ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕ್ಲಿಂಗ್‌: ರಾಜ್ಯಕ್ಕೆ ಪ್ರಶಸ್ತಿ ಉಳಿಸಿಕೊಳ್ಳುವ ವಿಶ್ವಾಸ

Last Updated 27 ಅಕ್ಟೋಬರ್ 2017, 20:01 IST
ಅಕ್ಷರ ಗಾತ್ರ

ಜಮಖಂಡಿ: ಸತತ ಮೂರು ಬಾರಿ ಪ್ರಶಸ್ತಿ ಜಯಿಸಿರುವ ಆತಿಥೇಯ ಕರ್ನಾಟಕ ತಂಡ ಶನಿವಾರ ಇಲ್ಲಿ ಆರಂಭವಾಗಲಿರುವ 22ನೇ ರಾಷ್ಟ್ರೀಯ ರಸ್ತೆ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ.

2014ರಲ್ಲಿ ಜಮಖಂಡಿಯಲ್ಲಿ ನಡೆದ 19ನೇ ರಾಷ್ಟ್ರೀಯ ರಸ್ತೆ ಸೈಕ್ಲಿಂಗ್‌ ಕೂಟದಲ್ಲಿ ಚಾಂಪಿಯನ್‌ ಆಗುವ ಮೂಲಕ ಗೆಲುವಿನ ಅಭಿಯಾನ ಆರಂಭಿಸಿದ್ದ ರಾಜ್ಯ ತಂಡ ಆ ಬಳಿಕ ಒಮ್ಮೆಯೂ ಪ್ರಶಸ್ತಿ ಬಿಟ್ಟುಕೊಟ್ಟಿಲ್ಲ. 2015ರಲ್ಲಿ ಕೇರಳ ಮತ್ತು ಕಳೆದ ವರ್ಷ ಉತ್ತರಪ್ರದೇಶದಲ್ಲಿ  ಪ್ರಶಸ್ತಿ ಜಯಿಸಿ ಹ್ಯಾಟ್ರಿಕ್ ಸಾಧನೆ ಮಾಡಿತ್ತು.

ಈ ಬಾರಿಯೂ ರಾಜ್ಯದ ಸ್ಪರ್ಧಿಗಳು ಹಿಂದಿನ ಸಾಧನೆ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.

ಇದಕ್ಕಾಗಿ ಒಂದು ತಿಂಗಳಿಂದ ರಾಜ್ಯದ ಸೈಕ್ಲಿಸ್ಟ್‌ಗಳು ಇಲ್ಲಿ ತರಬೇತಿ ನಡೆಸುತ್ತಿದ್ದಾರೆ. ರಾಜ್ಯ ತಂಡದಲ್ಲಿ  27 ಬಾಲಕರು ಹಾಗೂ 19 ಬಾಲಕಿಯರು ಇದ್ದಾರೆ. ಬಾಲಕರ ವಿಭಾಗದಲ್ಲಿ 13 ಹಾಗೂ ಬಾಲಕಿಯರ ವಿಭಾಗದಲ್ಲಿ 10 ಸ್ಪರ್ಧೆಗಳು ನಡೆಯಲಿವೆ.

ಶನಿವಾರ ಬೆಳಿಗ್ಗೆ 7 ಗಂಟೆಗೆ ಇಲ್ಲಿನ ವಿಜಯಪುರ ರಸ್ತೆಯ ಸರ್ಕಾರಿ ತೋಟದ ಶಾಲೆಯ ಹತ್ತಿರ ಸ್ಪರ್ಧೆಗಳು ಆರಂಭವಾಗಲಿವೆ. ಇದೇ 28 ಮತ್ತು 29ರಂದು ಜಮಖಂಡಿ, ಕವಟಗಿ ಕ್ರಾಸ್‌ ವರೆಗಿನ 15 ಕಿ.ಮೀ ರಸ್ತೆಯಲ್ಲಿ ಸ್ಪರ್ಧೆಗಳು ಜರುಗಲಿವೆ. 30 ರಂದು ಜಮಖಂಡಿ, ಕವಟಗಿ ಕ್ರಾಸ್‌ ಹಾಗೂ ಜಮಖಂಡಿ, ಮುಧೋಳ, ಮಹಾಲಿಂಗಪುರ, ರಬಕವಿ ರಸ್ತೆಯಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಸ್ಥಳೀಯ ಕನ್ನಡ ಸಂಘದ ಸುವರ್ಣ ಮಹೋತ್ಸವ ಕೂಡ ಇರುವುದರಿಂದ ಇಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ನಗರದ ಎ.ಜಿ. ದೇಸಾಯಿ ವೃತ್ತ, ಜಿಎಲ್‌ಬಿಸಿ, ಅರಣ್ಯ ಇಲಾಖೆ ಕಚೇರಿ, ಸಜ್ಜಿ ಹನುಮಾನ ದೇವಸ್ಥಾನ, ಎಸ್‌ಆರ್‌ಎ ಕ್ಲಬ್‌ ಮಾರ್ಗವಾಗಿ ಕ್ರೈಟೇರಿಯಂ ಸ್ಪರ್ಧೆಗಳು 31ರಂದು ನಡೆಯಲಿವೆ. ಚತ್ತೀಸಗಡ, ಬಿಎಸ್‌ಎನ್‌ಎಲ್‌, ಅಸ್ಸಾಂ, ಎಸ್‌ಎಸ್‌ಸಿಬಿ, ಪಂಜಾಬ್, ಆರ್‌ಎಸ್‌ಪಿಬಿ, ಬಿಹಾರ, ಚಂಡೀಗಡ, ಹರಿಯಾಣ, ರಾಜಸ್ಥಾನ, ದೆಹಲಿ, ಜಾರ್ಖಂಡ್, ಮಧ್ಯಪ್ರದೇಶ, ಮಣಿ ಪುರ, ಗುಜರಾತ್‌, ಓಡಿಶಾ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ, ಕೇರಳ, ತೆಲಂಗಾಣ, ಪಶ್ಚಿಮ ಬಂಗಾಲ, ಉತ್ತರ ಪ್ರದೇಶ, ಪುದುಚೇರಿ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಉತ್ತರಾಖಂಡ ತಂಡಗಳು ಭಾಗವಹಿಸಲಿವೆ.

ಒಟ್ಟು 27 ರಾಜ್ಯಗಳ ಸೈಕ್ಲಿಸ್ಟ್‌ಗಳು ತಮ್ಮ ಸಾಮರ್ಥ್ಯ ತೋರಿಸಲಿದ್ದಾರೆ.  442 ಪುರುಷರು, 152 ಮಹಿಳೆಯರು, 79 ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಕನ್ನಡ ಸಂಘದ ಸುವರ್ಣ ಮಹೋತ್ಸವ ಅಂಗವಾಗಿ 31ರಂದು ಇಲ್ಲಿನ ಐತಿಹಾಸಿಕ ಪೋಲೊ ಮೈದಾನದಲ್ಲಿ ಆಹ್ವಾನಿತ ಪುರುಷರ ಮತ್ತು ಮಹಿಳೆಯರ ಟ್ರ್ಯಾಕ್‌ ಸ್ಪರ್ಧೆಗಳು ನಡೆಯಲಿವೆ.

**

ಇವರ ಮೇಲೆ ಪದಕದ ನಿರೀಕ್ಷೆ

ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಕರ್ನಾಟಕದ ನಾಲ್ವರು ಸೈಕ್ಲಿಸ್ಟ್‌ಗಳು ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದು ಅವರ ಮೇಲೆ ಹೆಚ್ಚು ನಿರೀಕ್ಷೆಯಿದೆ.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಏಷ್ಯನ್‌ ಟ್ರ್ಯಾಕ್‌ ಸೈಕ್ಲಿಂಗ್‌ನಲ್ಲಿ ರಾಜು ಬಾಟಿ ಪದಕ ಜಯಿಸಿದ್ದರು. ಮೇಘಾ ಗೂಗಾಡ, ಮಾಳಪ್ಪ ಮೂರ್ತೆನ್ನನವರ ಮತ್ತು ನವೀನ್‌ ಜಾನ್‌ ಕೂಡ ರಾಷ್ಟ್ರೀಯ ತಂಡದಲ್ಲಿ ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT