ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗೆ ಬಾರದಂತಾದ ಭತ್ತದ ಬೆಳೆ

Last Updated 28 ಅಕ್ಟೋಬರ್ 2017, 5:22 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ತಾಲ್ಲೂಕಿಗೆ ಹೊಂದಿರುವ ಖಾನಾಪುರ ತಾಲ್ಲೂಕಿನ ಗಂದಿಗವಾಡ ಸೇರಿದಂತೆ ಸುತ್ತಲಿನ ಜಮೀನಿನಲ್ಲಿ ಭತ್ತದಲ್ಲಿ ಜೊಳ್ಳು ಕಾಣಿಸಿಕೊಂಡಿದ್ದು, ಕಷ್ಟಪಟ್ಟು ಜೋಪಾನವಾಗಿ ಬೆಳೆಸಿದ್ದ ಬೆಳೆ ರೈತನಿಗೆ ದಕ್ಕದಂತಾಗಿದೆ.

ಭತ್ತ ಕಾಳುಗಟ್ಟುವಾಗಿ ಸಾಕಷ್ಟು ಮಳೆ ಸುರಿಯಬೇಕು. ಆದರೆ ಪೈರಿಗೆ ಬೇಕಾದ ಸಮಯದಲ್ಲಿ ಹದ ಮಳೆ ಆಗಲಿಲ್ಲ. ಹೀಗಾಗಿ ಭತ್ತದ ಗದ್ದೆಯಲ್ಲಿ ಶೇ 70ರಷ್ಟು ಜೊಳ್ಳು ಭತ್ತವೇ ಹೊಡೆ ಹಿರಿದಿದೆ.

ಭತ್ತದ ಬೆಳೆಯ ಕಣಜವೇ ಆಗಿದ್ದ ಖಾನಾಪುರ ತಾಲ್ಲೂಕು ಮತ್ತು ಕಿತ್ತೂರು ತಾಲ್ಲೂಕಿನ ಪಶ್ಚಿಮ ಭಾಗದ ಕೆಲ ಹಳ್ಳಿಗಳ ವ್ಯಾಪ್ತಿಯ ಹೊಲದಲ್ಲಿ ವಾಣಿಜ್ಯ ಬೆಳೆಯಾದ ಕಬ್ಬು ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗಿದೆ. ಕೆಲವು ಕಡೆಗಳಲ್ಲಿ ಇಂಟಾನ್‌, ಬಾಸುಮತಿ, ಕರಿಭತ್ತದಂತಹ ಕೆಲವು ಜವಾರಿ ತಳಿಗಳನ್ನು ಉಳಿಸಿಕೊಳ್ಳಲಾಗಿದೆ.

‘ಹೆಚ್ಚು ಮಳೆ ಬೀಳುವ ಪ್ರದೇಶವಾದ ಇಲ್ಲಿ ಬೆಳೆ ಕೈಹಿಡಿಯುತ್ತದೆ ಎಂದು ನಂಬಿ ಭತ್ತ ಬಿತ್ತಿದೆವು. ಆದರೆ, ಸರಿಯಾಗಿ ಮಳೆ ಆಗಲಿಲ್ಲ. ಹೊಡೆ ಹಿರಿಯುವ ಸಂದರ್ಭದಲ್ಲೂ ಮಳೆ ಕೈಕೊಟ್ಟಿತು. ಹೀಗಾಗಿ ಜೊಳ್ಳು ಭತ್ತವೇ ಹೊಡೆ ಹಿರಿದಿದ್ದು, ನಮ್ಮನ್ನ ಆತಂಕಕ್ಕೆ ನೂಕಿದೆ’ ಎಂದು ರೈತ ಬಾಬು ಮೂಲಿಮನಿ ಅಳಲು ತೋಡಿಕೊಂಡರು.

‘ಸಮಯಕ್ಕೆ ಮಳೆ ಬಿದ್ದಿದ್ದರೆ ಒಳ್ಳೆಯ ಫಸಲು ಕೈಸೇರುತ್ತಿತ್ತು. ನಿರೀಕ್ಷೆಗೆ ತಕ್ಕಂತೆ ಆದಾಯವೂ ಬರುತ್ತಿತ್ತು. ಈಗೇನಿದ್ದರೂ ಜಾನುವಾರುಗಳಿಗೆ ಮೇವು ಮಾತ್ರ ಆದಂತಾಗಿದೆ. ಬಿಳಿಹೊಡೆಯನ್ನು ದುಡ್ಡುಕೊಟ್ಟು ಕೊಯ್ಲು ಮಾಡಿಸಬೇಕು’ ಎಂದರು ದುಂಡಪ್ಪ ಹಿರೇಮಠ ಮತ್ತು ಭೀಮಪ್ಪ ಬೋಕಡೆಕರ್


‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಪರಿಸ್ಥಿತಿ ಈ ಭಾಗದ ರೈತರದಾಗಿದೆ. ಬೆಳೆ ಮೇಲೆ ನಂಬಿಕೆ ಇಟ್ಟು ಕುಳಿತಿದ್ದ ರೈತನಿಗೆ ದಿಕ್ಕೇ ತೋಚದಂತಾಗಿದೆ. ಇದನ್ನು ಕೃಷಿ ಇಲಾಖೆ ಸಹಾನುಭೂತಿಯಿಂದ ನೋಡಬೇಕು. ರೈತರಿಗೆ ಸೂಕ್ತ ಪರಿಹಾರ ಕೊಡಿಸಬೇಕು’ ಎಂದು ಗಡಿನಾಡು ಹಿತರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಎಂ.ಎಂ. ರಾಜಿಬಾಯಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT