ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಯೋತಿಷ ಶಾಸ್ತ್ರಕ್ಕೆ ವಿರೋಧ: ಐಐಎಸ್‌ಸಿ ಕಾರ್ಯಾಗಾರ ರದ್ದು

Last Updated 28 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಮುಂದಿನ ತಿಂಗಳು ನಡೆಸಲು ಉದ್ದೇಶಿಸಿದ್ದ ಎರಡು ದಿನಗಳ ಜ್ಯೋತಿಷ ಶಾಸ್ತ್ರ ಕಾರ್ಯಾಗಾರಕ್ಕೆ ತೀವ್ರ ವಿರೋಧ ವ್ಯಕ್ತವಾದ್ದರಿಂದ ರದ್ದು ಪಡಿಸಲಾಗಿದೆ.

‘ಉದ್ದೇಶಿತ ಕಾರ್ಯಾಗಾರ ವಿರೋಧಿಸಿ ಸಂಸ್ಥೆಯ ಸಿಬ್ಬಂದಿ, ಹಳೆಯ ವಿದ್ಯಾರ್ಥಿಗಳು ಹಾಗೂ ವಿಚಾರವಾದಿಗಳು ಐಐಎಸ್‌ಸಿ ನಿರ್ದೇಶಕ ಅನುರಾಗ ಕಶ್ಯಪ್ ಅವರಿಗೆ ಪತ್ರ ಬರೆದು, ಜ್ಯೋತಿಷ ಶಾಸ್ತ್ರ ಎಂಬುದು ಕೇವಲ ನಂಬಿಕೆ. ಅದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂದು ಟೀಕೆಗಳ ಸುರಿಮಳೆಯನ್ನೇ ಸುರಿಸಿದ್ದರು. ಕಾರ್ಯಕ್ರಮ ರದ್ದುಪಡಿಸಬೇಕು ಎಂದು ಕೋರಿದ್ದರು. ಹೀಗಾಗಿ ಇದನ್ನು ರದ್ದುಗೊಳಿಸಲಾಗಿದೆ’ ಎಂದು ಹಳೆಯ ವಿದ್ಯಾರ್ಥಿಗಳ ಸಂಘವು ಶನಿವಾರ ತಿಳಿಸಿದೆ.

‘ಇದನ್ನು ಹಳೆಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದೆ. ಅದೂ, ವಿಜ್ಞಾನಿಗಳಿಂದಲೇ ತುಂಬಿರುವ ಐಐಎಸ್‌ಸಿ ಆವರಣದಲ್ಲಿ ಇದು ನಡೆಯುತ್ತಿದೆ! ಇದು ತರವಲ್ಲ. ಈಗಾಗಲೇ ದೇಶದಲ್ಲಿ ವೈಜ್ಞಾನಿಕ ಆಲೋಚನೆ ಅಪಾಯದ ಸುಳಿಯಲ್ಲಿರುವಾಗ ಇಂತ ಪ್ರತಿಷ್ಠಿತ ಸಂಸ್ಥೆಯಲ್ಲಿ ಈ ಕಾರ್ಯಾಗಾರ ನಡೆಸುವುದರಿಂದ ಸಂಸ್ಥೆ ಗೌರವಕ್ಕೆ ಧಕ್ಕೆ ಉಂಟಾಗಲಿದೆ’ ಎಂದು ಹೇಳಿದ್ದರು.

ಹಳೆಯ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಓಂಪ್ರಕಾಶ್ ಸುಬ್ಬಾರಾವ್‌, ‘ಇಬ್ಬರು ಸದಸ್ಯರು ಇಂತಹ ಕಾರ್ಯಕ್ರಮಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಆದರೆ ಅದಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ. ಆದರೂ, ಸಂಘ ಇಂತ ಅಚಾತುರ್ಯಕ್ಕೆ ಮುಂದಾಗಿದ್ದು ಪ್ರಮಾದ’ ಎಂದು ಹೇಳಿದ್ದಾರೆ.

ಜಗದ್ವಿಖ್ಯಾತ ವಿಜ್ಞಾನಿಗಳಾದ ಸಿ.ವಿ.ರಾಮನ್‌, ಸಿ.ಎನ್‌.ಆರ್‌.ರಾವ್‌ ಹಾಗೂ ರೊದ್ದಂ ನರಸಿಂಹ ಅವರಂತಹ ಮಹನೀಯರು ಕಟ್ಟಿದ ಈ ಸಂಸ್ಥೆಯಲ್ಲಿ ಇಂತಹ ಕಾರ್ಯಾಗಾರ ಆಯೋಜಸಿರುವುದು ಹಾಸ್ಯಾಸ್ಪದ. ಇದೊಂದು ಅವಿವೇಕದ ನಿರ್ಧಾರ. ಇದೆಲ್ಲಾ ನಡೆಯಲು ನಾವು ಬಿಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯನಿರ್ವಾಹಕ ಮಂಡಳಿ ಈ ಕಾರ್ಯಾಗಾರ ಆಯೋಜಿಸಿದ್ದರು. ಆಸಕ್ತಿದಾಯಕ ಅಂಶವೆಂದರೆ ಇವರು, ಸ್ವತಃ ಜ್ಯೋತಿಷ ವಿಜ್ಞಾನಗಳ ಭಾರತೀಯ ಮಂಡಳಿಯ ಸದಸ್ಯರೂ ಹೌದು. ಸಾರ್ವಜನಿಕರು ಕಾರ್ಯಗಾರದಲ್ಲಿ ಪಾಲ್ಗೊಳ್ಳಲು ಅನುವಾಗುವಂತೆ ಕಿರುಹೊತ್ತಿಗೆಯನ್ನೂ ಅವರು ಬಿಡುಗಡೆ ಮಾಡಿದ್ದರು.

‘ಆಸ್ಟ್ರಾಲಜಿ ಆ್ಯಸ್‌ ಎ ಸೈಂಟಿಫಿಕ್‌ ಟೂಲ್‌ ಪಾರ್ ಇಂಡುವಿಷ್ಯುಯಲ್‌ ಪ್ರೊಗ್ರೆಸ್’ ಎಂಬ ಘೋಷ ವಾಕ್ಯದಡಿ ಐಐಎಸ್‌ಸಿಯ  ಚೋಕ್ಸಿ ಹಾಲ್‌ನಲ್ಲಿ ಎರಡು ದಿನ ಜ್ಯೋತಿಷ ಶಾಸ್ತ್ರ ಕಾರ್ಯಾಗಾರ ನಡೆಸಲು ಉದ್ದೇಶಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT