ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಸತ್ಯದ ಹುಡುಕಾಟ ಲೇಖಕರ ಹೊಣೆಗಾರಿಕೆ'

Last Updated 28 ಅಕ್ಟೋಬರ್ 2017, 6:34 IST
ಅಕ್ಷರ ಗಾತ್ರ

ಧಾರವಾಡ: ’ಸತ್ಯವನ್ನು ಹುಡುಕುವುದು, ಹೇಳುವುದು ಮತ್ತು ಅದನ್ನು ಕಲಾತ್ಮಕವಾಗಿ ಅಭಿವ್ಯಕ್ತಿಸುವುದು ಲೇಖಕನ ಹೊಣೆಗಾರಿಕೆ. ಆದರೆ, ಪ್ರಸ್ತುತ ಸಾಹಿತ್ಯ ಲೋಕದಲ್ಲಿ ಸುಳ್ಳುಗಳನ್ನು ಬಿತ್ತಿ, ಭ್ರಮೆಗಳನ್ನು ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ಲೇಖಕ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಆಲೂರು ವೆಂಕಟರಾವ್ ಸಭಾಭವನದಲ್ಲಿ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ವತಿಯಿಂದ ಬೇಂದ್ರೆ ಅವರ 36ನೇ ಪುಣ್ಯಸ್ಮರಣೆ ಪ್ರಯುಕ್ತ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಬೇಂದ್ರೆ ಗ್ರಂಥ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಿರುವವರು ತಾವು ನಂಬಿರುವುದನ್ನೇ ಸತ್ಯ ಎಂದು ಭ್ರಮಿಸಿ, ಅದನ್ನೇ ನಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆ ಮೂಲಕ ಯುವ ಸಮುದಾಯವನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಯುವ ಲೇಖಕರು ಹೆಚ್ಚು ಜವಾಬ್ದಾರಿ, ಹೊಣೆಗಾರಿಕೆಯಿಂದ ಸಾಹಿತ್ಯ ಕೃಷಿ ಮಾಡುವ ಅಗತ್ಯವಿದೆ’ ಎಂದರು.

‘ಬಹುತೇಕರು ಸ್ಪೂರ್ತಿ, ಅನುಭವ, ಭಾಷೆ ಕಲಿಕೆಯಿಂದ ಸಾಹಿತ್ಯ ಸೃಷ್ಟಿ ಮಾಡಬಹುದು ಎಂದು ತಿಳಿದುಕೊಂಡಿದ್ದಾರೆ. ಆದರೆ, ಸಾಹಿತ್ಯ ಸೃಷ್ಟಿಗೆ ಅಗತ್ಯವಾಗಿರುವುದು ಪ್ರತಿಭೆ. ಪ್ರತಿಭೆ ಇಲ್ಲದೆ ಸೃಷ್ಟಿಯಾಗುವ ಸಾಹಿತ್ಯ ಬಹಳ ಕಾಲ ನಿಲ್ಲುವುದಿಲ್ಲ. ಹಿಂದೆ ಹಲವರು ಯುವಕರಿಗೆ ಬರವಣಿಗೆ ಎಂದರೆ ತಾತ್ಸಾರ ಎಂದು ಹೇಳುತ್ತಿದ್ದರು.

ಆದರೆ, ಪ್ರಸ್ತುತ ಸಾಹಿತ್ಯ ಕ್ಷೇತ್ರದಲ್ಲಿ ಅಂಥ ಸಿನಿಕತನ ಕಂಡು ಬರುತ್ತಿಲ್ಲ. ಅಭಿವ್ಯಕ್ತಿಯ ಮಾರ್ಗ, ಆಲೋಚನಾ ರೀತಿ ಭಿನ್ನವಾಗಿದೆ. ದಲಿತ, ಬಂಡಾಯ ಸಿದ್ಧಾಂತಗಳು ಮರೆಯಾಗಿವೆ ಎನಿಸುತ್ತಿದ್ದರೂ ಆ ಸಿದ್ಧಾಂತದ ಆಶಯಗಳು ಭಿನ್ನವಾಗಿ ಅಭಿವ್ಯಕ್ತಿಗೊಳ್ಳುತ್ತಿವೆ. ಪ್ರಸ್ತುತ ಬರೆಯುತ್ತಿರುವ ಹಲವು ಯುವ ಲೇಖಕರ ಅಭಿವ್ಯಕ್ತಿಯ ರೀತಿಯಲ್ಲಿ ಹೊಸತನವಿದೆ. ಚೈತನ್ಯದೊಂದಿಗೆ ಜಾಗೃತರಾಗಿ ಬರೆಯುತ್ತಿದ್ದಾರೆ. ಇದು ಆಶಾದಾಯಕ ಬೆಳವಣಿಗೆ’ ಎಂದು ಹೇಳಿದರು.

‘ಬೇಂದ್ರೆ ಎಂದರೆ ಕಾವ್ಯ, ಕಾವ್ಯ ಎಂದರೆ ಬೇಂದ್ರೆ. ಅವರ ಹೆಸರಿನ ಪ್ರಶಸ್ತಿ ಪಡೆಯುವುದು ದೊಡ್ಡ ಗೌರವ. ಅವರ ಹೆಸರೇ ರೋಮಾಂಚನ ಮೂಡಿಸುವಂಥದ್ದು. ಎಲ್ಲ ವಯೋಮಾನದ ಲೇಖಕರೊಂದಿಗೆ ಸಮಕಾಲೀನರಾಗುವ ಸಾಧ್ಯತೆ ಇರುವುದು ಬೇಂದ್ರೆ ಅವರಿಗೆ. ಬೇಂದ್ರೆ ಸಹಜವಾಗಿ ಆಡು ಮಾತಿನಲ್ಲೇ ಕವಿತೆ ಬರೆದರು. ಕುವೆಂಪು ಆ ಸಂದರ್ಭದ ಶಾಸ್ತ್ರಗಳನ್ನು ಗೆಲ್ಲಬೇಕು ಎನ್ನುವ ಹಠದಲ್ಲಿ ಬರೆದರು. ಇಬ್ಬರೂ ಕನ್ನಡ ಸಾಹಿತ್ಯದ ಪ್ರಮುಖ ಕವಿಗಳು’ ಎಂದು ವಿಶ್ಲೇಷಿಸಿದರು.

ಪ್ರಶಸ್ತಿ ಪುರಸ್ಕೃತ 5 ಕೃತಿಗಳ ಪೈಕಿ  3 ಕೃತಿಗಳ ಕುರಿತು ಡಾ.ಎಚ್.ಎಸ್.ಅನುಪಮಾ ಮತ್ತು 2 ಕೃತಿಗಳ ಕುರಿತು ಡಾ.ಸಿದ್ದಲಿಂಗಸ್ವಾಮಿ ವಸ್ತ್ರದ ಮಾತನಾಡಿದರು. ರಾಜಕುಮಾರ ಮಡಿವಾಳರ, ಕಾಜೂರು ಸತೀಶ, ದೀಪಾ ಹಿರೇಗುತ್ತಿ ಮತ್ತು ಸಿ.ಎಸ್.ಭೀಮರಾಯ ಪ್ರಶಸ್ತಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಡಾ.ಶ್ಯಾಮಸುಂದರ ಬಿದರಕುಂದಿ, ನರಸಿಂಹ ಪರಾಂಜಪೆ, ಡಾ.ಗಿರಡ್ಡಿ ಗೋವಿಂದರಾಜ್, ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ.ಹೇಮಾ ಪಟ್ಟಣಶೆಟ್ಟಿ, ಡಾ.ವೀಣಾ ಶಾಂತೇಶ್ವರ, ಹ.ವೆಂ.ಕಾಖಂಡಕಿ, ಹರ್ಷ ಡಂಬಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT