಇಲ್ಲಿ ದೇಶದಲ್ಲಿಯೇ ಇದೇ ಮೊದಲಬಾರಿಗೆ ಜಿಎಸ್‌ಟಿ ಮುಕ್ತ ಸಂವಾದ ಏರ್ಪಡಿಸಲಾಗಿತ್ತು.

ವಿವಿಧ ವರ್ತಕರ ಒಕ್ಕೂಟಗಳು ಹೊಸ ತೆರಿಗೆ ವ್ಯವಸ್ಥೆಯಿಂದ   ಆಗುತ್ತಿರುವ ಸಮಸ್ಯೆಗಳ ಬಗ್ಗೆ ಜಿಎಸ್‌ಟಿ ತಂಡದಲ್ಲಿರುವ ಕೇಂದ್ರ ಮತ್ತು ರಾಜ್ಯದ ತೆರಿಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟವು. ವ್ಯವಸ್ಥೆಯಲ್ಲಿನ ಕೆಲವು ಬದಲಾವಣೆಗಳಿಗೂ ಬೇಡಿಕೆ ಸಲ್ಲಿಸಿವೆ.

ತೆರಿಗೆ ಲೆಕ್ಕಪತ್ರ ಸಲ್ಲಿಕೆಯೇ (ರಿಟರ್ನ್‌) ದೊಡ್ಡ ತಲೆ ನೋವಾಗಬಾರದು. ಜಿಎಸ್‌ಟಿಯಲ್ಲಿ ವರ್ತಕರು ನಿತ್ಯದ ವಹಿವಾಟು ಬಿಟ್ಟು ರಿಟರ್ನ್‌ ಸಲ್ಲಿಕೆಗೇ ಹೆಚ್ಚು ಸಮಯ ವ್ಯಯಿಸುವಂತಾಗಿದೆ. ಹೀಗಾಗಿ ರಿಟರ್ನ್‌ ಸಲ್ಲಿಕೆ ಆದಷ್ಟೂ ಸರಳವಾಗಿರಬೇಕು, ತೆರಿಗೆ ದರಗಳನ್ನು ತಗ್ಗಿಸಬೇಕು, ರಿವರ್ಸ್‌ ಚಾರ್ಜ್‌ ಕೈಬಿಡಬೇಕು ಎನ್ನುವ ಒಕ್ಕೊರಲಿನ ಅಭಿಪ್ರಾಯ ವ್ಯಕ್ತವಾಯಿತು.

‘ತೆರಿಗೆ ಪಾವತಿದಾರರು ಮತ್ತು ಸರ್ಕಾರದ ಮಧ್ಯೆ ನಂಬಿಕೆ ಇರುವುದು ಬಹಳ ಮುಖ್ಯ. ಆ ಅಂತರ ತಗ್ಗಿದರೆ ಜಿಎಸ್‌ಟಿಯಲ್ಲಿ ರಿಟರ್ನ್ ಸಲ್ಲಿಕೆ, ತೆರಿಗೆ ಪಾವತಿ ಎಲ್ಲವೂ ಸರಳವಾಗಲಿವೆ. ಅಂತಹ ದಿನಗಳು ಶೀಘ್ರವೇ ಬರುವ ವಿಶ್ವಾಸವಿದೆ’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಕೆ. ರವಿ ಅಭಿಪ್ರಾಯಪಟ್ಟರು.

‘ಸಂಪೂರ್ಣ ಹೊಸ ವ್ಯವಸ್ಥೆ ಆಗಿರುವುದರಿಂದ ಸಮಸ್ಯೆಗಳು ಸಹಜ. ಜಿಎಸ್‌ಟಿಯನ್ನು ಇನ್ನಷ್ಟು ಉತ್ತಮಗೊಳಿಸುವ ಉದ್ದೇಶದಿಂದ ಮುಕ್ತ ಸಂವಾದ ಆಯೋಜಿಸಲಾಗಿದೆ. ವರ್ತಕರ ಸಮುದಾಯದಿಂದ ಸಲಹೆ, ಸೂಚನೆಗಳನ್ನು ಪಡೆದು ಬದಲಾವಣೆ ಮಾಡಲಾಗುವುದು. ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸಲಾಗುವುದು’ ಎಂದು ಕೇಂದ್ರ ಅಬಕಾರಿ ಮತ್ತು ಸೀಮಾ ಸುಂಕ ಮಂಡಳಿಯ ವಿಶೇಷ ಕಾರ್ಯದರ್ಶಿ ಮತ್ತು ಜಿಎಸ್‌ಟಿ ಸದಸ್ಯ ಮಹೇಂದರ್ ಸಿಂಗ್‌ ಭರವಸೆ ನೀಡಿದರು.

‘ತಂತ್ರಜ್ಞರ ಬೆಂಬಲ ಇರುವ ಸಹಾಯವಾಣಿ ತಂಡದ ಅಗತ್ಯವಿದೆ. ದಿನದ 24 ಗಂಟೆಯೂ ಅದು ಕಾರ್ಯನಿರ್ವಹಿಸಬೇಕು. ತೆರಿಗೆ ಪಾವತಿದಾರರಿಗೆ ಎಲ್ಲಾ ರೀತಿಯ ಸಲಹೆ, ಮಾರ್ಗದರ್ಶನಗಳನ್ನೂ ನೀಡುವಂತಿರಬೇಕು’ ಎಂದು ಎಫ್‌ಕೆಸಿಸಿಐನ ಜಿಎಸ್‌ಟಿ ಸಮಿತಿ ಅಧ್ಯಕ್ಷ ಬಿ.ಟಿ. ಮನೋಹರ್ ಸರ್ಕಾರಕ್ಕೆ ಮನವಿ ಮಾಡಿದರು.

ಬರೀ ಭರವಸೆಯಷ್ಟೇ..!: ‘ಜಿಎಸ್‌ಟಿ ಒಂದು ಹೊಸ ವ್ಯವಸ್ಥೆ. ಹೀಗಾಗಿ ಆರಂಭದಲ್ಲಿ ಆಗುವ ಸಣ್ಣ ಪುಟ್ಟ ದೋಷಗಳಿಗೆ ಯಾವುದೇ ಕಾನೂನು ಕ್ರಮ ಜರುಗಿಸುವುದಿಲ್ಲ ಎಂದು ಸರ್ಕಾರ, ತೆರಿಗೆ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಜಿಎಸ್‌ಟಿಆರ್–3ಬಿ ಸಲ್ಲಿಕೆ ವಿಳಂಬ ಆಗಿರುವುದಕ್ಕೆ ದಂಡ ವಿಧಿಸಲಾಗುತ್ತಿದೆ. ಇದು ಸರಿಯಲ್ಲ. ಭಾಷಣ ಮಾಡುತ್ತಾ ಭರವಸೆ ನೀಡುವುದಷ್ಟೇ ಅಲ್ಲ. ಅದು ಕಾರ್ಯರೂಪದಲ್ಲಿಯೂ ಇರಬೇಕು’ ಎಂದು ಡಿಪಿಕೆ ಎಂಜಿನಿಯರ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ಅಧ್ಯಕ್ಷ ಹಾಗು ಎಫ್‌ಕೆಸಿಸಿಐನ ಮಾಜಿ ಅಧ್ಯಕ್ಷ ಸಂಪತ್‌ ರಾಮನ್‌ ತಮ್ಮ ಅಸಮಾಧಾನ ಹೊರಹಾಕಿದರು.

‘ತೆರಿಗೆ ಹಂತಗಳಲ್ಲಿ ಬದಲಾವಣೆ ಆಗಬೇಕಿದೆ. ಶೇ 28 ರಷ್ಟು ಗರಿಷ್ಠ ಮಟ್ಟದ ತೆರಿಗೆ ಹಂತವನ್ನು ಕೈಬಿಡಬೇಕು’ ಎಂದು ಅವರು ಒತ್ತಾಯಿಸಿದರು.

ರಿವರ್ಸ್ ಚಾರ್ಜ್ ಕೈಬಿಡಿ: ಪೂರೈಕೆದಾರನ ಬದಲಿಗೆ ಸರಕು ಮತ್ತು ಸೇವೆಗಳನ್ನು ಸ್ವೀಕರಿಸಿದ ವ್ಯಕ್ತಿ ತೆರಿಗೆ ಪಾವತಿಸುವಂತಹ ರಿವರ್ಸ್‌ ಚಾರ್ಜ್‌ ಕೈಬಿಡುವಂತೆ ಒತ್ತಾಯಿಸಲಾಗಿದೆ. ಕನಿಷ್ಠ ಮೂರು ವರ್ಷದವರೆಗೆ ಇದರಿಂದ ವಿನಾಯ್ತಿ ನೀಡಬೇಕು ಎಂದೂ ಕೆಲವರು ಒತ್ತಾಯಿಸಿದ್ದಾರೆ.

**

ರಿಟರ್ನ್‌ ಸಲ್ಲಿಕೆಯಲ್ಲಿ ಇಳಿಕೆ

ಜಿಎಸ್‌ಟಿಯಲ್ಲಿ ತಿಂಗಳಿನಿಂದ ತಿಂಗಳಿಗೆ ರಿಟರ್ನ್ (ಜಿಎಸ್‌ಟಿಆರ್‌–3ಬಿ) ಸಲ್ಲಿಕೆಯಲ್ಲಿ ಇಳಿಕೆ ಕಂಡುಬರುತ್ತಿದೆ. ಜುಲೈನಲ್ಲಿ 56 ಲಕ್ಷ ರಿಟರ್ನ್ ಸಲ್ಲಿಕೆ ಆಗಿತ್ತು. ಅದು ಆಗಸ್ಟ್‌ಗೆ 52ಕ್ಕೆ, ಸೆಪ್ಟೆಂಬರ್‌ಗೆ 42 ಲಕ್ಷಕ್ಕೆ ಇಳಿಕೆ ಕಂಡಿದೆ. ಅಂತೆಯೇ ತೆರಿಗೆ ಸಂಗ್ರಹದಲ್ಲಿಯೂ ಇಳಿಕೆ ಕಾಣುತ್ತಿದೆ. ಇದೂ ಹೀಗೆಯೇ ಮುಂದುವರಿದರೆ ದೇಶದ ವರಮಾನ ಸಂಗ್ರಹಕ್ಕೆ ಪೆಟ್ಟು ಬೀಳಲಿದೆ. ಹಾಗಾಗಿ ಹೊಸ ವ್ಯವಸ್ಥೆಯಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಸಿಂಗ್ ಮಾಹಿತಿ ನೀಡಿದರು.

ಜಿಎಸ್‌ಟಿಆರ್‌–1 (ಅಂತಿಮ ಲೆಕ್ಕಪತ್ರ) ಸಲ್ಲಿಕೆಗೆ ಇನ್ನೂ ಕೆಲವು ಸಮಸ್ಯೆಗಳಿವೆ. ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ರಚನೆ ಆಗಿರುವ ಬಿಹಾರ ಉಪಮುಖ್ಯಮಂತ್ರಿ ಸುಶೀಲ್‌ ಕುಮಾರ್ ಮೋದಿ ನೇತೃತ್ವದ ಐವರು ಸಚಿವರ ಸಮಿತಿ ಕೆಲವು ಪರಿಹಾರಗಳನ್ನು ಸೂಚಿಸಿದೆ. ಜಿಎಸ್‌ಟಿಎನ್‌ನಲ್ಲಿ ಕಂಡುಬರುತ್ತಿರುವ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸುವ ಎಲ್ಲಾ ಪ್ರಯತ್ನಗಳೂ ನಡೆದಿವೆ.

ರಾಜ್ಯದಲ್ಲೂ ಇಳಿಕೆ: ‘ಜಿಎಸ್‌ಟಿ ಯಶಸ್ವಿಯಾಗಿ ಜಾರಿಗೊಳಿಸುವಲ್ಲಿ ಮುಂಚೂಣಿಯಲ್ಲಿ ಇರುವ ಕರ್ನಾಟಕ ರಾಜ್ಯದಲ್ಲಿಯೂ ರಿಟರ್ನ್ ಸಲ್ಲಿಕೆ ಇಳಿಕೆ ಕಂಡಿದೆ’ ಎಂದು ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಎಂ.ಎಸ್‌ ಶ್ರೀಕರ್‌ ತಿಳಿಸಿದರು. ‘ಜುಲೈನಲ್ಲಿ 4.4 ಲಕ್ಷ, ಆಗಸ್ಟ್‌ನಲ್ಲಿ 3.70 ಲಕ್ಷ ಹಾಗೂ ಸೆಪ್ಟೆಂಬರ್‌ನಲ್ಲಿ 3.4 ಲಕ್ಷ ರಿಟರ್ನ್‌ ಸಲ್ಲಿಕೆಯಾಗಿದೆ. ಇದು ಕಳವಳಕಾರಿ ಅಂಶ. ತಾಂತ್ರಿಕ ಸಮಸ್ಯೆಯಿಂದ ಹೀಗಾಗಿದೆ’ ಎಂದರು.

**

ಬ್ರ್ಯಾಂಡ್‌, ಅನ್‌ಬ್ರ್ಯಾಂಡ್‌ ಬೇಡ

ಆಹಾರ ಪದಾರ್ಥಗಳಲ್ಲಿ ಬ್ರ್ಯಾಂಡ್‌ ಮತ್ತು ಅನ್‌ ಬ್ರ್ಯಾಂಡ್‌ ಎಂಬ ವರ್ಗೀಕರಣ ಸರಿ ಇಲ್ಲ ಎಂದು ಎಫ್‌ಕೆಸಿಸಿಐನ ಆಹಾರ ಧಾನ್ಯ ಮತ್ತು ಬೇಳೆಕಾಳು ಸಮಿತಿಯ ಅಧ್ಯಕ್ಷ ಭರತ್‌ ಕುಮಾರ್ ಷಾ ಮತ್ತು ಎಫ್‌ಕೆಸಿಸಿಐ ಎಪಿಎಂಸಿ ಅಧ್ಯಕ್ಷ ರಮೇಶ್‌ ಚಂದ್ರ ಲಹೋಟಿ ಹೇಳಿದ್ದಾರೆ.

ಬ್ರ್ಯಾಂಡ್‌ ಮತ್ತು ಬ್ರ್ಯಾಂಡೆಡ್‌ ಅಲ್ಲದ ಆಹಾರ ಪದಾರ್ಥಗಳು ಎಂದರೆ ಏನು ಎನ್ನುವ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ಖಾಲಿ ಚೀಲದಲ್ಲಿ ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಿಟ್ಟರೆ ನಾಳೆ ಆಹಾರ ಇಲಾಖೆಯವರು ಗುಣಮಟ್ಟದ ಮಾನ್ಯತೆ ಇಲ್ಲ, ಅಕ್ರಮ ದಾಸ್ತಾನು ಎಂದು ಜಪ್ತಿ ಮಾಡುವ ಸಾಧ್ಯತೆ ಇದೆ. ಹಾಗಂತ ಸಗಟು ಮಾರಾಟಗಾರರು ಚೀಲದ ಮೇಲೆ ಹೆಸರು ಹಾಕಿದರೆ ಅದನ್ನು ಬ್ರ್ಯಾಂಡ್‌ ಎಂದು ಪರಿಗಣಿಸಿ ಶೇ 5 ರಷ್ಟು ತೆರಿಗೆ ವಿಧಿಸಿದರೆ ವರ್ತಕರಿಗೆ ಹೊರೆಯಾಗಲಿದೆ. ಅಂತಹ ಸಂದರ್ಭದಲ್ಲಿ ವ್ಯಾಪಾರಿಗಳು ಸಹಜವಾಗಿಯೇ ಅದನ್ನು ಗ್ರಾಹಕರಿಗೆ ವರ್ಗಾಯಿಸುತ್ತಾರೆ.

ಸಣ್ಣ ವರ್ತಕರಿಗೆ ತಂತ್ರಜ್ಞಾನದ ಜ್ಞಾನ ಇಲ್ಲ. ಖರೀದಿ ಮಾರಾಟದ ಲೆಕ್ಕಪತ್ರ ಇಡಲು ಕಂಪ್ಯೂಟರ್ ಬಳಕೆ ಗೊತ್ತಿರುವವರನ್ನು ನೇಮಿಸಿಕೊಳ್ಳಲು ಹೆಚ್ಚುವರಿ ಹೊರೆಯಾಗುತ್ತದೆ ಎಂದು ತಿಳಿಸಿದರು.

Post Comments (+)