ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಟ್ರಿಕ್ ಪ್ರಶಸ್ತಿ ಗೆದ್ದ ಪೈರೇಟ್ಸ್‌

ಅಂತಿಮ ಪಂದ್ಯದಲ್ಲೂ ಮೋಡಿ ಮಾಡಿದ ಪ್ರದೀಪ್‌ ನರ್ವಾಲ್
Last Updated 28 ಅಕ್ಟೋಬರ್ 2017, 19:35 IST
ಅಕ್ಷರ ಗಾತ್ರ

ಚೆನ್ನೈ: ಉಭಯ ತಂಡಗಳು ಪಟ್ಟು ಬಿಡದೆ ಕಾದಾಡಿದವು. ಆದರೆ ಜಯ ಒಲಿದದ್ದು ಪಟ್ನಾ ಪೈರೇಟ್ಸ್‌ಗೆ. ಪ್ರೊ ಕಬಡ್ಡಿ ಲೀಗ್‌ ಐದನೇ ಆವೃತ್ತಿಯ ಫೈನಲ್‌ನಲ್ಲಿ ಗುಜರಾತ್ ಫಾರ್ಚೂನ್‌ ಜೈಂಟ್ಸ್ ತಂಡವನ್ನು 55–38ರಿಂದ ಮಣಿಸಿದ ಪಟ್ನಾ ಪೈರೇಟ್ಸ್‌ ಹ್ಯಾಟ್ರಿಕ್ ಸಾಧನೆ ಮಾಡಿತು.

ಇಲ್ಲಿನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಪೈರೇಟ್ಸ್ ನಾಯಕ ಪ್ರದೀಪ್ ನರ್ವಾಲ್‌ ಮಿಂಚು ಹರಿಸಿದರು. ಲೀಗ್‌ನಲ್ಲಿ ಅಪೂರ್ವ ರೈಡಿಂಗ್ ಮೂಲಕ ದಾಖಲೆಗಳನ್ನು ಬರೆದ ಅವರು ಫೈನಲ್‌ ಪಂದ್ಯದಲ್ಲೂ ಮೋಡಿ ಮಾಡಿದರು. ಒಟ್ಟು 19 ಪಾಯಿಂಟ್ ಕಲೆ ಹಾಕಿ ಕೇಕೆ ತಂಡಕ್ಕೆ ಜಯದ ಕಾಣಿಕೆ ನೀಡಿದರು.

ಫಜಲ್ ಅತ್ರಾಚಲಿ ನಾಯಕತ್ವದ ಗುಜರಾತ್‌ ಫಾರ್ಚೂನ್‌ಜೈಂಟ್ಸ್ ತಂಡ ಆರಂಭದಿಂದಲೇ ಉತ್ತಮ ಪೈಪೋಟಿ ನೀಡಿತು. ಒಂದು ಹಂತದಲ್ಲಿ ಪೈರೇಟ್ಸ್‌ ತಂಡವನ್ನು ಭಾರಿ ಅಂತರದಲ್ಲಿ ಹಿಂದಿಕ್ಕುವಲ್ಲಿಯೂ ಯಶಸ್ವಿಯಾಗಿತ್ತು. ಆದರೆ ಪಟ್ಟು ಬಿಡದ ಪೈರೇಟ್ಸ್‌ ಪ್ರಬಲ ಪ್ರತ್ಯುತ್ತರ ನೀಡಿತು. ಪ್ರದೀಪ್ ನರ್ವಾಲ್‌ ಅಮೋಘ ರೈಡಿಂಗ್ ಮೂಲಕ ಪಾಯಿಂಟ್‌ಗಳನ್ನು ಹೆಕ್ಕಿ ತಂದರು. ಹೀಗಾಗಿ ಮಧ್ಯಂತರ ಅವಧಿಯಲ್ಲಿ 21–18ರ ಮುನ್ನಡೆ ಸಾಧಿಸಲು ಸಾಧ್ಯವಾಯಿತು.

ಪರಿಣಾಮಕಾರಿ ರೈಡಿಂಗ್

ದ್ವಿತೀಯಾರ್ಧದಲ್ಲಿ ಪೈರೇಟ್ಸ್‌ ಉತ್ತಮ ಆಟವಾಡಿತು. ಪ್ರದೀಪ್ ನರ್ವಾಲ್‌ ಪರಿಣಾಮಕಾರಿ ರೈಡಿಂಗ್ ಮೂಲಕ ಮಿಂಚು ಹರಿಸಿದರು. ಇದು ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿತು. ಪಂದ್ಯದಲ್ಲಿ ಒಟ್ಟು 24 ರೈಡ್ ಮಾಡಿದ ಅವರು 19 ಪಾಯಿಂಟ್ ಕಲೆ ಹಾಕಿದರು. ಜೈದೀಪ್‌ ಐದು ಟ್ಯಾಕ್ಲಿಂಗ್ ಪಾಯಿಂಟ್ ಕಲೆ ಹಾಕಿದರು.

15 ರೈಡ್‌ಗಳಿಂದ 11 ಪಾಯಿಂಟ್‌ ಹೆಕ್ಕಿ ತಂದ ಸಚಿನ್‌ ಗುಜರಾತ್ ಪರ ಗಮನ ಸೆಳೆದರು.

ನಾಯಕ ಫಜಲ್‌ ವೈಫಲ್ಯ ಕಂಡರೆ ಕನ್ನಡಿಗ ಸುಖೇಶ್‌ ಹೆಗಡೆ ಕೇವಲ ಎರಡು ಪಾಯಿಂಟ್ ಗಳಿಸಿ ನಿರಾಸೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT