₹ 2,000 ಕೋಟಿ ಸಾಲ ನೀಡುವ ಗುರಿ

ಸೋಮವಾರ, ಜೂನ್ 24, 2019
29 °C

₹ 2,000 ಕೋಟಿ ಸಾಲ ನೀಡುವ ಗುರಿ

Published:
Updated:

ಹುಕ್ಕೇರಿ: ಬಿಡಿಸಿಸಿ ಬ್ಯಾಂಕ್ ವತಿಯಿಂದ 2019–20ನೇ ಸಾಲಿನವರೆಗೆ 5 ಲಕ್ಷ ಸದಸ್ಯರಿಗೆ ₹2,000 ಕೋಟಿ ಸಾಲ ವಿತರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ತಿಳಿಸಿದರು. ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳ (ಪಿಕೆಪಿಎಸ್) ಆಡಳಿತ ಮಂಡಳಿ ಮತ್ತು ಸದಸ್ಯರು ಇಲ್ಲಿನ ವಿಶ್ವರಾಜ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ತಾಲ್ಲೂಕಿನ 79 ಪಿಕೆಪಿಎಸ್‌ಗಳಲ್ಲಿ 55 ಸಂಸ್ಥೆಗಳು ಸ್ವಂತ ಕಟ್ಟಡ ಹೊಂದಿವೆ. 55 ಸಂಸ್ಥೆಗಳು ಲಾಭಾಂಶ ಹಂಚಿಕೆ ಮಾಡಿವೆ. 55 ಸಂಸ್ಥೆಗಳಲ್ಲಿ ಕಂಪ್ಯೂಟರ್‌ ಹಾಗೂ ಆನ್‌ಲೈನ್‌ ವ್ಯವಸ್ಥೆ ಇದೆ’ ಎಂದು ಹೇಳಿದರು.

ನಷ್ಟದಿಂದ ಲಾಭದೆಡೆಗೆ: ‘ಮೂರು ದಶಕಗಳು ಡಿಸಿಸಿ ಬ್ಯಾಂಕ್‌ ಸೇವೆಯಲ್ಲಿ ಕಳೆದಿದ್ದೇನೆ. 1999ರಲ್ಲಿ ಅಧ್ಯಕ್ಷನಾದೆ. ₹40 ಕೋಟಿ ನಷ್ಟದಲ್ಲಿದ್ದ ಬ್ಯಾಂಕನ್ನು ಕಠಿಣ ಪರಿಶ್ರಮದಿಂದ ಮತ್ತು ಉದ್ಯೋಗಿಗಳ ಸಹಕಾರದಿಂದ ಐದು ವರ್ಷಗಳಲ್ಲಿ ಲಾಭದತ್ತ ತಂದಿರುವ ಬಗ್ಗೆ ಹೆಮ್ಮೆ ಇದೆ. ಇದಕ್ಕೆ ಎಲ್ಲರ ಸಹಕಾರ ಸ್ಮರಣೀಯವಾದುದು’ ಎಂದು ನೆನೆದರು.

‘ನಾನು ಅಧಿಕಾರದಲ್ಲಿದ್ದ 16 ವರ್ಷಗಳ ಅವಧಿಯಲ್ಲಿ 3 ಬಾರಿ ಸಾಲಮನ್ನಾ ಆಗಿದೆ. ಅದರಿಂದ ಜಿಲ್ಲೆಯ 4 ಲಕ್ಷ ಜನರಿಗೆ ₹ 1,745 ಕೋಟಿ ಸಾಲ ಮತ್ತು ಬಡ್ಡಿ ಮನ್ನಾ ಸೌಲಭ್ಯ ದೊರೆತಿದೆ. ಇದಕ್ಕೆ ಕಾರಣರಾದ ಮಾಜಿ ಮುಖ್ಯಮತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್‌ ಮತ್ತು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೈತರ ಪರವಾಗಿ ಕೃತಜ್ಣತೆ ಸಲ್ಲಿಸುತ್ತೇನೆ’ ಎಂದು ಹೇಳಿದರು.

ರೈತರಿಗೆ ಜಾತಿ ಇಲ್ಲ: ‘ಬಿಡಿಸಿಸಿ ಬ್ಯಾಂಕು ಪಕ್ಷಾತೀತ ಮತ್ತು ಜಾತ್ಯತೀತವಾದುದು. ಸಂಸ್ಥೆಗಳ ಸದಸ್ಯರು ರೈತರು. ಅವರು ಯಾವುದೇ ಪಕ್ಷ ಮತ್ತು ಜಾತಿಗೆ ಅಂಟಿಕೊಂಡವರಲ್ಲ. ಈ ಸಮಾರಂಭ ಕುರಿತು ಟೀಕಿಸಿದ ಧುರೀಣರ ಹೇಳಿಕೆಗೆ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ತಿರುಗೇಟು ನೀಡಿದರು. ‘ಸಹಕಾರಿ ವಲಯದಲ್ಲಿ ಇರುವವರಿಗೆ ಜನರ ಕೆಲಸ ಮಾಡುವ ಕಳಕಳಿ ಇರಬೇಕು’ ಎಂದು ಮಾರ್ಮಿಕವಾಗಿ ಹೇಳಿದರು.

ಅವರಿಗೆ ಹುಕ್ಕೇರಿ ಭಾಗದ ಸಂಸ್ಥೆಗಳಿಂದ ‘ಬೆಳ್ಳಿ ಗದೆ’ ಮತ್ತು ಸೋಲಾಪುರ ಸೊಸೈಟಿಯಿಂದ ‘ಬೆಳ್ಳಿ ಖಡ್ಗ’ ನೀಡಲಾಯಿತು. ರೈತರ ಸಾಲ ಮನ್ನಾ ಆಗಿದ್ದು ಹಾಗೂ ಪಿಕೆಪಿಎಸ್‌ಗಳಿಗೆ ಮಾರ್ಗದರ್ಶನ ಮಾಡಿದ್ದಕ್ಕೆ ಅವರನ್ನು ಸತ್ಕರಿಸಲಾಯಿತು.

ಸಂಗಮ ಶುಗರ್ ಅಧ್ಯಕ್ಷ ರಾಜೇಂದ್ರ ಪಾಟೀಲ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಅಶೋಕ ಚಂದಪ್ಪಗೋಳ, ಟಿಎಪಿಎಇಎಂಎಸ್ ಅಧ್ಯಕ್ಷ ಈರಣ್ಣ ಹಾಲದೇವರಮಠ, ಹಿರಿಯ ಸಹಕಾರಿ ಧುರೀಣ ಬಸವರಾಜ ಸುಲ್ತಾಪುರಿ ಮಾತನಾಡಿದರು.

ಹಿರಾ ಶುಗರ್ ಉಪಾಧ್ಯಕ್ಷ ಶ್ರೀಶೈಲಪ್ಪ ಮಗದುಮ್ಮ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಎಸ್.ಎಸ್. ಶಿರಕೋಳಿ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಮರಡಿ, ನಿರ್ದೇಶಕ ಶಶಿರಾಜ ಪಾಟೀಲ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಸಂಕನ್ನವರ, ಉಪಾಧ್ಯಕ್ಷ ಗುರಪ್ಪ ತಳವಾರ, ಎಪಿಎಂಸಿ ಅಧ್ಯಕ್ಷ ಪ್ರಶಾಂತ ಪಾಟೀಲ, ಉಪಾಧ್ಯಕ್ಷ ನಾಗರಾಜ ದಡ್ಡಿ, ಬೆಳವಿಯ ಮೃತ್ಯುಂಜಯ ಸ್ವಾಮೀಜಿ, ಹಿರಾ ಶುಗರ್ ನಿರ್ದೇಶಕ ಶಿವನಾಯಿಕ, ಪುರಸಭೆ ಅದ್ಯಕ್ಷ ಜಯಗೌಡ ಪಾಟೀಲ, ಉಪಾಧ್ಯಕ್ಷ ಗುರುರಾಜ ಕುಲಕರ್ಣಿ, ಕೆ.ಎಂ.ಎಫ್. ನಿರ್ದೇಶಕ ಅಮರ ನೇರ್ಲಿ, ಸುಹಾಸ ಜೋಶಿ ಭಾಗವಹಿಸಿದ್ದರು. ಮಲ್ಲಿಕಾರ್ಜುನ ಜಕ್ಕಪ್ಪಗೋಳ ಸ್ವಾಗತಿಸಿದರು. ಎನ್.ಎಸ್. ಬಿರಾದಾರ ಪಾಟೀಲ ವಂದಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry