ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಶಾಲೆಗಳಿಗೆ ಕಾಯಕಲ್ಪ

Last Updated 27 ಅಕ್ಟೋಬರ್ 2017, 20:22 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ಶಾಲೆಗಳ ಹಾವಳಿ ಮತ್ತು ಸರ್ಕಾರದ ಅಸಡ್ಡೆಯಿಂದ ಗ್ರಾಮೀಣ ಭಾಗದಲ್ಲಿ ಬಾಗಿಲು ಮುಚ್ಚುತ್ತಿರುವ ಸರ್ಕಾರಿ ಶಾಲೆಗಳನ್ನು ಶತಾಯಗತಾಯ ಉಳಿಸುವ ಪ್ರಯತ್ನದಲ್ಲಿ ‘ಒಸಾಟ್‌’ ಸಂಸ್ಥೆ ತೊಡಗಿಸಿಕೊಂಡಿದೆ. ಶಿಥಿಲಾವಸ್ಥೆಯ ಕಟ್ಟಡಗಳಲ್ಲಿ ನಡೆಯುತ್ತಿರುವ ಶಾಲೆಗಳನ್ನು ಆಯ್ಕೆ ಮಾಡಿಕೊಂಡು, ಸುಸಜ್ಜಿತ ಮೂಲಸೌಕರ್ಯ ಕಲ್ಪಿಸುವ ಕಾರ್ಯ ಸದ್ದಿಲ್ಲದೆ ಮಾಡುತ್ತಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿರುವ ಅನಿವಾಸಿ ಭಾರತೀಯ ಸಮಾನ ಮನಸ್ಕರು ಸೇರಿ ಹುಟ್ಟು ಹಾಕಿರುವ ಲಾಭರಹಿತ ಸ್ವಯಂಸೇವಾ ಸಂಸ್ಥೆಯೇ ಒಸಾಟ್‌ (OSAAT-One Time At A School). ದೇಶದಲ್ಲಿ ಈವರೆಗೆ 20 ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡಿದೆ. ದಾನಿಗಳು, ಕಾರ್ಪೊರೇಟ್‌ ಕಂಪೆನಿಗಳಿಂದ ₹3.50 ಕೋಟಿ ದೇಣಿಗೆ ಸಂಗ್ರಹಿಸಿ, ಸರ್ಕಾರಿ ಶಾಲೆಗಳಿಗೆ ಅತ್ಯಾಧುನಿಕ ಮೂಲಸೌಕರ್ಯ ಕಲ್ಪಿಸಿದೆ.

ಬಿರುಕು ಬಿಟ್ಟ ಗೋಡೆಗಳು, ತಲೆಯ ಮೇಲೆ ಚಾವಣಿ ಕುಸಿದು ಬೀಳುವ ಆತಂಕದಲ್ಲೇ ಕುಳಿತು ಪಾಠ ಕೇಳಬೇಕಾದ ಸ್ಥಿತಿ, ಕೆಲವು ಕಡೆ ಕೊಠಡಿಗಳೂ ಇಲ್ಲದೆ ಮಳೆ, ಗಾಳಿ, ಬಿಸಿಲಿಗೆ ಜಗ್ಗದೆ ಮರದ ಕೆಳಗೆ ಕುಳಿತು ಪಾಠ ಕೇಳುವ ವಿದ್ಯಾರ್ಥಿಗಳು, ಕೊರತೆಗಳು ನೂರೆಂಟಿದ್ದರೂ ಲೆಕ್ಕಿಸದೆ ಪಾಠ ಮಾಡಬೇಕಾದ ಶಿಕ್ಷಕರು....ಇಂಥ ಪರಿಸ್ಥಿತಿಯಿಂದಾಗಿ ನಲುಗುತ್ತಿದ್ದ ಶಾಲೆಗಳಿಗೆ ಒಸಾಟ್‌ ಹೊಸ ರೂಪ ನೀಡುತ್ತಿದೆ.

‘ಒಸಾಟ್‌ ಟ್ರಸ್ಟ್‌ನ ಲಾಭರಹಿತ ಸೇವೆ ಮತ್ತು ಕಾರ್ಯದಕ್ಷತೆ ಮನಗಂಡು ಕಾರ್ಪೊರೇಟ್‌ ಕಂಪೆನಿಗಳು ಸಾಮಾಜಿಕ ಹೊಣೆಗಾರಿಕೆಯ ನಿಧಿಯನ್ನು (ಸಿಎಸ್‌ಆರ್‌) ಸರ್ಕಾರಿ ಶಾಲೆಯ ಸಬಲೀಕರಣಕ್ಕೆ ನಮ್ಮ ಟ್ರಸ್ಟ್‌ ಮೂಲಕ ವಿನಿಯೋಗಿಸಲು ಆಸಕ್ತಿ ತೋರುತ್ತಿವೆ’ ಎನ್ನುತ್ತಾರೆ ವ್ಯವಸ್ಥಾಪಕ ಟ್ರಸ್ಟಿ ವಾದಿರಾಜ್‌ ಭಟ್‌.

‘ಇತ್ತೀಚೆಗೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಗಿಯಾನಿ ಗ್ರಾಮದ ಗಾಯತ್ರಿ ದೇವಿ ಪ್ರೌಢಶಾಲೆಯಲ್ಲಿ 6 ಬೋಧನಾ ಕೊಠಡಿಗಳನ್ನು ನಿರ್ಮಿಸಿಕೊಡಲಾಗಿದೆ. ಹುಣಸೂರು ತಾಲ್ಲೂಕಿನ ಗುರುಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಿರ್ಮಿಸಿರುವ ಸುಸಜ್ಜಿತ ಮೂರು ಬೋಧನಾ ಕೊಠಡಿಗಳನ್ನು ಶುಕ್ರವಾರ ಉದ್ಘಾಟಿಸಲಾಗಿದೆ’ ಎಂದು ತಿಳಿಸಿದರು.

‘ತಮಿಳುನಾಡು, ಮಹಾರಾಷ್ಟ್ರ ಹಾಗೂ ಉತ್ತರಪ್ರದೇಶದಲ್ಲಿ ತಲಾ ಒಂದೊಂದು ಶಾಲೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ನಮ್ಮ ರಾಜ್ಯದಲ್ಲಿ 17 ಶಾಲೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ಬೋಧನಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಆಡಿಯೊ ಮತ್ತು ವಿಡಿಯೊ ಮಾಧ್ಯಮದಲ್ಲೂ ಬೋಧನೆಗೆ ಅವಕಾಶ ಇರುವಂತೆ ಮೂಲಸೌಕರ್ಯ ಅಭಿವೃದ್ಧಿಪಡಿಸಿದ್ದೇವೆ’ ಎನ್ನುತ್ತಾರೆ ಅವರು.

ಸಂಪರ್ಕ: Website www.osaat.org

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT