ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಹೊರವರ್ತುಲ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ

Last Updated 28 ಅಕ್ಟೋಬರ್ 2017, 9:24 IST
ಅಕ್ಷರ ಗಾತ್ರ

ರಾಯಚೂರು: ನಗರ ರಚನೆ ಯೋಜನೆಯಡಿ ರಾಯಚೂರು ನಗರಕ್ಕೆ ಹೊರವರ್ತುಲ ರಸ್ತೆ (ರಿಂಗ್‌ರೋಡ್‌) ನಿರ್ಮಿಸಲು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮಕ್ಕೆ (ಕೆಯುಐಡಿಎಫ್‌ಸಿ) ರಾಯಚೂರು ಅಭಿವೃದ್ಧಿ ಪ್ರಾಧಿಕಾರದಿಂದ ಪ್ರಸ್ತಾವನೆ ಸಲ್ಲಿಸಲು ಈಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್‌ ಕರೀಂ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಯೋಜನೆ–2021ರಲ್ಲಿ 35 ಕಿಲೋ ಮೀಟರ್‌ ಉದ್ದದ ಹೊರವರ್ತುಲ ರಸ್ತೆ ನಿರ್ಮಾಣ ಯೋಜನೆ ಸೇರಿಸಲಾಗಿದೆ. ಈಗಾಗಲೇ ಲಿಂಗಸುಗೂರು–ಹೈದರಾಬಾದ್‌ ರಸ್ತೆಗಳನ್ನು ಸಂಪರ್ಕಿಸುವ ಬೈಪಾಸ್‌ 8 ಕಿಲೋ ಮೀಟರ್‌ ಉದ್ದದ ರಸ್ತೆ ಅಸ್ತಿತ್ವದಲ್ಲಿದೆ. ಇನ್ನುಳಿದ 27 ಕಿಲೋ ಮೀಟರ್‌ ರಸ್ತೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಬಿಜನಗೇರಾ ರಸ್ತೆಗೆ ಹೊಂದಿಕೊಂಡಿರುವ ಗೊಲ್ಲನಕುಂಟೆ ಕೆರೆ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗುವುದು. 2ನೇ ಹಂತದ ಸಿದ್ರಾಂಪೂರ ರಸ್ತೆ ವಸತಿ ಯೋಜನೆಯನ್ನು ರೂಪಿಸಲು ಪ್ರಸ್ತಾವನೆಗೆ ರಾಜ್ಯ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆಯಲಾಗುವುದು ಎಂದರು.

ಕೆಲವರು ತಾಂತ್ರಿಕ ಅಭಿಪ್ರಾಯ ನೀಡಿ ಬಿನ್‌ಶೇತ್ಕಿ ಪಡೆದಿರುವುದು ಹಾಗೂ ನೀಲನಕ್ಷೆಗಳಿಗೆ ನಿಯಮಬಾಹಿರ ಅನುಮೋದನೆ ಪಡೆದಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿದೆ. ಇದಕ್ಕೆ ಕಾರಣವಾದ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ದವೂ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ನೂತನ ನಗರ ನಿರ್ಮಾಣ
ಅಸ್ಕಿಹಾಳ–ಯಕ್ಲಾಸಪುರ ಗ್ರಾಮಕ್ಕೆ ಸೇರಿದ 1500 ಎಕರೆ ಜಮೀನಿನಲ್ಲಿ ನೂತನ ನಗರ ಯೋಜನೆ (ನ್ಯೂ ಟೌನ್‌ಶಿಪ್‌)ಯಡಿ ಕ್ರಮಬದ್ಧವಾದ ನಗರ ನಿರ್ಮಿಸುವುದಕ್ಕೆ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರವು ತೀರ್ಮಾನಿಸಿದೆ. ಈ ಯೋಜನೆಗೆ ಸೂಕ್ತ ಪ್ರಸ್ತಾವನೆಯನ್ನು ಬೆಂಗಳೂರಿನ ಕೆಯುಐಡಿಎಫ್‌ಸಿ ಕಚೇರಿಗೆ ಸಲ್ಲಿಸಲಾಗುತ್ತಿದೆ.

ಕಚೇರಿ ಕಟ್ಟಡ
ಐಡಿಎಸ್‌ಎಂಟಿ ಬಡಾವಣೆಯಲ್ಲಿರುವ ಸಿಎ ಖಾಲಿ ನಿವೇಶನದಲ್ಲಿ ರಾಯಚೂರು ನಗರಾಭಿವೃಧ್ಧಿ ಪ್ರಾಧಿಕಾರ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ನಿರ್ಣಯವಾಗಿದೆ. ಇದಕ್ಕಾಗಿ ಬಿಲ್ಡ್‌, ಆಪರೇಟ್‌, ಟ್ರಾನ್ಸಫರ್‌ (ಬಿಒಟಿ) ಮಾದರಿ ಯೋಜನೆಯ ಮೊರೆ ಹೋಗಲಾಗಿದೆ. ಯೋಜನೆಗೆ ಸರ್ಕಾರದಿಂದ ಅನುಮೋದನೆ ಪಡೆದು ಟೆಂಡರ್‌ ಕರೆಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT