ಮಂಗಳವಾರ, ಸೆಪ್ಟೆಂಬರ್ 17, 2019
25 °C

ದೀಪಾವಳಿ ನಗೆ ಬಾಂಬ್‌ಗಳು

Published:
Updated:
ದೀಪಾವಳಿ ನಗೆ ಬಾಂಬ್‌ಗಳು

ನಗರದ ‘ಲೋಲ್‌ಬಾಗ್’ ಸ್ಟ್ಯಾಂಡ್ ಅಪ್ ಕಾಮಿಡಿ ತಂಡವು ನಗರವಾಸಿಗಳನ್ನು ರಂಜಿಸಲು ಸಿದ್ಧತೆ ಪೂರ್ಣಗೊಳಿಸಿದೆ. ಹಾಸ್ಯಮಯವಾಗಿ ತಮ್ಮ ವೈಯಕ್ತಿಕ ಅನುಭವಗಳ ಬಾಂಬ್ ಸಿಡಿಸುವ ಪವನ್ ವೇಣುಗೋಪಾಲ್, ಸಾಮಾನ್ಯ ಸನ್ನಿವೇಶಗಳನ್ನೇ ಹಾಸ್ಯ ಚಟಾಕಿಯನ್ನಾಗಿಸುವ  ಸುದರ್ಶನ್, ತಿಳಿಹಾಸ್ಯದಿಂದಲೇ ಜೋರು ನಗೆಯುಕ್ಕಿಸುವ ಆಟಂಬಾಬ್‌ನಂಥ ಹಂಪ ಕುಮಾರ್, ಚಿನಕುರುಳಿ ನಗೆಯ ಅಭಿಷೇಕ್, ಸರಪಟಾಕಿಯಂತೆ ನಿರಂತರ ನಗು ಮೂಡಿಸುವ ಪ್ರದೀಪ್, ಕಾರ್ತಿಕ್ ಈ ತಂಡದ ಆರು ನಗೆ ಬಾಂಬ್‌ಗಳು.

ಈ ಎಲ್ಲಾ ಕಾಮಿಡಿ ಪಟಾಕಿಗಳಿಗೆ ಕಿಡಿ ಹಚ್ಚುವ ಊದುಬತ್ತಿ ಅನೂಪ್ ಮಯ್ಯಾ.

ಸಿನಿಮಾದಂತೆ ಇಲ್ಲಿ ರೀಟೇಕ್‌ಗೆ ಅವಕಾಶವಿಲ್ಲವಾದರೂ, ಮಾತು ನಿಲ್ಲುವವರೆಗೂ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸುವಲ್ಲಿ ಇವರು ನಿಪುಣರು. ಸ್ಟ್ಯಾಂಡ್ ಅಪ್ ಕಾಮಿಡಿ ಪರಿಕಲ್ಪನೆಯು ಹಿಂದಿ- ಇಂಗ್ಲಿಷ್‌ಗೆ ಹೋಲಿಸಿದರೆ ಕನ್ನಡದ ಮಟ್ಟಿಗೆ ತುಸು ಹೊಸದು. ಬದುಕಿನ ಹಲವು ಸಾಮಾನ್ಯ ಸನ್ನಿವೇಶಗಳಿಗೆ ಹಾಸ್ಯ ಬೆಸೆದು, ನಿಂತಲ್ಲೇ ನಗೆಬುಗ್ಗೆಯರಳಿಸುವ ಇಂಥದ್ದೊಂದು ಪರಿಕಲ್ಪನೆ ಇತ್ತೀಚಿನ ಕೆಲವು ಹಾಸ್ಯ ಕಲಾವಿದರ ಪ್ರಯತ್ನದಿಂದ ಕನ್ನಡಿಗರಿಗೂ ಹತ್ತಿರವಾಗುತ್ತಿದೆ.

ಪಟಾಕಿ ಹೆಸರುಗಳನ್ನೇ ಆಧರಿಸಿ ಕಾಮಿಡಿ ಮಾಡುತ್ತಾರೆ ಕಾರ್ತಿಕ್ ಪತ್ತಾರ್. ‘ಹಿಂದೆ ಪಟಾಕಿ ಪದದ ಮುಂದೆ ನಟಿಯರ ಹೆಸರಿರುತ್ತಿತ್ತು. ‘ವಿಜಯಶಾಂತಿ ಪಟಾಕಿ’, ‘ಡಿಸ್ಕೊ ಶಾಂತಿ ಪಟಾಕಿ’ ಹೀಗೆ. ಈಗಲೂ ಆ ವಾಡಿಕೆ ಇದೆಯಾದರೂ, ಪಟಾಕಿ ಬದಲು ಬಾಂಬ್ ಹಾಕಲಾಗುತ್ತಿದೆ. ಹಾಗಾಗಿ ‘ಸನ್ನಿ ಲಿಯೋನ್ ಬಾಂಬ್’, ‘ಪೂನಂ ಪಾಂಡೆ ಐಟಂ ಬಾಂಬ್’ಗಳು ಜನಪ್ರಿಯ. ಕಚೇರಿಗಳಲ್ಲಿ ಗಣೇಶ ಚತುರ್ಥಿಗೆ ಗಣೇಶ ಮೂರ್ತಿ ಕೂರಿಸೋ ಹಾಗೆ ದೀಪಾವಳಿಗೆ ಪಟಾಕಿ ಹೊಡೆಯೋ ಪ್ರಯತ್ನ ಮಾಡ್ಬೇಡಿ’ ಎನ್ನುತ್ತಾರೆ ಅವರು.

ಬೆಳಕು ಎನ್ನುವುದೇ ಒಳಿತಿನ ಸಂಕೇತ. ಬದುಕಿನುದ್ದಕ್ಕೂ ಬೆಳಕಿನಂಥ ನಗು ನಮ್ಮೊಡನಿರಬೇಕು. ಆ ನಗುವಿಗಾಗಿ ನಾವು ಮಾಡುವ ಪ್ರತಿ ಹಾಸ್ಯವೂ ಪಟಾಕಿಗಳಿದ್ದಂತೆ. ಅವುಗಳಿಗೆಲ್ಲ ಜನ ಪ್ರತಿಕ್ರಿಯಿಸುವ ರೀತಿ ಪಟಾಕಿಯಿಂದ ಬರುವ ಶಬ್ದದಂತೆ. ನಿತ್ಯ ಬದುಕಿನ ಸಿಹಿ-ಕಹಿ ಅನುಭವಗಳೇ ಸ್ಟ್ಯಾಂಡ್‌ ಅಪ್ ಕಾಮಿಡಿಯ ಕಥಾವಸ್ತು.

ಬದುಕಿನ ಬಿಂಬಗಳನ್ನು ಕಾಮಿಡಿ ವಸ್ತುಗಳನ್ನಾಗಿ ತೆಗೆದುಕೊಳ್ಳುವುದರಲ್ಲಿ ಸುದರ್ಶನ್ ರಂಗಪ್ರಸಾದ್ ನಿಸ್ಸೀಮರು.

ಇಲ್ಲಿ ಹಬ್ಬ-ಹರಿದಿನಗಳೆಂಬ ಭೇದವಿಲ್ಲ. ಹುಟ್ಟು-ಸಾವಿನ ಅಂತರವಿಲ್ಲ. ವಟಗುಟ್ಟುವ ರೇಡಿಯೊ, ಟಿವಿಯಿಂದ ಹಿಡಿದು, ಮಾತು ಮರೆಸುವ ವಾಟ್ಸ್‌ಆ್ಯಪ್ ಫೇಸ್‌ಬುಕ್‌ವರೆಗೆ ಎಲ್ಲವೂ ಹಾಸ್ಯಕ್ಕೆ ಆಹಾರವಷ್ಟೆ. ಕೆಲವು ಸಲ ಬಹಳ ನಿರೀಕ್ಷೆ ಇಟ್ಟು ಹೇಳುವ ಕಾಮಿಡಿಗಳು ಜನರ ನೀರಸ ಪ್ರತಿಕ್ರಿಯೆ ಎದುರು, ಠುಸ್ ಆಗಿಬಿಡುವ ಆಟಂಬಾಬ್‌ಗಳಂತಾಗುತ್ತವೆ. ಹಲವು ಸಲ ಜನ ನಿರಂತರವಾಗಿ ನಕ್ಕಾಗ ಸರ ಪಟಾಕಿ ಹಚ್ಚಿದಂತಹ ಅನುಭವವಾಗುತ್ತದೆ. ಇನ್ನು ಕೆಲವಕ್ಕೆ ತುಸುವೇ ನಕ್ಕರೂ ಚಿನಕುರುಳಿಯಂತಹ ದೊಡ್ಡ ಸಂಭ್ರಮವಾಗುವುದುಂಟು. ಯಾವುದೂ ನಮ್ಮ ನಿರೀಕ್ಷೆಗೆ ತಕ್ಕುದಾಗಿರುವುದಿಲ್ಲ. ಹಾಗಾಗಿ ದೀಪಾವಳಿಯ ಬೆಳಕು, ಪಟಾಕಿಗಳು ಬದುಕಿನ ಪ್ರತಿಬಿಂಬವೆನಿಸುತ್ತವೆ. ಪ್ರಯತ್ನ ಎನ್ನುವ ಊದುಬತ್ತಿ ಸದಾ ನಮ್ಮೊಡನಿರಲಿ’ ಎನ್ನುವ ಆಶಯ ಸುದರ್ಶನ್ ಅವರದು.

ಪಟಾಕಿಯನ್ನು ತಮ್ಮ ಸ್ವಾತಂತ್ರ್ಯದ ಸಾಧನವಾಗಿಸಿಕೊಂಡ ಅಭಿಷೇಕ್, ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಪಟಾಕಿಯಿಂದ ಬಕೆಟ್‌ಗಳನ್ನು ಒಡೆದು ಹಾಕಿ ಹಾಸ್ಟೆಲ್‌ ಮೇಲ್ವಿಚಾರಕರಿಗೆ ಕಾಟ ಕೊಡುತ್ತಿದ್ದರಂತೆ.

‘ಮಾಗಡಿ ಸಮೀಪದ ಹಾಸ್ಟೆಲ್ ನಲ್ಲುಳಿದು ಹೈಸ್ಕೂಲ್ ಓದುತ್ತಿದ್ದ ನಮಗೆ ದೀಪಾವಳಿ ಹಬ್ಬಕ್ಕೆ ಮನೆಗೆ ಹೋಗಲು ರಜೆ ಇರುತ್ತಿರಲಿಲ್ಲ. ಹಾಗಾಗಿ ಆಟಂಬಾಬ್ ತರಹದ ದೊಡ್ಡ ದೊಡ್ಡ ಪಟಾಕಿಗಳನ್ನು ಶೌಚಾಲಯದ ಬಕೆಟ್‌ಗಳಲ್ಲಿಟ್ಟು ಸಿಡಿಸುತ್ತಿದ್ದವು. ಎಲ್ಲಾ ಬಕೆಟ್‌ಗಳನ್ನೂ ಒಡೆಯುತ್ತಿದ್ದೆವು. ನಮ್ಮ ಕಾಟ ತಾಳಲಾರದೇ ರಜೆ ಕೊಟ್ಟು ಮನೆಗೆ ಕಳುಹಿಸುತ್ತಿದ್ದರು. ಹಬ್ಬದ ದಿನಗಳಲ್ಲಿ ಹಾಸ್ಟೆಲ್‌ನಲ್ಲಿ ಉಳಿಯುವುದು ಬಂಧನವೇ ಸರಿ. ಅಲ್ಲಿಂದ ಬಿಡಿಸಿಕೊಳ್ಳಲು ಪಟಾಕಿ ನಮ್ಮ ಸ್ವಾತಂತ್ರ್ಯದ ಸಾಧನವಾಗಿತ್ತು’ ಎಂದು ತಮ್ಮ ತುಂಟತನವನ್ನು ನೆನಪಿಸಿಕೊಂಡು ಮನತುಂಬಿ ನಗುತ್ತಾರೆ.

Post Comments (+)