ರೈತರ ಮುಖದಲ್ಲಿ ಮೂಡಿದ ಮಂದಹಾಸ

ಗುರುವಾರ , ಜೂನ್ 20, 2019
27 °C

ರೈತರ ಮುಖದಲ್ಲಿ ಮೂಡಿದ ಮಂದಹಾಸ

Published:
Updated:
ರೈತರ ಮುಖದಲ್ಲಿ ಮೂಡಿದ ಮಂದಹಾಸ

ವಿಜಯಪುರ: ಹಲವು ದಶಕಗಳ ಬಳಿಕ ಕೃಷಿ ಇಲಾಖೆಯ ಅಧಿಕಾರಿಗಳ ನಿರಂತರ ಪರಿಶ್ರಮದಿಂದ ರೈತರು ಸಿರಿಧಾನ್ಯ ಬಿತ್ತನೆ ಮಾಡಿದ್ದು, ಇತ್ತಿಚೆಗೆ ಬಿದ್ದ ಮಳೆಯಿಂದ ಬೆಳೆಗಳು ಉತ್ತಮವಾಗಿ ಬೆಳೆದು ನಿಂತಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಹಲವು ವರ್ಷಗಳಿಂದ ಸಿರಿಧಾನ್ಯಗಳನ್ನು ಬೆಳೆಯುವ ಪದ್ಧತಿಯನ್ನು ರೈತರು ಬಿಟ್ಟಿದ್ದರು. ಬಯಲು ಭಾಗದಲ್ಲಿನ ರೈತರು ರಾಗಿ, ಮುಸುಕಿನಜೋಳ, ಮುಂತಾದ ಬೆಳೆಗಳಿಗೆ ಸೀಮಿತವಾಗಿದ್ದರು. ಕೃಷಿ ಕ್ಷೇತ್ರೋತ್ಸವದಂತಹ ಕಾರ್ಯಕ್ರಮಗಳ ಮೂಲಕ ರೈತರಿಗೆ ಸಿರಿಧಾನ್ಯಗಳಾದ ಸಾಮೆ, ಸಜ್ಜೆ, ಆರ್ಕ, ನವಣೆ, ಮುಂತಾದ ಬೆಳೆಗಳ ಕುರಿತು ಮೂಡಿಸಿದ್ದ ಜಾಗೃತಿಯ ಫಲವಾಗಿ ರೈತರು ತಮ್ಮ ಹೊಲಗಳಲ್ಲಿ ಸಿರಿಧಾನ್ಯಗಳನ್ನು ಬಿತ್ತನೆ ಮಾಡಿದ್ದು, ಬೆಳೆಗಳು ಈಗ ಕಾಳುಕಚ್ಚುತ್ತಿವೆ.

ಈ ಕುರಿತು ಮಾತನಾಡಿದ ಹಿರಿಯ ರೈತ ರಾಮಣ್ಣ, ನಾವು ಹಿಂದೆ ಹೊಲಗಳಲ್ಲಿ ಸಾಮೆ, ನವಣೆ, ಸಜ್ಜೆ, ಜವಾರಿ ಜೋಳ, ಎಲ್ಲಾ ಬೆಳೆಯುತ್ತಿದ್ವಿ, ಬರ್ತಾ ಬರ್ತಾ ಅವನ್ನೆಲ್ಲಾ ಬಿಟ್ಟು ಬರೀ ರಾಗಿ, ಅವರೆ, ಅಲಸಂಧಿ, ಹುರುಳಿ ಮಾತ್ರ ಬೆಳೆಯುತ್ತಿದ್ದಾರೆ, ಸಾಮೆ, ಸಜ್ಜೆ, ಇವೆಲ್ಲವುಗಳಿಂದ ನಾವು ಅನ್ನ ಮಾಡಿಕೊಂಡು ತಿನ್ನುತ್ತಿದ್ದೆವು, ತುಂಬಾ ಶಕ್ತಿ ಇರುತ್ತಿತ್ತು, ನಾವು ಬೇಸಾಯಗಳನ್ನು ಬಳಕೆ ಮಾಡುತ್ತಿರಲಿಲ್ಲ, ಕೊಟ್ಟಿಗೆ ಗೊಬ್ಬರ ಹಾಕಿ ಬೆಳೆಗಳು ಬೆಳೆಯುತ್ತಿದ್ವಿ, ಈಗ ಯಾರು ಬೆಳೆಯೊಲ್ಲ, ಏನಓ ಈ ವರ್ಷ ಹೊಲಗಳಲ್ಲಿ ಸಜ್ಜೆ, ಸಾಮೆ, ಎಲ್ಲಾ ಕಾಣಿಸ್ತಿವೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲೂ ಆಹಾರದ ಪದ್ಧತಿಯಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಸಿರಿಧಾನ್ಯಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದವು. ಮಳೆಯ ಕೊರತೆಯು ಇದಕ್ಕೆ ಒಂದು ಕಾರಣವಾಗಿದೆ. ಮಳೆಯಾಶ್ರಿತ ಬೇಸಾಯ ಲಾಭದಾಯಿಕವಾಗಿ ಉಳಿಯಲಿಲ್ಲ. ಇದರಿಂದ ರೈತರು ರಾಗಿ ಹೊರತುಪಡಿಸಿ ಇತರ ಸಿರಿ ಧಾನ್ಯ ಬೆಳೆಯುವುದನ್ನು ಕೈಬಿಟ್ಟಿದ್ದರು.

ಇತ್ತಿಚಿನ ದಿನಗಳಲ್ಲಿ ಮತ್ತೆ ಸಿರಿಧಾನ್ಯಗಳನ್ನು ಹೆಚ್ಚು ಬೆಳೆಯುತ್ತಿದ್ದಾರೆ. ಉತ್ತಮ ಆರೋಗ್ಯವನ್ನು ನೀಡುತ್ತದೆ ಎನ್ನುವುದು ಒಂದು ಕಾರಣವಾದರೆ ಕಡಿಮೆ ಖರ್ಚಿನ ಬೆಳೆ ಎಂದು ಸಿರಿಧಾನ್ಯಗಳನ್ನು ಬೆಳೆಯಲು ರೈತರು ಮನಸ್ಸು ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಇವುಗಳಿಗೆ ಉತ್ತಮ ಬೆಳೆಯು ಸಿಗಲಿದೆ.

ವಿಜಯಪುರ ಹೋಬಳಿ ಬಿಜ್ಜವಾರ, ಪುರ, ಚನ್ನರಾಯಪಟ್ಟಣ ಹೋಬಳಿಯ ಯಲಿಯೂರು, ಪೋಲನಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ತಮ್ಮ ಹೊಲಗಳಲ್ಲಿ ರಾಗಿಯೊಂದಿಗೆ ಬಿತ್ತನೆ ಮಾಡಿದ್ದಾರೆ. ರಕ್ತದ ಒತ್ತಡ, ಸಕ್ಕರೆ ಕಾಯಿಲೆಗೆ ತುತ್ತಾದವರು ಸಿರಿಧಾನ್ಯಗಳಿಂದ ತಯಾರಿಸಿದ ಆಹಾರವನ್ನು ಹೆಚ್ಚು ಸೇವಿಸುತ್ತಾರೆ. ಈ ಧಾನ್ಯಗಳಿಂದ ಉತ್ತಮವಾದ ಆರೋಗ್ಯವನ್ನು ವೃದ್ಧಿ ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದು ವೈದ್ಯಾಧಿಕಾರಿ ಡಾ.ಮಂಜುಳಾ ಹೇಳಿದರು.

ಹಳ್ಳಿಗಳಲ್ಲಿ ಹೆಚ್ಚು ಬಳಕೆ : ಹಳ್ಳಿಗಳಲ್ಲಿ ಅರೆಸಾಮೆ ಬೇಯಿಸಿ ಒಣಗಿಸಿ ಕುಟ್ಟಿ ಅಕ್ಕಿ ಮಾಡುತ್ತಿದ್ದರು. ಮುದ್ದೆ ತಯಾರಿಕೆಯಲ್ಲಿ ನುಚ್ಚಿನಂತೆ ಬಳಸುತ್ತಿದ್ದರು. ಇನ್ನು ಹಾಲು ಸಾಮೆ, ಕರಿಸಾಮೆ ಅಕ್ಕಿಯಿಂದ ತಯಾರಿಸಿದ ಅನ್ನವನ್ನು ಗೊಜ್ಜು ಅಥವಾ ಮಜ್ಜಿಗೆ ಜೊತೆ ಸವಿಯುವುದು ಎಂದರೆ ಗ್ರಾಮೀಣ ಭಾಗದಲ್ಲಿನ ಜನರಿಗೆ ಎಲ್ಲಿಲ್ಲದ ಪ್ರೀತಿ. ನವಣೆ ಬಳಸಿ ತಯಾರಿಸುವ ಗಿಣ್ಣಿನ ರುಚಿ ನಾಲಗೆಯಲ್ಲಿ ನೀರು ಜಿನುಗಿಸುತ್ತದೆ. ಹಿಂದೆ ಸಜ್ಜೆಯನ್ನು ಕುಟ್ಟಿ ರಾಗಿ ಮುದ್ದೆ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತಿತ್ತು.

 ಎಂ.ಮುನಿನಾರಾಯಣ

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry