ಸೊಮಾಲಿಯಾಕ್ಕೆ ಬೇಕಾಗಿದೆ ಸಹಕಾರದ ಹೊಸ ಆಯಾಮ

ಬುಧವಾರ, ಜೂನ್ 19, 2019
24 °C

ಸೊಮಾಲಿಯಾಕ್ಕೆ ಬೇಕಾಗಿದೆ ಸಹಕಾರದ ಹೊಸ ಆಯಾಮ

Published:
Updated:
ಸೊಮಾಲಿಯಾಕ್ಕೆ ಬೇಕಾಗಿದೆ ಸಹಕಾರದ ಹೊಸ ಆಯಾಮ

ಮನೆಯಲ್ಲೇ ತಯಾರಿಸಲಾದ ಸುಮಾರು ಎರಡು ಟನ್ ಸ್ಫೋಟಕಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್, ಸೊಮಾಲಿಯಾ ರಾಜಧಾನಿ ಮೊಗದಿಶುವಿನ ಜನನಿಬಿಡ ರಸ್ತೆಯ ಜೂಬೆ ಚೌಕದಲ್ಲಿ ಅ.14ರಂದು ಸ್ಫೋಟಿಸಿತು. ಇದರ ಸದ್ದು ಮೈಲುಗಟ್ಟಲೆವರೆಗೆ ಕಂಪನಗಳನ್ನು ಮೂಡಿಸಿತು. 400ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಈ ಸ್ಫೋಟದ ಭೀಕರತೆ ಎಷ್ಟಿತ್ತೆಂದರೆ, ಸುಮಾರು 150 ಜನ ಗುರುತು ಹಿಡಿಯಲಾರದಷ್ಟು ಕರಕಲಾದರು. ನೂರಾರು ಜನ ಘಟನೆಯಲ್ಲಿ ಗಾಯಗೊಂಡರು. ಸಂತ್ರಸ್ತ ಕುಟುಂಬದವರು ತಮ್ಮ ಹತ್ತಿರದವರಿಗಾಗಿ ಅವಶೇಷಗಳ ಮಧ್ಯೆ ಗಂಟೆಗಟ್ಟಲೆ ಹುಡುಕಾಡಿದರು.

ಗಾಯಾಳುಗಳಿಗೆ ರಕ್ತದಾನ ಮಾಡಲೆಂದು ನೂರಾರು ನಾಗರಿಕರು ಆಸ್ಪತ್ರೆಗಳ ಮುಂದೆ ಸರದಿಯಲ್ಲಿ ನಿಂತರು. ವೈದ್ಯರು, ಶುಶ್ರೂಷಕರು ಮತ್ತು ಆಂಬುಲೆನ್ಸ್ ಚಾಲಕರು ಚಿಕಿತ್ಸೆ ನೀಡಲು ಶಕ್ತಿಮೀರಿ ಶ್ರಮಿಸಿದರು. ಘಟನೆಯಿಂದ ನೊಂದ ಹಾಗೂ ಆಕ್ರೋಶಗೊಂಡ ಸೊಮಾಲಿ ಜನರು ಜೂಬೆ ಚೌಕದಲ್ಲಿ ಜಮಾಯಿಸಿ, ಈ ಸ್ಫೋಟಕ್ಕೆ ಇಸ್ಲಾಂ ಶಬಾಬ್ ಉಗ್ರರೇ ಕಾರಣ ಎಂದು ಧ್ವನಿ ಎತ್ತಿದರು. ಟರ್ಕಿ, ಅಮೆರಿಕ, ಬ್ರಿಟನ್, ಕೆನಡಾ, ಫ್ರಾನ್ಸ್ ಮತ್ತು ವಿಶ್ವಸಂಸ್ಥೆಗಳು ದಾಳಿಯನ್ನು ಖಂಡಿಸಿದವು.

ಆದರೆ ಇಂತಹ ಖಂಡನೆ ಮಾತ್ರದಿಂದ ಶಬಾಬ್ ಹಾಗೂ ಅದರ ಬಾಂಬ್ ತಯಾರಕರ ವಿರುದ್ಧ ಹೋರಾಡಲು ಸೊಮಾಲಿಯಾಕ್ಕೆ ಯಾವ ಪ್ರಯೋಜನವೂ ಆಗದು. ಶಬಾಬ್ ಭಯೋತ್ಪಾದನೆ ನಿರ್ಮೂಲನೆ ಮಾಡಲು ಸೊಮಾಲಿಯಾಕ್ಕೆ ಪರಿಣತಿ ಹಾಗೂ ಸಾಧನ-ಸಲಕರಣೆಗಳು ಬೇಕಾಗಿವೆ; ಸೊಮಾಲಿ ಭದ್ರತಾ ಸಂಸ್ಥೆಗಳು ಹಾಗೂ ಅಂತರರಾಷ್ಟ್ರೀಯ ಸಹವರ್ತಿ ರಾಷ್ಟ್ರಗಳ ನಡುವೆ ಸಹಕಾರದ ಹೊಸ ಆಯಾಮದ ಅಗತ್ಯವಿದೆ.

ಶಬಾಬ್ ಉಗ್ರತ್ವಕ್ಕೆ ಅಲ್‍ಕೈದಾ ಸಂಪರ್ಕ ಹಾಗೂ ಅದರ ಪ್ರಚೋದನೆ ಕಾರಣ ಎಂಬುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ. ಸೊಮಾಲಿ ಸರ್ಕಾರದ ವಿರುದ್ಧದ ಅದರ ಸಮರದಲ್ಲಿ, ಮನೆಯಲ್ಲೇ ತಯಾರಾದ ಸ್ಫೋಟಕಗಳನ್ನು ಬಳಸುತ್ತಿರುವುದು ಮಾಮೂಲಿ ಸಂಗತಿಯಾಗಿದೆ. ಆದರೆ ಅ.14ರ ಘಟನೆಯ ತೀವ್ರತೆ ಎಷ್ಟಿತ್ತೆಂದರೆ, ಈ ಘಟನೆಗೆ ತಾನು ಕಾರಣ ಎಂದು ಶಬಾಬ್ ಕೂಡ ತನ್ನ ಸದಸ್ಯರು ಹಾಗೂ ಮೃದು ಧೋರಣೆ ಇರುವವರ ಮುಂದೆ ಹೇಳಿಕೊಳ್ಳುವ ಧೈರ್ಯವನ್ನೇ ಮಾಡಲಿಲ್ಲ.

ಶಬಾಬ್ ಸಂಘಟನೆಯು ಕೆಲವೇ ವರ್ಷಗಳ ಹಿಂದೆ ರಾಷ್ಟ್ರದ ಹೆಚ್ಚೂಕಡಿಮೆ ಅರ್ಧದಷ್ಟನ್ನು, ಅಂದರೆ, ಬಹುತೇಕ ದಕ್ಷಿಣ ಸೊಮಾಲಿಯಾವನ್ನು ನಿಯಂತ್ರಿಸುತ್ತಿತ್ತು. ನಂತರದ ವರ್ಷಗಳಲ್ಲಿ ಸೊಮಾಲಿ ಮತ್ತು ಆಫ್ರಿಕಾ ಒಕ್ಕೂಟದ ಪಡೆಗಳು ಸೇರಿ ಶಬಾಬ್ ಅನ್ನು ಬಹುತೇಕ ಎಲ್ಲ ದೊಡ್ಡ ನಗರಗಳಿಂದ ಹೊರದೂಡಿವೆ. ಅಮೆರಿಕದ ವೈಮಾನಿಕ ದಾಳಿಗಳು ಹಾಗೂ ಸೊಮಾಲಿ ಮತ್ತು ಅಮೆರಿಕ ವಿಶೇಷ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ ನೂರಾರು ಭಯೋತ್ಪಾದಕ ನಾಯಕರು ಹತರಾಗಿದ್ದಾರೆ.

ಆದರೆ ಸುಮಾರು 8,000 ಕದನಕಲಿಗಳನ್ನು ಹೊಂದಿರುವ ಶಬಾಬ್ ಸಂಘಟನೆಯು ಸೊಮಾಲಿಯಾದ ಗ್ರಾಮೀಣ ಪ್ರದೇಶದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಅಲ್ಲಿನ ಅನೇಕ ಪಟ್ಟಣಗಳನ್ನು ತನ್ನ ವಶದಲ್ಲಿ ಇರಿಸಿಕೊಂಡಿರುವ ಅದು ಅಲ್ಲಿನ ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ಭಂಗವುಂಟು ಮಾಡುತ್ತಿದೆ.

ಸುಧಾರಿತ ಸ್ಫೋಟಕ ಸಾಧನವೇ ಶಬಾಬ್ ಸಂಘಟನೆಯ ಪ್ರಮುಖ ಅಸ್ತ್ರವಾಗಿದೆ. ಅದು 2016ರಲ್ಲಿ ಮನೆಗಳಲ್ಲೇ ತಯಾರಿಸಲಾದ ಇಂತಹ ಸ್ಫೋಟಕಗಳನ್ನು 395 ದಾಳಿ ಘಟನೆಗಳಲ್ಲಿ ಬಳಕೆ ಮಾಡಿತ್ತು. ಈ ದಾಳಿಗಳಲ್ಲಿ 723 ಜನ ಸಾವಿಗೀಡಾದರೆ ಗಾಯಗೊಂಡವರ ಸಂಖ್ಯೆ 1,100ಕ್ಕೂ ಹೆಚ್ಚು. ಇದು ಆ ಹಿಂದಿನ 2015ರಲ್ಲಿ ನಡೆದಿದ್ದ 265 ದಾಳಿಗಳಿಗೆ ಹೋಲಿಸಿದರೆ ಶೇ 110ರಷ್ಟು ಹೆಚ್ಚು. ಇದೇ ವೇಳೆ ಶಬಾಬ್ ತನ್ನ ಯುದ್ಧಾಸ್ತ್ರಗಳ ಸಾಮರ್ಥ್ಯವನ್ನೂ ವೃದ್ಧಿಸಿಕೊಂಡಿದೆ. ಬಾಂಬುಗಳ ಸರಾಸರಿ ಗಾತ್ರ 5 ಕೆ.ಜಿ.ಯಿಂದ 40 ಕೆ.ಜಿಗೆ ಏರಿದೆ. ಆತ್ಮಹತ್ಯಾ ದಾಳಿಗೆ ಬಳಸುವ ಟ್ರಕ್‍ಗಳಲ್ಲಿ ಸಾಗಿಸುತ್ತಿದ್ದ ಸ್ಫೋಟಕಗಳ ತೂಕ 100ರಿಂದ 200 ಕೆ.ಜಿ. ಇದ್ದುದು ಈಗ 800ರಿಂದ 1,000ಕೆ.ಜಿ.ಗೆ ಹಿಗ್ಗಿದೆ.

ಶಬಾಬ್ ಉಗ್ರರು ಹೆಚ್ಚೆಚ್ಚು ದಾಳಿಗಳಲ್ಲಿ ಬಾಂಬ್‍ಗಳನ್ನು ಬಳಸುತ್ತಿರುವುದರಿಂದ ಹಾಗೂ ಅವುಗಳ ತೀವ್ರತೆ ಹೆಚ್ಚುತ್ತಿರುವುದರಿಂದ ಸ್ಫೋಟಕಗಳು ಹಾಗೂ ಪೂರಕ ಬಿಡಿಭಾಗಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹಿಂದೊಮ್ಮೆ ಈ ಭಯೋತ್ಪಾದಕರು ನೆಲಬಾಂಬ್ ಹಾಗೂ ಶೆಲ್ ದಾಳಿಯಂತಹ ಸೇನಾ ದರ್ಜೆಯ ಸ್ಫೋಟಕಗಳನ್ನು ಹೆಚ್ಚು ಅವಲಂಬಿಸಿದ್ದರು. ಆದರೆ ಈಗ ಅದರ ಸದಸ್ಯರು ರಸಗೊಬ್ಬರ ಹಾಗೂ ಇನ್ನಿತರ ವಾಣಿಜ್ಯೋತ್ಪನ್ನಗಳನ್ನು ಬಳಸಿ ಮನೆಯಲ್ಲೇ ಕುಳಿತು ಸ್ಫೋಟಕ ತಯಾರಿಸುವುದನ್ನು ಕರಗತ ಮಾಡಿಕೊಂಡಿದ್ದಾರೆ.

ಹೀಗೆ ಬಾಂಬ್ ತಯಾರಿಸುವವರನ್ನು ಪತ್ತೆ ಹಚ್ಚಬೇಕೆಂದರೆ ಸ್ಫೋಟ ಸ್ಥಳದಲ್ಲಿ ಸಿಗುವ ಸಾಕ್ಷ್ಯಗಳನ್ನು ಪತ್ತೆಮಾಡಲು ಬಳಸುವ ತಂತ್ರಜ್ಞಾನ ಸೊಮಾಲಿಯಾಕ್ಕೆ ಅತ್ಯಗತ್ಯ. ಸ್ಫೋಟಕಗಳು, ಅವುಗಳ ಅವಶೇಷಗಳು, ಸ್ಫೋಟಕದ ಬಿಡಿಭಾಗಗಳು, ಸಿಮ್ ಕಾರ್ಡ್, ಬೆರಳಚ್ಚು, ವಂಶವಾಹಿ ಇವೆಲ್ಲವನ್ನೂ ಇದು ಒಳಗೊಳ್ಳಬೇಕಿದೆ.

ಆದರೆ ಪ್ರಸ್ತುತ ಸೊಮಾಲಿಯಾ ತಂತ್ರಜ್ಞಾನ ಯಾವ ಸ್ಥಿತಿಯಲ್ಲಿದೆ?- ಇಲ್ಲಿ ನಾಲ್ಕೇ ನಾಲ್ಕು ಪೊಲೀಸ್ ತಂಡಗಳಿದ್ದು ಅವು ವಿಪರೀತ ಕಾರ್ಯದೊತ್ತಡದಿಂದ ಬಸವಳಿದಿವೆ. ಸ್ಫೋಟದ ನಂತರ ಬೇಕಾಗುವ ತನಿಖಾ ಕಿಟ್‍ಗಳು ಅವುಗಳ ಬಳಿ ಇಲ್ಲ; ವಿಧಿವಿಜ್ಞಾನ ಪ್ರಯೋಗಾಲಯವೂ ಇಲ್ಲ; ವಶಪಡಿಸಿಕೊಳ್ಳಲಾಗುವ ಸೆಲ್‍ಫೋನ್‍ಗಳ ನಾಶಕ್ಕಾಗಿ ಎರವಲು ಪಡೆಯಲಾಗಿರುವ ಒಂದೇ ಒಂದು ಸಾಧನ ಇದೆ. ಸದ್ಯ ಸೊಮಾಲಿಯಾ ಸರ್ಕಾರವು ಪೊಲೀಸ್ ಅಧಿಕಾರಿಗಳು ಮತ್ತು ಯೋಧರಿಗೆ ನಿಯಮಿತವಾಗಿ ವೇತನ ನೀಡುವುದಕ್ಕೇ ಪ್ರಯಾಸ ಪಡುತ್ತಿದೆ. ಈ ಪರಿಸ್ಥಿತಿಯಲ್ಲಿ ತನ್ನದೇ ಬಜೆಟ್‍ನಿಂದ ಬಾಂಬ್ ನಿಗ್ರಹ ಘಟಕಗಳ ತರಬೇತಿ ಮತ್ತು ಅವುಗಳಿಗೆ ಬೇಕಾದ ಮೂಲಸೌಕರ್ಯಗಳನ್ನು ಕಲ್ಪಿಸುವುದು ಅದಕ್ಕೆ ನಿಲುಕುವ ಯಾವ ಸಾಧ್ಯತೆಯೂ ಕಾಣುತ್ತಿಲ್ಲ.

ಜಾಮರ್‌ಗಳು, ರೊಬೋಟ್ ಮತ್ತಿತರ ಸುರಕ್ಷತಾ ಉಪಕರಣಗಳ ತೀವ್ರ ಕೊರತೆ ಇರುವುದರಿಂದ ಪೊಲೀಸ್ ತಂಡಗಳು ಅಪಾಯದ ವಾತಾವರಣದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ನಮ್ಮ ಗುಪ್ತದಳ ಮತ್ತು ವಿಶ್ಲೇಷಣಾ ದಳಗಳು ಈಗಲೂ ತನಿಖೆಗಾಗಿ 20ನೇ ಶತಮಾನಕ್ಕೆ ಸಂದುಹೋದ ತಂತ್ರಾಂಶಗಳನ್ನೇ ಅವಲಂಬಿಸಿವೆ.

ಹೀಗಾಗಿ ನಾವು ಬಹುತೇಕ ಕುರುಡು ಕಾರ್ಯಾಚರಣೆ ನಡೆಸುತ್ತಿದ್ದೇವೆ. ಅಂತರರಾಷ್ಟ್ರೀಯ ಸಹವರ್ತಿಗಳು ತಾಂತ್ರಿಕ ನೆರವು ನೀಡಲು ಮುಂದಾಗುತ್ತಾರೆ. ಆದರೆ ಅವರ ‘ಉದ್ದೇಶ’ಗಳು ನಮ್ಮನ್ನು ಇನ್ನಷ್ಟು ಕುರುಡಾಗಿಸುತ್ತಿವೆ. ಆದರೆ ಬೇಹುಗಾರಿಕಾ ಮಾಹಿತಿಗಳನ್ನು ಸಮಾನ ಶತ್ರುವಿನ ವಿರುದ್ಧದ ಹೋರಾಟದಲ್ಲಿ ಹಂಚಿಕೊಳ್ಳಬೇಕಾದ ಆಸ್ತಿ ಎಂಬುದಕ್ಕಿಂತ ಅದನ್ನು ‘ಉತ್ಪನ್ನ’ಗಳು ಎಂಬಂತೆ ಪರಿಭಾವಿಸುವ ವಿದೇಶಿ ‘ಮಾರ್ಗದರ್ಶಕ’ರು, ಸ್ಫೋಟ ಸ್ಥಳದಲ್ಲಿ ಸಿಗುವ ಪುರಾವೆಗಳನ್ನು ತಮ್ಮ ವಶ ಮಾಡಿಕೊಂಡುಬಿಡುತ್ತಾರೆ. ಒಮ್ಮೆ ಅದು ಅವರ ವಶವಾದ ಮೇಲೆ ಪುನಃ ನಮಗೆ ಹಿಂದಿರುಗಿಸಿರುವ ನಿದರ್ಶನ ಅಪರೂಪದಲ್ಲಿ ಅಪರೂಪ.

ಸ್ಫೋಟ ನಂತರದ ತನಿಖೆಯ ತುಣುಕುಗಳನ್ನಷ್ಟೇ ನಮ್ಮೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಲವು ಸಲ ಈ ಕುರಿತು ಒಂದಿಷ್ಟು ಮಾಹಿತಿಯೂ ನಮಗೆ ಸಿಗುವುದೇ ಇಲ್ಲ. ಹೀಗಾಗಿ ಕಾರ್ಯಾಚರಣೆಗಾಗಿ ನಾವು ನಮ್ಮ ವಿದೇಶಿ ಮಿತ್ರರ ಮೇಲೇ ಅವಲಂಬಿತರಾಗಬೇಕಿದೆ. ಮಾಹಿತಿ ಹಂಚಿಕೆಯು ಬಂಡವಾಳ ಹೂಡಿಕೆ ಅಪೇಕ್ಷಿಸುವ ಸಂಗತಿಯೇನೂ ಅಲ್ಲ. ಆದರೂ ಅದೇಕೋ ಸೊಮಾಲಿ ಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ಸುಧಾರಿತ ಸ್ಫೋಟಕ ಸಾಧನಗಳ (ಐಇಡಿ) ಕುರಿತ ಮಾಹಿತಿ ನಮಗೆ ದೂರದ ವಿಷಯವೇ ಆಗಿದೆ.

ಸೊಮಾಲಿಯಾದ ಆಂತರಿಕ ಭದ್ರತಾ ಸಚಿವರು ಮೇ ತಿಂಗಳಲ್ಲಿ ಬಾಂಬರುಗಳ ಜಾಲ, ಉತ್ಪಾದನಾ ತಾಣಗಳ ಪತ್ತೆ ಹಾಗೂ ಅವುಗಳ ನಾಶಕ್ಕೆ ಆದ್ಯತೆ ನೀಡುವುದಾಗಿ ಪ್ರಕಟಿಸಿದರು. ನಾನು ಮುಖ್ಯಸ್ಥನಾಗಿರುವ ರಾಷ್ಟ್ರೀಯ ತನಿಖಾ ಮತ್ತು ಭದ್ರತಾ ಸಂಸ್ಥೆಗೆ ಇದರ ಜವಾಬ್ದಾರಿ ನೀಡಲಾಯಿತು.

ಈ ನಿಟ್ಟಿನಲ್ಲಿ ಉಗ್ರರ ಒಳಬರುವಿಕೆ, ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕಗಳ ಸಾಗಣೆಗೆ ತಡೆಯೊಡ್ಡಲೆಂದು ಮೊಗದಿಶು ಸುತ್ತಮುತ್ತ ಭದ್ರತೆಯನ್ನು ನಾವು ಹೆಚ್ಚಿಸಿದೆವು. ಜೊತೆಗೆ, ವಾಣಿಜ್ಯಿಕವಾಗಿ ಆಮದು ಮಾಡಿಕೊಳ್ಳಲಾಗುತ್ತಿದ್ದ ಬಾಂಬ್ ಬಳಕೆಗೆ ಬೇಕಾದ ಬಿಡಿಭಾಗಗಳು ಯಾವುವು ಎಂಬುದನ್ನು ಪತ್ತೆಹಚ್ಚಿ ಅವುಗಳ ಲಭ್ಯತೆಗೆ ತಡೆಯೊಡ್ಡುವುದು ಹೇಗೆ ಎಂಬ ಕುರಿತು ಚಿಂತಿಸಿದೆವು.

ಇದೇ ವೇಳೆ, ನಮಗೆ ಬೇಕಿದ್ದ ತರಬೇತಿ ಹಾಗೂ ತಾಂತ್ರಿಕ ನೆರವಿಗಾಗಿ ನಮ್ಮ ಅಂತರರಾಷ್ಟ್ರೀಯ ಸಹವರ್ತಿಗಳಾದ ಅಮೆರಿಕ, ಬ್ರಿಟನ್ ಮತ್ತು ವಿಶ್ವಸಂಸ್ಥೆಗಳ ಮುಂದೆ ಕೋರಿಕೆ ಇಟ್ಟೆವು. ಅತ್ಯಗತ್ಯವಾಗಿ ಬೇಕಾದ ಪ್ರಯೋಗಾಲಯ, ಸ್ಫೋಟಕಗಳ ಕುರಿತ ತನಿಖೆಗಾಗಿ ವಿಧಿವಿಜ್ಞಾನ ಘಟಕ, ರಸಾಯನ ವಿಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಪರಿಣತರು, ಅಪರಾಧ ಪ್ರಕರಣಗಳ ವಿಚಾರಣೆಗಾಗಿ ಪ್ರತ್ಯೇಕ ವ್ಯವಸ್ಥೆ, ರಾಷ್ಟ್ರೀಯ ದತ್ತಾಂಶ ಕ್ರೋಡೀಕರಣ ಇತ್ಯಾದಿ ಸ್ಥಾಪನೆಯನ್ನು ಇದು ಒಳಗೊಂಡಿತ್ತು. ಆದರೆ ನಮ್ಮ ಮನವಿಗೆ ಯಾವುದೇ ಸ್ಪಂದನೆ ಸಿಗಲಿಲ್ಲ.

ಇದೇ ರೀತಿ ಸೊಮಾಲಿಯಾ ಬಾಂಬ್ ಸ್ಫೋಟಗಳ ಕುರಿತು ತಾವು ಸಂಗ್ರಹಿಸಿರುವ ಮಾಹಿತಿಯನ್ನು ನಮ್ಮ ರಾಷ್ಟ್ರೀಯ ಸಂಸ್ಥೆಗಳೊಂದಿಗೆ ವಿನಿಮಯ ಮಾಡಿಕೊಳ್ಳುವಂತೆ ನಮ್ಮ ಸಹವರ್ತಿ ರಾಷ್ಟ್ರಗಳನ್ನು ಕೋರಿದೆವು. ಈ ವಿಷಯದಲ್ಲಿ ಕೂಡ ಅವು ವಹಿಸಿದ ಮೌನ ಅಚ್ಚರಿ ಮೂಡಿಸುವಂಥದ್ದೆ.

ಸೊಮಾಲಿ ನೆಲದಲ್ಲಿ ನಡೆಯುವ ಅಪರಾಧಗಳ ಪ್ರಮುಖ ಮಾಹಿತಿ ಮತ್ತು ಸಾಕ್ಷ್ಯಗಳು ಬೇರೆ ರಾಷ್ಟ್ರಗಳಿಗೆ ರಫ್ತಾಗಿ ಅಲ್ಲಿ ವಿಶ್ಲೇಷಣೆಗೆ ಬಳಕೆಯಾಗುತ್ತಿವೆ. ಇದರಿಂದಾಗಿ ನಮ್ಮ ಪ್ರಜೆಗಳನ್ನು ರಕ್ಷಿಸುವ ಅವಕಾಶ ಹಾಗೂ ತಪ್ಪಿತಸ್ಥರನ್ನು ವಿಚಾರಣೆಗೆ ಗುರಿಪಡಿಸುವ ಸಾಧ್ಯತೆಗಳು ಕೈತಪ್ಪಿ ಹೋಗುತ್ತಿವೆ.

ಸೊಮಾಲಿಯಾದಲ್ಲಿನ ಐಇಡಿ ಬೆದರಿಕೆಯನ್ನು ಹಿಮ್ಮೆಟ್ಟಿಸುವ ಕುರಿತು ನಮ್ಮ ಕಚೇರಿಯು ಎಫ್‍ಬಿಐ ಜತೆ ಆಗಸ್ಟ್‌ನಲ್ಲಿ ಸಮಾಲೋಚನೆ ನಡೆಸಲು ಪ್ರಯತ್ನಿಸಿತು. ಆದರೆ, ರಸ್ತೆಬದಿ ಬಾಂಬ್‍ಗಳ ಬಗೆಗಿನ ವಿಶ್ಲೇಷಣೆಗೆ ಹೆಸರಾದ ಎಫ್‍ಬಿಐನ ಭಯೋತ್ಪಾದಕ ಸ್ಫೋಟಕ ಸಾಧನ ವಿಶ್ಲೇಷಣಾ ಕೇಂದ್ರವು ನಮಗೆ ಯಾವುದೇ ಪ್ರತಿಕ್ರಿಯೆ ತೋರಲಿಲ್ಲ.

ಅ.14ರ ಮೊಗದಿಶು ಬಾಂಬ್ ಸ್ಫೋಟ ಘಟನೆಯು ಸೊಮಾಲಿ ಜನರು ಹಾಗೂ ಮಾನವೀಯತೆ ವಿರುದ್ಧದ ಅಪರಾಧವಾಗಿದೆ. ಆದರೆ ಪುರಾವೆಗಳನ್ನು ಕಲೆಹಾಕಲಾಗಲಿ, ಅದಕ್ಕೆ ಕಾರಣರಾದವರ ಮೇಲೆ ಮೊಕದ್ದಮೆ ದಾಖಲಿಸಲಾಗಲಿ ನಮಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಂತಹ ದಾಳಿಗಳು ಸೊಮಾಲಿಯಾ ಮಾತ್ರವಲ್ಲದೆ ಶಬಾಬ್ ಉಗ್ರರು ಇರುವೆಡೆಯಲ್ಲೆಲ್ಲಾ ಹೆಚ್ಚಾಗುವ ಅಪಾಯವಿದೆ.

ಇಂತಹ ಹತ್ಯಾಕಾಂಡ ಮತ್ತೊಮ್ಮೆ ನಡೆಯದೆಂಬ ಭರವಸೆ ಮೂಡಿಸಲು ನಮಗೆ ನೆರವು ಬೇಕಿದೆ. ಮೊದಲೇ ಹೇಳಿದಂತೆ ಹೆಚ್ಚಿನ ತರಬೇತಿ, ಸುಧಾರಿತ ಸಾಧನಗಳು ಹಾಗೂ ಸ್ವತಃ ನಮ್ಮ ನೆಲದಲ್ಲೇ ವಿಧಿವಿಜ್ಞಾನ ವಿಶ್ಲೇಷಣೆ ನಡೆಸುವ ಸೌಲಭ್ಯ ಅಗತ್ಯವಿದೆ. ನಮ್ಮ ತನಿಖೆಗಳು ಹಾಗೂ ಬೇಹುಗಾರಿಕಾ ವಿಶ್ಲೇಷಣೆಗಳನ್ನು ಲಾಭದ ಮೇಲೆ ಕಣ್ಣಿಟ್ಟಿರುವ ಖಾಸಗಿಯವರಿಗೆ ಹೊರಗುತ್ತಿಗೆ ನೀಡುತ್ತಾ ಹೋಗಬಾರದು. ನಮ್ಮ ಗುಪ್ತದಳ ಮಾಹಿತಿ ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ಅಪರಾಧಿಗಳನ್ನು ಸೊಮಾಲಿಯಾ ನ್ಯಾಯಾಲಯಗಳಲ್ಲೇ ವಿಚಾರಣೆಗೆ ಗುರಿಪಡಿಸುವ ಮಾರ್ಗೋಪಾಯಗಳನ್ನು ನಾವು ಕಂಡುಕೊಳ್ಳಬೇಕು. ಶತ್ರುವನ್ನು ಮಣಿಸಲು ನಮ್ಮದೇ ಕಾರ್ಯತಂತ್ರ ರೂಪಿಸಿಕೊಳ್ಳಬೇಕು. ಮೊಗದಿಶು ದುರ್ಘಟನೆಯಲ್ಲಿ ಬಲಿಯಾದವರಿಗೆ ಇದೇ ನಾವು ಸಲ್ಲಿಸುವ ಶ್ರದ್ಧಾಂಜಲಿ.

(ಅಬ್‍ದಿಲ್ಲಾಹಿ ಮೊಹಮ್ಮದ್ ಸ್ಯಾನ್‍ಬಲೂಶೆ ಅವರು ಸೊಮಾಲಿಯಾ ರಾಷ್ಟ್ರೀಯ ಗುಪ್ತದಳ ಮತ್ತು ಭದ್ರತಾ ಸಂಸ್ಥೆಯ ಮಹಾ ನಿರ್ದೇಶಕ)

ದಿ ನ್ಯೂಯಾರ್ಕ್ ಟೈಮ್ಸ್

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry