ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಪ್‌ಕಾರ್ನ್‌ ಜೋಳದ ಬೆಲೆ ಕುಸಿತ

Last Updated 28 ಅಕ್ಟೋಬರ್ 2017, 6:28 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಪಾಪ್‌ಕಾರ್ನ್‌ ಜೋಳದ ಸುಗ್ಗಿಯ ಕಾಲದಲ್ಲಿ ಮಾರಾಟಕ್ಕೆ ಸಜ್ಜಾದ ರೈತರು ತೀವ್ರ ಬೆಲೆ ಕುಸಿತದಿಂದ ನಷ್ಟದ ಆತಂಕ ಎದುರಿಸುತ್ತಿದ್ದಾರೆ. ಕಳೆದ ತಿಂಗಳಲ್ಲಿ ₹ 4 ಸಾವಿರದ ಆಸುಪಾಸಿನಲ್ಲಿದ್ದ ಪ್ರತಿ ಕ್ವಿಂಟಲ್‌ ಪಾಪ್‌ಕಾರ್ನ್‌ ಜೋಳದ ಬೆಲೆ ನಿರಂತರವಾಗಿ ಕುಸಿಯುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ದರ ₹ 2200ರ ಆಜುಬಾಜಿನಲ್ಲಿದೆ. ಅರ್ಧದಷ್ಟು ಬೆಲೆ ಕುಸಿತ ಕಂಡಿದೆ.

ಉತ್ತಮ ಧಾರಣೆ ನಿರೀಕ್ಷೆಯಲ್ಲಿ ಹೋಬಳಿಯಾದ್ಯಂತ ಪಾಪ್‌ಕಾರ್ನ್‌ ಜೋಳದ ಬೆಳೆ ಬೆಳೆಯಲು ಬಹುತೇಕ ರೈತರು ಪರಿವರ್ತನೆಗೊಂಡಿದ್ದರು. ದಶಕಗಳಿಂದ ಈ ಭಾಗದಲ್ಲಿ ಮೆಕ್ಕೆಜೋಳವೇ ಸಾಂಪ್ರಾದಾಯಿಕ ಬೆಳೆ ಎನ್ನುವಂತಾಗಿತ್ತು. ಹೋಬಳಿಯ 6,100 ಹೆಕ್ಟೇರ್‌ ಜಮೀನು ಮೆಕ್ಕೆಜೋಳದ ಬೆಳೆಗೆ ಸೀಮಿತಗೊಂಡಿತ್ತು. ಅದರಲ್ಲಿ 4000 ಹೆಕ್ಟೇರ್‌ ಪಾಪ್‌ಕಾರ್ನ್‌ ಜೋಳ ಬಿತ್ತನೆ ನಡೆದಿತ್ತು ಎನ್ನುತ್ತಾರೆ ಕೃಷಿ ಅಧಿಕಾರಿ ಕೇಶವ್.

ಮಾರುಕಟ್ಟೆಗೆ ಆವಕ ಕಡಿಮೆ ಇದ್ದಾಗ ಗರಿಷ್ಠ ಬೆಲೆ ನಮೂದಾಗಿರುತ್ತದೆ. ಆವಕ ಹೆಚ್ಚಾದಂತೆ ಬೆಲೆ ಕುಸಿತ ಆರಂಭಗೊಳ್ಳುತ್ತದೆ. ಇದು ರೈತರಿಗೆ ಶಾಪ. ಇದನ್ನು ತಡೆಯಲು ಯಾವ ವೈಜ್ಞಾನಿಕ ಕ್ರಮವನ್ನೂ ಕೈಗೊಂಡಿಲ್ಲ. ಸರ್ಕಾರ ಇಂತಹ ವಿಷಯಕ್ಕೆ ಕಣ್ಣು ಮುಚ್ಚಿದೆ. ರೈತರು ದಾಸ್ತಾನು ಮಾಡುವ ಮೂಲಕ ಬೆಲೆ ಕುಸಿತ ತಡೆಯಬೇಕು ಎನ್ನುತ್ತಾರೆ ಚೆನ್ನಾಪುರದ ರೈತರು.

ಗರಿಷ್ಠ ಧಾರಣೆಯ ಭರವಸೆಯಲ್ಲಿ 3 ಎಕರೆಗೆ ಪಾಪ್‌ಕಾರ್ನ್ ಬಿತ್ತನೆ ಮಾಡಿದ್ದೆ. ಒಟ್ಟಾರೆ 10 ಕ್ವಿಂಟಲ್‌ ಇಳುವರಿಯೂ ಸಿಗದ ಪರಿಸ್ಥಿತಿ ಇದೆ. ಮಳೆ ಕೊರತೆ, ಬೀಜದ ಆಯ್ಕೆಯಲ್ಲಿ ವಿಫಲತೆಯಿಂದ ನಲುಗಿದ್ದೇವೆ. ಈ ನಡುವೆ ಬೆಲೆ ಕುಸಿತ ಮತ್ತಷ್ಟು ಕಷ್ಟಕ್ಕೆ ನೂಕಿದೆ ಎನ್ನುತ್ತಾರೆ ರೈತ ಗಿರೀಶ್ ದೊಣ್ಣೇರ್‌.

ರಾಜಸ್ಥಾನ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಮೆಕ್ಕೆಜೋಳದ ಉತ್ಪಾದನೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬೇಡಿಕೆ ಕುಸಿದಿದೆ. ಎಲ್ಲಡೆ ಸಾಕಷ್ಟು ದಾಸ್ತಾನು ಮಾಡಲಾಗಿರುವ ಹಿನ್ನೆಲೆಯಲ್ಲಿ ಬೇಡಿಕೆ ಕುಸಿದಿದೆ ಎನ್ನುತ್ತಾರೆ ದಾವಣಗೆರೆ ದಲ್ಲಾಳಿ ಮಂಡಿ ಮಾಲೀಕ ಏಜಾಜ್ ಅಹಮದ್‌.

ಒಂದೆಡೆ ಮಳೆಯ ಕಣ್ಣಾಮುಚ್ಚಾಲೆ, ಮತ್ತೊಂದೆಡೆ ಬೆಲೆ ಕುಸಿತದ ಹಾವಳಿ. ಉಳುಮೆಯ ವೆಚ್ಚದ ಹೆಚ್ಚಳದ ನಡುವೆ ರೈತರ ಬದುಕು ಅಸಹನೀಯವಾಗಿದೆ. ರಾಜ್ಯದ ಕಂದಾಯ ಇಲಾಖೆಯ ಕಾರ್ಯದರ್ಶಿ ಕಚೇರಿಯ ಪತ್ರದಲ್ಲಿ ಮುಂಗಾರು ಹಂಗಾಮಿನ ಬೆಳೆ ಹಾನಿಯಾಗಿರುವ ಬಗ್ಗೆ ರಾಜ್ಯದ 61 ತಾಲ್ಲೂಕುಗಳನ್ನು ಪಟ್ಟಿ ಮಾಡಲಾಗಿದೆ.

ಆಯಾ ಜಿಲ್ಲಾಧಿಕಾರಿಗಳಿಗೆ ವಿವಿಧ ಬೆಳೆ ನಾಶದ ಬಗ್ಗೆ ವಿವರಣೆ ನೀಡುವಂತೆ ಕೋರಲಾಗಿದೆ. ಈ ಪಟ್ಟಿಯಲ್ಲಿ ಚನ್ನಗಿರಿ ತಾಲ್ಲೂಕು ಸೇರ್ಪಡೆಗೊಂಡಿಲ್ಲ. ಇದು ರೈತರಿಗೆ ಪರಿಹಾರ ಸಿಗುವುದನ್ನು ಮತ್ತಷ್ಟು ಜಟಿಲಗೊಳಿಸಿದೆ ಎನ್ನುತ್ತಾರೆ ಮಲ್ಲೇಶ್ ಮೇಕೆರ್‌.

ರೈತರ ಬೆಳೆಗೆ ಬೆಂಬಲ ನೀಡಬೇಕು. ಬೆಲೆ ಕುಸಿತ ತಡೆಯಲು ವೈಜ್ಞಾನಿಕ ಕ್ರಮ ಕೈಗೊಳ್ಳಬೇಕು. ಚನ್ನಗಿರಿ ತಾಲ್ಲೂಕನ್ನು ಬೆಳೆ ನಷ್ಟ ಪಟ್ಟಿಗೆ ಸೇರಿಸಬೇಕು ಎನ್ನುವುದು ಈ ಭಾಗದ ರೈತರ ಒತ್ತಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT