ಕಡಂದೇಲು ಶತಮಾನ ಸ್ಮೃತಿ

ಸೋಮವಾರ, ಜೂನ್ 24, 2019
24 °C

ಕಡಂದೇಲು ಶತಮಾನ ಸ್ಮೃತಿ

Published:
Updated:
ಕಡಂದೇಲು ಶತಮಾನ ಸ್ಮೃತಿ

ಯಕ್ಷಗಾನ ಇತಿಹಾಸದ ಶತಮಾನದ ಸಾಕ್ಷಿಯಂತೆ ಬದುಕಿದ ಪ್ರಸಿದ್ಧ ಯಕ್ಷಗಾನ ಕಲಾವಿದ ಕಡಂದೇಲು ಪುರುಷೋತ್ತಮ ಭಟ್ಟರ ಜನ್ಮ ಶತಮಾನೋತ್ಸವ ವರ್ಷವಿದು. ತೊಂಬತ್ತೇಳರ ಪ್ರಾಯದಲ್ಲಿ ತೀರಿಕೊಂಡ ಪುರುಷೋತ್ತಮ ಭಟ್ಟರು ಸಂತನ ಬದುಕನ್ನು ಬದುಕಿದವರು. ದಕ್ಷಿಣ ಕನ್ನಡದ ಪುತ್ತೂರು ತಾಲ್ಲೂಕಿನ ಪಾಣಾಜೆಯವರಾದರೂ ತಮ್ಮ ಜೀವಿತದ ಎಂಟು ದಶಕಗಳನ್ನು ಕಟೀಲಿನ ನಂದಿನಿ ನದಿಯ ದಡದಲ್ಲಿ ಓಡಾಡುತ್ತ ಕಳೆದವರು.

ಸಂಸ್ಕೃತ- ಕನ್ನಡ ಭಾಷೆಗಳಲ್ಲಿ ಹಿಡಿತವಿದ್ದ ಅವರ ಪ್ರವೇಶದೊಂದಿಗೆ ಯಕ್ಷಗಾನದ ವಾಚಿಕ ಕ್ಷೇತ್ರಕ್ಕೆ ಹೊಸ ಆಯಾಮ ಬಂದಿತ್ತು. ಮಲ್ಪೆ ಶಂಕರನಾರಾಯಣ ಸಾಮಗ, ಶೇಣಿ ಗೋಪಾಲಕೃಷ್ಣ ಭಟ್ಟ, ಅಳಕೆ ರಾಮಯ ರೈ, ಪಡ್ರೆ ಚಂದು ಮುಂತಾದ ಹಿರಿಯ ಯಕ್ಷಗಾನ ಕಲಾವಿದರೊಂದಿಗೆ ಒಡನಾಡಿದ ಅವರು ನೂರು ವರ್ಷಗಳ ಹಿಂದಿನ ಅಪ್ಪಟ ಭಾರತೀಯ ಮನಸ್ಸಿನ ಪ್ರತೀಕವಾಗಿದ್ದವರು. ಸಂಪ್ರದಾಯದ ಒಲವು ಮತ್ತು ಆಧುನಿಕ ವೈಚಾರಿಕತೆಯ ಅರಿವು- ಇವುಗಳ ನಡುವಿನ ಸಮನ್ವಯ ಇವರ ಜೀವನದರ್ಶನವಾಗಿತ್ತು.

ಇಂದು ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆಯು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿದೆ. ಪುರುಷೋತ್ತಮ ಶತಸ್ಮೃತಿ ಸಂಪುಟ ‘ಮರ್ಯಾದಾ ಪುರುಷೋತ್ತಮ’ದ ಸಂಪಾದಕ ಪೃಥ್ವೀರಾಜ ಕವತ್ತಾರು ಅವರ ಪ್ರಸ್ತಾವನೆಯ ಆಯ್ದ ಭಾಗ ಇಲ್ಲಿದೆ.

***

ಈ ದಿನಗಳ ಬಹಳ ಮುಖ್ಯ ವಿದ್ಯಮಾನವೊಂದನ್ನು ಗಮನಿಸಬೇಕು. ವ್ಯಕ್ತಿಗಳು ಮಾತ್ರವಲ್ಲ, ಹೆಚ್ಚಿನ ಶಾಲೆಗಳು ಕಳೆದ ನಾಲ್ಕೈದು ವರ್ಷಗಳಿಂದ ತಮ್ಮ ‘ಶತಮಾನೋತ್ಸವ’ವನ್ನು ಆಚರಿಸುತ್ತಿವೆ. ಕನ್ನಡ ಸಾಹಿತ್ಯದ ‘ನವ್ಯಪಂಥ’ದ ಪ್ರವರ್ತಕ ಗೋಪಾಲಕೃಷ್ಣ ಅಡಿಗರ ಶತಮಾನೋತ್ಸವವನ್ನು ಈ ವರ್ಷವೇ ಆಚರಿ ಸಲಾಗುತ್ತಿದ್ದರೆ, ಯಕ್ಷಗಾನದ ‘ನವ್ಯಪಂಥ’ದ ಪ್ರತಿಪಾದಕ ಶೇಣಿ ಗೋಪಾಲಕೃಷ್ಣ ಭಟ್ಟರ ಶತಮಾನೋತ್ಸವವೂ ಈ ಸಲವೇ.

ಬಣ್ಣದ ವೇಷದ ಮಹಾಲಿಂಗರವರ, ರಾಜವೇಷದ ಅಳಿಕೆ ರಾಮಯ್ಯ ರೈಗಳ, ಹಾಸ್ಯಗಾರ ವಿಟ್ಲ ಗೋಪಾಲಕೃಷ್ಣ ಜೋಶಿ ಯವರ ಮತ್ತು ಸ್ತ್ರೀವೇಷಧಾರಿ ಕಡಂದೇಲು ಪುರುಷೋತ್ತಮ ಭಟ್ಟರ ಶತಮಾನೋತ್ಸವ ಸಂಭ್ರಮವನ್ನು ಈ ಒಂದೆರಡು ವರ್ಷಗಳ ಅಂತರದಲ್ಲಿ ಆಚರಿಸುತ್ತಿದ್ದೇವೆ. ನೂರರ ಹರೆಯದಲ್ಲಿರುವ ಕಲಾವಿದರ ಹೆಸರಿನ ಪಟ್ಟಿಯನ್ನು ಇನ್ನಷ್ಟು ವಿಸ್ತರಿಸಬಹುದು.

ಯಕ್ಷಗಾನದ ಈ ಕಾಲಘಟ್ಟವನ್ನು ಕನ್ನಡ ಸಾಹಿತ್ಯಿಕ ಸಂದರ್ಭದ ‘ನವ್ಯ’ಕ್ಕೆ ಸಂವಾದಿಯಾಗಿ ಪರಿಕಲ್ಪಿಸುವುದಾದಲ್ಲಿ ಇದು ಯಕ್ಷಗಾನದ ‘ನವ್ಯಪಂಥ’ದ ಶತಮಾನೋತ್ಸವವೇ ಸರಿ. ಈ ಮಾತಿಗೆ ಸಮರ್ಥನೆಯಾಗಿ ಪುರುಷೋತ್ತಮ ಭಟ್ಟರ ಬದುಕನ್ನೇ ಗಮನಿಸಬಹುದು.

ಭಾರತೀಯ ಸಂಪ್ರದಾಯದಲ್ಲಿ ದೇವ-ಜೀವ, ಲೌಕಿಕ- ಪಾರಮಾರ್ಥಿಕಗಳ ಸಂಬಂಧವನ್ನು ಬೆಸೆಯುವ ಕರ್ಮ ಮಾರ್ಗಗಳು ಹಲವು ಇವೆ. ಸ್ಥೂಲವಾಗಿ ಧ್ಯಾನ, ಜ್ಞಾನ, ಪೂಜೆ ಎಂದು ಮೂರು ವಿಭಾಗಗಳನ್ನಾಗಿ ಮಾಡುವ ಕ್ರಮವಿದೆ. ಮೂರನ್ನೂ ಅನುಸರಿಸಿದವರಿದ್ದಾರೆ. ಒಂದನ್ನಷ್ಟೇ ಅನುಸರಿಸಿ, ಉಳಿದವುಗಳನ್ನು ನಿರಾಕರಿಸದೆ ಜೀವನ ನಡೆಸಿದವರೂ ಇದ್ದಾರೆ.

ವೇದೋಪನಿಷತ್ತುಗಳನ್ನು ಆಳವಾಗಿ ಓದಿ ಸೂಕ್ಷ್ಮಜ್ಞತೆಯನ್ನು ಬೆಳೆಸಿಕೊಂಡಿರುವವನು ಸಂಪ್ರದಾಯದೊಳಗೇ ವೈಚಾರಿಕತೆಯನ್ನು ರೂಢಿಸಿಕೊಳ್ಳುತ್ತಾನೆ; ಸಾರ್ವಜನಿಕವಾದ ಪೂಜಾದಿಗಳಿಗಿಂತ ಖಾಸಗಿ ನೆಲೆಯ ಜಪತಪಾದಿ ಧ್ಯಾನಗಳಲ್ಲಿಯೇ ಆಸಕ್ತಿ ಹೊಂದಿರುತ್ತಾನೆ. ಇದನ್ನೇ ‘ಆಧ್ಯಾತ್ಮಿಕ’ ಎನ್ನುವುದು. ಇಂಗ್ಲಿಷ್‌ನಲ್ಲಿ ಬಳಸುವ ‘ಸ್ಪಿರಿಚುವಾಲಿಟಿ’ಯೂ ಇದೇ.‌

ಆ ತಲೆಮಾರಿನ ಎಲ್ಲ ಸಾಧಕರಲ್ಲಿಯೂ ಇಂಥ ‘ಸ್ಪಿರಿಚುವಲ್‌’ ದರ್ಶನಗಳಿದ್ದವು. ಮನೆಯೊಳಗೆ ಅಥವಾ ಖಾಸಗಿಯಾಗಿ ನಡೆಸುವ ಜಪಾನುಷ್ಠಾನಗಳಲ್ಲಿ ವಿಶೇಷ ನಿಷ್ಠೆ ಅವರಿಗೆ. ಈ ಹಿನ್ನೆಲೆಯಲ್ಲಿ ಮಲ್ಪೆ ಶಂಕರನಾರಾಯಣ ಸಾಮಗರು, ಶೇಣಿ ಗೋಪಾಲಕೃಷ್ಣ ಭಟ್ಟರು, ದೇರಾಜೆ ಸೀತಾರಾಮಯ್ಯರವರು, ಪೆರ್ಲ ಕೃಷ್ಣ ಭಟ್ಟರು- ಇವರೆಲ್ಲರ ಬದುಕಿನ ಧೋರಣೆಗಳು ‘ಸಾಮಾನ್ಯ ಭಕ್ತಿಯ ಅಭಿವ್ಯಕ್ತಿ’ಗಿಂತ ಬಹಳ ಎತ್ತರದಲ್ಲಿದ್ದವು ಅಂತ ಅನ್ನಿಸುತ್ತದೆ.

ಇದೇ ಎತ್ತರದಲ್ಲಿ ಪುರುಷೋತ್ತಮ ಭಟ್ಟರೂ ಇದ್ದರು. ಅಜ್ಜ ಬಲಿಪ ನಾರಾಯಣ ಭಾಗವತರು, ಅಗರಿ ಶ್ರೀನಿವಾಸ ಭಾಗವತರು- ಅವರ ಬದುಕಿನ ನಡೆ, ಅವಧೂತ ವ್ಯಕ್ತಿತ್ವ, ಲೌಕಿಕವನ್ನು ಕುರಿತ ನಿರ್ಲಿಪ್ತತೆ, ಪುರಾಣದ ಮೂಲಪಠ್ಯವನ್ನು ಯಕ್ಷಗಾನ ಪಠ್ಯದ ಮೂಲಕ ಭಿನ್ನವಾಗಿ ಮರುರೂಪಿಸಿದ ಸೃಜನಶೀಲತೆ- ಇವೆಲ್ಲವನ್ನು ಗಮನಿಸಿದರೂ ಅವರು ಕೇವಲ ಹಾಡುಗಾರರಲ್ಲ. ಅದರಾಚೆಗಿನ ದಾರ್ಶನಿಕ ದೃಷ್ಟಿ ಅವರಲ್ಲಿತ್ತು ಎಂಬ ಸುಳಿವು ಸಿಗುತ್ತದೆ.

ಪುರುಷೋತ್ತಮ ಭಟ್ಟರ ಒಟ್ಟೂ ಬದುಕಿನ ಧೋರಣೆ ಬಹಳ ಸಂಕೀರ್ಣವಾದುದು. ಅದು ಹೀಗೆಯೇ ಎಂದು ನಿರ್ಣಯಿಸಲಾಗದಂಥದ್ದು. ದೈವಿಕ- ಲೌಕಿಕಗಳು ಬೆಸೆಯುವಲ್ಲಿ ಅವರೇ ಅನುಸಂಧಾನ ಮಾಡಿಕೊಂಡ ಮಾರ್ಗವೊಂದಿತ್ತು. ಅದು ಅವರದೇ ಮಾರ್ಗ. ಆತ್ಮ ತೋರಿದ ಮಾರ್ಗ. ಲೋಕರೂಢಿಯಲ್ಲಿ ಆತ್ಮಸಾಕ್ಷಿಗೆ ಸರಿಯಾಗಿ ನಡೆಯುವುದು ಎನ್ನುತ್ತಾರಲ್ಲ, ಹಾಗೆ. ತಮ್ಮ ಜೀವನ ಪಥದ ಬಗ್ಗೆ ಎಂಥ ಶ್ರದ್ಧೆ ಎಂದರೆ, ಅಂಥ ಇನ್ನೊಂದು ಮಾರ್ಗದಲ್ಲಿ ನಡೆಯಲು ಅವರ ಅಂತಃಪ್ರಜ್ಞೆ ಒಪ್ಪುತ್ತಿರಲಿಲ್ಲ. ‘ಅವರಿಗೆ ಯಾವುದೂ ಸರಿ ಬರುತ್ತಿರಲಿಲ್ಲ. ಎಲ್ಲರಿಗೂ ಬೈಯುವುದೇ’ ಎಂದು ಅವರ ಕಿರಿಯ ಒಡನಾಡಿಗಳು ಹೇಳಿಕೊಳ್ಳುವುದು ಇದೇ ಕಾರಣಕ್ಕೆ ಎಂದು ತೋರುತ್ತದೆ.

‘ಹಸಿವು ನೀಗಿಸಲು ಊಟ; ಉಡಲೊಂದು, ಒಗೆದು ಒಣಹಾಕಲೊಂದು- ಎರಡು ಬಟ್ಟೆಗಳು- ಇಷ್ಟಿದ್ದರೆ ಬದುಕಿಗೆ ಇನ್ನೇನು ಬೇಕು?’ ಎಂದು ಅವರು ಹೇಳುತ್ತಿದ್ದರೆಂದು ಅವರ ಸೊಸೆ ಶ್ಯಾಮಲಾ ಸದಾಶಿವ ಭಟ್ಟರು ಹೇಳುತ್ತಾರೆ. ಈ ಮಾತಿಗೆ ಅನುಗುಣವಾಗಿಯೇ ಅವರು ನಡೆದುಕೊಂಡರು. ಅದು ಕೂಡ ಆತ್ಮಸಾಧನೆಯ ಭಾಗವೇ.

ಕಡಂದೇಲು ಮನೆ ತೊರೆದು ಪರಿವ್ರಾಜಕನಂತೆ ಅಲೆದಾಡಿದ ಬಾಲಕ ಪುರುಷೋತ್ತಮ, ಯಕ್ಷಗಾನದ ಒಡನಾಟದ ಮೂಲಕ ಕಟೀಲಿಗೆ ಬಂದು ನೆಲೆಯಾಗುವವರೆಗಿನ ಅವರ ಜೀವನ ಕಥೆ ಯಾರಿಗೂ ತಿಳಿದಿಲ್ಲ. ಬಲಿಪ ನಾರಾಯಣ ಭಾಗವತರು ಪ್ರಧಾನ ಭಾಗವತರಾಗಿದ್ದ ಯಕ್ಷಗಾನ ಮೇಳವೊಂದರಲ್ಲಿ ಹನ್ನೆರಡು- ಹದಿಮೂರು ವರ್ಷದ ಬಾಲಕ ಅಡುಗೆಯವನಾಗಿ ಸೇರಿ ಮುಂದೆ ಪ್ರಸಿದ್ಧ ಸ್ತ್ರೀವೇಷಧಾರಿಯಾಗಿ ಬೆಳೆದದ್ದು ಹೇಗೆ, ಏನು ಎಂದು ಯಾರಿಗೂ ಗೊತ್ತಿಲ್ಲ.

ಒಂದು ಯಕ್ಷಗಾನ ಬಯಲಾಟದ ಚೌಕಿಯ ಬಳಿ ನಿಂತಿದ್ದಾಗ, ಅವರ ಉದ್ದನೆಯ ತಲೆಗೂದಲನ್ನು ಮತ್ತು ಸ್ಫುರದ್ರೂಪವನ್ನು ನೋಡಿ, ಒತ್ತಾಯದಿಂದ ಸ್ತ್ರೀವೇಷ ಹಾಕಿಸಿದರಂತೆ. ಅಂದಿನ ಸ್ತ್ರೀವೇಷಧಾರಿ ಪಡ್ರೆ ಗಣಪತಿ ಭಟ್ಟರು ಪುರುಷೋತ್ತಮ ಭಟ್ಟರನ್ನು ಯಕ್ಷಗಾನ ರಂಗಕ್ಕೆ ಕರೆತಂದರಂತೆ; ಮತ್ತೊಬ್ಬ ಸ್ತ್ರೀವೇಷಧಾರಿ ಪೈವಳಿಕೆ ಐತಪ್ಪ ಶೆಟ್ಟರಿಂದ ಪ್ರೇರಣೆ ಪಡೆದರಂತೆ- ಹೀಗೆ ಯಾರಾದರೂ ಆಗ್ರಹಪೂರ್ವಕವಾಗಿ ಅವರ ಜೀವನದ ಬಗ್ಗೆ ಕೇಳಿದರೆ ಹೇಳಿಯಾರೇ ಹೊರತು, ಅವರಾಗಿಯೇ ಹೇಳಿಕೊಂಡದ್ದಿಲ್ಲ.

ಆತ್ಮಕಥನವನ್ನು ಹೇಳಿಕೊಳ್ಳುವ ಉತ್ಸಾಹವೂ ಅವರಿಗಿರಲಿಲ್ಲ. ಅದನ್ನು ಬರೆಯುವವರೂ ಆಗ ಇರಲಿಲ್ಲ. ಕಟೀಲಿನ ಆಸ್ರಣ್ಣ ಬಂಧುಗಳು, ಕಲ್ಲಾಡಿ ಕೊರಗ ಶೆಟ್ಟರು ಅವರಿಗೆ ಆಸರೆಯಾದರೆಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ.

ಕಟೀಲಿಗೆ ಬಂದಾಗ ಒಮ್ಮೆ ಅವರಿಗೆ ತೀವ್ರ ಅನಾರೋಗ್ಯವಾಗಿ ಸಮೀಪದ ತುಳು- ಶಿವಳ್ಳಿ ಬ್ರಾಹ್ಮಣ ಸಮುದಾಯದವರ ಮನೆಯಲ್ಲಿ ವಿಶ್ರಾಂತಿ ಪಡೆದು ಗುಣಮುಖರಾದದ್ದು, ಅವರ ಸದಾಚಾರ ಸಂಪನ್ನತೆಯನ್ನು ಗಮನಿಸಿ ಆ ಮನೆಯವರು ತಮ್ಮ ಮಗಳು ಕುಮುದಾ ಎಂಬುವವರನ್ನು ಮದುವೆ ಮಾಡಿಕೊಟ್ಟದ್ದು ಅವರ ಜೀವನಕ್ಕೆ ತಿರುವು ನೀಡಿದ ಘಟನೆಗಳಾಗಿವೆ. ‘ಕುಮುದಾಪತಿ ಪುರುಷೋತ್ತಮ ಭಟ್ಟ’ರು ಕಟೀಲಿನವರೇ ಆದರು. ಪುರುಷೋತ್ತಮ ಭಟ್ಟರ ಹೆಸರಿನ ಪೂರ್ವದಲ್ಲಿ ಕಡಂದೇಲು ಮತ್ತು ಅಪರದಲ್ಲಿ ‘ಕಟೀಲು’ ಸೇರಿಕೊಂಡು ಅವರು ಎರಡೂ ಊರುಗಳಿಗೆ ಸಲ್ಲುವವರಾದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry