ಲಿಂಗಾಯತ ಎಲ್ಲ ಒಳಪಂಗಡ 2ಎಗೆ

ಭಾನುವಾರ, ಮೇ 26, 2019
32 °C

ಲಿಂಗಾಯತ ಎಲ್ಲ ಒಳಪಂಗಡ 2ಎಗೆ

Published:
Updated:

ಶಿರೂರ(ಗುಳೇದಗುಡ್ಡ): ‘ಲಿಂಗಾಯತ ಎಲ್ಲ ಒಳಪಂಗಡಗಳಿಗೆ ಪ್ರತ್ಯೇಕ ಧರ್ಮ ಕೊಡುವ ಮೂಲಕ 2ಎಗೆ ಸೇರ್ಪಡೆ ಮಾಡಬೇಕೆಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗಿದೆ. ಅವರು ಭರವಸೆ ಕೊಟ್ಟಿದ್ದಾರೆ’ ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಶಿರೂರ ಗ್ರಾಮದ ವೀರಶೈವ ಲಿಂಗಾಯತ ಪಂಚಮಸಾಲಿ, ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ವೀರರಾಣಿ ಕಿತ್ತೂರು ಚನ್ನಮ್ಮ ಜಯಂತಿ ಉತ್ಸವದಲ್ಲಿ ಶಿಕ್ಷಕ ಆರ್.ಸಿ. ಚಿತ್ತವಾಡಗಿ ಅವರ ಕಥಾ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ವೀರಶೈವ–ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ದ್ವಂದ್ವ ನಿಲುವಿರುವ ಈ ಸಂದರ್ಭದಲ್ಲಿ ಶಿರೂರಲ್ಲಿ ಸಂಘಟಿಸಿರುವ ಎಲ್ಲ ಒಳಪಂಗಡಗಳ ಸಂಘಟನೆ ರಾಜ್ಯಕ್ಕೇ ಮಾದರಿಯಾಗಿದೆ. ಶಿರೂರಲ್ಲಿ ವೀರಶೈವ ಲಿಂಗಾಯತ ಎಲ್ಲ ಒಳಪಂಗಡಗಳು ಒಂದಾದಂತೆ ತಾಲ್ಲೂಕು, ಜಿಲ್ಲೆ, ರಾಜ್ಯಮಟ್ಟದಲ್ಲಿ ನಾವೆಲ್ಲರೂ ಒಂದಾಗಿ ತಾಯಿ ಚನ್ನಮ್ಮಳಂತೆ ದಿಟ್ಟತನದಿಂದ ಹೋರಾಟ ಮಾಡಿದರೆ ಮಾತ್ರ ಸಮಾಜ ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಬೆಳೆಯಲು ಸಾಧ್ಯವಾಗಲಿದೆ’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಚ್.ಆರ್. ನಿರಾಣಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ‘ಕನ್ನಡ ನಾಡಿನ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ವೀರರಾಣಿ ಕಿತ್ತೂರು ಚನ್ನಮ್ಮ. ಆಕೆಯ ಜಯಂತಿ ಉತ್ಸವನ್ನು ಸರ್ಕಾರ ಪ್ರತಿವರ್ಷ ಅ.23ರಂದು ರಾಜ್ಯಾದ್ಯಂತ ಆಚರಿಸಲು ಆದೇಶ ಮಾಡಿದಕ್ಕಾಗಿ ಎಲ್ಲರಿಗೂ ಸಂತಸ ತಂದಿದೆ’ ಎಂದು ಅವರು ಹೇಳಿದರು.

ಹುನಗುಂದ ಕಾಲೇಜಿನ ಪ್ರಾಧ್ಯಾಪಕಿ ಡಾ. ನಾಗರತ್ನಾ ಭಾವಿಕಟ್ಟಿ ಅವರು ಕಿತ್ತೂರು ಚನ್ನಮ್ಮಳ ಸಾಧನೆ–ಕೊಡುಗೆ ಕುರಿತು ಉಪನ್ಯಾಸ ಮಾಡಿದರು. ಬೀಳಗಿಯ ಡಾ. ಎಸ್.ಕೆ. ಬಂಗಾರಿ ಅವರು ಶಿಕ್ಷಕ ಆರ್.ಸಿ. ಚಿತ್ತವಾಡಗಿ ರಚಿಸಿದ ಕಥಾ ಪುಸ್ತಕ ಕುರಿತು ಮಾತನಾಡಿದರು.

ಗುಳೇದಗುಡ್ಡದ ಮರಡಿಮಠದ ಕಾಡಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ. ಪ್ರೇಮಾ ಬದಾಮಿ, ಡಾ. ಬಸವರಾಜ ಕಟಗೇರಿ, ಬಿ.ಎ. ಮೇಳಿ, ಸಿದ್ದಲಿಂಗಪ್ಪ ಭಗವತಿ, ಡಾ. ಪಿ.ಎಸ್. ಆಲೂರ, ಡಾ. ಆರ್.ಜಿ. ಕಲಶೆಟ್ಟಿ, ಈಶಪ್ಪ ಎಂ. ಕೋಟಿ, ಶ್ರೀಶೈಲಪ್ಪ ಪಲ್ಲೇದ, ಲೋಹಿತ ಮೆಣಸಗಿ, ಶಿಕ್ಷಕ ಆರ್.ಸಿ. ಚಿತ್ತವಾಡಗಿ ಹಾಗೂ 10–12ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಎಲ್. ಮೆಣಸಗಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಆರ್.ಎಸ್. ಪಾಟೀಲ, ಕಸಾಪ ಜಿಲ್ಲಾಧ್ಯಕ್ಷ ಶ್ರೀಶೈಲ ಕರಿಶಂಕರಿ, ಉಪಾಧ್ಯಕ್ಷ ಎಸ್.ಎಸ್. ಕಲಗುಡಿ, ಸಿ.ಎಂ. ಪ್ಯಾಟಿಶೆಟ್ಟರ, ರಾಜು ಚಿತ್ತವಾಡಗಿ, ಸಿ.ಎಸ್. ಕಟಗಿ ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಎಸ್.ಬಿ. ಕಟಗಿ ಸ್ವಾಗತಿಸಿದರು. ಎಂ.ಎಸ್. ಕಲಗುಡಿ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry