ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಡ, ಝಂಡಾ ಮತ್ತು ಬುಲೆಟ್‍‍ಗಳೇ ಈಗ ದೇಶಭಕ್ತಿಯ ಸಂಕೇತ: ರಾಮಚಂದ್ರ ಗುಹಾ

Last Updated 28 ಅಕ್ಟೋಬರ್ 2017, 8:45 IST
ಅಕ್ಷರ ಗಾತ್ರ

ಬೆಂಗಳೂರು: ‘ದಂಡ, ಝಂಡಾ ಮತ್ತು ಬುಲೆಟ್‍‍ಗಳೇ ಈಗ ದೇಶಭಕ್ತಿಯ ಸಂಕೇತಗಳಾಗಿವೆ' ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರು ಸಾಹಿತ್ಯ ಉತ್ಸವ 2017ರ ಮೊದಲ ದಿನವಾದ ಶನಿವಾರ ‘ಉಗ್ರ ರಾಷ್ಟ್ರೀಯವಾದ ವರ್ಸಸ್‍‍ ದೇಶಭಕ್ತಿ' ವಿಷಯದ ಬಗ್ಗೆ ಅವರು ಮಾತನಾಡಿದರು.

‘ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಹುಟ್ಟಿದ ದ್ವೇಷದ ಮಾದರಿಯಲ್ಲೇ ಭಾರತದಲ್ಲಿ ಉಗ್ರರಾಷ್ಟ್ರೀಯವಾದ ಬೆಳೆಯುತ್ತಿದೆ. ಗೌರಿ ಲಂಕೇಶ್‍‍, ಎಂ.ಎಂ. ಕಲಬುರ್ಗಿ, ದಾಭೋಲ್ಕರ್, ಪಾನ್ಸಾರೆ ಅವರು ಇಂತಹ ದ್ವೇಷಕ್ಕೆ ಬಲಿಯಾದವರು. ಉತ್ತರ ಪ್ರದೇಶದಲ್ಲಿ ಬದುಕಬೇಕೆನ್ನುವವರು ಯೋಗಿಯನ್ನೇ ನಾಯಕ ಎಂದು ಒಪ್ಪಬೇಕು. ರಾಮಮಂದಿರ ನಿರ್ಮಾಣವನ್ನೇ ಬೆಂಬಲಿಸಬೇಕು. ದೇಶದಲ್ಲಿ ಬಹುತ್ವವನ್ನು ಒಪ್ಪದ ವಾತಾವರಣ ಬೆಳೆಯುತ್ತಿರುವ ರೀತಿ ಇದು' ಎಂದರು.

‘ಕಾಂಗ್ರೆಸ್‍‍ನ ಭ್ರಷ್ಟಾಚಾರ ಮತ್ತು ಎಡಪಂಥೀಯರ ಸೈದ್ಧಾಂತಿಕ ಸೋಲು ಹಿಂದುತ್ವ ಹಾಗೂ ಉಗ್ರ ರಾಷ್ಟ್ರೀಯವಾದ ಬೆಳೆಯಲು ಕಾರಣ. ಕಾಂಗ್ರೆಸ್‍‍ ಪಕ್ಷ ಒಂದು ಕುಟುಂಬಕ್ಕೆ ಸೀಮಿತವಾಗುತ್ತಾ ಬಂದಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾಂಗ್ರೆಸ್‍‍ ಕುಟುಂಬ ರಾಜಕಾರಣಕ್ಕೆ ಸೀಮಿತವಾಗಿದ್ದು ದುರಂತ' ಎಂದರು.

‘19ನೇ ಶತಮಾನದ ಯುರೋಪಿಯನ್‍‍ ರಾಷ್ಟ್ರೀಯತೆಯ ಮಾದರಿಯಲ್ಲಿ ಭಾರತದಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆ ಬೆಳೆದಿದೆ. ಆದರೆ, ಬಹುತ್ವದ ಭಾರತಕ್ಕೆ ಒಂದು ಭಾಷೆ, ಒಂದು ಧರ್ಮ, ಒಂದು ಸಂಸ್ಕೃತಿಯ ಆಧಾರದ ರಾಷ್ಟ್ರೀಯತೆ ಒಗ್ಗುವಂಥದ್ದಲ್ಲ. ಗಾಂಧೀಜಿ ಹೇಳಿದ ಸ್ವರಾಜ್ಯ ತತ್ವದ ಆಧಾರದ ರಾಷ್ಟ್ರೀಯತೆ ಭಾರತಕ್ಕೆ ಬೇಕಿತ್ತು. ಅಹಿಂಸೆ, ಕೋಮುಸೌಹಾರ್ದ, ಅಸ್ಪೃಶ್ಯತೆ ನಿವಾರಣೆ ಮತ್ತು ಆರ್ಥಿಕ ಸ್ವಾವಲಂಬನೆಯ ತತ್ವಗಳ ಆಧಾರದ ಮೇಲೆ ಇಲ್ಲಿ ರಾಷ್ಟ್ರೀಯತೆ ರೂಪುಗೊಳ್ಳಬೇಕಿತ್ತು' ಎಂದರು.

ರಾಜಕೀಯಗೊಂಡ ಭಕ್ತಿ
‘ಧರ್ಮ, ಭಾಷೆ, ಸಂಸ್ಕೃತಿಯ ಆಧಾರದಲ್ಲಿ ದೇಶದಲ್ಲಿ ಯಾರೂ ಶ್ರೇಷ್ಠರಲ್ಲ. ಭಕ್ತಿ ರಾಜಕೀಯಗೊಂಡಾಗ ಅಲ್ಲಿ ಸರ್ವಾಧಿಕಾರ ಬೆಳೆಯುತ್ತದೆ ಎಂದು ಅಂಬೇಡ್ಕರ್‍‍ ಹೇಳಿದ್ದರು. ನರೇಂದ್ರ ಮೋದಿ ಅವರ ವಿಷಯದಲ್ಲಿ ಮಾತ್ರವಲ್ಲ ಇಂದಿರಾ ಗಾಂಧಿ ಅವರ ವಿಷಯದಲ್ಲೂ ನಡೆದಿದ್ದು ಇದೇ. ಯಾವುದೇ ನಾಯಕರೂ ಪರಿಪೂರ್ಣರಲ್ಲ' ಎಂದು ಹೇಳಿದರು.

‘ಲಿಂಗ ಹಾಗೂ ಜಾತಿಯ ಕಾರಣಕ್ಕೆ ಬೆಳೆದಿರುವ ಅಸಮಾನತೆಯ ಬಗ್ಗೆ ನಮಗೆ ನಾಚಿಕೆಯಾಗಬೇಕು. ನಾವು ಎಲ್ಲೇ ಇದ್ದರೂ ನಮ್ಮ ಸುತ್ತಲಿನ ಭಾಷೆ, ಸುತ್ತಲಿನ ಸಂಸ್ಕೃತಿಯನ್ನು ಮುಕ್ತವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು. ನಮ್ಮ ಚಿಂತನೆಗಳು ಮಾತ್ರ ಶ್ರೇಷ್ಠ, ಬೇರೆ ದೇಶಗಳ ಜ್ಞಾನ ಕನಿಷ್ಠ ಎಂಬ ಮನೋಭಾವ ಬದಲಾಗಬೇಕು. ಜಗತ್ತಿನ ಜ್ಞಾನಗಳಿಗೆಲ್ಲಾ ನಾವು ತೆರೆದುಕೊಳ್ಳಬೇಕು' ಎಂದರು.

‘ದೇಶಕ್ಕೆಲ್ಲಾ ಹಿಂದಿಯೊಂದೇ ಭಾಷೆಯಾಗಿರಬೇಕು, ಪಾಕಿಸ್ತಾನ ನಮ್ಮ ಶತ್ರು ಎಂಬಂಥ ಸ್ಥಾಪಿತ ಹಿತಾಸಕ್ತಿಗಳಿಂದ ಉಗ್ರರಾಷ್ಟ್ರೀಯವಾದ ಬೆಳೆದಿದೆ. ಉಗ್ರರಾಷ್ಟ್ರೀಯವಾದ ದ್ವೇಷ ಹಾಗೂ ಅಸಹಿಷ್ಣುತೆಯನ್ನು ಬೆಳೆಸುತ್ತಿದೆ. ಹಳೆಯ ಚಿಂತನೆಗಳನ್ನು ಪ್ರಶ್ನಿಸುವವರು, ವಿಮರ್ಶಿಸುವವರೆಲ್ಲ ರಾಷ್ಟ್ರದ್ರೋಹಿಗಳು ಎಂಬ ಆರ್‍‍ಎಸ್ಎಸ್‍‍ನ ಸಿದ್ಧಾಂತಗಳನ್ನು ಬಿತ್ತಲಾಗುತ್ತಿದೆ. ಮುಸ್ಲಿಮರು ಬಹುಸಂಖ್ಯಾತರಾಗಿದ್ದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯಹೂದಿಗಳು, ಕ್ರಿಶ್ಚಿಯನ್ನರು ಎರಡನೇ ದರ್ಜೆಯ ಪ್ರಜೆಗಳಾಗಿದ್ದರು. ಅವರಿಗೆ ರಾಜಕೀಯ ಪ್ರಾತಿನಿಧ್ಯ ಇರಲಿಲ್ಲ. ಇದೇ ಮಾದರಿಯಲ್ಲಿ ಆರ್‍‍ಎಸ್‍‍ಎಸ್ ಭಾರತದಲ್ಲಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ನಡೆಸಿಕೊಳ್ಳುತ್ತಿದೆ' ಎಂದರು.

ಹಳತಾಗಿರುವ ರಾಷ್ಟ್ರೀಯವಾದ
‘ದೇಶಭಕ್ತಿ ಎಂಬುದು ದೇಶದ ಪ್ರಜೆಗಳ ಸಹಜ ಸಂವೇದನೆ. ಆದರೆ, ಹಳತಾಗಿರುವ ರಾಷ್ಟ್ರೀಯವಾದದ ಹೇರಿಕೆಯಿಂದ ದೇಶಭಕ್ತಿ ಎಂದರೆ ಉಗ್ರರಾಷ್ಟ್ರೀಯವಾದ ಎಂಬ ವಾತಾವರಣ ರೂಪುಗೊಳ್ಳುತ್ತಿದೆ. ಸಮಾಜವಾದಿಗಳಾಗಿದ್ದ ಲೋಹಿಯಾ, ಗೋಪಾಲಗೌಡ, ಶಿವರಾಮ ಕಾರಂತ ಇವರೆಲ್ಲರೂ ಜಾತಿ ಹಾಗೂ ಅಸಮಾನತೆಯನ್ನು ವಿರೋಧಿಸುವ, ಬಹುತ್ವದಲ್ಲಿ ನಂಬಿಕೆಯಿದ್ದ ದೇಶಭಕ್ತರಾಗಿದ್ದರು' ಎಂದು ನುಡಿದರು.

‘ನಿರ್ಭೀತ ಚುನಾವಣಾ ವ್ಯವಸ್ಥೆ ಬರಬೇಕು. ಜನಪ್ರತಿನಿಧಿಯ ಆಯ್ಕೆಯ ವಿಚಾರದಲ್ಲಿ ಮುಕ್ತತೆ ಇರಬೇಕು. ನಮ್ಮ ಆಯ್ಕೆಯ ಭಾಷೆಯನ್ನು ಮಾತನಾಡುವ, ನಮ್ಮಿಷ್ಟದ ಸಂಸ್ಕೃತಿಯನ್ನು ಅನುಸರಿಸುವ ಮುಕ್ತ ವಾತಾವರಣ ಸೃಷ್ಟಿಯಾಗಬೇಕು. 19ನೇ ಶತಮಾನದ ಯುರೋಪಿಯನ್‍‍ ಮಾದರಿಯ ರಾಷ್ಟ್ರೀಯತೆಯನ್ನು ಬಿಟ್ಟು ಬಹುತ್ವವನ್ನು ಒಪ್ಪಿಕೊಳ್ಳುವಂಥ ದೇಶಭಕ್ತಿ ಬೆಳೆಸಿಕೊಳ್ಳಬೇಕು' ಎಂದರು.

‘ಉಗ್ರರಾಷ್ಟ್ರೀಯವಾದಿಗಳಾಗಿರುವವರು ನಮ್ಮ ದೇಶ ಮಾತ್ರ ಶ್ರೇಷ್ಠ, ನಮ್ಮ ಚಿಂತನೆಗಳು ಮಾತ್ರ ಶ್ರೇಷ್ಠ, ನಮ್ಮ ಸಂಸ್ಕೃತಿ ಮಾತ್ರ ಶ್ರೇಷ್ಠ ಎಂದು ವಾದಿಸುತ್ತಾರೆ. ಹಾಗೆಯೇ ಕಟ್ಟಾ ಎಡಪಂಥೀಯರಿಗೆ ನಮ್ಮ ದೇಶ, ನಮ್ಮ ಚಿಂತನೆ, ನಮ್ಮ ಸಂಸ್ಕೃತಿಯ ಬಗ್ಗೆ ಅನಾದರವೇ ಹೆಚ್ಚು. ಕಟ್ಟಾ ಎಡಪಂಥೀಯರಿಗೆ ಭಾರತಕ್ಕಿಂತ ರಷ್ಯಾ, ಚೀನಾಗಳೇ ಶ್ರೇಷ್ಠ ಎನಿಸುತ್ತವೆ. ಅಲ್ಲಿನ ಹಳೆಯ ಚಿಂತನೆಗಳೇ ಅವರಿಗೆ ಇನ್ನೂ ಹೊಸತೆನಿಸುತ್ತದೆ' ಎಂದು ಹೇಳಿದರು.

ಜನರಿಂದ ಆಯೋಜನೆಯಾಗುವ ಸಾಹಿತ್ಯ ಉತ್ಸವ
‘ಬೆಂಗಳೂರು ಸಾಹಿತ್ಯ ಉತ್ಸವ ಜನರಿಂದಲೇ ಆಯೋಜನೆಯಾಗುವ ಸಾಹಿತ್ಯ ಉತ್ಸವ. ದೇಶದ ವಿವಿಧ ಕಡೆಗಳಲ್ಲಿ ನಡೆಯುವ ಬಹುತೇಕ ಸಾಹಿತ್ಯ ಉತ್ಸವಗಳಿಗೆ ಕಾರ್ಪೊರೇಟ್‍‍ ದೇಣಿಗೆ ಸಿಗುತ್ತದೆ. ಆದರೆ, ಬೆಂಗಳೂರಿನ ಸಾಹಿತ್ಯ ಉತ್ಸವ ಇಲ್ಲಿನ ಸಾಹಿತ್ಯಾಸಕ್ತರ ಬಲದಿಂದಲೇ ನಡೆಯುವ ಉತ್ಸವ' ಎಂದು ರಾಮಚಂದ್ರ ಗುಹಾ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT