ಪುಟ್ಟ ಕಂಠಗಳಿಂದ ಮೊಳಗಿತು ‘ಶಿವಃ ಶಕ್ತ್ಯಾ ಯುಕ್ತೋ...’

ಮಂಗಳವಾರ, ಜೂನ್ 25, 2019
28 °C

ಪುಟ್ಟ ಕಂಠಗಳಿಂದ ಮೊಳಗಿತು ‘ಶಿವಃ ಶಕ್ತ್ಯಾ ಯುಕ್ತೋ...’

Published:
Updated:
ಪುಟ್ಟ ಕಂಠಗಳಿಂದ ಮೊಳಗಿತು ‘ಶಿವಃ ಶಕ್ತ್ಯಾ ಯುಕ್ತೋ...’

ಬೆಂಗಳೂರು: ‘ಶಿವಃ ಶಕ್ತ್ಯಾ ಯುಕ್ತೋ...’

ಸಾವಿರ, ಸಾವಿರ ಪುಟ್ಟ ಕಂಠಗಳು ದೊಡ್ಡ ಸ್ವರದಲ್ಲಿ ಈ ಸ್ತೋತ್ರ ಪಠಿಸುವಾಗ ವೇದಿಕೆ ಮೇಲೆ ಕುಳಿತಿದ್ದ ಗಣ್ಯರೆಲ್ಲ ತದೇಕಚಿತ್ತದಿಂದ ಕೇಳುತ್ತಿದ್ದರು. ಬೃಹತ್‌ ಪೆಂಡಾಲ್‌ನ ತುಂಬಾ ತುಂಬಿಹೋಗಿದ್ದ ವಿದ್ಯಾರ್ಥಿ–ವಿದ್ಯಾರ್ಥಿನಿಯರು ಏಕಸ್ವರ, ಏಕಪ್ರಾಸದಲ್ಲಿ ಸೌಂದರ್ಯಲಹರಿಯ ಹೊನಲನ್ನೇ ಹರಿಸುತ್ತಿದ್ದರು.

ವೇದಾಂತ ಭಾರತೀ ಸಂಸ್ಥೆಯಿಂದ ನಗರದ ಅರಮನೆ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ‘ಸೌಂದರ್ಯಲಹರಿ ಪಾರಾಯಣೋತ್ಸವ ಮಹಾಸಮರ್ಪಣೆ’ ಸಮಾರಂಭದ ಸಂದರ್ಭ ಅದು. ರಾಜಧಾನಿ ಮಾತ್ರವಲ್ಲದೆ ಬೇರೆ ಜಿಲ್ಲೆಗಳ ಸಾವಿರಾರು ಶಾಲೆಗಳಿಂದ ಭಾರಿ ಸಂಖ್ಯೆಯಲ್ಲಿ ಮಕ್ಕಳು ಬಂದಿದ್ದರು. ಬಸ್‌ಗಳಲ್ಲೇ ಶೂಗಳನ್ನು ಬಿಟ್ಟುಬಂದಿದ್ದ ಅವರು ಪೆಂಡಾಲ್‌ನಲ್ಲಿ ಹಾಸಲಾಗಿದ್ದ ಕಾರ್ಪೆಟ್‌ ಮೇಲೆ ಶಿಸ್ತುಬದ್ಧವಾಗಿ ಸುಖಾಸನ ಹಾಕಿ ಕುಳಿತಿದ್ದರು.

ಶ್ಲೋಕಗಳ ಮುದ್ರಿತ ಪ್ರತಿಯನ್ನು ಕೈಯಲ್ಲಿ ಹಿಡಿದಿದ್ದ ಅವರು ಸಂಚಾಲಕರಿಂದ ಸೂಚನೆ ಸಿಗುತ್ತಿದ್ದಂತೆ ಸ್ತೋತ್ರ ಪಠಣವನ್ನು ಆರಂಭಿಸಿದರು. ಶಂಕರವಿರಚಿತ ಸೌಂದರ್ಯಲಹರಿಯ 15 ಹಾಗೂ ದಕ್ಷಿಣಾಮೂರ್ತಿ ಅಷ್ಟಕದ ಹತ್ತು ಶ್ಲೋಕಗಳನ್ನು ಅವರು ಸುಶ್ರಾವ್ಯವಾಗಿ ಪಠಿಸಿದರು. ಅಲ್ಲದೆ, ಸಂಸ್ಕೃತದ ಕ್ಲಿಷ್ಟ ಸಾಲುಗಳನ್ನು ಒಂದಿನಿತೂ ತಡವರಿಸದೆ ಅಸ್ಖಲಿತವಾಗಿ ವಾಚಿಸಿದರು.

ಸ್ತೋತ್ರ ಪಠಣಕ್ಕಿಂತ ಮುಂಚೆ ವಿದ್ಯಾರ್ಥಿಗಳು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಎ.ಎಸ್‌. ಕಿರಣಕುಮಾರ್‌ ಅವರ ಮಾತುಗಳನ್ನು ಬಲು ಆಸಕ್ತಿಯಿಂದ ಕೇಳಿದರು. ಅವರ ಭಾಷಣದಲ್ಲಿ ಚಂದ್ರಯಾನ, ಮಂಗಳಯಾನದ ಪ್ರಸ್ತಾಪ ಬಂದಾಗ, ಕಿರಣಕುಮಾರ್‌ ಅವರಿಗೆ ಸನ್ಮಾನ ಮಾಡಿದಾಗ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಕಾರ್ಯಕ್ರಮ ನಿಗದಿಯಂತೆ ಮಧ್ಯಾಹ್ನ 1 ಗಂಟೆಗೆ ಸರಿಯಾಗಿ ಶುರುವಾಯಿತು. ನಿಗದಿಗಿಂತ ಹತ್ತು ನಿಮಿಷ ಮೊದಲೇ ಮುಗಿಯಿತು. ಸಂಘಟಕರು ಸಮಯ ನಿರ್ವಹಣೆಗೆ ತೋರಿದ ಕಾಳಜಿ ಮೆಚ್ಚುಗೆ ಗಳಿಸಿತು. ಮಕ್ಕಳ ಜತೆಗೆ ದೊಡ್ಡ ಸಂಖ್ಯೆಯಲ್ಲಿ ಪಾಲಕರು ಹಾಗೂ ಶಿಕ್ಷಕರು ಬಂದಿದ್ದರು.

ಸಭಾಂಗಣದ ಪಕ್ಕದಲ್ಲೇ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಿಹಿ–ಖಾರಾ ಪೊಂಗಲ್‌ ಮತ್ತು ಮೊಸರನ್ನವಿದ್ದ ಊಟ ಅವರಿಗಾಗಿ ಕಾದಿತ್ತು. ಆದರೆ, ಒಂದಿನಿತೂ ಆತುರ ತೋರದೆ ಸರದಿ ಸಾಲಿನಲ್ಲಿ ನಿಂತು ಸಾವಧಾನವಾಗಿ ಊಟ ಪಡೆಯುತ್ತಿದ್ದ ಅವರ ಶಿಸ್ತು ನೆರೆದವರಲ್ಲಿ ಖುಷಿ ಕೊಟ್ಟಿತು.

ಎರಡು ವರ್ಷದ ಶ್ರಮ: ತುಸು ಕ್ಲಿಷ್ಟ ಎನಿಸಿದ ಶ್ಲೋಕಗಳನ್ನು ಶಾಲಾ ಮಕ್ಕಳಿಗೆ ಕಂಠಪಾಠ ಮಾಡಿಸಲು ವೇದಾಂತ ಭಾರತೀ ಸಂಸ್ಥೆಯ ಕಾರ್ಯಕರ್ತರು ಎರಡು ವರ್ಷಗಳ ಶ್ರಮ ಹಾಕಿದ್ದಾರೆ. ಪ್ರತಿದಿನ ಶಾಲಾ ಅವಧಿ ಮುಗಿದ ಮೇಲೆ 15 ನಿಮಿಷಗಳವರೆಗೆ ಶ್ಲೋಕಗಳನ್ನು ಕಂಠಪಾಠ ಮಾಡಿಸಲಾಗುತ್ತಿತ್ತು ಎಂದು ಸಂಸ್ಥೆಯ ಅಧ್ಯಕ್ಷ ಎಸ್‌.ಎಸ್‌. ನಾಗಾನಂದ ಹೇಳಿದರು.

ಯಡೆತೊರೆ ಮಠದ ಶಂಕರಭಾರತೀ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಂಸ್ಥೆಯ ಗೌರವಾಧ್ಯಕ್ಷ ನ್ಯಾಯಮೂರ್ತಿ ಶಿವರಾಜ ಪಾಟೀಲ ಹಾಗೂ ಹಿರಿಯ ವಕೀಲ ಅಶೋಕ ಹಾರನಹಳ್ಳಿ ವೇದಿಕೆ ಮೇಲಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry