ಸೋಮವಾರ, ಸೆಪ್ಟೆಂಬರ್ 16, 2019
22 °C

ಹೆಬ್ಬೇವನ್ನೇ ‘ಬೆಲ್ಲ’ವಾಗಿಸಿದ ಎಂಜಿನಿಯರ್‌ !

Published:
Updated:
ಹೆಬ್ಬೇವನ್ನೇ ‘ಬೆಲ್ಲ’ವಾಗಿಸಿದ ಎಂಜಿನಿಯರ್‌ !

ಚಿಕ್ಕೋಡಿ ತಾಲ್ಲೂಕಿನ ನಾಗರಮುನ್ನೋಳಿ ಹೋಬಳಿಯು ಬರಪೀಡಿತ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಈ ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಹಂಗಾಮಿನ ಬೆಳೆಗಳನ್ನೇ ಬೆಳೆಯಲು ಸಮರ್ಪಕವಾದ ಮಳೆಯಾಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ಕಡಿಮೆ ನೀರಿನಲ್ಲಿ ಉತ್ತಮ ಲಾಭ ಕಂಡುಕೊಳ್ಳುವ ಕೃಷಿಯತ್ತ ಸಾಗಬೇಕೆನ್ನುವ ರೈತರಿಗೆ ಎಂಜಿನಿಯರಿಂಗ್್ ಕಾಲೇಜು ಪ್ರಾಚಾರ್ಯರೊಬ್ಬರು ಮಾದರಿಯಾಗಿದ್ದಾರೆ.

ತಾಲ್ಲೂಕಿನ ಹತ್ತರವಾಟ ಗ್ರಾಮದ ಡಾ. ಸಣ್ಣಪ್ಪ ಸಿ. ಕಮತೆ ಆ ಕೃಷಿಕ. ಹುಕ್ಕೇರಿ ತಾಲ್ಲೂಕಿನ ನಿಡಸೋಶಿಯ ಹಿರಾ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾಗಿರುವ ಡಾ. ಕಮತೆ ಅವರಿಗೆ ಅಧ್ಯಾಪನ ವೃತ್ತಿಯೊಂದಿಗೆ ಕೃಷಿ ಸಂಸ್ಕೃತಿಯ ಬಗೆಗೂ ವಿಶೇಷ ಆಸಕ್ತಿ. ಹೀಗಾಗಿಸ್ವಗ್ರಾಮ ಹತ್ತರವಾಟದಲ್ಲಿರುವ ಕೃಷಿ ಭೂಮಿಯಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿದ್ದಾರೆ.

ಆಗೊಮ್ಮೆ, ಈಗೊಮ್ಮೆ ಬೀಳುವ ಮಳೆ ನೀರು ವ್ಯರ್ಥವಾಗಿ ಹರಿದು ಹೋಗದಿರಲಿ ಎಂದು ತಮ್ಮ ಹೊಲದ ಬದುವಿನಲ್ಲಿ ಕೃಷಿ ಹೊಂಡವೊಂದನ್ನು ನಿರ್ಮಿಸಿರುವ ಡಾ.ಕಮತೆ ಅದರಲ್ಲಿ ಸಂಗ್ರಹವಾಗಿರುವ ನೀರಿನಿಂದ 12 ಎಕರೆಗೂ ಹೆಚ್ಚಿನ ಒಣಭೂಮಿಯಲ್ಲಿ ಹನಿ ನೀರಾವರಿ ಅಳವಡಿಸಿ ಸಮೃದ್ಧ ಬೆಳೆ ಬೆಳೆಯುತ್ತಿದ್ದಾರೆ.

ಕಡಿಮೆ ನೀರು ಮತ್ತು ಅತ್ಯಲ್ಪ ಖರ್ಚಿನಲ್ಲಿ ಉತ್ತಮ ಆದಾಯ ನೀಡುವ ಹೆಬ್ಬೇವು ಕೃಷಿ ಕೈಗೊಂಡಿದ್ದಾರೆ. ತಮ್ಮ ಮನೆ ಪಕ್ಕದಲ್ಲೇ ಇರುವ ಒಂದೂವರೆ ಎಕರೆ ಭೂಮಿಯಲ್ಲಿ 8X8 ಅಂತರದಲ್ಲಿ ಸುಮಾರು 1000 ಹೆಬ್ಬೇವು ಸಸಿಗಳನ್ನು ನೆಟ್ಟಿದ್ದಾರೆ.

ಸುಮಾರು ಒಂದು ವರ್ಷದ ಬೆಳೆ ಈಗ 8 ರಿಂದ 10 ಅಡಿಯಷ್ಟು ಉದ್ದ ಬೆಳೆದಿವೆ. ಅದರಲ್ಲಿ ಸೋಯಾಅವರೆ, ನುಗ್ಗೆ, ಶೇಂಗಾ, ಉದ್ದು ಅಂತರ ಬೆಳೆಗಳನ್ನೂ ಬೆಳೆದಿದ್ದಾರೆ.

‘ಕಡಿಮೆ ನೀರಿನಲ್ಲಿ ಬೆಳೆಯುವ ಹೆಬ್ಬೇವು ಮಳೆಯಾಶ್ರಿತ ಪ್ರದೇಶದ ರೈತರಿಗೆ ಲಾಭ ತಂದು ಕೊಡುವ ಬೆಳೆ. ಹೊಲದಲ್ಲಿ ಮಾತ್ರವಲ್ಲ, ಬದುಗಳಲ್ಲೂ ಈ ಗಿಡಗಳನ್ನು ಬೆಳೆಯಬಹುದು. 5 ರಿಂದ 6 ವರ್ಷಕ್ಕೆ ಈ ಹೆಬ್ಬೇವು ಕಟಾವಿಗೆ ಬರುತ್ತದೆ. ಒಂದು ಗಿಡ ಸರಾಸರಿ 2 ಟನ್‌ನಷ್ಟು ತೂಗುತ್ತದೆ. ಸದ್ಯ ಪ್ರತಿ ಟನ್‌ಗೆ ಮಾರುಕಟ್ಟೆಯಲ್ಲಿ ಹೆಬ್ಬೇವು ₹6 ಸಾವಿರಕ್ಕೆ ಮಾರಾಟವಾಗುತ್ತಿದೆ. ಇದನ್ನು ಪೀಠೋಪಕರಣ ತಯಾರಿಕೆಗೆ ಬಳಸಲಾಗುತ್ತಿದೆ’ ಎನ್ನುತ್ತಾರೆ ಕಮತೆ.

‘ ಒಂದು ವರ್ಷದ ಹಿಂದೆ ನಾಟಿ ತಮಿಳುನಾಡು ಗಡಿಯಲ್ಲಿರುವ ನರ್ಸರಿಯೊಂದರಿಂದ ಹೆಬ್ಬೇವು ಸಸಿಗಳನ್ನು ತಂದು ನಾಟಿ ಮಾಡಲಾಗಿದ್ದು, ಅದರಲ್ಲಿ ಅಂತರ ಬೆಳೆಯಾಗಿ ಬೆಳೆದಿರುವ ನುಗ್ಗೆ, ಸೋಯಾಅವರೆ ಮೊದಲಾದ ಬೆಳೆಗಳಿಂದ ಸುಮಾರು ₹3 ಲಕ್ಷ ಆದಾಯ ಬಂದಿದೆ. ಹೆಬ್ಬೇವು ಸಸಿಗಳನ್ನು ನಾಟಿ ಮಾಡಿದ ಒಂದು ವರ್ಷ ಆರೈಕೆ ಮಾಡಿದರೆ ಸಾಕು, ಅದು ಹೆಮ್ಮರವಾಗಿ ಬೆಳೆಯುತ್ತದೆ. 7 ವರ್ಷದಲ್ಲಿ ಹೆಬ್ಬೇವು ಗಿಡವೊಂದು ಸಾವಿರಾರು ರೂಪಾಯಿ ಆದಾಯ ನೀಡುತ್ತದೆ’ ಎಂದು ಡಾ. ಸಣ್ಣಪ್ಪ ಕಮತೆ ಹೇಳುತ್ತಾರೆ.

 

Post Comments (+)