ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರತಹಳ್ಳಿ: 24 ಮರಗಳ ಕೊಂಬೆ ಕಡಿದರು!

Last Updated 27 ಅಕ್ಟೋಬರ್ 2017, 20:01 IST
ಅಕ್ಷರ ಗಾತ್ರ

ಬೆಂಗಳೂರು: ಜಾಹೀರಾತು ಫಲಕಕ್ಕೆ ಅಡ್ಡಿ ಆಗುತ್ತಿದೆ ಎಂಬ ಕಾರಣಕ್ಕೆ ದುಷ್ಕರ್ಮಿಗಳು ಮಾರತಹಳ್ಳಿ ಹೊರವರ್ತುಲ ರಸ್ತೆಯ ಕೆಳಸೇತುವೆ ಬಳಿ 24 ಮರಗಳ ಕೊಂಬೆಗಳನ್ನು ಕತ್ತರಿಸಿದ್ದಾರೆ. ಕೆಲವು ಮರಗಳ ಬುಡವನ್ನೇ ಗರಗಸದಿಂದ ಕತ್ತರಿಸಲಾಗಿದೆ.

ಈ ಬಗ್ಗೆ ಸ್ಥಳೀಯರಿಂದ ದೂರು ಬಂದ ಬಳಿಕ, ಬಿಬಿಎಂಪಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಾಂತ ಕುಮಾರ್‌ ಅವರು ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿದರು.  ಮರಗಳ ಕೊಂಬೆಗಳನ್ನು ಕಡಿದ ದುಷ್ಕರ್ಮಿಗಳ ವಿರುದ್ಧ ಮಾರತಹಳ್ಳಿ ಪೊಲೀಸ್‌ ಠಾಣೆಗೆ ಅವರು ದೂರು ನೀಡಿದ್ದಾರೆ.

‘ದುಷ್ಕರ್ಮಿಗಳು 15 ತಬೂಬಿಯ ಹಾಗೂ 9 ಹೂ ಅರಸಿ ಜಾತಿಯ ಮರಗಳ ಕೊಂಬೆಗಳನ್ನು ಬುಧವಾರ ರಾತ್ರಿ ಕತ್ತರಿಸಿದ್ದಾರೆ. ಜಾಹೀರಾತು ಫಲಕಕ್ಕೆ ಅಡ್ಡಿಯಾಗಿದ್ದ ಕಾರಣಕ್ಕೆ ಈ ರೀತಿ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ. ಸ್ಥಳದಲ್ಲಿರುವ ಯಾವುದಾ
ದರೂ ಸಿ.ಸಿ.ಟಿ.ವಿ. ಕ್ಯಾಮೆರಾಗಳಲ್ಲಿ ದೃಶ್ಯ ಸೆರೆಯಾಗಿದ್ದರೆ, ಅದನ್ನು ಒದಗಿಸುವಂತೆ ಕೋರಿದ್ದೇನೆ’ ಎಂದು ಶಾಂತ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಾರು ಈ ರೀತಿ ಮಾಡಿದ್ದಾರೆ ಎಂಬುದು ಖಚಿತವಾಗಿಲ್ಲ. ಇಲ್ಲಿಯೇ ಸಮೀಪದಲ್ಲಿ  ಜಾಹೀರಾತು ಫಲಕವೊಂದಿದೆ. ಇದರಲ್ಲಿ ಯಾವುದೇ ದೂರವಾಣಿ ಸಂಖ್ಯೆಯನ್ನೂ ನಮೂದಿಸಿಲ್ಲ. ಬಿಬಿಎಂ‍ಪಿಯಿಂದ ಪರವಾನಗಿ ಪಡೆದ ಸಂಖ್ಯೆಯನ್ನೂ ಉಲ್ಲೇಖಿಸಿಲ್ಲ. ಹಾಗಾಗಿ ಈ ಜಾಹೀರಾತನ್ನು ಯಾರು ಅಳವಡಿಸಿದ್ದಾರೆ ಎಂಬುದು ತಿಳಿದಿಲ್ಲ. ಬಿಬಿಎಂಪಿ ಕಂದಾಯ ವಿಭಾಗಕ್ಕೂ ಪತ್ರ ಬರೆದು ಆರೋಪಿಗಳ ಪತ್ತೆಗೆ ಸಹಕರಿಸುವಂತೆ ಕೋರುತ್ತೇನೆ’ ಎಂದು ತಿಳಿಸಿದರು.

ಮೂರನೇ ಬಾರಿ ಕೃತ್ಯ: ಜಾಹೀರಾತಿಗೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಈ ವರ್ಷದಲ್ಲಿ ಮಾರತಹಳ್ಳಿ ವರ್ತುಲ ರಸ್ತೆಯ ಬಳಿಯ ಮರಗಳಿಗೆ ಹಾನಿ ಉಂಟು ಮಾಡಿದ ಮೂರನೇ ಪ್ರಕರಣವಿದು. ಈ ಹಿಂದೆ ಇದೇ ಪ್ರದೇಶದಲ್ಲಿ 17 ಮರಗಳ ಬುಡಕ್ಕೆ ಆ್ಯಸಿಡ್‌ ಸುರಿಯಲಾಗಿತ್ತು. ಈ ಪೈಕಿ 14 ಮರಗಳು ಸತ್ತಿವೆ. ಚಿಕಿತ್ಸೆ ಬಳಿಕ 3 ಮರಗಳು ಬದುಕುಳಿದಿವೆ. ಆನಂತರ ಇದೇ ಕಾರಣಕ್ಕೆ ನಾಲ್ಕು ಮರಗಳ ಕೊಂಬೆಗಳನ್ನು ಕತ್ತರಿಸಲಾಗಿತ್ತು.

ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಲೋಕಾಯುಕ್ತರು ಬಿಬಿಎಂಪಿಯ ಕಂದಾಯ ಹಾಗೂ ಅರಣ್ಯ ವಿಭಾಗದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಯಾರೇ ಇಂತಹ ಕೃತ್ಯ ನಡೆಸಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.

‘ಕೊಂಬೆ ಕಳೆದುಕೊಂಡ ಮರಗಳಿಗೆ ಚಿಕಿತ್ಸೆ’

ಇಲ್ಲಿ ಮರಗಳ ಕೊಂಬೆಗಳನ್ನು ಕಡಿದ ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಸಸ್ಯ ವೈದ್ಯ ವಿಜಯ್‌ ನಿಶಾಂತ್‌ ಅವರು ಆ ಮರಗಳಿಗೆ ಚಿಕಿತ್ಸೆ ನೀಡಿದರು.

’ಮರಗಳಿಗೆ ಸೋಂಕು ತಗಲಬಾರದು ಎಂಬ ಕಾರಣಕ್ಕೆ, ಅವುಗಳಿಗೆ ಶಿಲೀಂಧ್ರನಾಶಕ ಹಚ್ಚಿದ್ದೇನೆ. ಹೆಚ್ಚಿನ ಗಿಡಗಳು ಚಿಕಿತ್ಸೆಗೆ ಸ್ಪಂದಿಸಲಿವೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಇಂತಹ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿವೆ. ಇಂತಹ ಕೃತ್ಯ ತಡೆಯುವ ಬಗ್ಗೆ ಬಿಬಿಎಂಪಿಯ ಜಾಹೀರಾತು ವಿಭಾಗದವರು ಹೆಚ್ಚಿನ ಆಸಕ್ತಿ ವಹಿಸಬೇಕು. ತಪ್ಪೆಸಗುವ ಜಾಹಿರಾತು ಕಂಪೆನಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT