ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲಗೊಂಡಿದೆ ನೀರಿನ ಟ್ಯಾಂಕ್‌

Last Updated 28 ಅಕ್ಟೋಬರ್ 2017, 19:20 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಆರ್.ಪುರ ಹೃದಯ ಭಾಗದ ರೈಲ್ವೇ ನಿಲ್ದಾಣದ ಸಮೀಪ ಕುಡಿಯುವ ನೀರಿನ ಟ್ಯಾಂಕ್ ಶಿಥಿಲಾವಸ್ಥೆಯಲ್ಲಿದೆ.

ಎ. ಕೃಷ್ಣಪ್ಪನವರು ವರ್ತೂರು ವಿಧಾನಸಭಾ ಸದಸ್ಯರಾಗಿದ್ದಾಗ 1993 ರಲ್ಲಿ ವಿಜಿನಾಪುರ ರೈಲ್ವೆ ನಿಲ್ದಾಣದ ಹಿಂಭಾಗದಲ್ಲಿರುವ ಕುಡಿಯುವ ನೀರಿನ ಟ್ಯಾಂಕನ್ನು ಕಟ್ಟಿಸಿದ್ದರು. 50,000 ಲೀಟರ್ ನೀರು ಶೇಖರಣಾ ಸಾಮಾರ್ಥ್ಯ ಹೊಂದಿದೆ. ವಿಜಿನಾಪುರದ ಹಲವು ಬಡಾವಣೆಗಳಿಗೆ ಈ ಟ್ಯಾಂಕ್‌ ಮೂಲಕ ಕುಡಿಯುವ ನೀರು ಒದಗಿಸಲಾಗುತ್ತಿತ್ತು.

‘ಹಳೆಯದಾದ ಈ ನೀರಿನ ಟ್ಯಾಂಕ್‌ನ ಸಿಮೆಂಟ್‌ ಪದರ ಕಳಚಿ ಬೀಳುತ್ತಿದೆ. ಕಂಬಿಗಳು ತುಕ್ಕು ಹಿಡಿದಿದ್ದು, ಕಂಬಗಳು ಶಿಥಿಲಗೊಂಡಿವೆ. ಟ್ಯಾಂಕ್‌ ಕುಸಿಯುವ ಆತಂಕ ಕಾಡುತ್ತಿದೆ’ ಎಂದು ಗ್ರಾಮಸ್ಥರು ತಿಳಿಸಿದರು.

‘ಜಲಮಂಡಳಿ ಐದಾರು ವರ್ಷಗಳಿಂದ ಈ ಟ್ಯಾಂಕ್‌ಗೆ ನೀರು ಸರಬರಾಜನ್ನು ನಿಲ್ಲಿಸಿದೆ. ಹಿಂದೆ ನಗರ ಸಭಾ ವ್ಯಾಪ್ತಿಯಲ್ಲಿದ್ದ ಟ್ಯಾಂಕ್ ಈಗ ಬಿಬಿಎಂಪಿ ಆಡಳಿತ ವ್ಯಾಪ್ತಿಗೆ ಒಳಪಟ್ಟಿದೆ.’

‘ಟ್ಯಾಂಕನ ದುರಸ್ತಿಗಾಗಲಿ, ತೆರವು ಮಾಡುವ ಬಗ್ಗೆಯಾಗಲಿ ಬಿಬಿಎಂಪಿ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಟ್ಯಾಂಕ್ ತೆರವುಗೊಳಿಸುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ, ಕ್ರಮಕೈಗೊಂಡಿಲ್ಲ. ರಸ್ತೆ ಪಕ್ಕದಲ್ಲಿಯೇ ಟ್ಯಾಂಕ್ ಇರುವುದರಿಂದ ಬ್ಯಾನರ್ ಅಳವಡಿಸುವ ತಾಣವಾಗಿದೆ. ಅಲ್ಲದೆ, ಪಕ್ಕದಲ್ಲಿನ ಮಳಿಗೆಗಳ ಮಾಲೀಕರು ಸರಕುಗಳನ್ನು ಇಡಲು ಈ ಜಾಗ ಬಳಸುತ್ತಿದ್ದಾರೆ’ ಎಂದು ಸ್ಥಳೀಯ ನಿವಾಸಿ ಪವನ್ ಕುಮಾರ್ ತಿಳಿಸಿದರು.

‘ಪಾಲಿಕೆ ಸದಸ್ಯರಿಗೆ ಮೀಸಲಿರುವ ಅನುದಾನದಲ್ಲಿ ₹2 ಲಕ್ಷ ನೀಡಲು ಸಿದ್ಧನಿದ್ದೇನೆ. ಆದರೆ, ಎಂಜಿನಿಯರ್‌ಗಳು ದುರಸ್ತಿಗೆ ಆಸಕ್ತಿ ವಹಿಸುತ್ತಿಲ್ಲ’ ಎಂದು ವಿಜಿನಾಪುರ ವಾರ್ಡ್‌ನ ಪಾಲಿಕೆ ಸದಸ್ಯ ಬಂಡೆ ರಾಜಣ್ಣ ತಿಳಿಸಿದರು.

ಟ್ಯಾಂಕ್‌ನ ಶಿಥಿಲಾವಸ್ಥೆ ಕುರಿತು ಬಿಬಿಎಂಪಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ರಂಗನಾಥ್‌, ‘ಅದು ಬಿಬಿಎಂಪಿ ವ್ಯಾಪ್ತಿಗೆ ಸೇರುವುದಿಲ್ಲ. ಜಲಮಂಡಳಿ ಹೊಣೆ’ ಎಂದರು.

ಇನ್ನು ಜಲಮಂಡಳಿ ಪೂರ್ವ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಗೌಸ್‌ ಇನಾಂದಾರ್‌, ‘ನಮ್ಮದು ಕೇವಲ ಪೈಪ್‌ಲೈನ್‌ ಅಳವಡಿಸುವ ಕೆಲಸ. ನೀರಿನ ತೊಟ್ಟಿಗಳ ನಿರ್ವಹಣೆ ನಮ್ಮ ವ್ಯಾಪ್ತಿಗೆ ಸೇರುವುದಿಲ್ಲ’ ಎಂದು ಅವರುಉತ್ತರಿಸಿದರು.

–ಶಿವರಾಜ್ ಮೌರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT