ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಯರ್‌ ಸೇರಿ ಮೂವರಿಗೆ ಜಾಮೀನು ರಹಿತ ವಾರಂಟ್‌

Last Updated 28 ಅಕ್ಟೋಬರ್ 2017, 19:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮನೆಯಲ್ಲಿ ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟಿದ್ದ ಮಹಿಳೆಯೊಬ್ಬರನ್ನು ಬಂಧಿಸಿದ್ದನ್ನು ಖಂಡಿಸಿ ಠಾಣೆಗೆ ಮುತ್ತಿಗೆ ಹಾಕಿದ್ದಲ್ಲದೇ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಹಾಜರಾಗದ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಮೇಯರ್‌ ಡಿ.ಕೆ. ಚವ್ಹಾಣ ಸೇರಿದಂತೆ ಮೂವರಿಗೆ ನಗರದ ಎರಡನೇ ಜೆಎಂಎಫ್‌ಸಿ ನ್ಯಾಯಾಲಯವು ಶನಿವಾರ ಜಾಮೀನು ರಹಿತ ವಾರಂಟ್‌ ಹೊರಡಿಸಿದೆ.

ಪ್ರಕರಣದ ಹಿನ್ನೆಲೆ: ಕಮರಿಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಅಂಬಾಬಾಯಿ ಎಸ್‌. ಅಥಣಿ ಎಂಬುವವರು ಗಾಂಜಾವನ್ನು ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪದ ಮೇರೆಗೆ 2007 ಜುಲೈ 6 ರಂದು ಕಮರಿಪೇಟೆ ಪೊಲೀಸರು ಅವರನ್ನು ಬಂಧಿಸಿ, ಕರೆದೊಯ್ದರು. ಆ ವೇಳೆ ಡಿ.ಕೆ. ಚವ್ಹಾಣ, ರಂಗಾ ಬದ್ದಿ, ರಾಮು ಬಸವಾ, ಶೋಭಾ ನಾಕೋಡ ಸೇರಿದಂತೆ 19 ಮಂದಿ ಮಹಿಳೆಯನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ, ಪೊಲೀಸ್ ವಾಹನ ಅಡ್ಡಗಟ್ಟಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು.

ಎಲ್ಲರ ವಿರುದ್ಧ ಪ್ರಕರಣ ದಾಖಲಿಸಿ, ಜೆಎಂಎಫ್‌ಸಿ ಎರಡನೇ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಆರೋಪಿಗಳ ಪೈಕಿ ಸದಾನಂದ ಚವ್ಹಾಣ ಎಂಬುವವರು ಮೃತಪಟ್ಟಿದ್ದಾರೆ.

ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ವಿಶ್ವನಾಥ ಮುಗತಿ ಅವರು, ಆರೋಪಿಗಳು ಮುಂದಿನ ಒಂದು ವರ್ಷದ ಅವಧಿಯಲ್ಲಿ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದೇ ಒಳ್ಳೆಯ ನಡತೆಯಿಂದ ಇದ್ದು, ತಲಾ ₹ 25 ಸಾವಿರ ವೈಯಕ್ತಿಕ ಬಾಂಡ್‌ ನೀಡುವಂತೆ ಶುಕ್ರವಾರ ಆದೇಶ ನೀಡಿದ್ದಾರೆ.

ಆದರೆ, ಮೇಯರ್ ಚವ್ಹಾಣ, ರಾಮು ಬಸವಾ, ಶೋಭಾ ನಾಕೋಡ ಮೂವರು ಶುಕ್ರವಾರ ಮತ್ತು ಶನಿವಾರ ಎರಡೂ ದಿನ ಕೋರ್ಟ್‌ಗೆ ಹಾಜರಾಗದ ಕಾರಣ ಅವರಿಗೆ ಜಾಮೀನು ರಹಿತ ವಾರೆಂಟ್‌ ಜಾರಿಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT