ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಲಸೆ ಸಮಸ್ಯೆಯಲ್ಲ, ಅಭಿವೃದ್ಧಿಯ ಸಾಧನ’

‘ಶೇ 44ರಷ್ಟು ಮಂದಿಗೆ ಅಪೌಷ್ಟಿಕತೆ ಸಮಸ್ಯೆ’
Last Updated 28 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ವಲಸೆಯನ್ನು ಸಮಸ್ಯೆಯಾಗಿ ನೋಡುತ್ತಿದ್ದೇವೆ. ಆದರೆ, ಅದನ್ನು ಅಭಿವೃದ್ಧಿಯ ಸಾಧನವಾಗಿ ಪರಿಗಣಿಸಬೇಕು’ ಎಂದು ಕೃಷಿ ವಿಜ್ಞಾನಿ ಡಾ.ಮೃತ್ಯುಂಜಯ ಹೇಳಿದರು.

ಕೃಷಿ ತಂತ್ರಜ್ಞರ ಸಂಸ್ಥೆ (ಐಎಟಿ), ಕೃಷಿ ಇಲಾಖೆ ಹಾಗೂ ಎಎಂಇ ಫೌಂಡೇಷನ್‌ ಆಶ್ರಯದಲ್ಲಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ವಿಶ್ವ ಆಹಾರ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಲಸಿಗರ ಸಾಧಕ–ಬಾಧಕಗಳ ಬಗ್ಗೆ ಸರ್ಕಾರ ಹಾಗೂ ಸಂಘ–ಸಂಸ್ಥೆಗಳು ಗಮನ ಹರಿಸಬೇಕು. ಪಟ್ಟಣ ಪ್ರದೇಶಗಳಿಗೆ ಬಂದಾಗ ಹಾಗೂ ಮತ್ತೆ ಊರಿಗೆ ಮರಳಿದಾಗ ಅವರು ಎದುರಿಸುವ ಸಮಸ್ಯೆಗಳ ಬಗ್ಗೆ ಸಂಶೋಧನೆ ನಡೆಸಬೇಕು. ಆ ಸಮಸ್ಯೆಗಳನ್ನು ನಿವಾರಿಸಲು ಕಾರ್ಯಕ್ರಮ ಹಮ್ಮಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘2008ರಿಂದ 2015ರ ಅವಧಿಯಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ 8 ಗುರಿಗಳನ್ನು ನಿಗದಿಪಡಿಸಲಾಗಿತ್ತು.  ಇದಕ್ಕಾಗಿ ಸಾಕಷ್ಟು ವೆಚ್ಚ ಮಾಡಿದ್ದರೂ ನಿರೀಕ್ಷಿತ  ಅಭಿವೃದ್ಧಿ ಆಗಿಲ್ಲ. ಈಗ 17 ಗುರಿಗಳನ್ನು ನಿಗದಿಪಡಿಸಲಾಗಿದೆ’ ಎಂದು ಹೇಳಿದರು.

ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಗ್‌, ‘ಹವಾಮಾನ ವೈಪರೀತ್ಯಗಳನ್ನು ಎದುರಿಸಲು ಸಮರ್ಪಕವಾದ ವ್ಯವಸ್ಥೆ ರೂಪಿಸಿಲ್ಲ. ದೇಶದ ಶೇ 65ರಷ್ಟು ಕೃಷಿಕರು ಪ್ರಮುಖವಾಗಿ 5 ಬೆಳೆಗಳನ್ನು ಮಾತ್ರ  ಬೆಳೆಯುತ್ತಿದ್ದಾರೆ. ಬೆಳೆ ವೈವಿಧ್ಯಕ್ಕೆ ಒತ್ತು ನೀಡುತ್ತಿಲ್ಲ. ಅತೀ ಕಡಿಮೆ ಮಳೆಯಾಗುವ ಕಡೆ ಹಾಗೂ ಫಲವತ್ತತೆ ಕೊರತೆ ಇರುವ ಭೂಮಿಯಲ್ಲಿ ಸಿರಿಧಾನ್ಯಗಳನ್ನು ಬೆಳೆಯಬಹುದು’ ಎಂದರು.

ಐಎಟಿ ಅಧ್ಯಕ್ಷ ಡಾ.ಎಂ.ಮಲ್ಲಪ್ಪ, ‘ಆಹಾರ ಸುರಕ್ಷತೆ ಮತ್ತು ಗ್ರಾಮೀಣ ಅಭಿವೃದ್ಧಿಯಲ್ಲಿ ಹೂಡಿಕೆಯ ಮೂಲಕ ವಲಸೆ ಸಮಸ್ಯೆಗೆ ಪರಿಹಾರ ಎಂಬುದು ಈ ವರ್ಷದ ವಿಶ್ವ ಆಹಾರ ದಿನದ ಧ್ಯೇಯವಾಕ್ಯ. ವಲಸೆ ಸಮಸ್ಯೆಯನ್ನು ನಿವಾರಿಸಲು ಬೇಕಾದ ಬಂಡವಾಳ ಹಾಗೂ ಕೌಶಲ ನಮ್ಮಲ್ಲಿ ಇದೆ. ಆದರೆ, ಅದನ್ನು ಬಳಸುವಲ್ಲಿ ವಿಫಲರಾಗಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

**

‘ಶೇ 44ರಷ್ಟು ಮಂದಿಗೆ ಅಪೌಷ್ಟಿಕತೆ ಸಮಸ್ಯೆ’

‘ಹಸಿವು ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿರುವವರ ಪ್ರಮಾಣ ಭಾರತದಲ್ಲಿ ಹೆಚ್ಚು ಇದೆ. ನಮ್ಮ ದೇಶದಲ್ಲಿ ಶೇ 44ರಷ್ಟು ಮಂದಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದರೂ ಈ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಾಗಿಲ್ಲ’ ಎಂದು ಚಿರಂಜೀವಿ ಸಿಂಗ್‌ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT