ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಗಳ್ಳನಾದ ಕಿರುಚಿತ್ರ ನಿರ್ಮಾಪಕ!

ಎಂಟು ಕಡೆ ಸರ ದೋಚಿದ್ದ ಆರೋಪಿ ಪ್ರತಾಪ್‌ ರಂಗು ಸೆರೆ
Last Updated 28 ಅಕ್ಟೋಬರ್ 2017, 19:36 IST
ಅಕ್ಷರ ಗಾತ್ರ

ಬೆಂಗಳೂರು: ಸರಗಳ್ಳತನ ಮಾಡಿ ಅದರಿಂದ ಬಂದ ಹಣದಲ್ಲಿ ಕಿರುಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದ ಪ್ರತಾಪ್ ರಂಗು ಅಲಿಯಾಸ್ ರಂಗ (33) ಎಂಬಾತನನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.

ಮಧುಗಿರಿಯ ಪ್ರತಾಪ್, 4 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಮಹಾಲಕ್ಷ್ಮಿ ಲೇಔಟ್‌ನ ಗೆಳೆಯರ ಬಳಗ ಕಾಲೊನಿಯಲ್ಲಿ ನೆಲೆಸಿದ್ದ. ಈತ, ಮೊದಲು ಬಿಬಿಎಂಪಿಯಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಸಿನಿಮಾ ವ್ಯಾಮೋಹ ಬೆಳೆಸಿಕೊಂಡಿದ್ದ ಪ್ರತಾಪ್, ಸ್ವತಃ ಸಿನಿಮಾ ನಿರ್ದೇಶನ ಮಾಡುವ ಸಲುವಾಗಿ ಹಲವು ನಿರ್ಮಾಪಕರನ್ನು ಭೇಟಿಯಾಗಿದ್ದ. ಆದರೆ, ಹಣ ಹೂಡಲು ಅವರ‍್ಯಾರೂ ಒಪ್ಪಿರಲಿಲ್ಲ.

‘ಡಬ್ಬಲ್ ಮೀನಿಂಗ್ ಎಂಬ ಕಿರುಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ಈಗಾಗಲೇ ಶೇ 40ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ’ ಎಂದು ಹೇಳಿಕೊಂಡಿರುವ ಆರೋಪಿ, ಅದರ ಪ್ರೋಮೊವನ್ನೂ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದ. ಹೇಗಾದರೂ ಮಾಡಿ ಚಿತ್ರೀಕರಣ ಮುಗಿಸಲು ನಿರ್ಧರಿಸಿದ ಆತನಿಗೆ ಹೊಳೆದಿದ್ದೇ ಸರಗಳ್ಳತನದ ಉಪಾಯ.

ಬೆಳಗಿನ ಜಾವ ಬೈಕ್‌ನಲ್ಲಿ ಸುತ್ತುತ್ತಿದ್ದ ಆತ, ವಾಯುವಿಹಾರ ಮಾಡುತ್ತಿರುವ ಒಂಟಿ ಮಹಿಳೆಯನ್ನು ಗುರುತಿಸಿ ಚಿನ್ನದ ಸರ ದೋಚುತ್ತಿದ್ದ. ಮಹಾಲಕ್ಷ್ಮಿಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಹಾಗೂ ಬಸವೇಶ್ವರನಗರ ಠಾಣೆ ವ್ಯಾಪ್ತಿಯಲ್ಲಿ ಆರು ಮಹಿಳೆಯರ ಸರಗಳನ್ನು ಕಿತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

**

ಸಿ.ಸಿ ಟಿ.ವಿ ಕ್ಯಾಮೆರಾ ಸುಳಿವು

‘ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಆರೋಪಿಯ ಚಹರೆ ಸೆರೆಯಾಗಿತ್ತು. ಅದನ್ನು ಸ್ಥಳೀಯರಿಗೆ ತೋರಿಸಿದಾಗ ಕೆಲವರು ಪ್ರತಾಪ್‌ನನ್ನು ಗುರುತಿಸಿದರು. ಅನುಮಾನದ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡ. ಆತನಿಂದ 20 ಗ್ರಾಂನ ಚಿನ್ನದ ಸರ ಜಪ್ತಿ ಮಾಡಲಾಗಿದೆ. ಉಳಿದ ಆಭರಣಗಳನ್ನು ಪರಿಚಿತ ಚಿನ್ನದ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿರುವುದಾಗಿ ಹೇಳಿದ್ದಾನೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT