ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಕಾನೂನು ಪರ; ಜಾರ್ಜ್‌ ಪರ ಅಲ್ಲ: ಸಿ.ಎಂ

ಎಫ್‍ಐಆರ್ ದಾಖಲಾದರೆ ಆರೋಪ ಸಾಬೀತಾಗಿದೆ ಎಂದಲ್ಲ
Last Updated 28 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಡಿವೈಎಸ್‌ಪಿ ಗಣಪತಿ ಆತ್ಮಹತ್ಮೆ ಪ್ರಕರಣದ ಎಫ್‌ಐಆರ್‌ನಲ್ಲಿ ಮೊದಲ ಆರೋಪಿ ಎಂದು ಸಿಬಿಐ ಹೆಸರಿಸಿರುವ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ರಕ್ಷಣೆಗೆ ನಾನು ನಿಂತಿಲ್ಲ. ಆದರೆ, ಕಾನೂನು ಪರ ಇದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಪುನರುಚ್ಚರಿಸಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಸಚಿವರು ಆರೋಪಿಯಾಗಿರುವುದರಿಂದ ತನಿಖೆಗೆ ತೊಂದರೆಯಾಗಬಹುದು ಎಂದು ಭಾವಿಸುವುದು ತಪ್ಪು. ಈ ಕಾರಣಕ್ಕಾಗಿಯೇ ರಾಜೀನಾಮೆಗೆ ಆಗ್ರಹಿಸುವುದು ತಪ್ಪು. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆ ಸಿಬಿಐ. ಹೀಗಿರುವಾಗ ತೊಂದರೆ ಆಗಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

‘ಎಫ್‍ಐಆರ್ ದಾಖಲಾಗಿದೆ ಎಂದಾಕ್ಷಣ ಆರೋಪ ಸಾಬೀತಾಗಿದೆ ಎಂದೂ ಅರ್ಥವಲ್ಲ. ಯಾರೇ ದೂರು ನೀಡಿದರೂ ಮೊದಲು ಎಫ್‍ಐಆರ್ ದಾಖಲಾಗುವುದು ಸಹಜ’ ಎಂದು ಮುಖ್ಯಮಂತ್ರಿ ಸಮರ್ಥಿಸಿಕೊಂಡರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ವಿರುದ್ಧ ವಂಚನೆ, ಪೋರ್ಜರಿ, ಡಿನೋಟಿಫಿಕೇಷನ್, ಅವ್ಯವಹಾರ ಸೇರಿದಂತೆ ಹಲವು ಕೇಸುಗಳಿವೆ. ಚುನಾವಣಾಧಿಕಾರಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಯಡಿಯೂರಪ್ಪ ನೀಡಿರುವ ಮಾಹಿತಿಯಿದು. ನಾನು ಸೃಷ್ಟಿ ಮಾಡಿಲ್ಲ’ ಎಂದರು.

‘ಜಾರ್ಜ್ ಪ್ರಕರಣವನ್ನು ಬಿಜೆಪಿ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ. ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವಾಗ ಬಿಜೆಪಿಯವರು ಮತ್ತೊಬ್ಬರ ತಟ್ಟೆಯಲ್ಲಿ ನೊಣ ಹುಡುಕಲು ಹೊರಟಿದ್ದಾರೆ. ಇಷ್ಟೊಂದು ಕೇಸುಗಳಿರುವ ಯಡಿಯೂರಪ್ಪ ಬಿಜೆಪಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಅರ್ಹರೇ. ಅಲ್ಲದೆ, ಅವರು ಮುಖ್ಯಮಂತ್ರಿ ಅಭ್ಯರ್ಥಿ’ ಎಂದರು.

‘ನಾನು ಬೇಡವೆಂದರೂ ನೈತಿಕ ಹೊಣೆ ಹೊತ್ತು ಜಾರ್ಜ್ ಈ ಹಿಂದೆ ರಾಜೀನಾಮೆ ನೀಡಿದ್ದರು. ಅವರು ಮತ್ತೆ ಏಕೆ ರಾಜೀನಾಮೆ ಕೊಡಬೇಕು. ಹಳೆ ದೂರಿನ ಆಧಾರದ ಮೇಲೆ ಈಗಿನ ಎಫ್‌ಐಆರ್‌ ದಾಖಲಾಗಿದೆ’ ಎಂದು ಮುಖ್ಯಮಂತ್ರಿ ಪ್ರತಿಪಾದಿಸಿದರು.

‘ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಸರ್ಕಾರ ಅಥವಾ ಜಾರ್ಜ್ ಪರ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ನಿಂತಿದ್ದಾರೆ ಎಂದು ಹೇಳುವುದು ಸರಿಯಲ್ಲ. ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಷ್ಟೆ’ ಎಂದರು.

‘ಜಾರ್ಜ್, ಮುಖ್ಯಮಂತ್ರಿ ಶಿಷ್ಯ’ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಯಡಿಯೂರಪ್ಪ ಅವರಿಗೆ ಬುದ್ಧಿ ಇಲ್ಲ. ಏನು ಮಾತನಾಡುತ್ತೇನೆ ಎಂಬ ಅರಿವು ಅವರಿಗಿಲ್ಲ’ ಮಾತನಾಡುತ್ತಾರೆ’ ಎಂದರು.

ಕನ್ನಡಕ್ಕೆ ಪ್ರಥಮ ಸ್ಥಾನ:‌ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಖ್ಯಮಂತ್ರಿ, ‘ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಥಮ ಸ್ಥಾನ ಇರಬೇಕು. ವಿಮಾನ ನಿಲ್ದಾಣ, ಮೆಟ್ರೋ ರೈಲು ನಿಲ್ದಾಣ ಸೇರಿದಂತೆ ಎಲ್ಲ ಕಡೆ ಕನ್ನಡ ಇರಲೇಬೇಕು’ ಎಂದು ಸೂಚಿಸಿದರು.

**

‘ಎಚ್‍ಡಿಕೆ ಭೇಟಿ ಗೊತ್ತಿಲ್ಲ’

‘ಇಂಧನ ಸಚಿವ ಡಿ.ಕೆ. ಶಿವಕುಮಾರ್, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ ಅವರನ್ನು ಶುಕ್ರವಾರ ಭೇಟಿಯಾಗಿರುವ ಬಗ್ಗೆ ಗೊತ್ತಿಲ್ಲ. ವಿದ್ಯುತ್ ಖರೀದಿ ಸಂಬಂಧ ಇಂಧನ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಹಗರಣದ ತನಿಖೆಗೆ ರಚನೆಯಾಗಿರುವ ಸದನ ಸಮಿತಿಯಲ್ಲಿ ಕುಮಾರಸ್ವಾಮಿ ಸದಸ್ಯರಾಗಿದ್ದಾರೆ. ಹೀಗಾಗಿ ಶಿವಕುಮಾರ್ ಭೇಟಿ ಮಾಡಿ ಚರ್ಚಿಸಿರಬಹುದು’ ಎಂದರು.

**

ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಅಂತಹ ಪ್ರಸ್ತಾವನೆಯೂ ನಮ್ಮ ಮುಂದೆ ಇಲ್ಲ

–ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT