ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆಯ ಪ್ರಾಚೀನತೆಗೂ ಶ್ರೇಷ್ಠತೆಗೂ ಸಂಬಂಧವಿಲ್ಲ

ದಕ್ಷಿಣದ ಅತ್ಯಂತ ಪುರಾತನ ಭಾಷೆ ಆದಿ ದ್ರಾವಿಡ; ತಮಿಳು ಅಲ್ಲ: ಷ.ಶೆಟ್ಟರ್‌
Last Updated 28 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ದಕ್ಷಿಣ ಭಾರತದ ಅತ್ಯಂತ ಪ್ರಾಚೀನ ಭಾಷೆಯೆಂದರೆ ಆದಿ ದ್ರಾವಿಡ; ತಮಿಳು ಅಲ್ಲ. ಕಾಲಾಂತರದಲ್ಲಿ ಆದಿದ್ರಾವಿಡ ಭಾಷೆಯ ಶಾಖೆಗಳಾಗಿ ಮೊದಲು ತಮಿಳು ಮತ್ತು ಕನ್ನಡಗಳು ಬೆಳೆದವು. ಬಳಿಕ ತೆಲುಗು ಮತ್ತು ಮಲಯಾಳಂ ಭಾಷೆಗಳು ಹುಟ್ಟಿದವು’ ಎಂದು ಭಾಷಾ ಇತಿಹಾಸಜ್ಞ ಷ.ಶೆಟ್ಟರ್‌ ಹೇಳಿದರು.

ಬೆಂಗಳೂರು ಸಾಹಿತ್ಯೋತ್ಸವದಲ್ಲಿ ‘ಕನ್ನಡ ಲಿಪಿ ಮತ್ತು ಭಾಷೆ’ಯ ಕುರಿತು ಸುದೀರ್ಘ ಉಪನ್ಯಾಸ ನೀಡಿದ ಅವರು, ಕನ್ನಡ ಭಾಷೆ ಹಂತ ಹಂತವಾಗಿ ಬೆಳೆದು
ಬಂದ ಬಗೆಯನ್ನು ಸರಳ ಇಂಗ್ಲಿಷ್‌ನಲ್ಲಿ ಸಭಿಕರು ತಲೆದೂಗುವಂತೆ ವಿವರಿಸಿದರು.

‘ಈಗಿನ ಕನ್ನಡ ಒಮ್ಮಿಂದೊಮ್ಮೆಲೆ ಉದ್ಭವಿಸಿದ್ದಲ್ಲ. ಪ್ರಾಕೃತ, ಸಂಸ್ಕೃತ, ತಮಿಳು, ತೆಲುಗು, ಉರ್ದು, ಪರ್ಷಿಯನ್‌, ಅರೆಬಿಕ್‌ ಮತ್ತು ಇಂಗ್ಲಿಷ್‌ ಭಾಷೆಗಳ ಜತೆಗೆ ಸಂವಹನದಿಂದ ಬೆಳೆದದ್ದು. ಎಲ್ಲ ಭಾಷೆಗಳಿಂದ ಪಡೆದ ಹೂರಣಗಳು ವಿಲೀನಗೊಂಡು ರೂಪು ಪಡೆದದ್ದು’ ಎಂದು ವಿವರಿಸಿದರು.

‘ನಮ್ಮ ಭಾಷೆಯೇ ಹೆಚ್ಚು ಪುರಾತನವಾದದ್ದು ಎಂಬ ಸ್ಪರ್ಧೆ ಇತ್ತೀಚೆಗೆ ಹುಟ್ಟಿಕೊಂಡಿದೆ. ಹೆಚ್ಚು ಪುರಾತನವಾದದ್ದು ಹೆಚ್ಚು ಶ್ರೇಷ್ಠ ಎನ್ನುವ ವಾದ ಸರಿಯಲ್ಲ. ಹಿಂದೆ ಜಮೀನ್ದಾರ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು; ಅವರೇ ಈಗ ರೈತ ಎಂದು ಕರೆದುಕೊಳ್ಳುತ್ತಿದ್ದಾರೆ. ಹಿಂದೆ ಶೂದ್ರರೆನ್ನುವುದು ಅಪಮಾನದ ಸಂಗತಿಯಾಗಿತ್ತು. ಈಗ ಲಾಭಗಳ ಸಲುವಾಗಿ ಎಲ್ಲರೂ ಶೂದ್ರರಾಗಲು ಸ್ಪರ್ಧಿಸುತ್ತಿದ್ದಾರೆ’ ಎಂದು ಷಟ್ಟರ್‌ ಬೊಟ್ಟು ಮಾಡಿದರು.

‘ನಾಲ್ಕನೇ ಶತಮಾನದ ಕನ್ನಡದಲ್ಲಿ ಪ್ರಾಕೃತದ ಶಬ್ದಗಳು ಹೆಚ್ಚಿದ್ದವು. ಬಳಿಕ ಸಂಸ್ಕೃತದ ಪ್ರಭಾವ ದಟ್ಟವಾಗಿತ್ತು. ಎಷ್ಟೆಂದರೆ, ಅರ್ಧದಷ್ಟು ಶಬ್ದಗಳು ಸಂಸ್ಕೃತದ್ದೇ ಆಗಿದ್ದವು. ಆದರೆ ಕನ್ನಡ ಭಾಷೆಯ ಹೆಚ್ಚುಗಾರಿಕೆಯೆಂದರೆ ಭಾಷಾ ಬೆಳವಣಿಗೆಯ ಈ ಹಂತದಲ್ಲಿ ಸಂಸ್ಕೃತ ತನ್ನ ಮೇಲೆ ಪಾರಮ್ಯ ಸಾಧಿಸಲು ಅದು ಬಿಡಲಿಲ್ಲ. ಸ್ವತಂತ್ರವಾಗಿ ಬೆಳೆದುನಿಂತಿತು’ ಎಂದರು.

ಅಶೋಕನ ಕೊಡುಗೆ: ‘ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಅಶೋಕ ಮೌರ್ಯ ಅಕ್ಷರಗಳಿಗೆ ಕೊಟ್ಟ ಕಾಣಿಕೆ ಅಮೂಲ್ಯವಾದದ್ದು. ಬ್ರಾಹ್ಮಿ ಲಿಪಿ ಮತ್ತು ಪ್ರಾಕೃತ ಭಾಷೆಯ ಸಮನ್ವಯದ ಮೂಲಕ ಅಕ್ಷರಗಳನ್ನು ದೇಶಾದ್ಯಂತ ಪರಿಚಯಿಸಿದಾತ ಅಶೋಕ. ದೇಶದಲ್ಲೇ ಮೊದಲು ಕರ್ನಾಟಕದಲ್ಲಿ ಬ್ರಾಹ್ಮಿ ಲಿಪಿ ಮತ್ತು ಪ್ರಾಕೃತ ಭಾಷೆಯನ್ನು ಪರಿಚಯಿಸುವುದರ ಮೂಲಕ ಆತ ಕರ್ನಾಟಕದ ಪಕ್ಷಪಾತಿಯಾಗಿದ್ದ’ ಎಂದು ಶೆಟ್ಟರ್‌ ಮೆಚ್ಚುಗೆ ವ್ಯಕ್ತಪಡಿಸಿದರು.

‘ಪ್ರಾಕೃತ ಭಾಷೆ ಆಗ ಬುದ್ಧ ಧರ್ಮದ ಬಗ್ಗೆ ಮಾತನಾಡಲಿಲ್ಲ, ಬದಲಾಗಿ ಸಮಾಜದ ಬಗ್ಗೆ, ವ್ಯಕ್ತಿ ಮೌಲ್ಯಗಳ ಬಗ್ಗೆ ಮಾತನಾಡಿತು. ಪ್ರಾಕೃತ ಭಾಷೆ ಮತ್ತು ಬ್ರಾಹ್ಮಿ ಲಿಪಿಯ ಈ ಪಾರಮ್ಯ ಕ್ರಿಸ್ತಪೂರ್ವ 3ನೇ ಶತಮಾನದಿಂದ ಸುಮಾರು 600 ವರ್ಷಗಳ ಕಾಲ ಉಳಿದುಬಂತು. ಸಂಸ್ಕೃತ ಭಾಷೆ ಜಗತ್ತಿನ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾದರೂ ಈ 600 ವರ್ಷಗಳ ಕಾಲ ಸಂಪರ್ಕ ಭಾಷೆಯಾಗಿ ಇರಲಿಲ್ಲ. ಬುದ್ಧ ಕೂಡಾ ಪಂಡಿತರ ಭಾಷೆಯ ಬದಲಿಗೆ ಜನಭಾಷೆಯಾದ ಪ್ರಾಕೃತದಲ್ಲೇ ಸಂವಹನ ನಡೆಸಿದ. ಜೈನರೂ ಪ್ರಾಕೃತದಲ್ಲೇ ಧರ್ಮಪ್ರಚಾರ ನಡೆಸಿದರು’ ಎಂದು ಅವರು ಹೇಳಿದರು.

‘ವೇದಗಳ ಭಾಷೆ ಸಂಸ್ಕೃತವಾದರೂ ಸಂಸ್ಕೃತ ಪಂಡಿತರಿಗೆ ಬರವಣಿಗೆಯಲ್ಲಿ ಆಸಕ್ತಿ ಇರಲಿಲ್ಲ. ಸಂಸ್ಕೃತದಲ್ಲಿ ಜ್ಞಾನ ವಿಸ್ತರಣೆ ಮೌಖಿಕವಾಗಿ ಮಾತ್ರ ನಡೆಯಿತು. ಹಾಗಾಗಿ ಅದು ಆಯ್ದ ಕೆಲವೇ ಜನರಿಗೆ ಸೀಮಿತಗೊಂಡಿತ್ತು. ಬಳಿಕ ಸಂಸ್ಕೃತವು ನಿಧಾನಕ್ಕೆ ಲಿಖಿತ ರೂಪದ ವಿಸ್ತಾರ ಪಡೆಯಲೂ ವೈದಿಕರು ನೆರವಾದದ್ದಲ್ಲ; ಆಳುವವರು ನೆರವಾದದ್ದು. ಅದೂ ಭಾರತೀಯರಿಂದಲ್ಲ, ಆಕ್ರಮಣಕಾರರಾಗಿ ಬಂದ ಕುಶಾನರಿಂದ ಆಯಿತು. ಉತ್ತರ ಭಾರತವನ್ನು ಆಳುತ್ತಿದ್ದ ಕುಶಾನರು ಹಿಂದೂಗಳಾಗಿ ಮೊದಲ ಬಾರಿಗೆ ಸಂಸ್ಕೃತದಲ್ಲಿ ಬರವಣಿಗೆಯನ್ನು ಬಳಕೆಗೆ ತಂದು ಹಿಂದೂ ಧರ್ಮದ ಪ್ರಸಾರಕ್ಕೆ ನೆರವಾದರು’ ಎಂದು ಶೆಟ್ಟರ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT