ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಎಂಬ ಖಂಡ ದೇಶದೊಳಗೆ...

Last Updated 28 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕ್ವಾಲಾಲಂಪುರದಿಂದ ಸತತ ಎಂಟು ಗಂಟೆಗಳ ಕಾಲ ನಮ್ಮನ್ನು ಹೊತ್ತು ಸಾಗಿದ ಮಲೇಷಿಯನ್‌ ಏರ್‌ಲೈನ್ಸ್‌ ವಿಮಾನ ಸಿಡ್ನಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲು ಸನ್ನದ್ಧವಾಗುತ್ತಿತ್ತು. ಆಗ ರಾತ್ರಿ 8ರ ಸಮಯ. ದೆಹಲಿಯಿಂದ ಮುಂಬೈವರೆಗೆ ಒಂದೂವರೆ ಗಂಟೆ, ಮುಂಬೈನಿಂದ ಕ್ವಾಲಾಲಂಪುರಕ್ಕೆ ನಾಲ್ಕೂವರೆ ಗಂಟೆ, ಅಲ್ಲಿಂದ ಎಂಟು ಗಂಟೆ ಎಡೆಬಿಡದ ಪ್ರಯಾಣದಿಂದಾಗಿ ಬಸವಳಿದು ನಿದ್ದೆಗೆ ಜಾರಿದ್ದ ನನಗೆ, ‘ಇನ್ನು ಕೆಲವೇ ನಿಮಿಷಗಳಲ್ಲಿ ಸಿಡ್ನಿಯಲ್ಲಿ ವಿಮಾನ ಇಳಿಯಲಿದೆ’ ಎಂದು ಪರಿಚಾರಕಿ ಘೋಷಿಸಿದಾಗ, ‘ಆಸ್ಟ್ರೇಲಿಯಾ ಬಂತು’ ಅನ್ನಿಸಿ ಎಚ್ಚರವೇನೋ ಆಯಿತು. ಆದರೂ ಅದು ಕನಸೇ ಇರಬಹುದು ಎಂಬ ಭಾವ.

‘ಸಿಡ್ನಿ ಬಂತೇ!’ ಎಂದು ಕನವರಿಸುತ್ತಲೇ, ಕಣ್ಣೊರೆಸಿಕೊಳ್ಳುತ್ತಲೇ ಅಚ್ಚರಿಯಿಂದ ವಿಮಾನದ ಕಿಟಕಿಯಿಂದ ಇಣುಕಿ ನೋಡಿದಾಗ ಗಗನಚುಂಬಿ ಕಟ್ಟಡಗಳು, ಊರ ತುಂಬ ಝಗಮಗಿಸುತ್ತಿದ್ದ ಬೀದಿ ದೀಪಗಳು, ರಸ್ತೆಯ ಮೇಲೆ ಒಂದರ ಹಿಂದೊಂದರಂತೆ ಹೆಡ್‌ಲೈಟ್‌ ಉರಿಸಿಕೊಂಡು ಸಾಗುತ್ತಿದ್ದ ವಾಹನಗಳ ಸಾಲು ಕಂಡವು. ಹಾಗೆ ಕಂಡ ದೃಶ್ಯದ ಕಾರಣದಿಂದಾಗಿ ಸಿಡ್ನಿ ಎಂಬ ಮಾಯಾನಗರಿಯೂ ನಮ್ಮ ಬೆಂಗಳೂರು, ದೆಹಲಿ ಅಥವಾ ಮುಂಬೈ ನಗರಗಳಿಗಿಂತ ಭಿನ್ನವಲ್ಲ ಎಂಬಂತೆ ಭಾಸವಾಯಿತು.

ಇದ್ದಕ್ಕಿದ್ದಂತೆಯೇ ಪಥವನ್ನು ಬದಲಿಸಿ, ಸಮುದ್ರದತ್ತ ಸಾಗಿ ಒಂದು ತಿರುವು ಹೊರಳಿದ ವಿಮಾನ, ಭೂಮಿಗೆ ಮತ್ತಷ್ಟು ಹತ್ತಿರ ಹತ್ತಿರ ಆಗುತ್ತ ನಿಲ್ದಾಣದತ್ತ ಇಳಿಯಲು ಅಣಿಯಾಗುತ್ತಿದ್ದಂತೆಯೇ ಕಟ್ಟಡಗಳು ಮತ್ತಷ್ಟು ದೊಡ್ಡದಾಗಿ ಗೋಚರಿಸತೊಡಗಿದವು. ಬಾನೆತ್ತರಕ್ಕೆ ಇದ್ದ ಕಂಬಗಳಲ್ಲಿ ಬೆಳಗುತ್ತಿದ್ದ ವಿದ್ಯುತ್‌ ದೀಪಗಳಿಂದಾಗಿ ಕೃತಕ ಹಗಲಿಗೆ ತೆರೆದುಕೊಂಡಂತಿದ್ದ ಉದ್ಯಾನಗಳಲ್ಲಿ ಜನ ರಾತ್ರಿ ವೇಳೆಯೂ ವಾಯುವಿಹಾರದಲ್ಲಿ ತೊಡಗಿದ್ದರು.

ಮೇಲಿನಿಂದಲೇ ಕಂಡ ಏಳೆಂಟು ಕ್ರೀಡಾಂಗಣಗಳ ಬೆಂಚುಗಳ ಮೇಲೆ ಪ್ರೇಕ್ಷಕರೇ ಇರಲಿಲ್ಲ. ಯಾವುದೇ ಕ್ರೀಡಾಕೂಟ ನಡೆಯುತ್ತಿಲ್ಲದಿದ್ದರೂ, ಫ್ಲಡ್‌ ಲೈಟ್‌ಗಳು ಉರಿಯುತ್ತ ಬೆಳಕು ನೀಡುತ್ತಿದ್ದವು. ಆ ಬೆಳಕಿನ ಕೆಳಗೆ ಫುಟ್ಬಾಲ್‌, ಕ್ರಿಕೆಟ್‌, ರಗ್ಬಿ ಆಟಗಳ ಅಭ್ಯಾಸದಲ್ಲಿ ಕ್ರೀಡಾಪಟುಗಳು ನಿರತರಾಗಿದ್ದನ್ನು ಕಂಡು, ‘ಆಟದ ಅಭ್ಯಾಸಕ್ಕೆ ಪ್ರೋತ್ಸಾಹ ಹೀಗೆಯೇ ಇರಬೇಕು’ ಎಂದುಕೊಂಡ ಮನಸ್ಸು ಪುಳಕಗೊಂಡಿತು.

ವಿಮಾನ ನಿಲ್ದಾಣದಿಂದ ಹೊರಬಂದು ಆಸ್ಟ್ರೇಲಿಯಾ ಪ್ರವಾಸೋದ್ಯಮ ಇಲಾಖೆ ವ್ಯವಸ್ಥೆ ಮಾಡಿದ್ದ ವಾಹನ ಹತ್ತಿದರೆ, ರಸ್ತೆಯಲ್ಲಿ ಜನರೇ ಕಾಣಿಸುತ್ತಿಲ್ಲ! ‘ರಾತ್ರಿ ಒಂಭತ್ತಕ್ಕೆಲ್ಲ ಊರ ಜನ ಮಲಗೇ ಬಿಟ್ಟರೇ?’ ಎಂದುಕೊಂಡು ಹೋಟೆಲ್‌ ಒಳಗೆ ಹೋದವರಿಗೆ, ಒಳಗಿನ ರೆಸ್ಟೋರಂಟ್‌ನಲ್ಲಿ ಊಟ ಮಾಡುತ್ತಿದ್ದ ನೂರಾರು ಜನ ‘ನಾವಿನ್ನೂ ಮಲಗಿಲ್ಲ’ ಎಂದು ಹೇಳಿದಂತೆನಿಸಿತು.

ಇತಿಹಾಸದ ಪುಟಗಳಲ್ಲಿ ಇಣುಕಿ ನೋಡಿದರೆ ಆಸ್ಟ್ರೇಲಿಯಾ ಎಂಬ ಅ‘ಖಂಡ’ ರಾಷ್ಟ್ರಕ್ಕೂ ಭಾರತಕ್ಕೂ ಅಜಗಜಾಂತರ. ನಮ್ಮ ಇತಿಹಾಸದ ಅಧ್ಯಯನ ಮೂರರಿಂದ ಐದು ಸಾವಿರ ವರ್ಷಗಳಷ್ಟು ಆಳದ್ದಾಗಿದ್ದರೆ, ವಿಶ್ವದ ಅತಿದೊಡ್ಡ ದ್ವೀಪ ರಾಷ್ಟ್ರವಾದ ಆಸ್ಟ್ರೇಲಿಯಾದ ಇತಿಹಾಸಕ್ಕೆ ಈಗಷ್ಟೇ 250ರ ಪ್ರಾಯ.

ಎರಡೂವರೆ ಶತಮಾನಗಳಿಂದೀಚೆಗೆ ತೃತೀಯ ವಿಶ್ವಕ್ಕೆ ಪರಿಚಿತವಾದ ಈ ದೇಶ ಸಾಧಿಸಿರುವ ಅಭಿವೃದ್ಧಿ ನಿಜಕ್ಕೂ ಅಚ್ಚರಿ ಮೂಡಿಸುವಂಥದ್ದು. ಭೌಗೋಳಿಕವಾಗಿ ಭಾರತಕ್ಕಿಂತ ಮೂರು ಪಟ್ಟು ದೊಡ್ಡದಿರುವ ಈ ದೇಶದ ಜನಸಂಖ್ಯೆ ನಮ್ಮ ಕರ್ನಾಟಕದ ಅರ್ಧಕ್ಕಿಂತಲೂ ತುಸು ಕಡಿಮೆ (ವಲಸಿಗರೂ ಸೇರಿ ಎರಡೂ ಮುಕ್ಕಾಲು ಕೋಟಿ) ಎಂಬುದೂ ನನ್ನ ಅಚ್ಚರಿಯನ್ನು ದ್ವಿಗುಣಗೊಳಿಸಿತು. ಜನವಸತಿಗೆ ಯೋಗ್ಯವಲ್ಲದ ಭೂಪ್ರದೇಶ ಇಲ್ಲಿ ಯಥೇಚ್ಛವಾಗಿ ಇರುವುದರಿಂದ ಕರಾವಳಿ ಭಾಗದಲ್ಲಿ ಮಾತ್ರ ನಾಗರಿಕತೆ ಬೆಳೆದಿದೆ.

ನಮ್ಮಲ್ಲಿರುವಂತೆ ಇಲ್ಲಿ ವಾಸ್ತುಶಿಲ್ಪದಿಂದ ಕಂಗೊಳಿಸುವ ಪುರಾತನ ಸ್ಮಾರಕಗಳು ಇಲ್ಲವೇ ಇಲ್ಲ. ಆದರೂ, ನಿಸರ್ಗದತ್ತವಾದ ಆಕರ್ಷಣೀಯ ತಾಣಗಳೇ ಇಲ್ಲಿನ ಪ್ರವಾಸೋದ್ಯಮಕ್ಕೆ ಪುಷ್ಟಿ ನೀಡುತ್ತ, ದೇಶ – ವಿದೇಶಗಳ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಇಲ್ಲಿನ ಜನರಿಗೆ ಎಲ್ಲವನ್ನೂ ಕರುಣಿಸಿರುವ, ಅಗತ್ಯವೇ ಆಗಿ ಹೋಗಿರುವ ನಿಸರ್ಗವು ಮುಕ್ಕಾಗದೇ ಪಕ್ಕಾಗಿಯೇ ಉಳಿದಿರುವುದು ಆಸ್ಟ್ರೇಲಿಯನ್ನರ ಪರಿಸರ ಪ್ರೇಮಕ್ಕೆ ನಿದರ್ಶನ.

ಇಲ್ಲಿನ ಸುಂದರ ಕಡಲ ಕಿನಾರೆ, ಸ್ವಚ್ಛಂದವಾಗಿ ವಿಹರಿಸಲು ಸಹಕಾರಿಯಾದ ಬೀಚ್‌ಗಳು, ಗಿಡಮರಗಳಿಂದ, ಬೆಟ್ಟಗುಡ್ಡಗಳಿಂದ, ಗಿರಿ– ಪರ್ವತಗಳಿಂದ ಆವೃತವಾದ ರುದ್ರರಮಣೀಯ ತಾಣಗಳು ನೋಡುಗರನ್ನು ಥಟ್ಟನೆ ಸೆಳೆಯುವುದರಲ್ಲಿ ಸಂದೇಹವೇ ಇಲ್ಲ.

ಭಾರತದಂತೆಯೇ ಒಕ್ಕೂಟ ವ್ಯವಸ್ಥೆ ಇರುವ ಇಲ್ಲಿನ ನ್ಯೂಸೌಥ್‌ ವೇಲ್ಸ್‌ ರಾಜ್ಯದ ಪ್ರಮುಖ ನಗರ ಸಿಡ್ನಿ. ರಾಷ್ಟ್ರ ರಾಜಧಾನಿ ಕ್ಯಾನ್‌ಬೆರಾ ನಗರದಿಂದ ನೈರುತ್ಯಕ್ಕೆ 280 ಕಿಲೋ ಮೀಟರ್‌ ದೂರದಲ್ಲಿದೆ. ಅದಕ್ಕಿಂತ ನಾಲ್ಕೈದು ಪಟ್ಟು ದೊಡ್ಡದಾದ ಸಿಡ್ನಿಯೇ ಈ ರಾಜ್ಯದ ದೊಡ್ಡ ನಗರ.

ಪ್ರವಾಸದ ಆರಂಭದ ದಿನ ನಮ್ಮನ್ನು ಕೈಬೀಸಿ ಕರೆದಿದ್ದು ಬೋಂಡೈ ಬೀಚ್‌. ಸಿಡ್ನಿಯ ಅತಿ ಸುಂದರ ಬೀಚ್‌ಗಳಲ್ಲಿ ಈ ಜಾಗಕ್ಕೇ ಅಗ್ರಸ್ಥಾನ. ನಗರದಿಂದ ಕಾರ್‌ನಲ್ಲಿ ಸುಮಾರು 30 ನಿಮಿಷಗಳ ಪ್ರಯಾಣ.

ಅಲ್ಲಿಗೆ ನಮ್ಮನ್ನು ತಮ್ಮದೇ ಕಾರ್‌ನಲ್ಲಿ ಕರೆದೊಯ್ದವರು ಪ್ರವಾಸೋದ್ಯಮ ಇಲಾಖೆ ನಿಯೋಜಿಸಿದ್ದ ಜ್ಯೂಲಿ ಮಿಲ್ಲರ್‌. ಆ ಸ್ಥಳ ವಿಶೇಷದ ಬಗ್ಗೆ ಅವರು ವಿವರಣೆ ನೀಡಲು ಮುಂದಾದಾಗ ಆರಂಭದಲ್ಲಿ ಅಷ್ಟಾಗಿ ಕುತೂಹಲ ಮೂಡಿರಲಿಲ್ಲ. ಒಮ್ಮೆ ಆ ಬೀಚ್‌ನ ಹತ್ತಿರಕ್ಕೆ ಹೋಗಿ ಕಣ್ಣರಳಿಸಿ ನೋಡಿದಾಗ ಬೇರೆಯದ್ದೇ ಪ್ರಪಂಚ ಹೊರಹೊಮ್ಮಿದಂತೆನ್ನಿಸಿತು.

ಮರಳ ರಾಶಿಯಲ್ಲಿ ಬೀಚ್‌ ವಾಲಿಬಾಲ್‌ ಆಡುತ್ತಿದ್ದ ತರುಣ – ತರುಣಿಯರು, ನೀಲಿ ಆಗಸದ ಕೆಳಗೆ, ನೀಲಿ ಬಣ್ಣದ ನೀರಿನಲ್ಲಿ ಭಯವನ್ನು ಬಿಸಾಕಿ ಬಂದವರಂತೆ ಮುಳುಗೇಳುತ್ತಿದ್ದ ಪ್ರವಾಸಿಗರು, ಮುದ್ದುಮುದ್ದಾದ ಸಾಕು ನಾಯಿಗಳ ಸಮೇತ ವಾಯು ವಿಹಾರ ನಡೆಸುತ್ತಿದ್ದ ನಗರವಾಸಿಗಳು, ಚಿಣ್ಣರ ಚಿನ್ನಾಟ ಕಂಡು ಕುಳಿತಲ್ಲೇ ಸಂತಸಪಡುತ್ತಿದ್ದ ಪಾಲಕರ ದಂಡು, ಭಾರಿ ಅಲೆಗಳೊಂದಿಗೆ ಭೋರ್ಗರೆಯುತ್ತಿದ್ದ ಕಡಲ ತಡಿಯ ಆ ನಯನ ಮನೋಹರ ದೃಶ್ಯವನ್ನು ಕಣ್ಣು ತುಂಬಿಸಿಕೊಳ್ಳುವುದೇ ವಿಶಿಷ್ಟ ಅನುಭವ.

ಬೋಂಡೈನಿಂದ ಕೋಜಿವರೆಗೆ ತಂಗಾಳಿಯನ್ನು ಆಹ್ಲಾದಿಸುತ್ತ 6 ಕಿ.ಮೀ.ವರೆಗೆ ಸಮುದ್ರದ ದಂಡೆಗುಂಟವೇ ವಾಯುವಿಹಾರ ನಡೆಸಲು ಪಥದ ವ್ಯವಸ್ಥೆ. ನಡುವೆ ಸಮುದ್ರದ ಅಲೆಗಳ ಅಬ್ಬರವನ್ನು ಕಣ್ಣಿಗೊತ್ತಿಕೊಳ್ಳುತ್ತ, ನೀರಿನಡಿಯಿಂದ ಮೇಲಕ್ಕೆ ಧುಮುಕಿ ಅಚ್ಚರಿ ಮೂಡಿಸುವ ವೇಲ್‌ಗಳತ್ತ ಕಣ್ಣು ಹಾಯಿಸಿಕೊಂಡು ಸಾಗುತ್ತಿದ್ದಂತೆಯೇ ಅರ್ಧ ಗಂಟೆಯೊಳಗೆ ಈ ವಾಕ್‌ ಪೂರ್ಣಗೊಳ್ಳುತ್ತದೆ. ಈ ಬೀಚ್‌ ವಿಶೇಷವಾಗಿ ಬೇಸಿಗೆಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಈಗ ಇಲ್ಲಿ ಇನ್ನೂ ಚಳಿಗಾಲ ಇರುವುದರಿಂದ ಬೆರಳೆಣಿಕೆಯಷ್ಟು ಜನ ಕಾಣಸಿಗುತ್ತಿದ್ದಾರೆ ಎಂದು ಜ್ಯೂಲಿ ಹೇಳಿದರು.

ಈ ಬೀಚ್‌ನ ಸೌಂದರ್ಯದ್ದೇ ಒಂದು ತೂಕವಾದರೆ, ಸಿಡ್ನಿಯ ಪ್ರಸಿದ್ಧ ಹಾರ್ಬರ್‌ಗೆ ಅಂಟಿಕೊಂಡಿರುವ ಹಿನ್ನೀರಿನ ಸೆಳೆತದ್ದು ಇನ್ನೊಂದು ತೂಕ. ಸಿಡ್ನಿ ನಗರದಲ್ಲೇ ಇರುವ ಬರಂಗರೂ ಪ್ರದೇಶದಲ್ಲಿನ ಸಮುದ್ರದ ಹಿನ್ನೀರಿನಲ್ಲಿ ಫೆರಿಯಲ್ಲಿನ ಪಯಣದ ಅನುಭವವೇ ಅನನ್ಯ.

ಹೀಗೆ ಫೆರಿಯಲ್ಲಿ ಸಾಗುತ್ತಲೇ ಪ್ರಸಿದ್ಧ ಸಿಡ್ನಿ ಸೇತುವೆಯ ಕೆಳಗಿಂದ ಸಾಗುವುದು ಮನಸ್ಸಿಗೆ ಆಹ್ಲಾದ ನೀಡುತ್ತದೆ. ಫೆರಿ ಇಳಿಯುತ್ತಿದ್ದಂತೆಯೇ ಥಟ್ಟನೆ ಸೆಳೆಯುವುದು ಅಪೆರಾ ಹೌಸ್‌. ಪ್ರದರ್ಶನ ಕಲೆಗೆ ವೇದಿಕೆ ಒದಗಿಸಿರುವ, ಅಪರೂಪದಲ್ಲೇ ಅಪರೂಪದ್ದೆನ್ನಿಸುವ ವಾಸ್ತು ವೈಭವದೊಂದಿಗೆ ಕಂಗೊಳಿಸುವ ಅಪೆರಾ ಹೌಸ್‌ನ ಸೊಬಗು ಆ ಪ್ರವಾಸಿ ತಾಣಕ್ಕೆ ಕಲಶವಿಟ್ಟಂತೆ ಇದೆ. 1959ರಲ್ಲಿ ನಿರ್ಮಾಣ ಕಾರ್ಯ ಆರಂಭವಾದಾಗ ವಿವಾದಕ್ಕೆ ಕಾರಣವಾಗಿದ್ದ ಈ ಅಪೆರಾ ಹೌಸ್‌ ಈಗ ಈ ದೇಶಕ್ಕೆ ಬರಬೇಕು ಎನ್ನುವವರಿಗೆ ಸ್ವಾಗತ ಕೋರುವ ತಾಣಗಳಲ್ಲೇ ಮೊದಲ ಸ್ಥಾನದಲ್ಲಿ ಇರುವಂಥದ್ದು.

ಬ್ಲೂ ಮೌಂಟೇನ್‌: ಸಿಡ್ನಿಯಿಂದ 80 ಕಿ.ಮೀ ದೂರದಲ್ಲಿರುವ ಕಟುಂಬಾ ಪಟ್ಟಣದ ಬಳಿಯ ನೀಲಿ ಪರ್ವತಗಳ ರಾಶಿ (ಬ್ಲ್ಯೂ ಮೌಂಟೇನ್‌) ಕಣ್ಮನ ಸೆಳೆಯುವ ತಾಣಗಳಲ್ಲಿ ಮತ್ತೊಂದು.

ಇದು ನಮ್ಮ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿಯಿರುವ ಯಾಣವನ್ನೇ ಹೋಲುವ ತಾಣ. ಹಸಿರಿನಿಂದ ಆವೃತವಾದ ಬೆಟ್ಟಗುಡ್ಡಗಳಿಂದ ಪ್ರವಾಸಿಗರಿಗೂ ಅಚ್ಚುಮೆಚ್ಚು. ಆ ಸುಂದರ ಕುರುಚಲು ಕಾಡಿಗೆ ಗೋಪುರದಂತೆ, ಒಂದರ ಪಕ್ಕದಲ್ಲಿ ಒಂದರಂತೆ ಬಾನೆತ್ತರಕ್ಕೆ ಬೆಳೆದು ನಿಂತಿರುವ ಮೂರು ಮೊನಚು ಬಂಡೆಗಳ ರಚನೆಯು ಯಾಣದಲ್ಲಿನ ಬಂಡೆಗಳಂತಿದೆ. ಈ ಮೂರು ಬಂಡೆಗಳನ್ನು ‘ಮೂವರು ಸೋದರಿಯರು’ (ಥ್ರೀ ಸಿಸ್ಟರ್ಸ್‌) ಎಂದೇ ಆಸ್ಟ್ರೇಲಿಯನ್ನರು ಹೆಸರಿಸಿದ್ದಾರೆ.

ಈ ಮೂರು ಬಂಡೆಗಳಲ್ಲಿ ಎರಡು ಬಂಡೆಗಳ ಹೆಸರುಗಳು ಭಾರತೀಯ ಹೆಸರುಗಳನ್ನು ಹೋಲುವಂತೆ, ‘ಮೀನಿ’ ಮತ್ತು ‘ವಿಮ್ಲಾ’ ಎಂದಿದ್ದರೆ, ಇನ್ನೊಂದರ ಹೆಸರು ‘ಗುನೆಡೂ’.

ಈ ನೀಲಿ ಪರ್ವತಕ್ಕೆ ಅಂಟಿಕೊಂಡಂತೆಯೇ ಕಲ್ಲಿದ್ದಲು ಗಣಿಗಾರಿಕೆ ನಡೆದಿದ್ದ ಪ್ರದೇಶದಲ್ಲಿ ಕಡಿದಾದ ಬೆಟ್ಟದಲ್ಲಿ ‘ಸಿನಿಕ್‌ ವರ್ಲ್ಡ್‌’ ಹೆಸರಿನ ಪ್ರವಾಸಿ ತಾಣ ಇದೆ. ಅದು ನಮಗೆ ಆಪ್ತವಾಗಿಬಿಡುವ ಇನ್ನೊಂದು ತಾಣ.

ಇಲ್ಲಿ ಆಕಾಶದಿಂದಲೇ ಭೂಮಿಗೆ ಜಾರಿಬಿಡುವಂತೆ, ಇಳಿಜಾರಿನಲ್ಲಿ ಕಡಿದಾದ ಮಾರ್ಗದಲ್ಲಿ ಸರ್‍ರನೆ ಸಾಗಿಹೋಗುವ ರೈಲು, ಒಂದು ಬೆಟ್ಟದಿಂದ ಇನ್ನೊಂದು ಬೆಟ್ಟಕ್ಕೆ 900 ಮೀಟರ್‌ ಅಂತರಕ್ಕೆ ಸಂಪರ್ಕ ಕಲ್ಪಿಸುವ ಕೇಬಲ್‌ ಕಾರ್‌ ವ್ಯವಸ್ಥೆ ಇದೆ. ಅದು ಎಂಥ ಗಟ್ಟಿಗಿತ್ತಿಯರನ್ನೂ, ಗಂಡೆದೆಯವರ ಎದೆಯನ್ನೂ ಝಲ್‌ ಎನ್ನಿಸದೆ ಇರದು.

ಕಡಿದಾದ ಬೆಟ್ಟದಲ್ಲಿನ ಕಲ್ಲಿದ್ದಲನ್ನು ಮೇಲಕ್ಕೆ ಸಾಗಿಸಲೆಂದೇ 19ನೇ ಶತಮಾನದ ಉತ್ತರಾರ್ಧದಲ್ಲಿ ಈ ರೈಲು ಮಾರ್ಗ ನಿರ್ಮಿಸಿದ್ದ ಗಣಿ ಮಾಲೀಕರು ಕಾಲಾಂತರದಲ್ಲಿ ಪ್ರವಾಸಿ ತಾಣವನ್ನಾಗಿ ಮಾರ್ಪಡಿಸಿರುವುದು ವಿಶೇಷ. ಜಗತ್ತಿನ ಅತ್ಯಂತ ಕಡಿದಾದ ರೈಲು ಮಾರ್ಗವನ್ನು ಹೊಂದಿರುವ ಈ ಪರ್ವತಗಳನ್ನು ನೋಡಲು ಎರಡು ಕಣ್ಣುಗಳು ಸಾಲದೇನೋ ಎಂದೆನ್ನಿಸುತ್ತದೆ.

ಕ್ವೀನ್ಸ್‌ಲ್ಯಾಂಡ್‌ ಕನವರಿಕೆ: ಕರ್ನಾಟಕದ ಕೊಡಗಿನ ಹವಾಮಾನವನ್ನೇ ಹೊಂದಿರುವ ಸಿಡ್ನಿ ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳ ದರ್ಶನದ ನಂತರ ನಮ್ಮ ಪ್ರಯಾಣ ಸಾಗಿದ್ದು ಕ್ವೀನ್ಸ್‌ಲ್ಯಾಂಡ್‌ ರಾಜ್ಯದಲ್ಲಿರುವ ಬ್ರಿಸ್ಬೇನ್‌ ನಗರದತ್ತ. ಇಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಇರುವಂತೆಯೇ ಒಣಹವೆ. ಬೇಸಿಗೆಯಲ್ಲಿ 36 ಡಿಗ್ರಿ ಸೆಲ್ಸಿಯಸ್ ದಾಟುವ ತಾಪಮಾನ. ಆದರೂ ಈ ನಗರವನ್ನು ಬಳಸಿಕೊಂಡು ಸದಾ ತುಂಬಿ ಹರಿಯುತ್ತಿರುವ ಬ್ರಿಸ್ಬೇನ್‌ ನದಿಗೆ ನಿರ್ಮಿಸಿರುವ ಬೃಹದಾದ ಉಕ್ಕಿನ ಸೇತುವೆಯ ಚಾರಣ ಎದೆ ನಡುಗಿಸುವಂಥ ಮತ್ತೊಂದು ಅನುಭವ.

ಸಕಲ ಸುರಕ್ಷತೆಯೊಂದಿಗೆ ಸಾಗುತ್ತ 80 ಮೀಟರ್‌ ಎತ್ತರಕ್ಕಿರುವ ಈ ಸೇತುವೆಯ ತುತ್ತತುದಿಯನ್ನು ತಲುಪಿದ ಬಳಿಕ, ಕೆಳಗೆ ಕಣ್ಣಾಡಿಸಿದರೆ ಎಂಥ ಧೈರ್ಯವಂತರಿಗೂ ತಲೆ ತಿರುಗಿಬಿಡುವುದು ಸಹಜ. ಯಾರದ್ದಾದರೂ ಎದೆ ನಡುಗದಿದ್ದರೆ ಅದೇ ಆಶ್ಚರ್ಯಕರ ಎಂಬಂಥ ಅನುಭವ ನೀಡುವ ಈ ಸೇತುವೆಯ ಚಾರಣ ಇಲ್ಲಿಗೆ ಬರುವವರ ಮನಸ್ಸಿಗೆ ಮುದ ನೀಡುವುದರಲ್ಲಿ ಸಂಶಯವೇ ಇಲ್ಲ. ಅಂತೆಯೇ ಸೂಜಿಗಲ್ಲಿನಂತೆ ಆಕರ್ಷಿಸಿ, ಸಮ್ಮೋಹನಗೊಳಿಸುವ ಈ ಸೇತುವೆಗೆ ಮಾರುಹೋಗುವ ಸಾಹಸೀ ಪ್ರವೃತ್ತಿಯ ಯುವಕ – ಯುವತಿಯರು ಸೇತುವೆಯ ತುತ್ತ ತುದಿ ತಲುಪಿ ಆನಂದಿಸುತ್ತಾರೆ. ಇದು ಪ್ರವಾಸಿಗರಿಗೆ ಆಹ್ಲಾದಕರ ಅನುಭವ ನೀಡುವ ಜಾಗಗಳಲ್ಲಿ ಪ್ರಮುಖವಾದದ್ದು.

ಊರ ಸುತ್ತ ಹರಿದಿರುವ ಬ್ರಿಸ್ಬೇನ್‌ ನದಿ ಈ ನಗರಕ್ಕೆ ಮುಕುಟದಂತಿದ್ದು, ಅದರ ಅಕ್ಕಪಕ್ಕದಲ್ಲೇ ಇರುವ ಬೃಹತ್‌ ಶಾಪಿಂಗ್‌ ಮಾಲ್‌ಗಳು, ನೂರಾರು ವರ್ಷಗಳಷ್ಟು ಹಳೆಯದಾದ ಕಟ್ಟಡಗಳು ತಮ್ಮತ್ತ ಸೆಳೆಯುವ ಸೌಂದರ್ಯವನ್ನು ಹೊಂದಿವೆ. ಭಾರತದ ಮಾರುಕಟ್ಟೆಗೆ ಹೋಲಿಸಿದರೆ ಈ ದೇಶದಲ್ಲಿ ಶಾಪಿಂಗ್‌ ಭಾರಿ ದುಬಾರಿ ಎನ್ನಬಹುದು. ನಮ್ಮಲ್ಲಿರುವಂತೆ ಇಲ್ಲೂ ಚೀನಾದ ಉತ್ಪನ್ನಗಳೇ ಮಾರುಕಟ್ಟೆಯನ್ನು ಆವರಿಸಿಕೊಂಡಿದ್ದು, ದರದಲ್ಲಿ ಮಾತ್ರ ವ್ಯತ್ಯಾಸವಿದೆಯಷ್ಟೇ.

ಅಂದಹಾಗೆ, ಊಟದ ವಿಷಯದಲ್ಲಿ ಭಾರತೀಯರಿಗೆ ಕೊಂಚ ನಿರಾಸೆ ಉಂಟಾಗುವುದು ಸಹಜ. ಸಸ್ಯಾಹಾರಿಗಳಿಗಾಗಿ ಭಾರತೀಯ ಹೋಟೆಲ್‌ಗಳಿವೆ. ಪ್ರತಿ ಹೋಟೆಲ್‌ನಲ್ಲಿ ಊಟೋಪಚಾರದ ಉಸ್ತುವಾರಿ ವಹಿಸಿಕೊಳ್ಳುವುದು ಯುವತಿಯರು. ಆದರೂ ನಮ್ಮ ರುಚಿಯ ವಿಷಯದಲ್ಲಿ ವ್ಯತ್ಯಾಸ ಇದೆ. ಮಾಂಸಾಹಾರಿಗಳಿಗೆ ಸ್ವರ್ಗ ಎಂಬಂತಿರುವ ಇಲ್ಲಿನ ಹೋಟೆಲ್‌ಗಳಲ್ಲಿ ಮಸಾಲೆ, ಉಪ್ಪು, ಖಾರ ಇಲ್ಲದ ಬಾಡೂಟ ಅಷ್ಟಾಗಿ ಪ್ರಿಯವೆನ್ನಿಸುವುದಿಲ್ಲ. ಇಲ್ಲಿರುವಷ್ಟು ದಿನಗಳ ಕಾಲ ಊಟ ಹೇಗೇ ಇರಲಿ ಅದರ ಉಸಾಬರಿ ಬೇಡ ಎಂದು ವಿದೇಶ ಸುತ್ತಲು ಬರುವವರಿಗೆ ಮಾತ್ರ ರಸದೌತಣ ಕಾದಿದೆ.

ಕ್ರಿಕೆಟ್‌ ಹುಚ್ಚು ಅಷ್ಟಕ್ಕಷ್ಟೇ!
ಭಾರತೀಯರಾದ ನಮಗೆಲ್ಲ ಆಸ್ಟ್ರೇಲಿಯಾ ಮೊದಲು ಪರಿಚಿತವಾಗಲು ಕಾರಣ ಕ್ರಿಕೆಟ್‌. ನನಗಂತೂ ಕಾಂಗರೂಗಳ ನಾಡು ಪರಿಚಯವಾದದ್ದು ಕ್ರಿಕೆಟ್‌ನಿಂದಲೇ.

ಡಾನ್‌ ಬ್ರಾಡ್‌ಮನ್‌ರಿಂದ ಹಿಡಿದು ಸ್ಟೀವ್‌ ವಾ, ರಿಕಿ ಪಾಂಟಿಂಗ್‌, ಗಿಲ್‌ ಕ್ರಿಸ್ಟ್‌, ಹೇಡನ್‌, ಮೆಕ್‌ಗ್ರಾ, ಶೇನ್‌ ವಾರ್ನ್‌, ಸ್ಟೀವನ್‌ ಸ್ಮಿತ್‌ ಒಳಗೊಂಡಂತೆ ಅಲ್ಲಿನ ಬಹುತೇಕ ಖ್ಯಾತ ಆಟಗಾರರು ನಮಗೆ ಪರಿಚಿತರೇ. ಕ್ರಿಕೆಟ್ಟಿನಿಂದಾಗಿಯೇ ಆಸ್ಟ್ರೇಲಿಯನ್ನರಿಗೂ ಭಾರತದ ಪರಿಚಯವಾಗಿದೆ. ಆದರೂ ನಮ್ಮಲ್ಲಿ ಇರುವಷ್ಟು ಕ್ರಿಕೆಟ್‌ ಹುಚ್ಚು ಅಲ್ಲಿನವರಲ್ಲಿ ಇಲ್ಲ ಎಂಬುದು ಅಚ್ಚರಿಯ ಸಂಗತಿ.

ನಾವು ಅಲ್ಲಿದ್ದಾಗ ಸ್ಟಿವನ್‌ ಸ್ಮಿತ್‌ ನಾಯಕತ್ವದ ಆಸ್ಟ್ರೇಲಿಯಾ ತಂಡ ಭಾರತದಲ್ಲಿ ಏಕದಿನ ಸರಣಿಯಲ್ಲಿ ಆಡುತ್ತ ಮೂರು ಪಂದ್ಯಗಳನ್ನು ಸೋತಿತ್ತು. ಬೆಂಗಳೂರಿನಲ್ಲಿ ನಾಲ್ಕನೇ ಪಂದ್ಯ ಬೆಳಗಿನ ಜಾವದ 1.30ರ ವೇಳೆಗೆ ಮುಗಿದಾಗ ಪ್ರವಾಸಿ ತಂಡ ಮೊದಲ ಗೆಲುವು ಸಾಧಿಸಿತ್ತು. ಆದರೆ, ಮಾರನೇ ದಿನದ ಪತ್ರಿಕೆಗಳಲ್ಲಿ ಕ್ರಿಕೆಟ್‌ ಪಂದ್ಯದ ವರದಿಯೇ ಪ್ರಕಟವಾಗಿರಲಿಲ್ಲ. ಅದರ ಮಾರನೇ ದಿನ ವಿವರಣೆ, ವಿಶ್ಲೇಷಣೆಯೂ ಇರಲಿಲ್ಲ. ಪಂದ್ಯದ ಸ್ಕೋರ್‌ ವಿವರ ಮಾತ್ರ ಪ್ರಕಟವಾಗಿತ್ತು.

‘ನಮ್ಮಲ್ಲಿ ಮಧ್ಯರಾತ್ರಿಯವರೆಗೆ ಪಂದ್ಯ ನಡೆದು, ಫಲಿತಾಂಶ ಇನ್ನೂ ಬಾರದಿದ್ದಾಗ ಪತ್ರಿಕೆಗಳು ಮುದ್ರಣಕ್ಕೆ ಹೋಗುವವರೆಗಿನ ಸ್ಕೋರ್‌ ವಿವರ ಒಳಗೊಂಡ ದೊಡ್ಡ ವರದಿಯನ್ನು ಪ್ರಕಟಿಸಲಾಗುತ್ತದೆ. ಇಲ್ಲಿ ಏಕೆ ಹಾಗಿಲ್ಲ’ ಎಂದು ನಮ್ಮ ಗೈಡ್‌ ಮಾರ್ಕ್‌ ಗ್ರೀವ್ಸ್‌ರನ್ನು ಕೇಳಿದರೆ, ‘ಹೌದೇ ನಮ್ಮ ಕ್ರಿಕೆಟ್‌ ತಂಡ ಈಗ ಭಾರತದಲ್ಲಿದೆಯೇ’ ಎಂದು ಮರು ಪ್ರಶ್ನೆ ಎಸೆದರು.

ನಾವು ಭೇಟಿಯಾದ ಅನೇಕರಿಗೆ ಕ್ರಿಕೆಟ್‌ ಬಗ್ಗೆ ಗೊತ್ತಿದೆಯಾದರೂ ಅದರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಂತೆ ಕಾಣಿಸಲಿಲ್ಲ. ರಗ್ಬಿ ನಮಗೆ ತುಂಬಾ ಇಷ್ಟ, ಸೈಕ್ಲಿಂಗ್, ಈಜು, ಫುಟ್‌ಬಾಲ್‌ ಎಂದರೆ ಪ್ರೀತಿ. ಕ್ರಿಕೆಟ್‌ ಎಂದರೆ ಇಷ್ಟ ಇಲ್ಲ ಎಂದಲ್ಲ. ಮಾಡುವ ಕೆಲಸ ಬಿಟ್ಟು ದಿನಗಟ್ಟಲೇ ನಡೆಯುವ ಪಂದ್ಯಗಳ ಬಗ್ಗೆ ಧ್ಯಾನಿಸುವುದಿಲ್ಲ ಎಂದು ಕೆಲವರು ತಿಳಿಸಿದರು.

ಕೆಲವು ಕ್ರಿಕೆಟ್‌ ಪ್ರಿಯರು ಡಾನ್‌ ಬ್ರಾಡ್‌ಮನ್‌ ಅವರ ಆಟದೊಂದಿಗಿನ ಹೋಲಿಕೆಯಿಂದಾಗಿ ಸಚಿನ್‌ ತೆಂಡೂಲ್ಕರ್‌ ಅವರನ್ನು ಪ್ರೀತಿಸುವುದಾಗಿ ತಿಳಿಸಿದರೆ, ಮಹೇಂದ್ರ ಸಿಂಗ್‌ ದೋನಿ ಇಲ್ಲಿನ ಕೆಲವರಿಗೆ ಅಚ್ಚುಮೆಚ್ಚಿನ ಭಾರತೀಯ ಆಟಗಾರ ಎಂಬುದು ಗೊತ್ತಾಯಿತು.

(‘ಟೂರಿಸಂ ಆಸ್ಟ್ರೇಲಿಯಾ’ ಆಹ್ವಾನದ ಮೇರೆಗೆ ಲೇಖಕರು ಸಿಡ್ನಿ ಹಾಗೂ ಬ್ರಿಸ್ಬೇನ್‌ಗೆ ಭೇಟಿ ನೀಡಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT