ಮಾಧ್ಯಮಗಳಲ್ಲಿ ನಾಯಕತ್ವದ ಚರ್ಚೆಯಾಗಲಿ: ಮೋದಿ

ಭಾನುವಾರ, ಜೂನ್ 16, 2019
30 °C
ವಾರ್ಷಿಕ ‘ದೀಪಾವಳಿ ಮಂಗಳ ಮಿಲನ್’ನಲ್ಲಿ ಪ್ರಧಾನಿ ಒತ್ತಾಯ

ಮಾಧ್ಯಮಗಳಲ್ಲಿ ನಾಯಕತ್ವದ ಚರ್ಚೆಯಾಗಲಿ: ಮೋದಿ

Published:
Updated:
ಮಾಧ್ಯಮಗಳಲ್ಲಿ ನಾಯಕತ್ವದ ಚರ್ಚೆಯಾಗಲಿ: ಮೋದಿ

ನವದೆಹಲಿ: ರಾಜಕೀಯ ಪಕ್ಷಗಳಲ್ಲಿನ ಪ್ರಜಾಪ್ರಭುತ್ವ ಮೌಲ್ಯಗಳು, ನಾಯಕತ್ವದ ಆಯ್ಕೆ, ಪಾರದರ್ಶಕತೆ ಇವೆಲ್ಲವನ್ನು ಮಾಧ್ಯಮಗಳು ಚರ್ಚೆಗೆ ಒಡ್ಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದರು. ರಾಹುಲ್ ಗಾಂಧಿ ಅವರು ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾಗುವುದು ಸನ್ನಿಹಿತವಾಗುತ್ತಿರುವಾಗಲೇ ಮೋದಿ ಈ ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳಿಗಾಗಿ ಬಿಜೆಪಿ, ಶನಿವಾರ ಆಯೋಜಿಸಿದ ವಾರ್ಷಿಕ ‘ದೀಪಾವಳಿ ಮಂಗಳ ಮಿಲನ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹಿರಿಯ ಮುಖಂಡರಿಂದಲೇ ಪಕ್ಷದ ನೀತಿ ರೂಪುಗೊಳ್ಳುತ್ತದೆ ಮತ್ತು ಅವರ ನಿಲುವಿಗೆ ಕಿರಿಯರೂ ದನಿಗೂಡಿಸುತ್ತಾರೆ ಎಂಬುದು ಎಲ್ಲ ವೇಳೆ ನಿಜವಲ್ಲ. ಸಾಕಷ್ಟು ಬಾರಿ ಭಿನ್ನ ನಿಲುವುಗಳು ವ್ಯಕ್ತವಾಗುತ್ತವೆ’ ಎಂದರು.

‘ಪಕ್ಷಗಳ ಒಳಗಿನ ಸಂಗತಿಗಳನ್ನು ಜನರು ಅರಿಯಬೇಕು. ಪಕ್ಷಗಳಿಗೆ ಬರುವ ನಿಧಿ, ಅವು ರೂಪುಗೊಂಡ ಬಗೆ, ಕಾರ್ಯವಿಧಾನ, ಸದಸ್ಯರ ನೇಮಕ, ಮೌಲ್ಯ–ಸಿದ್ಧಾಂತ ರೂಪುಗೊಳ್ಳುವಿಕೆ, ಪಕ್ಷಗಳ ದೌರ್ಬಲ್ಯ ಇವೆಲ್ಲವೂ ಮಾಧ್ಯಮಗಳಿಗೆ ಚರ್ಚೆಯ ವಿಚಾರವಾಗಬೇಕು. ಆಗ ಅನೇಕ ವಿಚಾರಗಳು ಹೊರಬರುತ್ತವೆ’ ಎಂದು ಅವರು ಹೇಳಿದರು.

ಮಾಧ್ಯಮಗಳಿಗೆ ಧನ್ಯವಾದ: ‘ಸರ್ಕಾರವನ್ನು ಟೀಕಿಸುವ ಹೊರತಾಗಿಯೂ ‘ಸ್ವಚ್ಛ ಭಾರತ’ ಅಭಿಯಾನದ ವಿಚಾರಕ್ಕೆ ಬಂದಾಗ ಮಾಧ್ಯಮಗಳು ಅಭೂತಪೂರ್ವ ಬೆಂಬಲ ನೀಡಿವೆ. ಪತ್ರಿಕೆಯ ಪುಟಗಳಲ್ಲಿ ಅರ್ಧದಷ್ಟು ಸರ್ಕಾರದ ಬಗೆಗಿನ ಟೀಕೆಗಳೇ ಇದ್ದರೂ ಅದೇ ಪುಟದಲ್ಲಿ ಸ‌್ವಚ್ಛ ಭಾರತ ಯೋಜನೆಯ ಕುರಿತಾಗಿಯೂ ಬರಹಗಳಿರುತ್ತವೆ’ ಎಂದು ಮಾಧ್ಯಮಗಳಿಗೆ ಮೋದಿ ಧನ್ಯವಾದ ತಿಳಿಸಿದರು.

‘ಸಾಕಷ್ಟು ಜನರೊಂದಿಗೆ ವ್ಯವಹರಿಸುವ ಪತ್ರಕರ್ತರು ಒಂದು ಸಂಗತಿಯನ್ನು ಬೇರೆ ಬೇರೆ ದೃಷ್ಟಿಕೋನದಿಂದ ಗ್ರಹಿಸಲು ಸಾಧ್ಯವಾಗುತ್ತದೆ. ಅವರಿಗೆ ಸಿಗುವ ಸಾಕಷ್ಟು ಪ್ರತಿಕ್ರಿಯೆಗಳು ನಮಗೆ ಸಹಕಾರಿಯಾಗಬಲ್ಲವು’ ಎಂದರು.

‘ಸರ್ಕಾರ ಮತ್ತು ಮಾಧ್ಯಮಗಳ ನಡುವೆ ಪರಸ್ಪರ ಆರೋಪ ಪ್ರತ್ಯಾರೋಪಗಳಿದ್ದರೂ ದೇಶದ ಒಳಿತಿಗಾಗಿ ಒಟ್ಟಾಗಿ ಶ್ರಮಿಸುವುದು ಸಾಧ್ಯ’ ಎಂದು ಹೇಳಿದ ಪ್ರಧಾನಿ, ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದಾಗ ಮಾಧ್ಯಮಗಳ ಜೊತೆ ಸಂವಹನ ನಡೆಸುತ್ತಿದ್ದಂತೆ ಈಗ ನಡೆಸಲು ಸಾಧ್ಯವಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry