ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರದಿಂದ ಇನ್ನೂ ಬಾರದ ಪರಿಹಾರ

Last Updated 28 ಅಕ್ಟೋಬರ್ 2017, 7:13 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಕಡವಾಡದ ಝರಿವಾಡ ಗ್ರಾಮದಲ್ಲಿ 2009ರಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟವರ 21 ಮಂದಿ ಪೈಕಿ ಮೂವರಿಗೆ ಕೇಂದ್ರ ಸರ್ಕಾರದಿಂದ ಇನ್ನೂ ಪರಿಹಾರ ಬಂದಿಲ್ಲ. ಪರಿಹಾರವನ್ನು ಶೀಘ್ರ ಒದಗಿಸುವಂತೆ ಸಂತ್ರಸ್ತ ಕುಟುಂಬದ ರಾಜನ್‌ ಕೊಠಾರಕರ ಜಿಲ್ಲಾಡಳಿತದ ಮೂಲಕ ಪ್ರಧಾನ ಮಂತ್ರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

‘ಗುಡ್ಡ ಕುಸಿತ ದುರಂತದಲ್ಲಿ ತಾಯಿ ಕಮಲಾ, ಸಹೋದರ ರಾಜೇಶ್‌ ಮತ್ತು ಸಹೋದರಿ ರೇಷ್ಮಾ ಮೃತಪಟ್ಟಿದ್ದರು. ರಾಜ್ಯ ಸರ್ಕಾರದಿಂದ ತಲಾ ₹ 1 ಲಕ್ಷ ಪರಿಹಾರ ದೊರೆಯಿತು. ಆದರೆ ಕೇಂದ್ರ ಸರ್ಕಾರದಿಂದ ಪ್ರಕೃತಿ ವಿಕೋಪದಡಿ ಬರಬೇಕಿದ್ದ ತಲಾ ₹ 1 ಲಕ್ಷ ಪರಿಹಾರ ಈವರೆಗೆ ಬಂದಿಲ್ಲ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಆದರೆ ಏನು ಪ್ರಯೋಜನವಾಗಿಲ್ಲ’ ಎಂದು ರಾಜೇಶ್‌ ಅಳಲು ತೋಡಿಕೊಂಡರು.

ಹುಸಿಯಾದ ಭರವಸೆ: ‘ದುರಂತದಲ್ಲಿ ಶ್ರೀನಾಥ ಗೋವೇಕರ ದಂಪತಿ ಮೃತಪಟ್ಟು, ಅವರ ಮೂವರು ಪುತ್ರಿಯರು ಬದುಕುಳಿದಿದ್ದರು. ಸಂಸದ ಅನಂತಕುಮಾರ್‌ ಹೆಗಡೆ ಅವರು ತಮ್ಮ ಕದಂಬ ಚಾರಿಟೆಬಲ್‌ ಟ್ರಸ್ಟ್‌ ಮೂಲಕ ಅವರನ್ನು ದತ್ತು ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಆದರೆ ಅದು ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ರಾಜ್ಯದಲ್ಲಿ ಕೋಮು ಸೌಹಾರ್ದ ಹಾಳುಗೆಡುವಂಥ ಉದ್ರೇಕಕಾರಿ ಭಾಷಣಗಳನ್ನು ಮಾಡುವುದನ್ನು ನಿಲ್ಲಿಸಿ, ಅವರು ಹೇಳಿದ ಮಾತನ್ನು ಉಳಿಸಿಕೊಳ್ಳಬೇಕು’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಹೇಳಿದರು.

‘ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಗರಕ್ಕೆ ಭೇಟಿ ನೀಡಿ, ಸಂತ್ರಸ್ತ ಕುಟುಂಬದ ವಿದ್ಯಾವಂತರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಅವೆಲ್ಲವೂ ಆಶ್ವಾಸನೆಯಾಗಿಯೇ ಉಳಿದಿದೆ. ಕೊಟ್ಟ ಮಾತನ್ನು ಜನಪ್ರತಿನಿಧಿಗಳು ಉಳಿಸಿಕೊಂಡಿಲ್ಲ’ ಎಂದು ಆರೋಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT