ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಮೂರ್ತಿ ನೇಮಕ ನಿಯಮ ಯಾಕೆ ಅಂತಿಮವಾಗಿಲ್ಲ

Last Updated 27 ಅಕ್ಟೋಬರ್ 2017, 20:10 IST
ಅಕ್ಷರ ಗಾತ್ರ

ನವದೆಹಲಿ: ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ನೇಮಕದ ನಿಯಮಾವಳಿಗಳನ್ನು ಇನ್ನೂ ಯಾಕೆ ಅಂತಿಮಗೊಳಿಸಿಲ್ಲ ಎಂದು ಕೇಂದ್ರವನ್ನು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ. ಇದಕ್ಕೆ ಗಡುವು ನಿಗದಿ ಮಾಡಲು ಸಾಧ್ಯವಿಲ್ಲ. ಆದರೆ ಅನಿರ್ದಿಷ್ಟಾವಧಿಗೆ ಅದನ್ನು ಮುಂದೂಡಿಕೊಂಡು ಹೋಗುವುದಕ್ಕೂ ಸಾಧ್ಯವಿಲ್ಲ. ನಿಯಮಗಳನ್ನು ರೂಪಿಸುವಂತೆ 2015ರ ಡಿಸೆಂಬರ್‌ 16ರಂದು ನಿರ್ದೇಶನಗಳನ್ನು ನೀಡಲಾಗಿತ್ತು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

‘ನಿಯಮಗಳನ್ನು ಅಂತಿಮಗೊಳಿಸುವಲ್ಲಿ ಇನ್ನಷ್ಟು ವಿಳಂಬ ಆಗಬಾರದು ಎಂಬ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿಯಿಂದ ನಾವು ಗಣನೆಗೆ ತೆಗೆದುಕೊಳ್ಳಲೇಬೇಕು. ಒಂದು ವರ್ಷ ಹತ್ತು ತಿಂಗಳು ಈಗಾಗಲೇ ಕಳೆದು ಹೋಗಿದೆ’ ಎಂದು ನ್ಯಾಯಮೂರ್ತಿಗಳಾದ ಆದರ್ಶ ಕುಮಾರ್‌ ಗೋಯಲ್‌ ಮತ್ತು ಯು.ಯು.ಲಲಿತ್‌ ಅವರನ್ನು ಒಳಗೊಂಡ ಪೀಠ ಹೇಳಿದೆ.

ಹಲವು ಹೈಕೋರ್ಟ್‌ಗಳಲ್ಲಿ ಪ್ರಭಾರ ನ್ಯಾಯಮೂರ್ತಿಗಳಿದ್ದಾರೆ. ನಿಯಮ ಪ್ರಕಾರ ಒಂದು ತಿಂಗಳಿಗಿಂತ ಹೆಚ್ಚು ಅವಧಿಗೆ ಪ್ರಭಾರ ನ್ಯಾಯಮೂರ್ತಿಗಳನ್ನು ಉಳಿಸಿಕೊಳ್ಳುವಂತಿಲ್ಲ. ಇದು ಕಳವಳದ ವಿಚಾರ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರಿಗೆ ಈ ಸಂಬಂಧ ಪೀಠವು ನೋಟಿಸ್‌ ನೀಡಿದೆ. ವಕೀಲ ಆರ್‌.ಪಿ. ಲೂಥ್ರಾ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯಲ್ಲಿ ನೆರವಾಗಲು ನ್ಯಾಯಾಲಯದ ಸಹಾಯಕರಾಗಿ (ಆಮಿಕಸ್‌ ಕ್ಯೂರಿ) ಹಿರಿಯ ವಕೀಲ ಕೆ.ವಿ. ವಿಶ್ವನಾಥನ್‌ ಅವರನ್ನು ನೇಮಕ ಮಾಡಲಾಗಿದೆ.

ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಕಾಯ್ದೆಯನ್ನು ರದ್ದುಪಡಿಸಿದ್ದ ಸುಪ್ರೀಂ ಕೋರ್ಟ್‌, ನ್ಯಾಯಮೂರ್ತಿಗಳ ನೇಮಕಕ್ಕೆ ನಿಯಮಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಕೇಂದ್ರ ಸರ್ಕಾರ ನಿಯಮಗಳನ್ನು ರೂಪಿಸದಿದ್ದರೂ ನ್ಯಾಯಮೂರ್ತಿಗಳ ನೇಮಕ ಆಗಿರುವುದನ್ನು ಪ್ರಶ್ನಿಸಿ ಲೂಥ್ರಾ ಅವರು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಲೂಥ್ರಾ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಗೆ ಅಂತಹ ಮಹತ್ವ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದರೂ ನಿಯಮಗಳ ರಚನೆ ವಿಳಂಬಗೊಂಡಿರುವ ಬಗ್ಗೆ ನವೆಂಬರ್‌ 14ರಂದು ವಿಚಾರಣೆ ನಡೆಸಲಾಗುವುದು ಎಂದು ಹೇಳಿದೆ.

**

‘ಶಬರಿಮಲೆ: ಪೀಠದಲ್ಲಿ ಶೇ 50 ಮಹಿಳೆಯರಿರಲಿ’

‘ಶಬರಿಮಲೆ ದೇವಾಲಯದಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡುವ ವ್ಯಾಜ್ಯದ ಇತ್ಯರ್ಥಕ್ಕೆ ಶೇ 50ರಷ್ಟು ಮಹಿಳೆಯರು ಇರುವ ಸಾಂವಿಧಾನಿಕ ಪೀಠ ಅಥವಾ ವಿಶೇಷ ನ್ಯಾಯಪೀಠವನ್ನು ರಚಿಸಬೇಕು’ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಹೊಸ ಅರ್ಜಿ ಸಲ್ಲಿಸಲಾಗಿದೆ.

ಶಬರಿಮಲೆ ದೇವಾಲಯದಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದ ಎಸ್.ಪರಮೇಶ್ವರನ್ ನಂಬೂದರಿ ಅವರೇ ಈ ಅರ್ಜಿಯನ್ನೂ ಸಲ್ಲಿಸಿದ್ದಾರೆ. ‘ಮಹಿಳೆಯರು ಮಾತ್ರವೇ ವ್ಯಾಜ್ಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬಲ್ಲರು’ ಎಂದು ಅವರು ಅರ್ಜಿಯಲ್ಲಿ ಹೇಳಿದ್ದಾರೆ.

**

ನ್ಯಾಯಮೂರ್ತಿಗಳ ನೇಮಕ ನಿಯಮಗಳು ಆದಷ್ಟು ಬೇಗ ಜಾರಿಗೆ ಬರಬೇಕು. ಆ ಮೂಲಕ ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕ ಅನಗತ್ಯವಾಗಿ ವಿಳಂಬವಾಗುವುದು ತಪ್ಪಬೇಕು.

–ಸುಪ್ರೀಂ ಕೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT