ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿ, ಸಿಎಸ್‌ ನೇಮಕಕ್ಕೆ ಲಾಬಿ

Last Updated 27 ಅಕ್ಟೋಬರ್ 2017, 20:26 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಪೊಲೀಸ್‌ ಮಹಾನಿರ್ದೇಶಕ ಹಾಗೂ ನಿರೀಕ್ಷಕ (ಡಿಜಿ ಮತ್ತು ಐಜಿ) ಹುದ್ದೆಗೆ ಉನ್ನತಾಧಿಕಾರ ಸಮಿತಿ ಐವರು ಹಿರಿಯ ಐಪಿಎಸ್‌ ಅಧಿಕಾರಿಗಳ ಹೆಸರನ್ನು ಶಿಫಾರಸು ಮಾಡಿದೆ.

ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಡಿಜಿಪಿ ನೀಲಮಣಿ ಎನ್. ರಾಜು, ಸಿಐಡಿ ಡಿಜಿಪಿ ಕಿಶೋರ್‌ ಚಂದ್ರ, ಭ್ರಷ್ಟಚಾರ ನಿಗ್ರಹ ದಳದ ಮುಖ್ಯಸ್ಥ ಎಂ.ಎನ್‌. ರೆಡ್ಡಿ, ತರಬೇತಿ ಮತ್ತು ನೇಮಕಾತಿ ವಿಭಾಗದ ಡಿಜಿಪಿ ಪ್ರೇಂ ಶಂಕರ್‌ ಮೀನಾ, ಗುಪ್ತಚರ ವಿಭಾಗ ಡಿಜಿಪಿ ಎ.ಎಂ. ಪ್ರಸಾದ್‌ ಹೆಸರು ಮುಖ್ಯಮಂತ್ರಿಗೆ ಕಳುಹಿಸಿರುವ ಪಟ್ಟಿಯಲ್ಲಿವೆ.

‘ನಾನು ಮತ್ತು ಗೃಹ ಸಚಿವ ರಾಮಲಿಂಗಾರೆಡ್ಡಿ ಸೇರಿ ಹೆಸರುಗಳನ್ನು ಶಿಫಾರಸು ಮಾಡಿದ್ದೇವೆ. ಮುಖ್ಯಮಂತ್ರಿ ತಮ್ಮ ವಿವೇಚನಾ ಅಧಿಕಾರ ಬಳಸಿ ಈ ಅಧಿಕಾರಿಗಳಲ್ಲಿ ಒಬ್ಬರನ್ನು ಪೊಲೀಸ್‌ ಇಲಾಖೆಯ ಅತ್ಯುನ್ನತ ಹುದ್ದೆಗೆ ನೇಮಕ ಮಾಡಲಿದ್ದಾರೆ’ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ‌ ತಿಳಿಸಿದ್ದಾರೆ.

ಮುಖ್ಯ ಕಾರ್ಯದರ್ಶಿ ಸುಭಾಷ್‌
ಚಂದ್ರ ಖುಂಟಿಆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್‌ ಕುಮಾರ್‌ ಅವರನ್ನೊಳಗೊಂಡ ಉನ್ನತಾಧಿಕಾರ ಸಮಿತಿ ಅಧಿಕಾರಿಗಳ ಸೇವಾ ದಾಖಲಾತಿ ಮತ್ತು ಪೂರ್ವಾಪರ ಪರಿಶೀಲಿಸಿದ ಬಳಿಕ ಹೆಸರುಗಳನ್ನು ಶಿಫಾರಸು ಮಾಡಿದೆ.

ಇದೇ 31ರಂದು ಹಾಲಿ ಡಿಜಿ ಮತ್ತು ಐಜಿ ಆರ್‌.ಕೆ. ದತ್ತ ನಿವೃತ್ತರಾಗಲಿದ್ದಾರೆ. ಅಂದೇ ಹೊಸ ಪೊಲೀಸ್‌ ಮುಖ್ಯಸ್ಥರ ನೇಮಕಾತಿ ಬಹುತೇಕ ಆಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಈ ಹುದ್ದೆಗೆ ನೀಲಮಣಿ ರಾಜು ಮತ್ತು ಕಿಶೋರ್‌ ಚಂದ್ರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. 1983ರ ಬ್ಯಾಚ್‌ನ ನೀಲಮಣಿ ಉತ್ತರ ಪ್ರದೇಶದ ರೂರ್ಕಿಯವರು. ಸೇವಾ ಹಿರಿತನಕ್ಕೆ ಮುಖ್ಯಮಂತ್ರಿ ಆದ್ಯತೆ ನೀಡಿದರೆ ಆರ್‌.ಕೆ ದತ್ತಾ ಉತ್ತರಾಧಿಕಾರಿ ಆಗಿ ನೀಲಮಣಿ  ನೇಮಕಗೊಳ್ಳುವ ಸಾಧ್ಯತೆ ಇದೆ. ನೀಲಮಣಿ ರಾಜು ನೇಮಕಗೊಂಡರೆ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಹುದ್ದೆಗೆ ಮಹಿಳೆಯೊಬ್ಬರು ನೇಮಕಗೊಂಡಂತಾಗುತ್ತದೆ.‌

ಕಿಶೋರ್ ಚಂದ್ರ ಮತ್ತು ಎಂ.ಎನ್.ರೆಡ್ಡಿ ಇಬ್ಬರೂ 1984ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಗಳು. ಒಕ್ಕಲಿಗ ಸಮುದಾಯದವರಾದ ಮೈಸೂ
ರಿನ ಕಿಶೋರ್‌ ಚಂದ್ರ ನೇಮಕಕ್ಕೆ ಕೆಲವು ಸಚಿವರು ಮತ್ತು ಶಾಸಕರು ಮುಖ್ಯಮಂತ್ರಿ ಮೇಲೆ ಒತ್ತಡ  ಹೇರುತ್ತಿದ್ದಾರೆ. ಪೊಲೀಸ್ ಇಲಾಖೆಯ ಅತ್ಯುನ್ನತ ಹುದ್ದೆಯನ್ನು ಕಿಶೋರ್‌ ಚಂದ್ರ ಅವರಿಗೆ ಕೊಟ್ಟರೆ ಮುಂಬರುವ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ಅನುಕೂಲ ಎಂಬ ವಿಷಯವನ್ನೂ ಗಮನಕ್ಕೆ ತಂದಿದ್ದಾರೆ ಎಂದು ಗೊತ್ತಾಗಿದೆ.

ಮುಂದಿನ ಸಿ.ಎಸ್‌ ರತ್ನಪ್ರಭಾ?

ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ ಯಾರಾಗುತ್ತಾರೆ? ಈ ಪ್ರಶ್ನೆಗೂ ಉತ್ತರ ಸಿಕ್ಕಿಲ್ಲ. ಹಾಲಿ ಮುಖ್ಯ ಕಾರ್ಯದರ್ಶಿ ಸುಭಾಷ್‌ ಚಂದ್ರ ಖುಂಟಿಆ ಅವರು ನ. 30ರಂದು ನಿವೃತ್ತಿಯಾಗಲಿದ್ದು, ಅವರ ಉತ್ತರಾಧಿಕಾರಿಗಾಗಿ ಹುಡುಕಾಟ ನಡೆದಿದೆ.

ಸೇವಾ ಜ್ಯೇಷ್ಠತೆಯಲ್ಲಿ ಹಿರಿಯರಾದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನ ಪ್ರಭಾ ಮೊದಲ ಸ್ಥಾನದಲ್ಲಿದ್ದಾರೆ. ಕೇಂದ್ರ ಸೇವೆಯಲ್ಲಿರುವ ಎಸ್‌.ಕೆ. ಪಟ್ಟನಾಯಕ್‌ ಹೆಸರೂ ಮುಂಚೂಣಿಯಲ್ಲಿದೆ. ಮುಖ್ಯ ಕಾರ್ಯದರ್ಶಿಯಾಗಿದ್ದ ಅರವಿಂದ ಜಾಧವ್‌ ಮತ್ತು ಸುಭಾಷ್‌ ಚಂದ್ರ ಖುಂಟಿಆ ನೇಮಕದ ಸಂದರ್ಭದಲ್ಲೂ ಈ ಇಬ್ಬರ ಹೆಸರು ಪಟ್ಟಿಯಲ್ಲಿತ್ತು. ರತ್ನ ಪ್ರಭಾ ಇನ್ನೇನು ನೇಮಕಗೊಳ್ಳುತ್ತಾರೆ ಎಂಬ ಹಂತದಲ್ಲಿ ಖುಂಟಿಆ ಅವರನ್ನು ಸರ್ಕಾರ ನೇಮಕ ಮಾಡಿತ್ತು.

ಈ ಮಧ್ಯೆ, ದಲಿತ ಸಂಘಟನೆಗಳು ರತ್ನ ಪ್ರಭಾ ಅವರ ಆಯ್ಕೆಗೆ ಆಗ್ರಹಿಸಿ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುತ್ತಿದೆ. ಮುಂದಿನ ಚುನಾವಣೆ ಗಮನದಲ್ಲಿಟ್ಟು, ರತ್ನ ಪ್ರಭಾ ಅವರನ್ನೇ ಆಯ್ಕೆ ಮಾಡಲು ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಕೆಲವು ಹಿರಿಯ ಸಚಿವರು ಒಲವು ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT