ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾತೃಪೂರ್ಣ’ ಯೋಜನೆಗೆ ನೀರಸ ಪ್ರತಿಕ್ರಿಯೆ

Last Updated 28 ಅಕ್ಟೋಬರ್ 2017, 5:52 IST
ಅಕ್ಷರ ಗಾತ್ರ

ಚಾಮರಾಜನಗರ: ‘ಮಧ್ಯಾಹ್ನದ ಬಿಸಿಲಿನ ಹೊತ್ತಿನಲ್ಲಿ ಮನೆಯಿಂದ ಬಸುರಿಯರು, ಬಾಣಂತಿಯರನ್ನು ಹೊರಗಡೆ ಕಳುಹಿಸುವುದಿಲ್ಲ. ಗಾಳಿ ಗಾಚಾರ ತಗುಲಿಬಿಟ್ಟರೆ ಕಷ್ಟ. ಸರ್ಕಾರ ಊಟದ ಬದಲು ಮೊದಲಿನ ಹಾಗೆಯೇ ರೇಷನ್‌ ನೀಡಬೇಕು... ಮಾತೃಪೂರ್ಣ ಯೋಜನೆಯ ಫಲಾನುಭವಿಯ ಪೋಷಕರೊಬ್ಬರ ಮಾತಿದು.

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ‘ಮಾತೃಪೂರ್ಣ ಯೋಜನೆ’ಯು ಜಿಲ್ಲೆಯಲ್ಲಿ ಫಲಾನುಭವಿಗಳಿಗೆ ಪೂರ್ಣ ಪ್ರಮಾಣದಲ್ಲಿ ತಲುಪುತ್ತಿಲ್ಲ. ರಕ್ತಹೀನತೆ ಸಮಸ್ಯೆ ಹಾಗೂ ತಾಯಿ–ಶಿಶುವಿನ ಮರಣ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕಾಂಶಯುಕ್ತ ಬಿಸಿಯೂಟ ನೀಡುವ ಯೋಜನೆಗೆ ಅ. 2ರಂದು ಚಾಲನೆ ನೀಡಲಾಗಿದೆ. ಬಡವರು ಮತ್ತು ಸಾಮಾಜಿಕವಾಗಿ ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಜಿಲ್ಲೆಗೆ ಇದು ಅತಿ ಮಹತ್ವದ ಯೋಜನೆಯೂ ಆಗಿದೆ.

ಜಾತಿ ವ್ಯವಸ್ಥೆ, ಸಂಪ್ರದಾಯ ಹಾಗೂ ಅರಿವಿನ ಕೊರತೆ ಒಂದೆಡೆಯಾದರೆ, ಅಂಗನವಾಡಿ ಕೇಂದ್ರದ ಅನನುಕೂಲತೆಯ ಕಾರಣದಿಂದಾಗಿ ಜಿಲ್ಲೆಯ ಬಹುತೇಕ ಕೇಂದ್ರಗಳಿಗೆ ಗರ್ಭಿಣಿಯರು ಹಾಗೂ ಬಾಣಂತಿಯರು ಬರುತ್ತಿಲ್ಲ. ಕೆಲವೆಡೆ ಮನೆಗಳಿಗೆ ಊಟ ತೆಗೆದುಕೊಂಡು ಹೋಗುತ್ತಿದ್ದರೂ ಜನರಿಂದ ಪೂರ್ಣ ಸ್ಪಂದನೆ ದೊರೆಯುತ್ತಿಲ್ಲ.

ಕ್ಷೀಣಿಸಿದ ಸ್ಪಂದನೆ: ‘ಅಂಗನವಾಡಿ ವ್ಯಾಪ್ತಿಯಲ್ಲಿ ಒಟ್ಟು 13 ಗರ್ಭಿಣಿಯರು ಹಾಗೂ ಬಾಣಂತಿಯರು ಇದ್ದಾರೆ. ಯೋಜನೆ ಪ್ರಾರಂಭವಾದ ದಿನ ಎಲ್ಲರೂ ಕೇಂದ್ರಕ್ಕೆ ಬಂದು ಊಟ ಮಾಡಿ ಹೋದರು. ಬಳಿಕ ಎರಡು, ಮೂರು ದಿನಗಳಲ್ಲಿ ಬರುವವರ ಸಂಖ್ಯೆ 5ಕ್ಕೆ ಕುಸಿಯಿತು. ಈಗ ಯಾರೂ ಕೇಂದ್ರಕ್ಕೆ ಬರುತ್ತಿಲ್ಲ. ನಾವು ಕೂಡ ಮನೆಗಳಿಗೆ ಹೋಗಿ ತಿಳಿವಳಿಕೆ ಹೇಳಿದ್ದೇವೆ. ಆದರೂ ಬರುತ್ತಿಲ್ಲ’ ಎಂದು ನಗರದ ಜಾಮಿಯಾ ಮಸೀದಿ ಅಂಗನವಾಡಿ ಕೇಂದ್ರದ ಶಿಕ್ಷಕಿ ಹೇಳಿದರು.

‘ಬಾಣಂತಿಯರು, ಗರ್ಭಿಣಿಯರನ್ನು ಮನೆಯಿಂದ ಹೊರಕಳುಹಿಸುವುದಿಲ್ಲ. ಅವರಿಗೆ ಊಟವನ್ನು ಗೋಪ್ಯವಾಗಿ ನೀಡಲಾಗುತ್ತದೆ. ಅವರು ಊಟ ಮಾಡುವ ಸಂದರ್ಭದಲ್ಲಿ ಯಾರೂ ಓಡಾಡಬಾರದು ಎಂಬ ಕಾರಣಗಳನ್ನು ಫಲಾನುಭವಿಗಳ ಪೋಷಕರು ಹೇಳು ತ್ತಾರೆ’ ಎಂದು ಅವರು ತಿಳಿಸಿದರು.

ರೇಷನ್‌ ಅಕ್ಕಿ: ‘ಪೌಷ್ಟಿಕ ಆಹಾರ ನೀಡುತ್ತೇವೆ ಎಂದು ಹೇಳಿ ರೇಷನ್‌ ಅಕ್ಕಿಯಿಂದ ತಯಾರಿಸಿದ ಅನ್ನ ಬಡಿಸುತ್ತಾರೆ. ನಾವು ಗರ್ಭಿಣಿಯರು, ಬಾಣಂತಿಯರಿಗೆ ರೇಷನ್‌ ಅಕ್ಕಿ ನೀಡುವುದಿಲ್ಲ. ಜತೆಗೆ, ಅಂಗನವಾಡಿ ಕೇಂದ್ರ ಚಿಕ್ಕದಾಗಿರುವುದರಿಂದ ಊಟ ಮಾಡಲು ಜಾಗವಿಲ್ಲ. ಮಕ್ಕಳು ಎಲ್ಲೆಂದರಲ್ಲಿ ಓಡಾಡುತ್ತಿರುತ್ತಾರೆ. ಇದರಿಂದ ದೃಷ್ಟಿಯಾಗುತ್ತದೆ’ ಎನ್ನುವುದು ಫಲಾನುಭವಿಗಳ ಪೋಷಕರ ದೂರು.

‘ಮಕ್ಕಳಿಗೆ ಆಹಾರ ತಯಾರಿಸಿ, ನಂತರ ಸ್ಪಲ್ವ ಕಾಲ ಪಾಠ ಮಾಡುತ್ತಿದ್ದೆವು. ಆದರೆ, ಈ ಯೋಜನೆ ಆರಂಭವಾದಾಗಿನಿಂದ ನಮ್ಮ ಮೇಲೆ ಒತ್ತಡ ಹೆಚ್ಚಾಗಿದೆ. ಇದರಿಂದ ಬಹಳಷ್ಟು ತೊಂದರೆಯಾಗಿದೆ’ ಎಂದು ಹೆಸರು ಹೇಳಲಿಚ್ಚಿಸದ ಅಂಗನವಾಡಿ ಶಿಕ್ಷಕಿಯೊಬ್ಬರು ಅಳಲು ತೋಡಿಕೊಂಡರು.

ಎಸ್. ಪ್ರತಾಪ್‌
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT