ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ಬಲವರ್ಧನೆ: ಪೇಟೆಯಲ್ಲಿ ಉತ್ತಮ ವಹಿವಾಟು

Last Updated 28 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಈ ವಾರ ಉತ್ತಮ ವಹಿವಾಟು ನಡೆಯಿತು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 33 ಸಾವಿರ ಗಡಿ ತಲುಪಿದರೆ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 10,300 ಗಡಿ ತಲುಪಿತು.

ಎರಡೂ ಸೂಚ್ಯಂಕಗಳು ಗರಿಷ್ಠ ಮಟ್ಟದಲ್ಲಿಯೇ ವಹಿವಾಟು ಆರಂಭಿಸಿದವು. ನಂತರ ಹೊಸ ಮಟ್ಟಕ್ಕೆ ಏರಿಕೆ ಕಂಡವು. ವಾರದ ವಹಿವಾಟಿನಲ್ಲಿ ಬಹುತೇಕ ಅವಧಿಗಳಲ್ಲಿ ಏರುಮುಖ ಹಾದಿಯಲ್ಲಿಯೇ ವಹಿವಾಟು ನಡೆಸಿವೆ.

ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಆರ್ಥಿಕ ಬಲವರ್ಧನೆಗೆ ಕೇಂದ್ರ ಸರ್ಕಾರ  ಬಂಡವಾಳ ಮರುಪೂರಣ ಯೋಜನೆ ಪ್ರಕಟಿಸಿದೆ. ಇದರಿಂದ ಬ್ಯಾಂಕ್‌ಗಳಲ್ಲಿ ನಗದು ಹರಿವು ಹೆಚ್ಚಾಗಲಿದ್ದು, ಉದ್ಯೋಗ ಸೃಷ್ಟಿಗೂ ನೆರವಾಗಲಿದೆ. ಇದು ಷೇರುಪೇಟೆಯಲ್ಲಿ ಹೂಡಿಕೆ ಚಟುವಟಿಕೆ
ಯನ್ನು ಹೆಚ್ಚಾಗುವಂತೆ ಮಾಡಿತು. ಇದರಿಂದಾಗಿ ಸೂಚ್ಯಂಕಗಳು ಏರಿಕೆ ಕಂಡಿವೆ.

32,411 ಅಂಶಗಳ ಗರಿಷ್ಠ ಮಟ್ಟದಲ್ಲಿ ವಹಿವಾಟು ಆರಂಭವಾಯಿತು. ಗುರುವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 33,286 ಅಂಶಗಳಿಗೆ ಏರಿತು. ನಂತರ 767 ಅಂಶಗಳ ಏರಿಕೆಯೊಂದಿಗೆ 33,157 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯಕಂಡಿತು.

ಇನ್ನೊಂದೆಡೆ ನಿಫ್ಟಿ 10,176 ಅಂಶಗಳಲ್ಲಿ ವಹಿವಾಟು ಆರಂಭಿಸಿತು. ಆದರೆ 10,366 ಅಂಶಗಳಿಗೆ ಏರಿಕೆ ಕಾಣುವ ಮೂಲಕ ಐತಿಹಾಸಿಕ ಮೈಲುಗಲ್ಲು ಸೃಷ್ಟಿಸಿತು. ವಾರದ ವಹಿವಾಟಿನಲ್ಲಿ 176 ಅಂಶ ಹೆಚ್ಚಾಗಿ 10,323 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

ಗರಿಷ್ಠ ನಷ್ಟ:  ಲುಪಿನ್‌ ಕಂಪೆನಿ ಷೇರುಗಳು ಶೇ 4.91 ರಷ್ಟು ಗರಿಷ್ಠ ನಷ್ಟ ಕಂಡಿವೆ. ಇದರಿಂದ ಪ್ರತಿ ಷೇರಿನ ಬೆಲೆ 1,000.85ಕ್ಕೆ ಇಳಿಕೆ ಕಂಡಿತು.

ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ನಿವ್ವಳ ಲಾಭ ಶೇ 20.13 ಹೆಚ್ಚಾಗಿ ₹4,151 ಕೋಟಿಗಳಿಗೆ ತಲುಪಿದೆ. ಒಟ್ಟು ವರಮಾನ ₹23,276 ಕೋಟಿಗಳಿಗೆ ಶೇ 16.55 ರಷ್ಟು ಹೆಚ್ಚಾಗಿದೆ. ಆದರೆ ಬ್ಯಾಂಕ್ ಷೇರುಗಳು ಶೇ 3.29 ರಷ್ಟು ಇಳಿಕೆ ಕಂಡಿದ್ದು ಷೇರಿನ ಬೆಲೆ ₹1,793.10ಕ್ಕೆ ತಗ್ಗಿತು. 

ಕೋಟಕ್‌ ಬ್ಯಾಂಕ್‌ ಮತ್ತು ಎಚ್‌ಡಿಎಫ್‌ ಷೇರುಗಳೂ ಇಳಿಕೆ ಕಂಡಿವೆ.

ವಲಯವಾರು ಪ್ರಗತಿ:  ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಷೇರುಗಳು ಶೇ 10.33, ಬ್ಯಾಂಕಿಂಗ್‌ ಷೇರುಗಳು ಶೇ 4.67, ಬಂಡವಾಳ ಸರಕುಗಳು
ಶೇ 4.62, ವಿದ್ಯುತ್ ಶೇ 3.85, ಲೋಹ ಶೇ 3.29, ತೈಲ ಮತ್ತು ಅನಿಲ ಶೇ 2.96ರಷ್ಟು ಗರಿಷ್ಠ ಏರಿಕೆ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT