ಗೌರಿಯ ಆಯ್ಕೆ ಧೈರ್ಯದ ದಾರಿ!

ಗುರುವಾರ , ಜೂನ್ 20, 2019
27 °C
ಮಗಳನ್ನು ನೆನೆದು ಕಣ್ಣೀರಿಟ್ಟ ಇಂದಿರಾ ಲಂಕೇಶ್‍

ಗೌರಿಯ ಆಯ್ಕೆ ಧೈರ್ಯದ ದಾರಿ!

Published:
Updated:
ಗೌರಿಯ ಆಯ್ಕೆ ಧೈರ್ಯದ ದಾರಿ!

ಬೆಂಗಳೂರು: ‘ಲಂಕೇಶ್‍ ವ್ಯವಹಾರದಲ್ಲಿ ಪೆಟ್ಟು ತಿಂದು ಎಚ್ಚೆತ್ತುಕೊಂಡಿದ್ದರು. ಆದರೆ, ಪೆಟ್ಟು ತಿಂದಿದ್ದ ಗೌರಿ ಎಚ್ಚೆತ್ತುಕೊಳ್ಳುವ ಮೊದಲೇ ಅವಳನ್ನು ಇಲ್ಲವಾಗಿಸಿದರು' ಎಂದು ಇಂದಿರಾ ಲಂಕೇಶ್‍ ಕಣ್ಣೀರಿಟ್ಟರು.

ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಶನಿವಾರ ನಡೆದ ‘ಅಂತರ ಗಂಗೆ' ಮಹಿಳಾ ಆತ್ಮಕಥನಗಳ ಅವಲೋಕನದ ಚರ್ಚೆಯಲ್ಲಿ ಪತಿ ಪಿ. ಲಂಕೇಶ್‍ ಹಾಗೂ ಮಗಳು ಗೌರಿ ಲಂಕೇಶ್‍ ಅವರನ್ನು ನೆನೆದು ಇಂದಿರಾ ಲಂಕೇಶ್‍ ಮತ್ತೆ ಮತ್ತೆ ಹನಿಗಣ್ಣಾದರು.

‘ಗೌರಿ ಕೆಲವು ವಿಷಯಗಳಲ್ಲಿ ನನಗೆ ತಾಯಿಯಂತೆ ಇದ್ದಳು. ಯಾರನ್ನೂ ನೋಯಿಸದ ಸ್ವಭಾವದ ಅವಳನ್ನು ಯಾರು ಕೊಂದರು, ಯಾಕೆ ಕೊಂದರು ಎಂಬುದು ಗೊತ್ತಾಗಬೇಕು. ನನ್ನ ಮೂರು ಮಕ್ಕಳದ್ದೂ ಮೂರು ದಾರಿ. ಆದರೆ, ಧೈರ್ಯದ ದಾರಿ ಆರಿಸಿಕೊಂಡವಳು ಗೌರಿ' ಎಂದರು.

‘ಲಂಕೇಶ್‍ ಒಂದು ಸಭೆಯಲ್ಲಿ ರಾಜಕೀಯದ ಬಗ್ಗೆ ಮಾತನಾಡಿದ್ದಾಗ ಅದನ್ನು ಆಕ್ಷೇಪಿಸಿದ್ದ ವಿಶ್ವವಿದ್ಯಾಲಯ ಅವರಿಂದ ವಿವರಣೆ ಕೇಳಿತ್ತು. ಇದಕ್ಕೆ ಪ್ರತಿರೋಧವಾಗಿ ಅವರು ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಕೆಲವು ದಿನಗಳ ಕಾಲ ಈ ವಿಷಯವನ್ನು ಅವರು ನನಗೂ ಹೇಳಿರಲಿಲ್ಲ. ಅವರು ರಾಜೀನಾಮೆ ನೀಡಿದ್ದ ವಿಷಯ ಗೊತ್ತಾದ ಮೇಲೆ ನಾನು ಏನಾದರೂ ಕೆಲಸ ಮಾಡಬೇಕೆಂದು ಯೋಚಿಸುತ್ತಿದ್ದೆ. ಆ ಸಂದರ್ಭದಲ್ಲಿ ಸೀರೆ ವ್ಯಾಪಾರ ಆರಂಭಿಸಿದೆ' ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

‘ಲಂಕೇಶ್ ಪತ್ರಿಕೆ ಆ ಕಾಲಕ್ಕೆ ಜಾಹೀರಾತು ಇಲ್ಲದ ಏಕೈಕ ವಾರಪತ್ರಿಕೆಯಾಗಿತ್ತು. ಶಿವಮೊಗ್ಗದಲ್ಲಿದ್ದ ಮನೆ ಮಾರಿ ‘ಪಲ್ಲವಿ' ಸಿನಿಮಾ ಮಾಡಿದರು. ಚಿತ್ರಕ್ಕೆ ಪ್ರಶಸ್ತಿ ಬಂದಾಗ ತುಂಬಾ ಸಂತೋಷಪಟ್ಟಿದ್ದರು' ಎಂದರು.

‘ಲಂಕೇಶ್ ಅವರಿಗೆ ಬಿಸಿ ಬಿಸಿ ಹೋಳಿಗೆ ಮತ್ತು ತುಪ್ಪ ಎಂದರೆ ಎಲ್ಲಿಲ್ಲದ ಪ್ರೀತಿ. ಮಾವಿನಹಣ್ಣಿನ ಕಾಲದಲ್ಲಂತೂ ಹೋಳಿಗೆ ಜತೆಗೆ ಸೀಕರಣೆ ಇರಲೇಬೇಕಿತ್ತು. ಒಂದು ದಿನ ಹೋಳಿಗೆ ಮಾಡಿ ಮಾಡಿ ಕೊಟ್ಟಂತೆ ಅವರು ತಿನ್ನುತ್ತಲೇ ಇದ್ದರು. ಡಬ್ಬಿಗೂ ಹೋಳಿಗೆ ಹಾಕಿಸಿಕೊಂಡಿದ್ದರು. ಅವರಿಗಿದ್ದ ಮಧುಮೇಹದ ಬಗ್ಗೆ ನಾನು ಎಚ್ಚರಿಸಿದ್ದೆ. ‘ಏನೂ ಆಗುವುದಿಲ್ಲ ಬಿಡು' ಎಂದಿದ್ದರು. ಅದು ನಾನು ಅವರಿಗೆ ಬಡಿಸುವ ಕೊನೆಯ ಹೋಳಿಗೆ ಆಗುತ್ತದೆ ಎಂದು ಗೊತ್ತಿರಲಿಲ್ಲ' ಎಂದು ಲಂಕೇಶರ ಕೊನೆಯ ದಿನಗಳನ್ನು ನೆನದು ಕಣ್ಣೀರಾದರು.

ಪತ್ರಕರ್ತೆ ವಿಜಯಾ ಮಾತನಾಡಿ, ‘ಮೊದಲಿನಿಂದಲೂ ನಾನು ಹೋರಾಟವನ್ನೇ ಜೀವನವಾಗಿಸಿಕೊಂಡವಳು. ಕಲಾಮಂದಿರದ ಅ.ನಾ. ಸುಬ್ಬರಾವ್ ಮತ್ತು ಎ.ಎಸ್‍. ಮೂರ್ತಿ ದಂಪತಿ ನನಗೆ ಆಸರೆಯಾಗಿದ್ದರು. ಕತ್ತಲೆಯಲ್ಲಿ ಕಂಡ ಬೆಳಕನ್ನು ಹಿಡಿಯುವಂತೆ ನಾನು ಹೊಸ ಬದುಕನ್ನು ಕಂಡುಕೊಂಡೆ. ನಾಟಕ, ಬೀದಿನಾಟಕ, ಚಳವಳಿಗಳ ಮೂಲಕ ಗುರುತಿಸಿಕೊಂಡೆ. ಚಳವಳಿಗಳಲ್ಲಿ ನಾನು ಈಗಲೂ ಸಕ್ರಿಯಳಾಗಿದ್ದೇನೆ. ಎಲ್ಲರ ಪ್ರೀತಿಗಾಗಿ ನಾನು ಹೋರಾಡುತ್ತೇನೆ' ಎಂದರು.

‘ಬದುಕಿನಲ್ಲಿ ಹೇಳಬೇಕಾದ್ದು ಸಾಕಷ್ಟು ಇರುತ್ತದೆ. ಆದರೆ, ನಮ್ಮ ನೋವನ್ನು ಬೇರೆಯವರು ಏಕೆ ಓದಬೇಕು ಎಂದೂ ಅನಿಸಿದ್ದಿದೆ. ಆದರೆ, ನನ್ನ ಆತ್ಮಕಥನ ಪ್ರಕಟವಾದ ಬಳಿಕ ಅದಕ್ಕೆ ಬಂದ ಪ್ರತಿಕ್ರಿಯೆ ನೋಡಿದರೆ ಬರೆದಿದ್ದರ ಬಗ್ಗೆ ಸಾರ್ಥಕತೆ ಮೂಡಿದೆ' ಎಂದು ನುಡಿದರು.

‘ಪತ್ರಕರ್ತೆಯಾದ ನಾನು ಪತ್ರಿಕೆಗಾಗಿ ಲೇಖಕರಿಂದ ಕಥೆ, ಲೇಖನಗಳನ್ನು ಕೇಳಬೇಕಿತ್ತು. ಕೆಲವು ಲೇಖಕರು ತಮ್ಮ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಗೆ ಕರೆಸಿಕೊಂಡು ಚಿಲಕ ಹಾಕಿದ್ದೂ ಇದೆ. ಒಮ್ಮೆ ಮನೆಗೆ ಬಂದಿದ್ದ ಲೇಖಕರೊಬ್ಬರು ಬೆಳಿಗ್ಗೆ ಎದ್ದು ಹೋಗುವಾಗ ಶೌಚಾಲಯದಲ್ಲಿ ಕಾಂಡೋಮ್‍ ಎಸೆದು ಹೋಗಿದ್ದರು. ಇದರಿಂದ ಮನೆಯಲ್ಲಿದ್ದ ನನ್ನ ಸೋದರ ಸಂಬಂಧಿ ನನ್ನ ಮೇಲೆ ಅನುಮಾನಗೊಂಡು ಮನೆ ಬಿಟ್ಟು ಹೋದರು. ಹೀಗೆ ತಪ್ಪು ಮಾಡದೆಯೇ ಶಿಕ್ಷೆಗೆ ಗುರಿಯಾಗಬೇಕಾದ ಸಂದರ್ಭಗಳೂ ಸಾಕಷ್ಟು ಇರುತ್ತವೆ. ನಾನು ಹೇಳಬೇಕಾದ ಇನ್ನಷ್ಟು ವಿಷಯಗಳನ್ನು ಆತ್ಮಕಥನದ ಎರಡನೇ ಭಾಗದಲ್ಲಿ ತೆರೆದಿಡುತ್ತೇನೆ' ಎಂದರು.

‘ಲಂಕೇಶ್‍ ಮತ್ತು ಅವರ ಕುಟುಂಬದ ಜತೆಗೆ ನನ್ನ ಗೆಳೆತನ ಚೆನ್ನಾಗಿತ್ತು. ಆದರೂ ಒಮ್ಮೆ ಲಂಕೇಶ್ ನನ್ನ ಬಗ್ಗೆ ಪತ್ರಿಕೆಯಲ್ಲಿ ಏನೋ ಬರೆದರು. ನಾನು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೆ. ಸುಮಾರು ದಿನ ನಾನು ಅವರು ಕಟಕಟೆಯಲ್ಲಿ ನಿಂತೆವು. ಬಳಿಕ ಲಂಕೇಶ್ ಪತ್ರಿಕೆಯಲ್ಲಿ ಕ್ಷಮಾಪಣೆ ಪ್ರಕಟಿಸಿದರು. ನಾನು ಮೊಕದ್ದಮೆ ವಾಪಸ್ ಪಡೆದೆ' ಎಂದು ಲಂಕೇಶ್ ಜೊತೆಗಿನ ನೆನಪುಗಳನ್ನು ಬಿಚ್ಚಿಟ್ಟರು.

ಚರ್ಚೆ ನಡೆಸಿಕೊಟ್ಟ ವಿಮರ್ಶಕಿ ಎಂ.ಎಸ್.ಆಶಾದೇವಿ, "ಪುರುಷರ ಆತ್ಮಕಥನಗಳು ಆರೋಹಣ ಪರ್ವದ ಹಾಗೆ ಕಂಡರೆ ಮಹಿಳೆಯರ ಆತ್ಮಕಥನಗಳು ಅನಾವರಣ ಪರ್ವದ ಹಾಗೆ ಕಾಣುತ್ತವೆ. ಹೆಣ್ಣಿಗೆ ತನ್ನನ್ನು, ತನ್ನ ಸಂದರ್ಭವನ್ನು, ತಾನು ಬದುಕು ಕಟ್ಟಿಕೊಳ್ಳಲು ನಡೆಸಿದ ಹೋರಾಟವನ್ನು ಹೇಳಿಕೊಳ್ಳುವ ಮಾರ್ಗವಾಗಿ ಆತ್ಮಕಥನಗಳು ಕಾಣಿಸುತ್ತವೆ. ಇಂದಿರಾ ಲಂಕೇಶ್‍ ಅವರ ‘ಹುಳಿಮಾವಿನ ಮರ ಮತ್ತು ನಾನು' ಆತ್ಮಕಥನವು ಆತ್ಮಘನತೆಯ ಕಥನವಾದರೆ, ವಿಜಯಾ ಅವರ ‘ಕುದಿ ಎಸರು' ಅಗ್ನಿದಿವ್ಯಕ್ಕೆ ಒಡ್ಡಿಕೊಂಡೂ ಹೂವಿನ ಗುಣ ಉಳಿಸಿಕೊಂಡ ಮಹಿಳೆಯ ಬದುಕಿನ ಕಥನ" ಎಂದು ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry