ಭಾನುವಾರ, ಸೆಪ್ಟೆಂಬರ್ 15, 2019
23 °C

ಬಿಜೆಪಿ ಕೇಳಿ ಅಧಿವೇಶನ ನಡೆಸಲ್ಲ: ಜಾರ್ಜ್ ತಿರುಗೇಟು

Published:
Updated:
ಬಿಜೆಪಿ ಕೇಳಿ ಅಧಿವೇಶನ ನಡೆಸಲ್ಲ: ಜಾರ್ಜ್ ತಿರುಗೇಟು

ಬೆಂಗಳೂರು: ‘ಬಿಜೆಪಿ ನಾಯಕರನ್ನು ಕೇಳಿ ಸರ್ಕಾರ ವಿಧಾನಮಂಡಲ ಅಧಿವೇಶನ ನಡೆಸುತ್ತದೆಯೇ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಪ್ರಶ್ನಿಸಿದರು.

‘ಜಾರ್ಜ್ ರಾಜೀನಾಮೆ ಕೊಡುವ ತನಕ ಬೆಳಗಾವಿ ಅಧಿವೇಶನ ನಡೆಸಲು ಬಿಡುವುದಿಲ್ಲ’ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಯಾವುದೇ ಅಧಿವೇಶನದಲ್ಲೂ ಬಿಜೆಪಿಯವರು ಅವಕಾಶ ನೀಡಿಲ್ಲ. ಈ ಬಾರಿ ನನ್ನ ವಿಷಯ ತೆಗೆದುಕೊಳ್ಳುತ್ತಿದ್ದಾರೆ ಅಷ್ಟೆ’ ಎಂದರು.

‘ಗಣಪತಿ ಆತ್ಮಹತ್ಯೆಯಲ್ಲಿ ನನ್ನ ಪಾತ್ರ ಇಲ್ಲ ಎಂದು ಸಿಐಡಿ ವರದಿ ನೀಡಿದೆ. ಸಿಬಿಐ ತನಿಖೆಯಲ್ಲೂ ಅದೇ ವರದಿ ಬರಲಿದೆ ಎಂಬುದು ಬಿಜೆಪಿಯವರಿಗೂ ಗೊತ್ತಿದೆ’ ಎಂದು ಹೇಳಿದರು.

‘ಸಿಬಿಐ ರಾಜ್ಯ ಸರ್ಕಾರದ ಅಧೀನದಲ್ಲಿ ಇಲ್ಲ. ಕೇಂದ್ರ ಸರ್ಕಾರದ ಅಧೀನ ಸಂಸ್ಥೆ ಮೇಲೆ ಪ್ರಭಾವ ಬೀರುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಸಿಬಿಐ ಮೂರು ತಿಂಗಳಲ್ಲಿ ವರದಿ ನೀಡಲಿದೆ. ಅಷ್ಟು ದಿನ ಕಾಯಲು ಬಿಜೆಪಿಯವರಿಗೆ ಏನು ಕಷ್ಟ’ ಎಂದು ಪ್ರಶ್ನಿಸಿದರು.

‘ನಾನು ಅಪರಾಧಿ ಎಂಬಂತೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾತನಾಡಿದ್ದಾರೆ. ಅವರೇ ತೀರ್ಪು ನೀಡುವುದಾದರೆ ಸಿಬಿಐ ತನಿಖೆ ಏಕೆ ಬೇಕು? ಹೀಗೆ ಮಾತನಾಡುವ ಮೂಲಕ ಅವರು ಸಿಬಿಐ ಮೇಲೆ ಒತ್ತಡ ಹೇರುತ್ತಿದ್ದಾರೆ’ ಎಂದು ಆರೋಪಿಸಿದರು.

ಯಡಿಯೂರಪ್ಪಗೆ ಶೋಭಾ ‘ಎಟಿಎಂ’

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಂಸದೆ ಶೋಭಾ ಕರಂದ್ಲಾಜೆ ಎಟಿಎಂ ಆಗಿರಬಹುದು’ ಎಂದು  ಕೆ.ಜೆ. ಜಾರ್ಜ್ ಹೇಳಿದರು.

‘ಸಚಿವ ಜಾರ್ಜ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎಟಿಎಂ ಇದ್ದಂತೆ’ ಎಂಬ ಶೋಭಾ ಕರಂದ್ಲಾಜೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಜಾರ್ಜ್, ‘ನಮ್ಮಮುಖ್ಯಮಂತ್ರಿ ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಯಾವುದೇ ಎಟಿಎಂ ಅಗತ್ಯವಿಲ್ಲ’ ಎಂದರು.

Post Comments (+)