ಮಹಿಳೆಯ ಮೈ ಮುಟ್ಟಿದ ಯುವಕರ ವಿರುದ್ಧ ಪ್ರಕರಣ

ಬುಧವಾರ, ಜೂನ್ 19, 2019
22 °C

ಮಹಿಳೆಯ ಮೈ ಮುಟ್ಟಿದ ಯುವಕರ ವಿರುದ್ಧ ಪ್ರಕರಣ

Published:
Updated:

ಬೆಂಗಳೂರು: ಸಹಕಾರನಗರ ರೈಲ್ವೆ ಗೇಟ್ ಸಮೀಪದ ಹೋಟೆಲ್‌ವೊಂದರಲ್ಲಿ ರಾಜಸ್ಥಾನದ ಮಹಿಳೆ ಜತೆ ಅನುಚಿತವಾಗಿ ವರ್ತಿಸಿದ ಇಬ್ಬರು ಯುವಕರ ವಿರುದ್ಧ ಕೊಡಿಗೇಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ದುರ್ವರ್ತನೆ ತೋರಿದ ಯುವಕರಿಗೆ ತಾವೇ ಬೈಕ್‌ ಕೀ ಕೊಟ್ಟು ಸ್ಥಳದಿಂದ ಕಳುಹಿಸಿದ್ದ ಪೊಲೀಸರು, ಈಗ ಆರೋಪಿಗಳನ್ನು ಹುಡುಕಾಡುವ ನಾಟಕವಾಡುತ್ತಿದ್ದಾರೆ’ ಎಂದು ದೂರುದಾರ ಭರತ್ ಆರೋಪಿಸಿದ್ದಾರೆ.

‘ಮಹಿಳೆಯು ಹಲವು ವರ್ಷಗಳಿಂದ ಸಹಕಾರನಗರದಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ಗುರುವಾರ ಸಂಜೆ 4.30ರ ಸುಮಾರಿಗೆ ನಾನು ಆ ಹೋಟೆಲ್ ಬಳಿ ಇದ್ದೆ. ಈ ವೇಳೆ ಅಲ್ಲಿಗೆ ಬಂದ ಇಬ್ಬರು ಮಹಿಳೆ ಬಳಿ ಸಿಗರೇಟ್ ಕೇಳಿದರು. ಅವರು ಇಲ್ಲ ಎಂದಾಗ ಪಕ್ಕದ ಅಂಗಡಿಯಿಂದ ಸಿಗರೇಟ್ ತೆಗೆದುಕೊಂಡು ಪುನಃ ಹೋಟೆಲ್‌ಗೆ ಬಂದರು’ ಎಂದು ಭರತ್ ದೂರಿನಲ್ಲಿ ವಿವರಿಸಿದ್ದಾರೆ.

‘ಸ್ವಲ್ಪ ಸಮಯದ ನಂತರ ಮಹಿಳೆಯ ಮೈ–ಕೈ ಮುಟ್ಟಿ ಮಾತನಾಡಿಸಲು ಆರಂಭಿಸಿದರು. ಇದರಿಂದ ಕೋಪ ಬಂದು ಅವರ ವರ್ತನೆಯನ್ನು ಪ್ರಶ್ನೆ ಮಾಡಿದೆ. ಆಗ ನನ್ನ ಮೇಲೆ ಹಲ್ಲೆ ನಡೆಸಿದ ಅವರು, ಹೋಟೆಲ್‌ನಿಂದ ಹೊರ ಹೋಗಲು ಯತ್ನಿಸಿದರು. ಈ ವೇಳೆ ನೆರವಿಗೆ ಬಂದ ಸ್ಥಳೀಯರು, ಅವರ ಬೈಕ್‌ ಕೀ ತೆಗೆದುಕೊಂಡು ಪೊಲೀಸರಿಗೆ ವಿಷಯ ತಿಳಿಸಿದರು.’

‘ಸ್ವಲ್ಪ ಸಮಯದಲ್ಲೇ ಸ್ಥಳಕ್ಕೆ ಬಂದ ಎಎಸ್‌ಐವೊಬ್ಬರು, ‘ಅವರಿಬ್ಬರನ್ನು ಎದುರು ಹಾಕಿಕೊಳ್ಳಬೇಡಿ. ಸುಮ್ಮನೆ ಹೋಗಿ’ ಎಂದು ನಮಗೇ ಬುದ್ಧಿ ಹೇಳಿದರು. ಅಲ್ಲದೆ, ನಮ್ಮ ಬಳಿ ಇದ್ದ ಕೀಯನ್ನು ಅವರಿಗೆ ಕೊಟ್ಟು ಸ್ಥಳದಿಂದ ಹೋಗುವಂತೆ ಹೇಳಿದರು. ಈ ಬಗ್ಗೆ ದೂರು ಕೊಡಲು ಗುರುವಾರ ರಾತ್ರಿ ಠಾಣೆಗೆ ತೆರಳಿದರೆ, ಪ್ರಕರಣ ದಾಖಲಿಸಿಕೊಳ್ಳದೆ ಸತಾಯಿಸಿದರು’ ಎಂದು ಭರತ್ ಆರೋಪಿಸಿದ್ದಾರೆ.

ಆರೋ‍ಪ ತಳ್ಳಿ ಹಾಕಿರುವ ಕೊಡಿಗೇಹಳ್ಳಿ ಪೊಲೀಸರು, ‘ನಾವು ಆರೋಪಿಗಳನ್ನು ರಕ್ಷಣೆ ಮಾಡಿಲ್ಲ. ಸಂತ್ರಸ್ತೆಯ ಹೇಳಿಕೆ ಪಡೆದು ಶುಕ್ರವಾರ ಲೈಂಗಿಕ ಕಿರುಕುಳ (ಐಪಿಸಿ 354) ಆರೋಪದಡಿ ಎಫ್‌ಐಆರ್ ಮಾಡಿದ್ದೇವೆ. ಬೈಕ್‌ನ ನೋಂದಣಿ ಸಂಖ್ಯೆ ಆಧರಿಸಿ ಅವರ ಶೋಧ ಕಾರ್ಯದಲ್ಲಿ ತೊಡಗಿದ್ದೇವೆ’ ಎಂದು ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry