ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆಯಲ್ಲಿ ಇನ್ನು ಕಾಂಗ್ರೆಸ್‌ನದೇ ‘ಮೇಲುಗೈ’

Last Updated 28 ಅಕ್ಟೋಬರ್ 2017, 5:57 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮಹತ್ವದ ಬೆಳವಣಿಗೆಯೊಂದರಲ್ಲಿ ಚಿಕ್ಕಬಳ್ಳಾಪುರ ನಗರಸಭೆಯಲ್ಲಿದ್ದ ಒಂಬತ್ತು ಜೆಡಿಎಸ್ ಸದಸ್ಯರ ಪೈಕಿ ಶುಕ್ರವಾರ ಆರು ಸದಸ್ಯರು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಸಮ್ಮುಖದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್‌ ಸೇರ್ಪಡೆಗೊಂಡರು.

ನಗರಸಭೆ ವಿರೋಧ ಪಕ್ಷದ ನಾಯಕರೂ ಆಗಿರುವ 8ನೇ ವಾರ್ಡ್ ಸದಸ್ಯ ಪಿ.ಶ್ರೀನಿವಾಸ್, 16 ನೇ ವಾರ್ಡ್ ಸದಸ್ಯೆ ನಾಗರತ್ನಾ ಯತೀಶ್, 20ನೇ ವಾರ್ಡ್ ಸದಸ್ಯೆ ಎಂ.ಜಯಮ್ಮ, 22ನೇ ವಾರ್ಡ್ ಸದಸ್ಯೆ ಎನ್‌.ಶ್ವೇತಾ ಮಂಜುನಾಥ್, 23ನೇ ವಾರ್ಡ್ ಸದಸ್ಯೆ ಜಿ.ಭಾರತಿದೇವಿ ಆನಂದರೆಡ್ಡಿ ಮತ್ತು 27ನೇ ವಾರ್ಡ್ ಸದಸ್ಯೆ ಭಾರತಿದೇವಿ ಅವರು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಸದಸ್ಯರು.

ಈ ಸಂದರ್ಭದಲ್ಲಿ ಮಾತನಾಡಿದ ಜಿ. ಪರಮೇಶ್ವರ್, ‘ಕಾಂಗ್ರೆಸ್‌ ದೇಶ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿ ಇರುವುದು ಅನಿವಾರ್ಯ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ರಾಷ್ಟ್ರಮಟ್ಟದಲ್ಲಿ ಬಹಳಷ್ಟು ಬೆಳವಣಿಗೆಗಳು ಆಗುತ್ತಿದೆ. ಇವತ್ತು ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕು. ಎಲ್ಲರಿಗೂ ಸರಿಸಮಾನವಾದ ಅವಕಾಶಗಳು ಸಿಗಬೇಕು ಎನ್ನುವುದೇ ಕಾಂಗ್ರೆಸ್‌ ಉದ್ದೇಶ. ಅದಕ್ಕೆ ವಿರುದ್ಧವಾಗಿ ಇವತ್ತು ಬಿಜೆಪಿ ನಡೆದುಕೊಳ್ಳುತ್ತಿದೆ. ಅದಾಗಬಾರದು. ಹಾಗೇನಾದರೂ ಆದರೆ ದೇಶ ಉಳಿಯುವುದು ಕಷ್ಟವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ನಮ್ಮ ಪಕ್ಷಕ್ಕೆ ಯಾರೇ ಬಂದರೂ ನಾವು ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ನಿಮ್ಮನ್ನು ನಿರ್ಲಕ್ಷ್ಯ ಮಾಡುವುದಿಲ್ಲ. ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಗಟ್ಟಿಯಾಗಿದೆ. ಅದನ್ನು ಇನ್ನೂ ಹೆಚ್ಚು ಶಕ್ತಿಯುತವಾಗಿ ಮಾಡಿದರೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತದೆ’ ಎಂದು ತಿಳಿಸಿದರು. ಶಾಸಕ ಡಾ.ಕೆ.ಸುಧಾಕರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

31 ಸದಸ್ಯ ಬಲ ಹೊಂದಿರುವ ನಗರಸಭೆಗೆ ಕಳೆದ ಚುನಾವಣೆಯಲ್ಲಿ 10 ಕಾಂಗ್ರೆಸ್, 9 ಜೆಡಿಎಸ್, 11 ಪಕ್ಷೇತರ ಮತ್ತು ಬಿಎಸ್‌ಆರ್ ಕಾಂಗ್ರೆಸ್‌ನಿಂದ ಒಬ್ಬ ಅಭ್ಯರ್ಥಿ ಆಯ್ಕೆಯಾಗಿದ್ದರು. ಈ ಪೈಕಿ ಹಿಂದೆಯೇ ಪಕ್ಷೇತರ ಮತ್ತು ಬಿಎಸ್‌ಆರ್ ಕಾಂಗ್ರೆಸ್ ಸದಸ್ಯರು ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ್ದರು.

ಇದೀಗ ಜೆಡಿಎಸ್‌ನ ಬಹುತೇಕ ಸದಸ್ಯರು ‘ಕೈ’ ಹಿಡಿದಿರುವುದರಿಂದ ನಗರಸಭೆಯಲ್ಲಿ ‘ಹಸ್ತ’ ಪಾಳೆಯದ ಬಲ ಮತ್ತಷ್ಟು ಹೆಚ್ಚಿದೆ. ಸದ್ಯ1ನೇ ವಾರ್ಡ್‌ ಸದಸ್ಯ ಬಿ.ಎಲ್‌.ಕೇಶವಕುಮಾರ್, 25ನೇ ವಾರ್ಡ್‌ನ ಸಿ.ಎಂ.ಶ್ರೀನಿವಾಸರೆಡ್ಡಿ ಮತ್ತು 28ನೇ ವಾರ್ಡ್‌ನ ಕಿಸಾನ್ ಕೃಷ್ಣಪ್ಪ ಅವರು ನಗರಸಭೆಯಲ್ಲಿರುವ ಜೆಡಿಎಸ್ ಸದಸ್ಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT