ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 75 ಲಕ್ಷಕ್ಕೆ ಮೈತ್ರಿ ಡೀಲ್‌ ಕುದುರಲಿಲ್ಲ...

Last Updated 28 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘₹ 75 ಲಕ್ಷಕ್ಕೆ ಡೀಲ್‌ ಕುದುರಲಿಲ್ಲ ಎಂಬ ಕಾರಣಕ್ಕೆ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಸದಸ್ಯೆ ಮಂಗಳಾ ಶ್ರೀಧರ್ ವಿರುದ್ಧ ಅಡ್ವೊಕೇಟ್‌ ಜನರಲ್‌ಗೆ ಮೈತ್ರಿ ದೂರು ಸಲ್ಲಿಸಿದ್ದರೇ ಹೊರತು ಬೇರಾವುದೇ ಸದುದ್ದೇಶದಿಂದ ಅಲ್ಲ’ ಎಂದು 2011ರ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಯಡಿ ಅಸಿಸ್ಟೆಂಟ್‌ ಕಮಿಷನರ್ ಹುದ್ದೆಗೆ ಆಯ್ಕೆಯಾದ ಸುಪ್ರಿಯಾ ಬಣಗಾರ ಅವರ ವಕೀಲ ಬಿ.ಎಂ.ಅರುಣ್‌ ಕುಮಾರ್‌ ಪ್ರತಿಪಾದಿಸಿದರು.

‘2011ರ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗೆ ಕೆಪಿಎಸ್‌ಸಿ ಮೂಲಕ  ಆಯ್ಕೆಯಾದ ಎಲ್ಲ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕು’ ಎಂಬ ಕರ್ನಾಟಕ ಆಡಳಿತ ನ್ಯಾಯಮಂಡಳಿ ಆದೇಶ ಪ್ರಶ್ನಿಸಿ ಅನುತ್ತೀರ್ಣ ಅಭ್ಯರ್ಥಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

‘ಸುಪ್ರಿಯಾಗೆ ಹೆಚ್ಚಿನ ಅಂಕ ನೀಡಿ ಅಸಿಸ್ಟೆಂಟ್‌ ಕಮಿಷನರ್‌ ಹುದ್ದೆ ನೀಡಲಾಗಿದೆ. ವಾಸ್ತವವಾಗಿ ಈ ಹುದ್ದೆ ನನಗೆ ಸಿಗಬೇಕಿತ್ತು. ಪರಿಶಿಷ್ಟ ವರ್ಗಕ್ಕೆ ಸೇರಿದ ಪ್ರತಿಭಾವಂತೆಯಾದ ನನ್ನನ್ನು ಆದ್ಯತೆಯಲ್ಲಿ ಕಡೆಗಣಿಸಿ ಅನ್ಯಾಯ ಮಾಡಲಾಗಿದೆ’ ಎಂದು ಆರೋಪಿಸಿ ಮೈತ್ರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಹಿರಿಯ ವಕೀಲ ಉದಯ ಹೊಳ್ಳ ವಾದ ಮಂಡಿಸಿದರು.

‘2011ರ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ, ಅನ್ಯಾಯ, ಅಕ್ರಮ ನಡೆದಿದೆ. ಇದನ್ನೆಲ್ಲಾ ಸಿಐಡಿ ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದೂ ಹೊಳ್ಳ ನ್ಯಾಯಪೀಠಕ್ಕೆ ವಿವರಿಸಿದರು.

ಈ ಹಂತದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅರುಣ್, ‘ಮಂಗಳಾ ಅವರ ಛೇಂಬರ್‌ಗೆ ಮೈತ್ರಿ ಹೋಗಿದ್ದರು ಮತ್ತು ಅವರ ಜೊತೆ ಫೋನಿನಲ್ಲಿ 20ಕ್ಕೂ ಹೆಚ್ಚು ಬಾರಿ ಮಾತನಾಡಿದ್ದರು. ಇದನ್ನು ಮೈತ್ರಿ ಅವರೇ ಒಪ್ಪಿಕೊಂಡಿದ್ದಾರೆ. ಈ ಅಂಶವನ್ನು ಸಿಐಡಿ ವರದಿಯಲ್ಲಿ ನಮೂದಿಸಲಾಗಿದೆ.  ವ್ಯವಹಾರ ಕುದುರಿಸಲು ಮೈತ್ರಿ ಹೋಗಿದ್ದರು. ಆದರೆ, ಅದು ಸಫಲವಾಗಲಿಲ್ಲ ಎಂದು ಅಡ್ವೊಕೇಟ್ ಜನರಲ್‌ ಅವರಿಗೆ ಮನವಿ ನೀಡಿದರು’ ಎಂದರು.

‘ಮಂಗಳಾ ನನ್ನ ಆಯ್ಕೆಗೆ ಲಂಚ ಕೇಳಿದ್ದಾರೆ’ ಎಂದು ಆರೋಪಿಸಿ 2011ರ ಸಾಲಿನ ಅಭ್ಯರ್ಥಿಯಾಗಿದ್ದ ಮೈತ್ರಿ ಅವರು ಮುಖ್ಯಮಂತ್ರಿ, ಕಾನೂನು ಸಚಿವ ಹಾಗೂ ಅಡ್ವೊಕೇಟ್‌ ಜನರಲ್‌ಗೆ (ಎ.ಜಿ) 2013ರ ಮೇ 28ರಂದು ಮನವಿ ಸಲ್ಲಿಸಿದ್ದರು.

ಇದೇ 30ಕ್ಕೆ ವಿಚಾರಣೆ ಮುಂದೂಡಲಾಗಿದೆ.

**

ಯುಪಿಎಸ್‌ಸಿಯಲ್ಲಿ ನಡೆಯದ್ದು ಇಲ್ಲೇಕೆ ನಡೆಯುತ್ತೆ ?

‘ಆಯ್ಕೆಯಾಗಿರುವ ಎಲ್ಲ 362 ಅಭ್ಯರ್ಥಿಗಳೂ ಅನ್ಯಾಯ ಅಕ್ರಮದ ಭಾಗೀದಾರರು ಎಂದು ಹೇಗೆ ಹೇಳುತ್ತೀರಿ‘ ಎಂದು ನ್ಯಾಯಮೂರ್ತಿ ಎಚ್.ಜಿ.ರಮೇಶ್‌ ಅವರು ಉದಯ್ ಹೊಳ್ಳ ಅವರನ್ನು ಪ್ರಶ್ನಿಸಿದರು.

‘ನೀವು ಹೇಳುವುದನ್ನು ನೋಡಿದರೆ ಆಯ್ಕೆಯಾದವರಲ್ಲಿ ಯಾರೂ ಮುಗ್ಧರಿರಲೇ ಇಲ್ಲ ಎಂದು ಭಾವಿಸಬೇಕಾಗುತ್ತದೆ. ಯುಪಿಎಸ್‌ಸಿಯಲ್ಲಿ (ಕೇಂದ್ರ ಲೋಕಸೇವಾ ಆಯೋಗ) ನಡೆಯದ ಭ್ರಷ್ಟಾಚಾರ ಇಲ್ಲೇಕೆ ನಡೆಯುತ್ತದೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT