ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಪ್ರಚಾರ ಪಡೆಯುವ ಅವಶ್ಯಕತೆ ಇಲ್ಲ

Last Updated 28 ಅಕ್ಟೋಬರ್ 2017, 8:58 IST
ಅಕ್ಷರ ಗಾತ್ರ

ಭಾರತೀನಗರ: ‘ಸರ್ಕಾರದಿಂದ ಕೋಟ್ಯಂತರ ರೂಪಾಯಿ ಹಣ ತಂದು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿದಿದ್ದೇನೆಯೇ ಹೊರತು, ಸುಳ್ಳು ಹೇಳಿಕೊಂಡು ಪ್ರಚಾರ ಪಡೆಯುವ ಜಾಯಮಾನ ನನ್ನದಲ್ಲ’ ಎಂದು ಶಾಸಕ ಡಿ.ಸಿ. ತಮ್ಮಣ್ಣ ಹೇಳಿದರು.

ಸಮೀಪ ಅಜ್ಜಹಳ್ಳಿ ಗ್ರಾಮದಲ್ಲಿ ಶುಕ್ರವಾರ ಕ್ಯಾತಮ್ಮ ದೇವರ ದೇವಾಲಯ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಕಾಂಗ್ರೆಸ್‌ ಮುಖಂಡರು ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತ ಅಭಿವೃದ್ಧಿಗೆ ಅಡ್ಡಗಾಲಾಗುತ್ತಿದ್ದಾರೆಯೇ ಹೊರತು, ಅವರಿಂದ ಕ್ಷೇತ್ರದ ಜನರಿಗೆ ಎಳ್ಳಷ್ಟೂ ಅನುಕೂಲವಾಗಿಲ್ಲ. ಕ್ಷೇತ್ರದ ಅಭಿವೃದ್ಧಿಯನ್ನು ತಾವೇ ಮಾಡುತ್ತಿದ್ದೇವೆ ಎಂದು ‘ಬುರುಡೆ’ ಬಿಡುತ್ತಿದ್ದಾರೆ’ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಮಧು ಜಿ. ಮಾದೇಗೌಡ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಅಭಿವೃದ್ಧಿ ವಿಷಯದಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರ ಯಾವತ್ತೂ ಹಿಂದೆ ಬಿದ್ದಿಲ್ಲ. ಸುಳ್ಳು ಹೇಳಿಕೊಂಡು ಪ್ರಚಾರ ಪಡೆಯುವ ಅವಶ್ಯಕತೆ ನನಗಿಲ್ಲ. ಯಾರ ಕೊಡುಗೆ ಏನು ಎಂಬುದನ್ನು ದಾಖಲೆ ಸಮೇತ ವೇದಿಕೆಯಲ್ಲಿ ಪ್ರಸ್ತುತ ಪಡಿಸಬಲ್ಲೆ. ಸವಾಲನ್ನು ಸ್ವೀಕರಿಸಿ ದಾಖಲೆ ಬಿಡುಗಡೆ ಮಾಡಲಿ ಎಂದರು.

‘ನನ್ನ ಶಾಸಕತ್ವದ ಅವಧಿಯಲ್ಲಿ ಮದ್ದೂರು ಕ್ಷೇತ್ರಕ್ಕೆ ಸುಮಾರು ₹ 1,500 ಕೋಟಿಯಿಂದ 2,000 ಕೋಟಿ ಮೊತ್ತದ ಸರ್ಕಾರದ ಅನುದಾನ ತಂದಿದ್ದೇನೆ. ಶಾಲೆ–ಕಾಲೇಜು ಕಟ್ಟಡಗಳು, ವಸತಿ ಶಾಲೆಗಳು, ಕುಡಿಯುವ ನೀರು, ವಿದ್ಯುತ್‌, ನೀರಾವರಿ ಯೋಜನೆಗಳು, ಕೆರೆ ಕಟ್ಟೆಗಳ ಅಭಿವೃದ್ಧಿ, ರಸ್ತೆ , ಚರಂಡಿ ವ್ಯವಸ್ಥೆ ಹೀಗೆ ವಿವಿಧ ಕಾಮಗಾರಿಗಳನ್ನು ಮಾಡಿಸಿದ್ದೇನೆ. ಇನ್ನೂ ಕೆಲವು ಯೋಜನೆಗಳು ಆರಂಭದ ಹಂತದಲ್ಲಿವೆ. ಕೋಟ್ಯಂತರ ರೂಪಾಯಿ ವೆಚ್ಚದ ಕುಡಿಯುವ ನೀರು ಯೋಜನೆ ಸರ್ಕಾರದ ಮಂಜೂರಾತಿಯ ಹಂತದಲ್ಲಿದೆ. ಇವೆಲ್ಲ ಅಭಿವೃದ್ಧಿಯಲ್ಲದೇ ಮತ್ತೇನು’ ಎಂದು ಪ್ರಶ್ನಿಸಿದರು.

ತಿಂಗಳ ಸಂಬಳವನ್ನೂ ಮನೆಗೆ ತೆಗೆದುಕೊಂಡು ಹೋಗುತ್ತಿಲ್ಲ. ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಗಳಿಗೆ ಉಚಿತವಾಗಿ ದಿನಪತ್ರಿಕೆಗಳನ್ನು ವಿತರಿಸುತ್ತಿದ್ದೇನೆ. ಇದರಿಂದ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಏರಿಕೆ ಕಂಡಿದೆ. ಇಡೀ ಜಿಲ್ಲೆಯಲ್ಲೇ ಸತತವಾಗಿ ಮೊದಲಿಗರಾಗುತ್ತಿದ್ದೇವೆ ಎಂದು ಹೇಳಿದರು.

ಜೆಡಿಎಸ್‌ ಮುಖಂಡ ಸಾದೊಳಲು ಸ್ವಾಮಿ, ತಾ.ಪಂ. ಸದಸ್ಯ ಸೋಮಶೇಖರ್‌, ಗ್ರಾ.ಪಂ. ಅಧ್ಯಕ್ಷ ಡಿ.ವಿಜಯಕುಮಾರ್, ಹುಲಿಗೆರೆಪುರ ಮಹದೇವು, ಸದಸ್ಯರಾದ ರವಿ, ನಿಂಗಮ್ಮ, ಬಸವರಾಜು, ಪ್ರಭಾಕರ್‌, ತೊರೆಚಾಕನಹಳ್ಳಿ ಶಂಕರೇಗೌಡ, ಪಿ.ರಾಮೇಗೌಡ, ಎ.ಎಸ್.ರಮೇಶ್, ರಾಜೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT