ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ ಫುಟ್‌ಬಾಲ್‌: ಮೊದಲ ಟ್ರೋಫಿಗೆ ಮುತ್ತಿಕ್ಕಿದ ಇಂಗ್ಲೆಂಡ್‌

Last Updated 28 ಅಕ್ಟೋಬರ್ 2017, 16:59 IST
ಅಕ್ಷರ ಗಾತ್ರ

ಕೋಲ್ಕತ್ತ: ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ ಫುಟ್‌ಬಾಲ್‌ನಲ್ಲಿ ಟ್ರೋಫಿ ಎತ್ತಿಹಿಡಿಯುವ ಇಂಗ್ಲೆಂಡ್‌ ತಂಡದ ಕನಸು ಶನಿವಾರ ಸಾಲ್ಟ್‌ಲೇಕ್‌ ಕ್ರೀಡಾಂಗಣದಲ್ಲಿ ಸಾಕಾರಗೊಂಡಿತು.

ಫೈನಲ್‌ ಹೋರಾಟದಲ್ಲಿ ಈ ತಂಡ 5–2 ಗೋಲುಗಳಿಂದ ಸ್ಪೇನ್‌ ತಂಡವನ್ನು ಪರಾಭವಗೊಳಿಸಿತು. ಮೊದಲಾರ್ಧದ ವೇಳೆ 1–2ರಿಂದ ಹಿಂದಿದ್ದ ಆಂಗ್ಲರ ನಾಡಿನ ತಂಡ ದ್ವಿತೀಯಾರ್ಧದಲ್ಲಿ ಮೋಡಿ ಮಾಡಿತು.

ಕೂಟದಲ್ಲಿ ಮೂರು ಬಾರಿ ರನ್ನರ್ಸ್‌ ಅಪ್‌ ಸಾಧನೆ ಮಾಡಿದ್ದ ಸ್ಪೇನ್‌ ತಂಡ 10ನೇ ನಿಮಿಷದಲ್ಲೇ ಮುನ್ನಡೆ ಗಳಿಸಿತು. ಸರ್ಜಿಯೊ ಗೊಮೆಜ್‌ ಸೊಗಸಾದ ರೀತಿಯಲ್ಲಿ ಚೆಂಡನ್ನು ಗುರಿ ಸೇರಿಸಿ ಕ್ರೀಡಾಂಗಣದಲ್ಲಿ ಮೆಕ್ಸಿಕನ್‌ ಅಲೆ ಏಳುವಂತೆ ಮಾಡಿದರು.

31ನೇ ನಿಮಿಷದಲ್ಲಿ ಸರ್ಜಿಯೊ ಮತ್ತೊಮ್ಮೆ ಕಾಲ್ಚಳಕ ತೋರಿದರು. ಹೀಗಾಗಿ ತಂಡ 2–0ರ ಮುನ್ನಡೆ ಗಳಿಸಿ ಗೆಲುವಿನ ಕನಸು ಕಂಡಿತ್ತು. ಆ ನಂತರ ಇಂಗ್ಲೆಂಡ್‌ ತಂಡದ ಆಟ ಅರಳಿತು. ನಾಯಕ ಬ್ರೆವ್‌ಸ್ಟರ್‌ 44ನೇ ನಿಮಿಷದಲ್ಲಿ ಗೋಲು ಬಾರಿಸಿ ಹಿನ್ನಡೆಯನ್ನು ತಗ್ಗಿಸಿದರು.

ದ್ವಿತೀಯಾರ್ಧದಲ್ಲಿ ಸ್ಪೇನ್‌ ಆಟಗಾರರು ಮಂಕಾದಂತೆ ಕಂಡರು. ಈ ತಂಡದ ಆಟಗಾರರು ಗೋಲು ಗಳಿಕೆಯ ಹಲವು ಅವಕಾಶಗಳನ್ನು ಕೈಚೆಲ್ಲಿದರು.

ಇನ್ನೊಂದೆಡೆ ಇಂಗ್ಲೆಂಡ್‌ ಆಟಗಾರರ ಅಬ್ಬರ ಮುಂದುವರಿಯಿತು. 58ನೇ ನಿಮಿಷದಲ್ಲಿ ಗಿಬ್ಸ್‌ ವೈಟ್‌ ಎದುರಾಳಿ ರಕ್ಷಣಾವ್ಯೂಹವನ್ನು ಭೇದಿಸಿದರು 2–2ರ ಸಮಬಲಕ್ಕೆ ಕಾರಣರಾದರು.

ಬಳಿಕ ಫೊಡೆನ್‌ ಕೋಲ್ಕತ್ತದ ಅಭಿಮಾನಿಗಳು ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿದರು. ಅವರು 69ನೇ ನಿಮಿಷದಲ್ಲಿ ಚೆಂಡನ್ನು ಗುರಿ ತಲುಪಿಸಿದರು. 84ನೇ ನಿಮಿಷದಲ್ಲಿ ಗುಹಿ ಗೋಲು ‌ದಾಖಲಿಸಿ ಆಂಗ್ಲರ ನಾಡಿನ ತಂಡದ ಗೆಲುವಿನ ಕನಸಿಗೆ ಜೀವ ತುಂಬಿದರು. 88ನೇ ನಿಮಿಷದಲ್ಲಿ ಫೊಡೇನ್‌ ವೈಯಕ್ತಿಕ ಎರಡನೇ ಗೋಲು ದಾಖಲಿಸುತ್ತಿದ್ದಂತೆ ಖುಷಿಯಿಂದ ಇಂಗ್ಲೆಂಡ್‌ ಆಟಗಾರರ ಕಣ್ಣುಗಳು ತುಂಬಿದವು.

**

ಬ್ರೆಜಿಲ್‌ಗೆ ಮೂರನೇ ಸ್ಥಾನ

ಬ್ರೆಜಿಲ್‌ ತಂಡದವರು ಮೂರನೇ ಸ್ಥಾನದೊಂದಿಗೆ ಕೂಟದಲ್ಲಿ ಅಭಿಯಾನ ಮುಗಿಸಿದರು.

ಮೂರನೇ ಸ್ಥಾನ ನಿರ್ಧರಿಸಲು ನಡೆದ ಹೋರಾಟದಲ್ಲಿ ಬ್ರೆಜಿಲ್‌  2–0 ಗೋಲುಗಳಿಂದ ಮಾಲಿ ತಂಡವನ್ನು ಸೋಲಿಸಿತು.

ಕೂಟದಲ್ಲಿ ಮೂರು ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದ ಸಾಂಬಾ ನಾಡಿನ ತಂಡ ಆರಂಭದಲ್ಲಿ ಮಾಲಿ ತಂಡದಿಂದ ಪ್ರಬಲ ಪೈಪೋಟಿ ಎದುರಿಸಿತು.ಹೀಗಾಗಿ ಮೊದಲರ್ಧ ಗೋಲು ರಹಿತವಾಗಿತ್ತು. ದ್ವಿತೀಯಾರ್ಧದಲ್ಲಿ  ಬ್ರೆಜಿಲ್‌ ಆಟಗಾರರು ಮಿಂಚಿದರು.

55ನೇ ನಿಮಿಷದಲ್ಲಿ ಅಲನ್‌ ಗೋಲು ದಾಖಲಿಸಿ ತಂಡದ ಖಾತೆ ತೆರೆದರು. ಬಳಿಕ ಮಾಲಿ ಆಟಗಾರರು ಸಮಬಲದ ಗೋಲು ದಾಖಲಿಸಲು ಹೋರಾಟ ಮುಂದುವರಿಸಿದರು.  ಆದರೆ ಎದುರಾಳಿ ತಂಡದ ರಕ್ಷಣಾಕೋಟೆ ಭೇದಿಸಲು  ಆಗಲಿಲ್ಲ.

88ನೇ ನಿಮಿಷದಲ್ಲಿ ಯುರಿ ಗೋಲು ಬಾರಿಸಿ ಬ್ರೆಜಿಲ್‌ ಸಂಭ್ರಮಕ್ಕೆ ಕಾರಣರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT